
Article · August 12, 2026
ಡಿಜಿಟಲ್ ಪಾವತಿ ಶುಲ್ಕ: ಸಾಧಕ ಬಾಧಕಗಳು
ಇಂದಿನ ವಿಶ್ವವಾಣಿ ಪತ್ರಿಕೆಯಲ್ಲಿ ರವೀ ಸಜಂಗದ್ದೆ ಅವರ ಅಂಕಣ ಬರಹ
ಆಜುಮಾಜು 145 ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ 'ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್' (UPI) ಯಾನೆ ಡಿಜಿಟಲ್ ಪಾವತಿ ವ್ಯವಸ್ಥೆ ತಂದಿರುವ ಕ್ರಾಂತಿ ಅಭೂತಪೂರ್ವವಾದದ್ದು! ಹಳ್ಳಿಯ ಮೂಲೆಯ ಕಿರಾಣಿ ಅಂಗಡಿಯಿಂದ ಹಿಡಿದು ನಗರದ ಬೃಹತ್ ಶಾಪಿಂಗ್ ಮಾಲ್‌ಗಳವರೆಗೆ ಇಂದು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಷಣಮಾತ್ರದಲ್ಲಿ ಹಣ ಪಾವತಿಸುವುದು ಬಹುತೇಕರ ಸಾಮಾನ್ಯ ದಿನಚರಿ. ಈ ಅತ್ಯಂತ ಜನಪ್ರಿಯ 'ಉಚಿತ ಸೇವೆ'ಗೆ ಶುಲ್ಕ ವಿಧಿಸುವ ಕುರಿತಾದ ಮಸೂದೆ ತಿದ್ದುಪಡಿ ವದಂತಿಗಳು, NPCI ಇತ್ತೀಚೆಗೆ ತಂದಿರುವ PPI ಮಾರ್ಗಸೂಚಿಗಳು ಹಾಗೂ ಆರ್‌ಬಿಐ ಪರಿಶೀಲನೆಗಳ ಕುರಿತು ಜನಸಾಮಾನ್ಯರಲ್ಲಿ ಚರ್ಚೆ ಮತ್ತು ವ್ಯಾಪಾರಿಗಳಲ್ಲಿ ತಳಮಳ ಸೃಷ್ಟಿಸಿವೆ. ಯಾವುದೇ ವಿಷಯದಲ್ಲಿ ತಮ್ಮದೇ 'ನರೇಟಿವ್' ಸೃಷ್ಟಿಸುವ ಸಾಮರ್ಥ್ಯ ಪಡೆದುಕೊಂಡಿರುವ ಸಾಮಾಜಿಕ ಮಾಧ್ಯಮಗಳಲ್ಲಿ 'ಇನ್ಮುಂದೆ ಪ್ರತಿಯೊಂದು ಯುಪಿಐ ವಹಿವಾಟಿಗೂ ಶುಲ್ಕ ಪಾವತಿಸಬೇಕು' ಎಂಬ ಅರ್ಥ ಕೊಡುವ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಇದರಿಂದಾಗಿ ಕೋಟ್ಯಂತರ ಬಳಕೆದಾರರು ಮತ್ತು ಸಣ್ಣ ವ್ಯಾಪಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ, ವಾಸ್ತವವೇ ಬೇರೆ ಇದೆ, ವಿಭಿನ್ನವಾಗಿದೆ!
ಕೇಂದ್ರ ಸರ್ಕಾರ, ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಸ್ಪಷ್ಟನೆಯ ಪ್ರಕಾರ, ಸಾಮಾನ್ಯ ಬಳಕೆದಾರರು (ಗ್ರಾಹಕರು) ತಮ್ಮ ದೈನಂದಿನ ವಹಿವಾಟುಗಳಿಗೆ, ಸ್ನೇಹಿತರಿಗೆ ಅಥವಾ ಕುಟುಂಬದವರಿಗೆ ಬ್ಯಾಂಕ್ ಖಾತೆಯಿಂದ ಹಣ ಕಳುಹಿಸಲು ಯುಪಿಐ ಹಣ ವರ್ಗಾವಣೆಯ ಡಿಜಿಟಲ್ ವ್ಯವಸ್ಥೆಯನ್ನು ಎಂದಿನಂತೆ ಉಚಿತವಾಗಿಯೇ ಬಳಸಬಹುದು. ಈಗ ಮಾಡಿರುವ ಶುಲ್ಕದ ನಿಯಮವು ಕೇವಲ 'ಪಿಪಿಐ ವಾಲೆಟ್' ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ವ್ಯಾಪಾರಿ ವಹಿವಾಟುಗಳಿಗೆ ಮಾತ್ರ ಅನ್ವಯವಾಗಲಿದೆ. ಸಾಮಾನ್ಯ ಬ್ಯಾಂಕ್ ಖಾತೆಗಳ ಮೂಲಕ ನಡೆಯುವ ಯುಪಿಐ ವರ್ಗಾವಣೆಗೆ ಯಾವುದೇ ಶುಲ್ಕವಿಲ್ಲ ಎನ್ನುವ ಸ್ಪಷ್ಟತೆಯನ್ನು ಸರ್ಕಾರ ನೀಡಿದೆ. ಬೀದಿಬದಿ ವ್ಯಾಪಾರಿಗಳು, ಬಾಡಿಗೆ ವಾಹನ ಚಲಾಯಿಸುವವರು ಮತ್ತು ದೈನಂದಿನ ಚಿಲ್ಲರೆ ವ್ಯಾಪಾರಸ್ಥರಿಗೆ ಈ ಶುಲ್ಕದಿಂದ ಸಂಪೂರ್ಣ ವಿನಾಯಿತಿ ಮುಂದುವರಿಯುವ ಬಗ್ಗೆ ಸರ್ಕಾರ ಸ್ಪಷ್ಟತೆ ಹೊಂದಿದೆ. ಸರಿಯಾದ, ಸಮರ್ಪಕ ಮತ್ತು ಅಧಿಕೃತ ಮಾಹಿತಿಯ ಕೊರತೆಯಿಂದ ಜನರಲ್ಲಿನ ಆತಂಕ ಇನ್ನೂ ಪೂರ್ಣ ಪ್ರಮಾಣದಲ್ಲಿ ತಗ್ಗಿಲ್ಲ. ಈ ವ್ಯವಸ್ಥೆಯ ಕುರಿತು ಒಂದಿಷ್ಟು ವಿಚಾರಗಳನ್ನು ಸರಳವಾಗಿ ಅರ್ಥೈಸಿಕೊಳ್ಳಲು ಪ್ರಯತ್ನಿಸೋಣ.
ಡಿಜಿಟಲ್ ಪಾವತಿಗಳಿಗೆ ಶುಲ್ಕ ವಿಧಿಸುವ ವಿಚಾರದಲ್ಲಿ ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕಾದ ತಾಂತ್ರಿಕ ಪದವೆಂದರೆ 'ಎಂಡಿಆರ್' (Merchant Discount Rate). ಗ್ರಾಹಕರು ವಸ್ತು ಕೊಂಡಾಗ ಅಥವಾ ಸೇವೆ ಸ್ವೀಕರಿಸಿದಾಗ ಡಿಜಿಟಲ್ ರೂಪದಲ್ಲಿ ಹಣ ಪಾವತಿಸುತ್ತಾರೆ. ಆ ವಹಿವಾಟನ್ನು ಯಶಸ್ವಿಯಾಗಿ ನಿರ್ವಹಿಸಲು ಬ್ಯಾಂಕ್‌ಗಳು ಮತ್ತು ಪಾವತಿ ಸೇವಾ ಸಂಸ್ಥೆಗಳು 'ತಾಂತ್ರಿಕ ವೇದಿಕೆ' ಒದಗಿಸುತ್ತವೆ. ಈ ಸೇವೆಗಾಗಿ ವ್ಯಾಪಾರಿಯು ಸೇವಾದಾರರಿಗೆ ಪಾವತಿಸಬೇಕಾದ ನಿರ್ದಿಷ್ಟ ಶೇಕಡಾವಾರು ಶುಲ್ಕದ ಹೆಸರು 'ಎಂಡಿಆರ್'. 2019ರ ಜನವರಿಯಿಂದ ಭಾರತ ಸರ್ಕಾರವು ಯುಪಿಐ ಮತ್ತು ರುಪೇ ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲಿನ ಈ ಎಂಡಿಆರ್ ಶುಲ್ಕವನ್ನು ಸಂಪೂರ್ಣವಾಗಿ ರದ್ದುಗೊಳಿಸಿತ್ತು. ಇದರಿಂದಾಗಿ ವ್ಯಾಪಾರಿಗಳು ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಿಲ್ಲದೆ ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಲು ಆರಂಭಿಸಿದರು. ಇದು ದೇಶದಲ್ಲಿ ಯುಪಿಐ ಬಳಕೆಯ ಕ್ರಾಂತಿ ಮತ್ತು ಕ್ಷಿಪ್ರ ಬೆಳವಣಿಗೆಗೆ ಆನೆಬಲ ನೀಡಿತು.
ಒಂದು ಕಡೆ ಗ್ರಾಹಕರಿಗೆ ಈ ಡಿಜಿಟಲ್ ಸೇವೆ ಉಚಿತವಾಗಿ ಸಿಗುತ್ತಿದ್ದರೆ, ಇನ್ನೊಂದು ಕಡೆ ಈ ವ್ಯವಸ್ಥೆಯನ್ನು ನಿರ್ವಹಿಸುವ ಬ್ಯಾಂಕುಗಳು ಮತ್ತು ಪಾವತಿ ಸೇವಾ ಸಂಸ್ಥೆಗಳು ಈ ಸೇವೆಯನ್ನು ದೇಶಾದ್ಯಂತ 24/7 ಆವರ್ತನದಲ್ಲಿ ನೀಡಲು ದೊಡ್ಡ ಮೊತ್ತವನ್ನು ಭರಿಸುತ್ತಿವೆ. ಯುಪಿಐ ವ್ಯವಸ್ಥೆಯು ವೇಗವಾಗಿ ಬೆಳೆದಂತೆ, ಅದರ ಸರ್ವರ್‌ಗಳ ನಿರ್ವಹಣೆ, ತಾಂತ್ರಿಕ ಮೂಲಸೌಕರ್ಯಗಳ ಮೇಲ್ದರ್ಜೆಗೇರಿಸುವಿಕೆ, ಡೇಟಾ ಭದ್ರತೆ ಮತ್ತು ಸೈಬರ್ ವಂಚನೆಗಳನ್ನು ತಡೆಯುವ ವ್ಯವಸ್ಥೆಗಳಿಗಾಗಿ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳ ವೆಚ್ಚ-ಹೂಡಿಕೆ ಮಾಡಬೇಕಾಗುತ್ತದೆ. 'ಶೂನ್ಯ ಎಂಡಿಆರ್ ನೀತಿ'ಯಿಂದಾಗಿ, ಬ್ಯಾಂಕುಗಳಿಗೆ ಮತ್ತು ಈ ವ್ಯವಸ್ಥೆ ಒದಗಿಸುತ್ತಿರುವ ಸಂಸ್ಥೆಗಳಿಗೆ 'ನಿರ್ವಹಣಾ ವೆಚ್ಚ'ವನ್ನು ಭರಿಸಲು ಯಾವುದೇ ನೇರ ಆದಾಯದ ಮೂಲವಿಲ್ಲದಂತಾಗಿದೆ. ಇಂಥಾ ವೆಚ್ಚಗಳು ಬ್ಯಾಂಕುಗಳಿಗೆ ಅಯಾಚಿತ 'ಆರ್ಥಿಕ ಹೊರೆ' ಎಂಬುದು ನಿರ್ವಿವಾದ. ಹೀಗಾಗಿ, 'ಡಿಜಿಟಲ್ ಪಾವತಿ ವ್ಯವಸ್ಥೆ'ಯನ್ನು ಮುಂದಿನ ದಿನಗಳಲ್ಲಿ ಸುಸ್ಥಿರವಾಗಿ ನಡೆಸಿಕೊಂಡು ಹೋಗಲು ಮತ್ತು ತಾಂತ್ರಿಕವಾಗಿ ಮತ್ತಷ್ಟು ಬಲಪಡಿಸಲು, ಕನಿಷ್ಠ ಶುಲ್ಕವನ್ನು ವಿಧಿಸುವುದು ಅನಿವಾರ್ಯ ಎಂದು ಬ್ಯಾಂಕಿಂಗ್ ವಲಯವು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದೆ. ಒತ್ತಾಯಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಒಂದಷ್ಟು ನಿರ್ಣಯಗಳು ತೆಗೆದುಕೊಳ್ಳಲು ಅಣಿಯಾಗಿದೆ. ಅದರ ಮುಂದುವರಿದ ಭಾಗವೇ ಎನ್‌ಪಿಸಿಐ ಜಾರಿಗೆ ತಂದಿರುವ ಪಿಪಿಐ ವಾಲೆಟ್ ಮತ್ತು ಕ್ರೆಡಿಟ್ ಕಾರ್ಡ್ ಆಧಾರಿತ ಯುಪಿಐ ವಹಿವಾಟುಗಳ ಮೇಲಿನ ಶುಲ್ಕದ ಮಾರ್ಗಸೂಚಿಗಳು.
ತೆರಿಗೆ ಮತ್ತು ಇತರೆ ಕಾಯ್ದೆಗಳ ತಿದ್ದುಪಡಿ ವಿಧೇಯಕ 2026ರ ಹೊಸ ನಿಯಮಾವಳಿಯು ಎಂಡಿಆರ್/ಇಂಟರ್‌ಚೇಂಜ್ ಶುಲ್ಕವನ್ನು ನಿಗದಿಪಡಿಸುವ, ನಿಯಂತ್ರಿಸುವ ಮತ್ತು ವಿಧಿಸುವ ಅಧಿಕಾರವನ್ನು ಎನ್‌ಪಿಸಿಐ ಮತ್ತು ರಿಸರ್ವ್ ಬ್ಯಾಂಕ್‌ಗೆ ನೀಡಿದೆ. ನಿಯಮಾವಳಿಯು ಜಾರಿಗೆ ಬಂದ ನಂತರ, ಸರ್ಕಾರವು ಈ ಬಗ್ಗೆ ಸ್ಪಷ್ಟವಾದ ಅಧಿಸೂಚನೆಗಳನ್ನೂ ನೀಡಿದೆ. ಅಧಿಕೃತ ಮಾಹಿತಿಯ ಪ್ರಕಾರ, ಪಿಪಿಐ (ಪ್ರಿಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಸ್) ವಾಲೆಟ್ ಮೂಲಕ ನಡೆಯುವ 2,000 ರೂಪಾಯಿಗಿಂತ ಮೇಲ್ಪಟ್ಟ ವ್ಯಾಪಾರಿ ವಹಿವಾಟುಗಳ ಮೇಲೆ 1.1%ರವರೆಗೆ ಇಂಟರ್‌ಚೇಂಜ್ ಶುಲ್ಕವನ್ನು ವಿಧಿಸಬಹುದು. ಈ ಮೂಲಕ ಸಣ್ಣ ವ್ಯಾಪಾರಿಗಳನ್ನು ರಕ್ಷಿಸುವ ಸಮತೋಲಿತ ಹೆಜ್ಜೆಯನ್ನು ಸರ್ಕಾರ ಇಡುತ್ತಿದೆ. ಇದು ಸದ್ಯಕ್ಕಿರುವ ಮಾಹಿತಿ.
ಈ ನಿಯಮಾವಳಿಗಳ ಜಾರಿಯಿಂದ ಆಗಲಿರುವ ಸಂಭಾವ್ಯ ಅನುಕೂಲಗಳು:
ಬ್ಯಾಂಕುಗಳು ಮತ್ತು ಪಾವತಿ ಸೇವಾ ಸಂಸ್ಥೆಗಳಿಗೆ ನಿರ್ದಿಷ್ಟ ಆದಾಯದ ಮೂಲ ಸೃಷ್ಟಿಯಾಗುವುದರಿಂದ, ಅವರು ಯುಪಿಐ ಮೂಲಸೌಕರ್ಯವನ್ನು ಇನ್ನಷ್ಟು ಬಲಪಡಿಸಲು ಈ ಆದಾಯ ಸಹಕಾರಿ. ಸೈಬರ್ ಭದ್ರತೆ ವ್ಯವಸ್ಥೆಯಲ್ಲಿ ಹೆಚ್ಚಿನ ಹೂಡಿಕೆ ಮಾಡಿ ಗ್ರಾಹಕರ ಹಣ ಮತ್ತು ದತ್ತಾಂಶ ಹೆಚ್ಚು ಸುರಕ್ಷಿತವಾಗಿಡಬಹುದು.
ಹಬ್ಬದ ದಿನ ಅಥವಾ ವಹಿವಾಟುಗಳ ಸಂಖ್ಯೆ ಮಿತಿಮೀರಿದಾಗ ಸರ್ವರ್ ಡೌನ್ ಆಗಿ ಪಾವತಿ ವಿಫಲವಾಗುವ ಸಮಸ್ಯೆಗಳು ಸಾಕಷ್ಟಿವೆ. ಸೇವಾ ಶುಲ್ಕದಿಂದ ಬರುವ ಈ ಆದಾಯವನ್ನು ಸರ್ವರ್ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಬಳಸಿ, ಇಂತಹ ತಾಂತ್ರಿಕ ಅಡಚಣೆಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು.
ಯಾವುದೇ ತಂತ್ರಜ್ಞಾನ ಬೆಳೆಯಬೇಕಾದರೆ ಸಂಶೋಧನೆ, ಅಭಿವೃದ್ಧಿ ಮತ್ತು ನಿರಂತರ ಅಪ್‌ಗ್ರೇಡ್ ಅಗತ್ಯ. ಎಂಡಿಆರ್ ಮರುಪರಿಚಯಿಸುವುದರಿಂದ ಪಾವತಿ ವಲಯದ ಸ್ಟಾರ್ಟಪ್‌ಗಳಿಗೆ ಮತ್ತು ಆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಕಂಪನಿಗಳಿಗೆ ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸಲು ಆರ್ಥಿಕ ಬಲ ಸಿಗಲಿದೆ.
ಅನಾನುಕೂಲಗಳು ಮತ್ತು ಎದುರಾಗಲಿರುವ ಸವಾಲುಗಳು:
ಸರ್ಕಾರವು ಕೇವಲ ವಾಲೆಟ್/ಕ್ರೆಡಿಟ್ ಕಾರ್ಡ್ ಬಳಕೆಯ ಬೃಹತ್ ವ್ಯಾಪಾರಿಗಳಿಗೆ ಮಾತ್ರ ಶುಲ್ಕ ವಿಧಿಸಿದರೂ, ಆ ವ್ಯಾಪಾರಿಗಳು ತಮಗೆ ತಗುಲುವ ಈ ಹೆಚ್ಚುವರಿ ವೆಚ್ಚವನ್ನು ಸರಕು ಮತ್ತು ಸೇವೆಗಳ ಬೆಲೆಯನ್ನು ಹೆಚ್ಚಿಸುವ ಮೂಲಕ ಪರೋಕ್ಷವಾಗಿ ಗ್ರಾಹಕರಿಗೆ ವರ್ಗಾಯಿಸಲಿದ್ದಾರೆ. ಹಾಗಾದಾಗ ಈ ವೆಚ್ಚವನ್ನು ಗ್ರಾಹಕರು ವಿಧಿಯಿಲ್ಲದೆ ಭರಿಸಲೇಬೇಕು!
ಶುಲ್ಕದ ಕುರಿತಾದ ಗೊಂದಲ ಮತ್ತು ಭೀತಿಯಿಂದಾಗಿ, ಅನೇಕ ವ್ಯಾಪಾರಿಗಳು ಯುಪಿಐ ಕ್ಯೂಆರ್ ಕೋಡ್‌ಗಳನ್ನು ತೆಗೆದು ಹಾಕಿ, ಮತ್ತೆ ನಗದು ವ್ಯವಹಾರಕ್ಕೆ ಮರಳುವ ಸಾಧ್ಯತೆ ಇದೆ. ಕಪ್ಪುಹಣ ನಿಯಂತ್ರಿಸುವ ನಿಟ್ಟಿನಲ್ಲಿ ಇದು ತೀವ್ರ ಹಿನ್ನಡೆಯಾಗಬಹುದು.
ಈ ಸೇವಾ ಶುಲ್ಕವು ಕೇವಲ ನಿರ್ದಿಷ್ಟ ಮಾದರಿಯ ವ್ಯಾಪಾರಿಗೆ ಎನ್ನುವ ನಿಯಮ ಬಂದರೂ, ಸಮರ್ಪಕ ಮಾಹಿತಿಯ ಅರಿವಿನ ಕೊರತೆಯಿಂದ ಸಣ್ಣ ವ್ಯಾಪಾರಿಗಳು ಕೂಡ ತಾವು ಶುಲ್ಕ ಕಟ್ಟಬೇಕಾಗಬಹುದು ಎನ್ನುವ ಹೆದರಿಕೆಯಿಂದ ಡಿಜಿಟಲ್ ಪಾವತಿಯಿಂದ ವಿಮುಖರಾಗಬಹುದು.
ಭಾರತವು ಇತ್ತೀಚಿನ ದಿನಗಳಲ್ಲಿ 'ಕ್ಯಾಶ್‌ಲೆಸ್ ಎಕಾನಮಿ'ಯ ಕಡೆಗೆ ವೇಗವಾಗಿ ಹೆಜ್ಜೆ ಹಾಕುತ್ತಿದೆ. ದೇಶದ ಮೂಲೆ ಮೂಲೆಗಳಿಗೂ ಮೊಬೈಲ್ ನೆಟ್ವರ್ಕ್ ಮತ್ತು ಯುಪಿಐ ವ್ಯವಸ್ಥೆ ತಲುಪುತ್ತಿದೆ. ಈ ನಿರ್ಣಾಯಕ ಹಂತದಲ್ಲಿ ಈ ಶುಲ್ಕದ ಪ್ರಸ್ತಾಪವು ಡಿಜಿಟಲ್ ಪಾವತಿ ವ್ಯವಸ್ಥೆ ಅಳವಡಿಕೆಯ ವೇಗವನ್ನು ಒಂದಷ್ಟು ತಗ್ಗಿಸುವ ಅಪಾಯವಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಬರುತ್ತಿರುವ ಆಧಾರರಹಿತ ಮಾಹಿತಿಗಳನ್ನು ನಂಬಿ ಗೊಂದಲಕ್ಕೀಡಾಗುವ ಬದಲು, ಆರ್‌ಬಿಐ, ಎನ್‌ಪಿಸಿಐ ಅಥವಾ ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸುವ ಅಧಿಕೃತ ಪ್ರಕಟಣೆಗಳನ್ನು ಮಾತ್ರವೇ ನಂಬಬೇಕಾಗಿರುವುದು ಸದ್ಯದ ತುರ್ತು. ಯಾವುದೇ ಹೊಸ ಕಾನೂನು, ಕಾಯಿದೆ, ನಿಯಮ ಜಾರಿಗೆ ತರುವುದಕ್ಕೆ ಮೊದಲು ಅದು ಸಾರ್ವಜನಿಕ ವಲಯದಲ್ಲಿ ವಿಸ್ತೃತ ಚರ್ಚೆಯ ಜೊತೆಗೆ ಸಾಕಷ್ಟು ಪೂರ್ವಭಾವಿ ಅಧಿಸೂಚನೆಗಳು, ಕಠಿಣ ಪರಾಮರ್ಶೆಯ ನಂತರವೇ ಜಾರಿಯಾಗುತ್ತದೆ. ಹಾಗಾಗಿ, ಗ್ರಾಹಕರು ತಾವು ದೈನಂದಿನ ಜೀವನದಲ್ಲಿ ನಡೆಸುವ ಸಣ್ಣಪುಟ್ಟ ಡಿಜಿಟಲ್ ವಹಿವಾಟುಗಳನ್ನು ಮುಂದುವರಿಸಿಕೊಂಡು ಹೋಗಬಹುದು ಮತ್ತು ಅಂಥಾ ಸಾಮಾನ್ಯ ವರ್ಗಾವಣೆಗಳಿಗೆ ಸದ್ಯದ ಮಟ್ಟಿಗೆ ಯಾವುದೇ ಶುಲ್ಕ ವಿಧಿಸುವ ಪ್ರಸ್ತಾವನೆ ಇದ್ದಂತಿಲ್ಲ. "ಯುಪಿಐ ವಹಿವಾಟುಗಳ ಮೇಲೆ ಯಾವುದೇ ವಿಧದ ಶುಲ್ಕ ವಿಧಿಸುವುದಿಲ್ಲ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆ ಉಚಿತವಾಗಿಯೇ ಮುಂದುವರಿಯಲಿದೆ" ಎಂದು ಲೋಕಸಭೆಯಲ್ಲಿ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಸ್ಪಷ್ಟ ಪಡಿಸಿರುವುದು ಜನರಲ್ಲಿ ಒಂದಷ್ಟು ನಿರಾಳತೆ ತಂದಿದೆ!
ಭಾರತದ ಯುಪಿಐ ವ್ಯವಸ್ಥೆಯು ಇಂದು ಇಡೀ ಜಗತ್ತಿಗೇ ಅನುಸರಿಸಲು ಯೋಗ್ಯ, ಉತ್ಕೃಷ್ಟ ಮತ್ತು ಅದ್ಭುತ ಮಾದರಿಯಾಗಿ ಬೆಳೆದು ನಿಂತಿದೆ! ಭಾರತಕ್ಕಿಂತ ಹೆಚ್ಚು ಮುಂದುವರಿದ ರಾಷ್ಟ್ರಗಳೂ ಕೂಡ ನಮ್ಮ ಈ 'ಡಿಜಿಟಲ್ ಪಾವತಿ ತಂತ್ರಜ್ಞಾನ'ದ ವೇಗ ಮತ್ತು ಯಶಸ್ಸನ್ನು ಕಂಡು ಬೆರಗಾಗಿವೆ. ಇಂತಹ ವಿಶ್ವದರ್ಜೆಯ ವ್ಯವಸ್ಥೆಯನ್ನು ದೀರ್ಘಕಾಲದವರೆಗೆ ಸಂಪೂರ್ಣವಾಗಿ ಉಚಿತವಾಗಿ ನೀಡುವುದು ಆರ್ಥಿಕ ದೃಷ್ಟಿಯಿಂದ ಸವಾಲಿನ ಕೆಲಸ ಎಂಬ ವಾಸ್ತವವನ್ನು ಒಪ್ಪಿಕೊಳ್ಳಲೇಬೇಕು. ಆದರೆ, ಅದೇ ಸಮಯದಲ್ಲಿ, ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಸರ್ಕಾರದ ಮೂಲ ಉದ್ದೇಶಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ.
ಈ ಶುಲ್ಕ ವಿಧಿಸುವ ಕುರಿತಾದ ಚರ್ಚೆಗಳು ಅಥವಾ ಹೊಸ ನಿಯಮಗಳು ಬ್ಯಾಂಕುಗಳ ಆರ್ಥಿಕ ಹಿತಾಸಕ್ತಿಯ ಜೊತೆಗೆ ಕೋಟ್ಯಂತರ ಜನಸಾಮಾನ್ಯರ ಮತ್ತು ಸಣ್ಣ ವ್ಯಾಪಾರಿಗಳ ನಂಬಿಕೆಯನ್ನು ಉಳಿಸಿಕೊಳ್ಳುವ ಕಡೆಗೂ ಗಮನಹರಿಸಬೇಕಾಗಿದೆ. ಈ ಎಲ್ಲಾ ಅಂಶಗಳನ್ನು ಮತ್ತಷ್ಟು ಕೂಲಂಕಷವಾಗಿ ಪರಾಮರ್ಶಿಸಿ, ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ವಿಚಾರಗಳು, ಶುಲ್ಕಗಳು ಜಾರಿಗೆ ಬರಲಿ.
ಕೋಟಿಗಳಲ್ಲಿ ವಹಿವಾಟು ನಡೆಸುವ ಕಾರ್ಪೊರೇಟ್ ಸಂಸ್ಥೆಗಳು ಮತ್ತು ದೊಡ್ಡ ವ್ಯಾಪಾರಿಗಳಿಂದ ಮಾತ್ರ ನ್ಯಾಯೋಚಿತ ಶುಲ್ಕವನ್ನು ಸಂಗ್ರಹಿಸಿ, ಸಾಮಾನ್ಯ ಜನರಿಗೆ ಡಿಜಿಟಲ್ ಪಾವತಿಯನ್ನು ಉಚಿತವಾಗಿ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುವ 'ಸಮತೋಲಿತ ಮಾರ್ಗ'ವನ್ನು ಕೇಂದ್ರ ಆಯ್ದುಕೊಂಡಿದೆ. 'ಡಿಜಿಟಲ್ ಇಂಡಿಯಾ'ದ ಬೆಳವಣಿಗೆ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲಿದೆ. ಅದಾಗಲೇ ಬೆಲೆಯೇರಿಕೆಯಿಂದ ಕಂಗೆಟ್ಟಿರುವ ಸಣ್ಣ ವ್ಯಾಪಾರಿಗಳು ಮತ್ತು ಗ್ರಾಹಕರ ಜೇಬಿಗೆ, ಅಲ್ಲಲ್ಲ ವ್ಯಾಲೆಟ್‌ಗೆ ಮತ್ತೊಮ್ಮೆ ಕತ್ತರಿ ಬೀಳದಂತೆ ನೋಡುವ ಕರ್ತವ್ಯ ಮತ್ತು ಜವಾಬ್ದಾರಿ ಕೇಂದ್ರ ಸರ್ಕಾರದ್ದು. ಪ್ರಶ್ನೆ ಪತ್ರಿಕೆ ಲೀಕ್ ವಿಚಾರದಿಂದಾಗಿ ನಲುವತ್ತು ಕೋಟಿ 'ಜೆನ್ ಝಿ'ಯ ಕೆಂಗಣ್ಣಿಗೆ ಗುರಿಯಾಗಿರುವ ಕೇಂದ್ರ ಸರ್ಕಾರ ಈಗ 'ಡಿಜಿಟಲ್ ಪಾವತಿ ಶುಲ್ಕ' ಎನ್ನುವ ಜೇನು ಗೂಡಿಗೆ ಕೈ ಹಾಕಿ ಮತ್ತಷ್ಟು ಜನರ ಕೆಂಗಣ್ಣಿಗೆ ಗುರಿಯಾಗದಿರಲಿ. 'ಹಾವೂ ಸಾಯಬಾರದು, ಕೋಲೂ ಮುರಿಯಬಾರದು' ಅಷ್ಟೇ!
ಲಿಂಕ್ https://epaper.vishwavani.news/share/f05b01f3-c7b3-4f86-b7ab-a32296e9e197


