Karada Vishwa

Article · March 7, 2026

ಸಾವಿರಾರು ಮನಸುಗಳಿಗೆ ಸ್ಪೂರ್ತಿ ಚಿಲುಮೆಯಾದ 'ಖಾದ್ಯ ಕಣ್ಮಣಿ'ಗಳು!

- ರವೀ ಸಜಂಗದ್ದೆ

ಕರಾಡರ ಸಾಂಪ್ರದಾಯಿಕ ಅಡುಗೆ ಶೈಲಿಯನ್ನು ಹಳ್ಳಿ ಮೂಲೆಯ, ನಮ್ಮ ಕಟ್ಟಿಗೆ ಒಲೆಗಳ ಸಣ್ಣ ಅಡುಗೆ ಕೋಣೆಯಿಂದ ಇಡೀ ಪ್ರಪಂಚಕ್ಕೆ ತೋರಿಸಿ, ಸ್ವಾದದ ಹೊಗೆಯಾಡಿಸಿದ‌ ಕೀರ್ತಿ ಅಪ್ಪ-ಮಗಳ ಜೋಡಿಯದ್ದು! 'ಬರೆಯುವವರೆಲ್ಲ ಬರೆದಾಗಲಿ ಮತ್ತು ಮಾಸ್ಟರ್ ಶೆಫ್ ಹತ್ತನೆಯ ಸೀಸನ್ ಕಾರ್ಯಕ್ರಮ ಮುಗಿಯಲಿ' ಎನ್ನುವ ಕಾರಣಕ್ಕೆ ನಾನು ಈ ವಿಷಯದ ಕುರಿತು ಇಷ್ಟು ದಿನ ಬರೆದಿರಲಿಲ್ಲ. ಈ ಬಾರಿಯ 'ಮಾಸ್ಟರ್ ಶೆಫ್' ಸೀಸನ್ ಮುಗಿದಿದೆ, ಟ್ರೋಫಿಯನ್ನು ನಾಗ್ಪುರದ ಹುಡುಗರು ಗೆದ್ದಿದ್ದಾರೆ. ಅವರಿಗೆ ಮತ್ತು ಫೈನಲ್ ವಾರಕ್ಕೆ ಆಯ್ಕೆಯಾದ ಜೋಡಿಗಳಿಗೆ ಅಭಿನಂದನೆಗಳು. ಮಹೋನ್ನತ ಮತ್ತು ವಿಶಿಷ್ಟ ಶೈಲಿಯ ಖಾದ್ಯಗಳ ಮೂಲಕ ಜನರ ಹೃದಯ,‌ ಮನಸು ಮತ್ತು ಪ್ರೀತಿ ಎಂಬ ಬೆಲೆಕಟ್ಟಲಾಗದ ಟ್ರೋಫಿಯನ್ನು ತಮ್ಮದಾಗಿಸಿಕೊಂಡವರು ಅವನಿ ಶರ್ಮ-ವೇಣು ಶರ್ಮ ಜೋಡಿ. ದೇಶಾದ್ಯಂತ ಮತ್ತು ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಈ ಜೋಡಿಯದ್ದೇ ಹವಾ, ಕಲರವ, ಸ್ಟೋರಿ,‌ ಸ್ಟೇಟಸ್ ಮತ್ತು ಟ್ರೆಂಡ್!

ಇವರಿಬ್ಬರು ಮಾಸ್ಟರ್ ಶೆಫ್ ಸ್ಪರ್ಧೆಗೆ ಹೋದದ್ದು ತಮ್ಮ ದೈನಂದಿನ-ಸಾಂಪ್ರದಾಯಿಕ ಅಡುಗೆ ಶೈಲಿಯನ್ನು ಪ್ರಸ್ತುತಪಡಿಸುವ ಸಣ್ಣ, ಸುಂದರ,‌ ಸ್ಪಷ್ಟ ಕನಸಿನೊಂದಿಗೆ. ಅಲ್ಲಿ ಭರ್ತಿ ನಲುವತ್ತು ದಿನಗಳ ಕಾಲ ಮೂವತ್ತಕ್ಕೂ ಹೆಚ್ಚಿನ ತಮ್ಮ ಸಮುದಾಯದ ಅಧಿಕೃತ ಮತ್ತು ರುಚಿಕರವಾದ ಅಡುಗೆಯನ್ನು ಚೊಕ್ಕವಾಗಿ, ಸುಂದರವಾಗಿ ಮತ್ತು ರಸವತ್ತಾಗಿ ಉಣಬಡಿಸಿ ಗಳಿಸಿದ ಮೆಚ್ಚುಗೆ, ಗೌರವ, ಅಭಿಮಾನ, ಅನುಯಾಯಿಗಳ ಬಳಗ ಅಪಾರ ಮತ್ತು ಆಪ್ಯಾಯಮಾನ! ಚಿಕ್ಕ ಕನಸೊಂದು ಅಲ್ಲೆಲ್ಲೋ ಕಾಸರಗೋಡಿನ ಹಳ್ಳಿಯ ಮನೆಯೊಂದರ ಸಾಧಾರಣ ಹುಡುಗಿಯ ಮನಸಿನಲ್ಲಿ ಮೊಳಕೆಯೊಡೆದು, ಅದಕ್ಕೆ ಸೂಕ್ತ ವೇದಿಕೆ ಸಿಕ್ಕಿ, ಅದೀಗ ನನಸಾದ ಹೆಮ್ಮರ, ಸಾಧಿಸಿದ್ದು ಅಪಾರ! ತನ್ನ ಸಮುದಾಯದ ಸ್ವಾದಿಷ್ಟ ಆಹಾರ ಸಂಸ್ಕೃತಿಯನ್ನು ಪ್ರಪಂಚಕ್ಕೆ ಉಣಬಡಿಸಿದುದಕ್ಕೆ ಪ್ರತಿಯಾಗಿ ಇವರಿಬ್ಬರು ಗಳಿಸಿದ ಪ್ರೀತ್ಯಾದರ ಬೆಲೆ ಕಟ್ಟಲಾಗದ್ದು! ಅವನಿ-ವೇಣು ಜೋಡಿ ಅಪರೂಪದಲ್ಲಿ ಬಹಳ ಅಪರೂಪದ ಸಾಧನೆ ಮಾಡಿದ್ದಾರೆ. ಅದಕ್ಕಾಗಿ ನಿಮಗಿದೋ ಬಹುಪರಾಕ್!

ವೇಣು ಶರ್ಮ ಅವರು ತಮ್ಮ ಸಮುದಾಯದ, ತನ್ನ ಊರಿನ, ತನ್ನ ನೀರಿನ ಸಾಂಪ್ರದಾಯಿಕ ಅಡುಗೆಯ ಅನುಭವವನ್ನು ಈ ಸ್ಪರ್ಧೆಯಲ್ಲಿ ಧಾರೆಯೆರೆದರೆ, ಮಗಳು ಅವನಿ ಇಂದಿನ ಹೊಸ ಪೀಳಿಗೆಯ ಅಭಿರುಚಿಗೆ ತಕ್ಕಂತೆ ಪೀಳಿಗೆಯಿಂದ ಬಂದ ಅದ್ಭುತವಾದ ಸಾಂಪ್ರದಾಯಿಕ ಆಹಾರ ಸಂಸ್ಕೃತಿಗೆ ಹೊಸತನದ ಟಚ್ ನೀಡಿ ಅದನ್ನು ಪ್ರಸ್ತುತ ಪಡಿಸಿದ ರೀತಿ ಜಡ್ಜ್‌ಗಳು ಮತ್ತು ಜನಮನ ಗೆದ್ದೇ‌ ಬಿಟ್ಟಿತು. 'ನಮ್ಮ ಆಹಾರ ಶೈಲಿ ಮತ್ತು ಅಪ್ಪ-ಮಗಳ ಅಡುಗೆ ಕೈ ರುಚಿ' - ಹೀಗೆ ಎರಡೂ ಎಲ್ಲೆಡೆ ಪ್ರಸಿದ್ಧಿ ಪಡೆಯಿತು!

ಕರಾಡರ ವಿವಿಧ ಪತ್ತಳ್ಯೊ, ಪಿಂಡಿ ಪೈಸು, ದುದ್ಧ್ಯಾ ಬೆಂದಿ, ತವಷಾ ಕರ್ಂಬಿ, ಅಡ್ಕರ್ಯಾಂ ಮ್ಹೋರ, ಉಪ್ಪಿನಕಾಯಿಗಳು, ಅವಿಲ, ಕುಜ್ಜಾ ಸುಕ್ಕೆಂ, ಲೋಣಮೀರಿಂ, ಹರಿಸೇವೆ ಪಾನಕ, ಕುಚ್ಚಿಲಕ್ಕಿ ಗಂಜಿ, ಸೋಲಂಮೀರ್ಯಾ ಬೆಂದಿಯ ರುಚಿ ಮತ್ತು ಪ್ರಸ್ತುತಿ ವರ್ಣಿಸಲಸದಳವು! ಅರ್ಗಣೆ ಹೆಸರಿನ ಕರಾಡರ ಮನೆಯ ಪ್ರತಿನಿತ್ಯದ ಸ್ವಾದಿಷ್ಟ ಖಾದ್ಯವು ಜಡ್ಜಗಳ ಉದರ ತಣಿಸಿ ಸೈ ಎನಿಸಿತು. 'ದೀಪಾರಾಧನೆ' ಹೆಸರಿನಲ್ಲಿ ಪ್ರಸ್ತುತಪಡಿಸಿದ ಸಿಹಿತಿನಿಸು ಅವರ ಎತ್ತರ ಮತ್ತು ಪ್ರಸಿದ್ಧಿಯನ್ನು ಮತ್ತಷ್ಟು ಹೆಚ್ಚಿಸಿತು, ದೀಪದ ಆರಾಧನೆಯ ಆ ಚೈತನ್ಯಯುಕ್ತ, ದೇದೀಪ್ಯಮಾನ ಬೆಳಕು ಪ್ರಖರವಾಗಿ ಬೆಳಗಿ, ದಾರಿ ತೋರಿ ನಿಮ್ಮನ್ನು ಮುನ್ನಡೆಸಲಿ! ಮಕ್ಕಳಿಗೆ ಒಂದೇ ತಟ್ಟೆಯಿಂದ ಅಮ್ಮ ತನ್ನ ಕೈಯಾರೆ ನೀಡುವ 'ಅಮ್ಮನ ಕೈ ತುತ್ತು' ಹೆಸರಿನ ಖಾದ್ಯದ ರುಚಿ ಮತ್ತು ಪ್ರಾಮುಖ್ಯತೆಯ ಆಪ್ಯಾಯಮಾನ ವರ್ಣನೆಯನ್ನು ನೋಡಿದವರೆಲ್ಲರೂ ಅಭಿಮಾನದಿಂದ ಭೇಷ್ ಎಂದರು. ಈ ಅವತರಣಿಕೆ ವೀಕ್ಷಿಸಿದ ಬಹುತೇಕರು ಫುಲ್ ಫಿದಾ ಮತ್ತು ರೋಮಾಂಚನಗೊಂಡರಲ್ಲ! ಇದು‌ ನಮ್ಮ ಸಂಸ್ಕೃತಿ ಮತ್ತು ತಿಂಡಿ-ತಿನಿಸುಗಳ ಚಮತ್ಕಾರ!

ಎಂಟೂ ವಾರಗಳ ಕಾಲ ಇವರು ಪ್ರಸ್ತುತಪಡಿಸಿದ ತಿಂಡಿಗಳೆಲ್ಲವೂ ಅನನ್ಯ ಮತ್ತು ಸೂಪರ್. ಅದರಲ್ಲೂ ಬಾಳೆ ಎಲೆಯಲ್ಲಿ ಬಡಿಸಿದ ನಮ್ಮೂರಿನ ಶೈಲಿಯ ಕರಾಡರ ಶುಭ ಸಮಾರಂಭದ ಊಟವಂತೂ ಜಡ್ಜ್‌ಗಳ ಭಾಷೆಯಲ್ಲಿ ಬಣ್ಣಿಸುವುದಾದರೆ ನಿಜಾರ್ಥದಲ್ಲಿ 'ಸೂಪರ್ ಸೇ ಊಪರ್'! ಹದಿನೆಂಟು ವಿವಿಧ ರುಚಿಕರ ಖಾದ್ಯಗಳನ್ನು ಹೊಟ್ಟೆ ಬಿರಿಯುವಷ್ಟು ಉಂಡು ಜಡ್ಜ್‌ಗಳು ನಮ್ಮ ಆಹಾರ ಮತ್ತು ಸಂಸ್ಕೃತಿಗೆ ಮನಸೋತು ಕೈಮುಗಿದು ಧನ್ಯವಾದ ಸಮರ್ಪಿಸಿ ಹೊಗಳಿದ್ದು ಇಡೀ ಸೀಸನ್ನಿನ ಹೈಲೈಟ್‌ಗಳಲ್ಲೊಂದು. ಇದು ನಮ್ಮ ಆಹಾರ ಮತ್ತು ಅದರ ರುಚಿಗಿರುವ ಅದ್ಭುತ ಶಕ್ತಿ. ನಮ್ಮಲ್ಲಿ ರುಚಿಕರವಾದ ಅಡುಗೆ ಮಾಡುವ ಅಡುಗೆಯವರು, ಅಜ್ಜಿಯಂದಿರು,‌ ಮಹಿಳಾಮಣಿಗಳ ಬಳಗ ಬೃಹದಾಗಿದೆ ಮತ್ತು ನಮ್ಮ ಆಹಾರದಲ್ಲಿ ವಿವಿಧತೆ ಇನ್ನೂ ದೊಡ್ಡದಿದೆ - ನೀವು ಒಟ್ಟಂದದಲ್ಲಿ ನಮ್ಮವರ ಮತ್ತು ಕರಾಡ ಆಹಾರ ಶೈಲಿಯ ಅತುಲ್ಯ ರಾಯಭಾರಿಗಳಾಗಿ ಗುರುತಿಸಿಕೊಂಡಿರುವುದಕ್ಕೆ ಇಡೀ ಸಮಾಜಕ್ಕೆ ಅತೀವ ಗರ್ವ ಮತ್ತು ಹೆಮ್ಮೆಯಿದೆ.

ಕರಾಡ ಮನೆಗಳ ನೂರಾರು ಮಕ್ಕಳು ಮತ್ತು ಮಹಿಳೆಯರು ನೀವು ಅನುಸರಿಸಿದ ಪ್ಲೇಟಿಂಗ್ ಮತ್ತು ಶೈಲಿಯನ್ನು ಅನುಸರಿಸುತ್ತಿದ್ದಾರೆ. "ಅವನಿಕ್ಕನ ರೀತಿಯಲ್ಲಿ ನಾನೂ ರುಚಿಕರ ಮತ್ತು ಚೆಂದದ ಅಡುಗೆ ಮಾಡಬೇಕು, ಅದನ್ನು ಸೊಗಸಾಗಿ ತಟ್ಟೆಯಲ್ಲಿ ಪ್ರಸ್ತುತಪಡಿಸಬೇಕು" ಎಂದು ತಂತಮ್ಮ ಪುಟ್ಟ ಹೃದಯಗಳಲ್ಲಿ ಕನಸು ಕಟ್ಟಿಕೊಂಡಿದ್ದಾರೆ. ಇದಲ್ಲವೇ ಸಂಭ್ರಮ, ಇದಲ್ಲವೇ ಸ್ಪೂರ್ತಿ, ಇದಲ್ಲವೇ ನಿಜ ಗೆಲುವು, ಇದಲ್ಲವೇ ನಿಜರೀತಿಯ ನಮ್ಮತನ, ಇದಲ್ಲವೇ ನಮ್ಮ ಅನುಪಮ ಆಹಾರ ಸಂಸ್ಕೃತಿ?! ನೀವು‌ ನಮ್ಮೆಲ್ಲರ 'ಖಾದ್ಯ ಕಣ್ಮಣಿ'ಗಳು...

'ಆಹಾರವು ಮನಸು, ಜನರು, ಸಂಸ್ಕೃತಿ ಮತ್ತು ಜಗತ್ತನ್ನು ಜೋಡಿಸುತ್ತದೆ' ಎನ್ನುವ ಮಾತು ಸರ್ವವೇದ್ಯ! ನಮ್ಮ ಆಹಾರ ಸಂಸ್ಕೃತಿಯ ಶ್ರೇಷ್ಠತೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿ, ಜಗದ್ವಿಖ್ಯಾತಗೊಳಿಸಿ ತಾವೂ ಜನರ ಮನದೊಳು ಜಾಗ ಪಡೆದ ಧನ್ಯತೆ ಅವನಿ-ವೇಣು ಜೋಡಿಯದ್ದು. 
ಇದು ಕೇವಲ ಆರಂಭ... 'ನಿಮ್ಮ ಕನಸುಗಳೆಲ್ಲ ಕೈಗೊಳುವ ಯಾತ್ರೆಯಲಿ ಸಿದ್ಧಿಸುವ ಧನ್ಯತೆಯು ನಮದೇನೆ...' ನೀವಿಬ್ಬರು ನಮ್ಮ ನಡುವಿನ 'ಶ್ರೇಷ್ಠ ನಳಪಾಕ ಪ್ರವೀಣರು' (MasterChefs). ಕರಾಡ ಆಹಾರವನ್ನು ಜಗದಗಲ ಪರಿಚಯಿಸಿ ಉಣಬಡಿಸುವ ಭವಿಷ್ಯದ ನಿಮ್ಮ ಮಹತ್ವಾಕಾಂಕ್ಷೆಯ ಯೋಜನೆಗಳೆಲ್ಲ ಸಫಲವಾಗುವಂತೆ ನಮ್ಮ ಸಮುದಾಯದ ಆರಾಧ್ಯ ದೇವತೆ ದುರ್ಗಾದೇವಿ ಹರಸಿ-ಹಾರೈಸಲಿ! ನಿಮ್ಮ ಸ್ವಾದಿಷ್ಟ ಅಡುಗೆಯ ಲೈಫ್‌ಟೈಮ್ ಅಭಿಮಾನಿಗಳಲ್ಲಿ ನಾನೂ ಒಬ್ಬ!

'ಕುಕ್ಕಿಂಗ್ ಅಭೀ ಬಾಕೀ ಹೈ ದೋಸ್ತೋಂ' ಎನ್ನುವುದು ನಮಗೆ ಗೊತ್ತಿದೆ. ನಿಮ್ಮ ಕನಸುಗಳನ್ನು ಬೆಂಬತ್ತುತ್ತಿರುವ ಕಾರಣ ಕಳೆದ ಮೂರು ತಿಂಗಳುಗಳಿಂದ ಮುಖತಃ ಭೇಟಿಯಾಗಲು ಆಗಿರಲಿಲ್ಲ. ಮುಂದಿನ ವಾರ ಬೆಂಗಳೂರಿಗೆ ಬಂದಾಗ ಭೇಟಿಯಾಗೋಣ... ಎಂದಿನಂತೆ ಒಂದಷ್ಟು ಮಾತು, ಹರಟೆ, ನಗು, ಅಡುಗೆಯ ಜೊತೆಗೆ ನಿಮ್ಮ ಆಹಾರ ಕ್ಷೇತ್ರದ ನೂತನ ಪಯಣ ಮತ್ತು ಅಲ್ಲಿನ ಅನುಭವವನ್ನು ಸಂಭ್ರಮಿಸೋಣು. ಮಗಳು ಭುವಿ ನಿಮ್ಮ ಮಾತುಗಳಿಗೆ ಕಿವಿಯಾಗಲು, ಟೀವಿಯಲ್ಲಿ ನೋಡಿದ ನಿಮ್ಮನ್ನು ನಮ್ಮ ಮನೆಯಲ್ಲಿ ಕಣ್ತುಂಬಿಕೊಳ್ಳಲು ಕಾತುರಳಾಗಿದ್ದಾಳೆ! ಅವನಿ-ವೇಣುಣ್ಣ see you both soon at my residence.

✒️ ರವೀ ಸಜಂಗದ್ದೆ
Achievers
ಸಾವಿರಾರು ಮನಸುಗಳಿಗೆ ಸ್ಪೂರ್ತಿ ಚಿಲುಮೆಯಾದ 'ಖಾದ್ಯ ಕಣ್ಮಣಿ'ಗಳು!