
Article · August 15, 2026
ಭಾರತ
_ವೀಣಾ ಎಂ ಭಟ್
ಇಂದೊಂದಾಗಿರಿ ಎಂದೊಂದಾಗಿರಿ
ಭಾರತ ದೇಶದ ಯುವಜನರೇ
ಭಾರತೀಯರು ಸೋದರರೆಂದೂ.
ರಕ್ಷಿಸುವ ನಮ್ಮ ಜನನಿಯನು
ಶ್ರೀ ರಾಮನು ಜನಿಸಿದ ಪುಣ್ಯದ ನಾಡಿದು
ಕೃಷ್ಣನ ಲೀಲೆಯ ನೆಲೆವೀಡು
ರಾಮಕೃಷ್ಣ ವಿವೇಕಾನಂದರ ನಾಡಿದು
ಭವ್ಯತೆ ಮೆರೆದಿಹ ಭೂಮಿ ಇದು
ಕಾಶ್ಮೀರದಿಂ ಕನ್ಯಾಕುಮಾರಿವರೆಗಿನ
ಭೂವಲಯವದು ದೇವಿಯ ಸವಿಗಾನ
ಸಿಂಧು ಯಮುನೆ ಗಂಗಾ ಕಾವೇರಿಯರ
ಕಲರವದ ಸುಂದರ ತಾಣ
ಭಾಷೋಪಭಾಷೆಯ ಹನಿಹನಿ ಮಧುರವು
ಹರಿಸಿದ ಜೇನಿನ ಗೂಡು ಇದು
ಹಚ್ಚಹಸಿರ ವನ ಉಸಿರದು ಮೆಚ್ಚುವ
ಕೆಚ್ಚೆದೆ ಭಾರತ ದೇವಿಯದು
ತೆಂಗಿನ ಕಂಗಿನ ಹಲ ಕೃಷಿ ಭೂಮಿಯು
ಸಂಗಮವಿಲ್ಲಿ ಹಸಿರ ನೆಲ
ಜುಳುಜುಳು ಹರಿಯುವ ನೀರಿನ ಸೆಲೆಯಿದು
ಪುಣ್ಯಕ್ಷೇತ್ರಗಳ ದೈವ ಬಲ
ಶಿವಾಜಿ ಮರಾಠ ರಾಜ ಮಹಾರಾಜರು
ಕೃಷ್ಣ ದೇವರಾಯರ ಉಕ್ಕಿನಬೀಡು
ಕಿತ್ತೂರ ಚನ್ನಮ್ಮ ಲಕ್ಷ್ಮೀಬಾಯಿಯರು
ಧೀಮಂತ ಓಬವ್ವನ ಭೂಮಿಯಿದು
ರನ್ನ ಪಂಪರು ಕಬೀರ ಮುದ್ದಣ್ಣರ
ಸಾಹಿತ್ಯ ಕವಿಗಳ ರಚನೆ ಇದು
ರವೀಂದ್ರನಾಥರ ಸುಂದರ ಮಧುರ
ಮಾತೆಯ ಗೀತೆಯ ತಾಣವಿದು
ಕಾಶ್ಮೀರದ ಮನಮೋಹಕ ಪೃಕೃತಿಯು
ಭಾರತಿ ದೇವಿಯ ಮುಕುಟವಿದು
ಕಾವಿಯ ಧರಿಸಿದ ಯೋಗಿಯ ನಾಡಿದು
ಮೋದಿಯ ಸಮರಸ ಬೀಡು ಇದು
ಅಂದಿಗು ಇಂದಿಗು ಎಂದಿಗು ಮುಂದಕು
ಸರ್ವ ಧರ್ಮಗಳ ಮಂದಿರವೂ
ಭವ್ಯ ಭಾರತವ ನಿರ್ಮಿಸುವ ಬನ್ನಿ
ಸಕಲ ಧರ್ಮದ ಬಂಧು ನಾವು
ಬೋಲೋ ಭಾರತ್ ಮಾತಾ ಕೀ ಜೈ
