
Article · July 9, 2026
ಮುಕ್ತಕ
- ವೀಣಾ ಎಂ ಭಟ್
೧
ಮುತ್ತಿ ಯಮಕಿಂಕರರು ಎತ್ತೊಯ್ಯುವರು ಜೀವ
ಹೊತ್ತಿಯುರಿಯುವ ದೇಹ ಯಾಕೆ ವ್ಯಾಮೋಹ ?
ಚಿತ್ತದಲಿ ಹರಿಯಿರಲಿ ಜೀವ ಹೋಗುವ ಮುನ್ನ
ಇತ್ತ ಮೋಕ್ಷಕೆ ದಾರಿ ವೀಣಗಾನ
೨
ಕವಿಯುತಿದೆ ಕಾರ್ಮುಗಿಲು ಸುರಿವ ವರ್ಷದ ಧಾರೆ
ಸವಿಯಾದ ನಿದಿರೆಯದು ಗಾನ ಮೇಳದಲಿ
ಅವಿತಿರುವ ಭಾವನೆಯು ಗರಿಗೆದರಿ ಹಾರುತ್ತ
ಸವಿಗನಸಿನಲಿ ಮೀವ ವೀಣಗಾನ
೩
ಪುಸ್ತಕವ ಬಿಡಿಸುತ್ತ ಬರೆದೆ ನಾ ಮುಕ್ತಕವ
ಮಸ್ತಕದೆ ಸುಳಿಯದದು ಕವಿತೆಯಾ ಸಾಲು
ಹಸ್ತದಲಿ ಲೇಖನಿಯು ಚುಚ್ಚುತಿದೆ ಕೈ ಬೆರಳ
ಅಸ್ತಮಿಸಿತೇ ಬರಹ ವೀಣಗಾನ
೪
ಮುಕ್ತಕವ ಬರೆಯಲು ಲೇಖನಿಯ ಕೈ ಹಿಡಿದೆ
ಶಕ್ತಳಲ್ಲವೆ ನಾನು ಪದಗಳ 'ಬರ'ದೆ
ಯುಕ್ತ ಪದ ಜೋಡಣೆಗೆ ಹರಿ ಸ್ಮರಣೆಯು ಸೂಕ್ತ
ವ್ಯಕ್ತ ದೈವದ ಮಹಿಮೆ ವೀಣಗಾನ
Creative Writings
