
News · June 11, 2026
ಕರಾಡ ಬ್ರಾಹ್ಮಣ ಸಮಾಜ ಬೆಳ್ತಂಗಡಿ ವಲಯ ಹಾಗೂ ಕರಾಡ ವಿಶ್ವ ತಂಡದ ಸೌಹಾರ್ದಯುತ ಭೇಟಿ
ದಿನಾಂಕ 10 ಜೂನ್ 2026ರಂದು ನಡೆಯಿತು.
ದಿನಾಂಕ 10 ಜೂನ್ 2026ರಂದು ಕರಾಡ ವಿಶ್ವ ತಂಡದ ವತಿಯಿಂದ ಕರಾಡ ಬ್ರಾಹ್ಮಣ ಸಮಾಜ, ಬೆಳ್ತಂಗಡಿ ವಲಯದ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರೊಂದಿಗೆ ಸೌಹಾರ್ದಯುತ ಭೇಟಿ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವು ಸೋಮಂತಡ್ಕದ “ಸಮೃದ್ಧಿ” ಸಮಾಜ ಭವನದಲ್ಲಿ ಆಯೋಜಿಸಲ್ಪಟ್ಟಿತ್ತು.
ಗೌರವಾಧ್ಯಕ್ಷ ಶ್ರೀ ಗೋವಿಂದ ಭಟ್ ತಲೇಕ, ಅಧ್ಯಕ್ಷ ಶ್ರೀ ವಿಷ್ಣು ಭಟ್ ಬೇಂಗ್ರೋಡಿ, ಉಪಾಧ್ಯಕ್ಷ ಶ್ರೀರಾಮ ಭಟ್ ಕನ್ನಡ್ಕ, ಕಾರ್ಯದರ್ಶಿ ಶ್ರೀ ಪ್ರಕಾಶ ಭಟ್ ಹಾರ್ನಾಡು ಹಾಗೂ ವಲಯ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ವಿಜಯಾ ಭಟ್ ಕುಂಟಿಕಾನ ಸೇರಿದಂತೆ ಸುಮಾರು 25 ಮಂದಿ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕರಾಡ ವಿಶ್ವ ತಂಡದ ಪರವಾಗಿ ಶ್ರೀ ಚಂದ್ರಹಾಸ ಕನ್ನಡ್ಕ ಹಾಗೂ ಶ್ರೀ ಸುಬ್ರಹ್ಮಣ್ಯ ಭಟ್ ಕುದ್ಕುಳಿ ಅವರು ಕರಾಡ ವಿಶ್ವ ಆ್ಯಪ್‌ನ ಉದ್ದೇಶ, ವೈಶಿಷ್ಟ್ಯಗಳು ಹಾಗೂ ಸಮಾಜದ ಪರಸ್ಪರ ಸಂಪರ್ಕ ಮತ್ತು ಸಹಕಾರವನ್ನು ವೃದ್ಧಿಸುವಲ್ಲಿ ಅದರ ಪಾತ್ರದ ಕುರಿತು ವಿವರವಾಗಿ ಮಾಹಿತಿ ನೀಡಿದರು. ನಂತರ ನಡೆದ ಪ್ರಶ್ನೋತ್ತರ ಸಂವಾದದಲ್ಲಿ ಭಾಗವಹಿಸಿದವರು ತಮ್ಮ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಹಂಚಿಕೊಂಡರು.
ಬೆಳ್ತಂಗಡಿ ವಲಯದ ಪದಾಧಿಕಾರಿಗಳು ಕರಾಡ ವಿಶ್ವ ತಂಡವನ್ನು ಆತ್ಮೀಯವಾಗಿ ಸ್ವಾಗತಿಸಿ, ಸಂವಾದ ಕಾರ್ಯಕ್ರಮದ ಬಳಿಕ ಭೋಜನ ವ್ಯವಸ್ಥೆಯನ್ನೂ ಮಾಡಿದ್ದರು.
ವಿಶೇಷವೆಂದರೆ, ಪ್ರಸ್ತುತ ಬೆಳ್ತಂಗಡಿ ವಲಯದಲ್ಲಿ ನೆಲೆಸಿರುವ ಸುಮಾರು 80 ಕರಾಡ ಬ್ರಾಹ್ಮಣ ಕುಟುಂಬಗಳು ಕಾಸರಗೋಡು, ಪುತ್ತೂರು, ಸುಳ್ಯ, ಪೆರ್ಲ ಮುಂತಾದ ಪ್ರದೇಶಗಳಿಂದ ಕಳೆದ ಎರಡು-ಮೂರು ದಶಕಗಳಲ್ಲಿ ಇಲ್ಲಿ ಬಂದು ಸ್ವಯಂ ಪರಿಶ್ರಮದಿಂದ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಸಂಘಟಿತ ಮನೋಭಾವದ ಮೂಲಕ ಇಂದು ಅವರು ಉತ್ತಮ ಜೀವನಮಟ್ಟವನ್ನು ಸಾಧಿಸಿರುವುದು ವಿಶೇಷ.
ಈ ‘ಕರಾಡ ವಿಶ್ವ ತಂಡದ’ ಭೇಟಿ ಪರಸ್ಪರ ಪರಿಚಯ, ಸಂಪರ್ಕ ಮತ್ತು ಸಹಕಾರವನ್ನು ಮತ್ತಷ್ಟು ಬಲಪಡಿಸಿದ ಅರ್ಥಪೂರ್ಣ ಹಾಗೂ ಯಶಸ್ವಿ ಕಾರ್ಯಕ್ರಮವಾಗಿತ್ತು.




Community
