
Article · November 12, 2026
ಸನಾತನ ಜ್ಞಾನದ ವ್ಯೋಮಗಾನ
ಸಂತೋಷ್ ಕುಮಾರ್ ನಡುಮನೆ
ವಿಜ್ಞಾನದ ಬೆಳಕಿಗೆ ಮುನ್ನವೇ ಜ್ಞಾನದ ಪ್ರಭೆ,
ಋಷಿಗಳ ಚಿಂತನೆಯಲ್ಲಿ ಹೊಳೆದಿತ್ತು ಪ್ರತಿಭೆ!
ಬ್ರಹ್ಮಾಂಡದ ರಹಸ್ಯಕೆ ಹುಡುಕಿದರು ದಾರಿ,
ಭಾರತದ ಜ್ಞಾನಪರಂಪರೆ ಜಗಕೆ ಸಿರಿ!
ಆರ್ಯಭಟ, ವರಾಹಮಿಹಿರರ ಖಗೋಳದ ಜ್ಞಾನ,
ಬ್ರಹ್ಮಗುಪ್ತ, ಭಾಸ್ಕರರ ಗಣಿತದ ವಿಜ್ಞಾನ!
ಸೂರ್ಯಸಿದ್ಧಾಂತ ಸಾರಿದ ಗ್ರಹಗಳ ಗತಿ,
ಭಾರತದ ಮೇಧಾಶಕ್ತಿಗೆ ಸಾಕ್ಷಿ ಈ ಕೀರ್ತಿ!
ಕಣ್ಣಿನ ವೀಕ್ಷಣೆ, ಮನನದ ಶಕ್ತಿ,
ಕಾಲಗಣನೆಯಲಿ ತೋರಿದರು ಯುಕ್ತಿ!
ದೂರದರ್ಶಕ ಬರುವ ಮುನ್ನವೇ ಆಕಾಶದ ಧ್ಯಾನ,
ನಕ್ಷತ್ರಗಳ ಚಲನೆಯಲಿ ಹುಡುಕಿದರು ಜ್ಞಾನ!
ಕಾಣದ ಕೃಷ್ಣದ್ರವ್ಯದ ನಿಗೂಢ ಜಾಲ,
ಇಂದಿಗೂ ವಿಜ್ಞಾನ ಹುಡುಕುತ್ತಿದೆ ಅದರ ಮೂಲ!
ಕೃಷ್ಣಗಹ್ವರದ ರಹಸ್ಯ, ಬೆಳಕಿನ ಸೆಳೆತ,
ಬ್ರಹ್ಮಾಂಡದ ಬೆರಗಿಗೆ ವಿಜ್ಞಾನದ ಅನ್ವೇಷಣೆ ನಿರಂತರ!
ಅನಂತ ಬ್ರಹ್ಮಾಂಡದ ಅಗಾಧ ವಿಸ್ತಾರ,
ಸೃಷ್ಟಿಯ ರಹಸ್ಯಕೆ ಋಷಿಗಳ ವಿಚಾರ!
ಪ್ರಾಚೀನ ಚಿಂತನೆಯಲಿ ಪ್ರಶ್ನೆಗಳ ಬೆಳಕು,
ಹೊಸ ಸಂಶೋಧನೆಯಲಿ ಜ್ಞಾನದ ಹೊಳಪು!
ಯುಗಗಳು ಕಳೆದರೂ ಜ್ಞಾನದ ಜ್ಯೋತಿ ಆರದು,
ಸತ್ಯದ ಹುಡುಕಾಟ ಎಂದಿಗೂ ನಿಲ್ಲದು!
ಪೂರ್ವಜರ ಸಾಧನೆಗೆ ನಮ್ಮ ಹೃದಯದ ನಮನ,
ಭಾರತದ ಜ್ಞಾನಪರಂಪರೆಗೆ ಶತಶತ ವಂದನ!
ಇಂದು ವಿಜ್ಞಾನದ ನಭದ ನಾದ,
ಅಂದಾಗಿತ್ತು, ವಿಷ್ಣುವಿನ ವ್ಯೋಮಪಾದ
