News · July 2, 2026
142ನೇ ನೃತ್ಯಾಂತರಂಗದಲ್ಲಿ ಮನಸೆಳೆದ ಅನಂತನ ಪುರುಷಾಭಿವ್ಯಕ್ತಿ
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 142ನೇ ಸರಣಿಯಲ್ಲಿ (ದಿನಾಂಕ 27 ಜೂನ್ 2026) ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ನಡೆದ ಮಂಗಳೂರಿನ ಉದಯೋನ್ಮುಖ ಕಲಾವಿದ ನಮ್ಮ ಕರಾಡ ಸಮುದಾಯದ ಶ್ರೀ ಅನಂತಕೃಷ್ಣ ಸಿ.ಎನ್. ಇವರ ಅಮೋಘ ಭರತನಾಟ್ಯ ಕಾರ್ಯಕ್ರಮದ ಬಗ್ಗೆ ರೂವಾರಿ ಪತ್ರಿಕೆಯಲ್ಲಿ ಬಂದ ವರದಿ
ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 142ನೇ ಸರಣಿಯಲ್ಲಿ ದಿನಾಂಕ 27 ಜೂನ್ 2026ರಂದು ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ಮಂಗಳೂರಿನ ಉದಯೋನ್ಮುಖ ಕಲಾವಿದ ಶ್ರೀ ಅನಂತಕೃಷ್ಣ ಸಿ.ಎನ್. ಇವರ ಅಮೋಘ ಭರತನಾಟ್ಯ ಕಾರ್ಯಕ್ರಮವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಪುರುಷಾಭಿವ್ಯಕ್ತಿಯ ಅಪೂರ್ವ ಸಂಗತಿಯನ್ನು ಆಯ್ಕೆ ಮಾಡಿ ರಾಮನ ಪ್ರಲಾಪವನ್ನು, ವಿಪ್ರಲಂಭ ಶೃಂಗಾರವನ್ನು ಗುರು ವಿದ್ಯಾಶ್ರೀ ರಾಧಾಕೃಷ್ಣರ ಅದ್ಭುತ ನೃತ್ಯ ಸಂಯೋಜನೆಯಲ್ಲಿ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿದರು. ಪ್ರಾರಂಭದ ಗಣೇಶ ಶ್ಲೋಕದಲ್ಲಿ ಚಿಕ್ಕ ಚೊಕ್ಕ ಅಭಿನಯ ಹಾಗೂ ಕೊನೆಯ ನೃತ್ಯ ರಾಮನಾಟಕಂನಿಂದ ಆಯ್ದ ಪದಂ – ಕಂಡೇನ್ ಕಂಡೇನ್ ಇದರಲ್ಲಿ ಹನುಮಂತನ ಭಕ್ತಿಯನ್ನು ಸವಿವರವಾಗಿ ಪ್ರಸ್ತುತಪಡಿಸಿದರು.
ಕಾರ್ಯಕ್ರಮಕ್ಕೆ ಬೆಂಗಳೂರಿನ ಕಾಲ್ ಕಮ್ ಕಂಪೆನಿಯಲ್ಲಿ ಸೀನಿಯರ್ ಇಂಜಿನೀಯರ್ ಆಗಿರುವ, ದೀಪಕ್ ಕುಮಾರ್ ರವರು ಹಿರಿಯ ಭರತನಾಟ್ಯ ಶಿಷ್ಯರಾಗಿರುವ ಸಾಯಿ ಗಣೇಶ್ ಪುತ್ತೂರು ಅಭ್ಯಾಗತರಾಗಿ ಆಗಮಿಸಿ ಶ್ಲಾಘನೆಯ ಮಾತುಗಳನ್ನಾಡಿದರು. ಕಾರ್ಯಕ್ರಮದ ನಿರೂಪಣೆ – ಆಕಾಂಕ್ಷ ಕಜೆಗದ್ದೆ , ಶಂಖನಾದ – ವಿದ್ವಾನ್ ಗಿರೀಶ್ ಕುಮಾರ್, ಓಂಕಾರ ನಾದ – ವಿದುಷಿ ಪ್ರೀತಿಕಲಾ, ಪ್ರಾರ್ಥನೆ – ಅಕ್ಷರಾ ಹೆಚ್.ಪಿ., ಪಂಚಾಂಗ – ಸನ್ನಿಧಿ, ಕಲಾವಿದರ ಪರಿಚಯ – ವಿದುಷಿ ಶಮಾ ಚಂದುಕೂಡ್ಲು, ಅಭ್ಯಾಗತರ ಪರಿಚಯ – ಅಕ್ಷರಿ ಎ., ವಿಷಯ ಮಂಡನೆ – ಭಾನವಿ ಕೃಷ್ಣ ಇವರುಗಳು ಮಾಡಿದರು. ವಿದ್ವಾನ್ ದೀಪಕ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ನಂತರದ ಅಭಿಪ್ರಾಯವನ್ನು ವಿದುಷಿ ವಸುಧಾ ಜಿ.ಎನ್. ಮತ್ತು ವಿದುಷಿ ವಿದ್ಯಾ ಚಂದ್ರಶೇಖರ್ ವೇದಿಕೆಯಲ್ಲಿ ಹಂಚಿಕೊಂಡರು.
Report credit : ರೂವಾರಿ ಪತ್ರಿಕೆ .
