Karada Vishwa

Article · May 16, 2026

ಪ್ರಕೃತಿಯ ಉಡುಗೊರೆ ...

-- ಜಯಶ್ರೀ ಕೆ ಆರ್ ಭಟ್ ಪಳ್ಳತ್ತಡ್ಕ

ಇದು ಬಟಾಣಿ ಕಾಳಲ್ಲ. ಕುದನೆ ಕಾಯಿ ಅಥವಾ ಕಾಡು ಬದನೆ. ಮುಳ್ಳಿನ ಗಿಡ. ಕಾಯಿಗಳನ್ನು ಕೀಳಲು ಸ್ವಲ್ಪ ಶ್ರಮ ಬೇಕು. ಜಾಗ್ರತೆಯಾಗಿ ಕೀಳಬೇಕು. ಮುಳ್ಳು ಚುಚ್ಚಿದರೆ ವಿಪರೀತ ನೋವು. ಇದರ ಕಸಕಡ್ಡಿಗಳು ಚಮ೯ಕ್ಕೆ ತಾಗಿದಲ್ಲಿ ಕೆಲವರಿಗೆ ತುರಿಕೆಯಾಗಬಹುದು. ಈ ಕಾಯಿತೊಟ್ಟು ತೆಗೆದು ರುಬ್ಬುವ ಕಲ್ಲಲ್ಲಿ ಹಾಕಿ ಸ್ವಲ್ಪ ನೀರುಹಾಕಿ., ನಾಲ್ಕಾರು ಸುತ್ತು ಕಲ್ಲು ತಿರುಗಿಸಿದರೆ ಎಲ್ಲಾ ಕಾಯಿಗಳು ಪಟಪಟನೆ ಒಡೆಯುತ್ತವೆ. ಆಮೇಲೆ ನೀರಿನಲ್ಲಿ ನಾಲ್ಕಾರು ಬಾರಿ ತೊಳೆದರೆ ಬೀಜಗಳನ್ನು ಸುಭವಾಗಿ ತೆಗೆಯಬಹುದು. ನಂತರ ನೀರೆಲ್ಲ ಬಸಿದು ಕಾಯಿಗಳನ್ನು ಉಪ್ಪು ಮೆಣಸಿನ ಹುಡಿ ಬೆರೆಸಿ ಪಲ್ಯದಂತೆ ಬಾಡಿಸಿ ಬಿಸಿಲಲ್ಲಿ ಒಣಗಿಸಿ ಒಣಗಿದ ಮೇಲೆ ಎಣ್ಣೆಯಲ್ಲಿ ಹುರಿದರೆ ಊಟಕ್ಕೆ ತುಂಬಾ ರುಚಿಯಾಗಿರುತ್ತದೆ. ತನ್ನಿಂತಾನೇ ಬೆಳೆವ ಈಗಿಡಕ್ಕೆ ಯಾವ , ಯಾರ ಪೋಷಣೆಯೂ ಬೇಡ. ಧಾರಾಳವಾಗಿ ಬೆಳೆವ ಈ ಕಾಯಿಗಳು ಸಾಂಬಾರ್, ಪಲ್ಯ, ಮೆಂತೆ ತಂಬುಳಿ ಸಾಸಿವೆ, ಕರಾಡರ 'ಸೋಲ ಮೀರ್ಯಾ ಬೆಂದಿ ' ಹೀಗೆ ರುಚಿಯಾದ ಅಡುಗೆಗಳನ್ನು ಮಾಡಬಹುದು. ಮಳೆಗಾಲಕ್ಕೆ ಒಣಗಿಸಿ ಸಂಗ್ರಹ ಯೋಗ್ಯ. ಖರ್ಚಿಲ್ಲದೆ ವಿಷಯುಕ್ತವಲ್ಲದ, ಪ್ರಕೃತಿ ನೀಡಿದ ಅದ್ಭುತ ರುಚಿಯ ಸತ್ವಭರಿತ ಆಹಾರ. ವ್ಯರ್ಥಗೊಳಿಸದೆ ಉಪಯೋಗಿಸಿದಲ್ಲಿ ಪ್ರಕೃತಿ ನೀಡಿದ ಉಡುಗೊರೆ ಸಾರ್ಥಕ.
Agriculture
ಪ್ರಕೃತಿಯ ಉಡುಗೊರೆ ...