Karada Vishwa

Article · October 20, 2026

ಹೊತ್ತು ಕಳೆಯಲು ಬಂದವಳು

By ಗಾಯತ್ರಿ ಕೆ ನಾಗರಾಜ್ "ಕೃಷ್ಣಗಾನಂ" ಅಡ್ಕತ್ತೊಟ್ಟಿ

ಗಾಯತ್ರಿ ಕೆ ಅಡ್ಕತೊಟ್ಟಿ

ಕೊರೊನಾ ಸಂದರ್ಭದಲ್ಲಿ ನಡೆದಂತಹ ಹಲವಾರು ಘಟನೆಗಳು ಬದುಕಿನಲ್ಲಿ ಬದಲಾವಣೆ ಜೊತೆಗೆ ಹಲವು ಪಾಠಗಳನ್ನು ತಿಳಿಸಿರುವುದು ನಿಜವೇ..... ಅದನ್ನ ಆಧರಿಸಿದ ಒಂದು ಪುಟ್ಟ ನಿಜಸತ್ಯ.....ಕಥೆ

ಕೊರೊನಾ ಸಮಯ ಅದು.ಊರೆಲ್ಲ ಲಾಕ್ ಡೌನ್. ರಸ್ತೆಗಳು ಖಾಲಿ. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಸುದ್ದಿಯಲ್ಲಿ ಪ್ರತಿದಿನ ಸಂಖ್ಯೆಗಳು ಏರುತ್ತಿದ್ದವು.

ಆ ಸಮಯಕ್ಕೆ ನಾನು ದಿನವೇತನದ ಹುದ್ದೆಯಿಂದ ಪರ್ಮನೆಂಟ್ ಹುದ್ದೆಗೆ ನಿಗದಿಯಾಗಿದ್ದೆನಷ್ಟೇ.
ಸರ್ಕಾರಿ ಹುದ್ದೆ ಇದ್ದವರಿಗೆ - ಗಡಿ ಕಾಯುವ ಕೆಲಸ ಎಂಬ ಆರ್ಡರ್ ನನ್ನ ಹೆಸರಿಗೂ ಬಂದಿತ್ತು.

ಅಂದರೆ, ನಮ್ಮ ಊರಿನ ಗಡಿ. ಯಾರೂ ಆಚೆ ಹೋಗಬಾರದು, ಯಾರೂ ಈಚೆ ಬರಬಾರದು. ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಪಾಸ್. ಬಂದವರ ಹೆಸರು, ಊರು, ಜ್ವರ ಇದೆಯಾ ಇಲ್ವಾ ಅಂತ ಬರೆದುಕೊಳ್ಳುವುದು - ಅಷ್ಟೇ ನಮ್ಮ ಕೆಲಸ.

ನಾಲ್ಕು ಜೊತೆ ಬಟ್ಟೆ, ಒಂದು ನೀರಿನ ಬಾಟಲಿ, ಒಂದು ಪುಟ್ಟ ಟಾರ್ಚ್ ಹಿಡಿದು ನಾನು ಗಡಿಗೆ ಹೋದೆ. ಒಂದು ಟೆಂಟ್, ಎರಡು ಪ್ಲಾಸ್ಟಿಕ್ ಕುರ್ಚಿ, ಪಕ್ಕದಲ್ಲಿ ಪೊಲೀಸರ ಜೀಪು. ಅಷ್ಟೇ ನಮ್ಮ ಪ್ರಪಂಚ.

ಮೊದಲು ಎರಡು ದಿನ ತುಂಬಾ ಕಷ್ಟವಾಯಿತು. ಯಾರೂ ಇಲ್ಲ. ಮಾತಾಡಲು ಜನ ಇಲ್ಲ. ಮೊಬೈಲ್ ನಲ್ಲಿ ಸಿಗ್ನಲ್ ಕೂಡ ಕಡಿಮೆ. ಆದರೂ ಆಚೀಚೆ ಓಡಾಡಿ ಸಿಗ್ನಲ್ಲಿನ ಜಾಗ ಹುಡುಕಿದೆ. ಬೇಸರ ತಾಳಲಾರದೆ, ಜೀವನದಲ್ಲಿ ಮೊದಲ ಬಾರಿಗೆ *ಇನ್ಸ್ಟಾಗ್ರಾಮ್* ಅಂತ ಒಂದು ಆಪ್ ಡೌನ್ ಲೋಡ್ ಮಾಡಿದೆ.
ರೀಲ್ಸ್ ನೋಡುತ್ತಾ ಹೋದೆ. ಒಬ್ಬರು ಅಡುಗೆ ಮಾಡೋದು, ಒಬ್ಬರು ಡ್ಯಾನ್ಸ್ ಮಾಡೋದು, ಒಬ್ಬರು ಅಳೋದು... ನೋಡುತ್ತಾ ನೋಡುತ್ತಾ ಹೃದಯಕ್ಕೆ ಏನೋ ಹೊಸತನ ಸಿಕ್ಕ ಹಾಗೆ ಆಯಿತು. ಹೊರಗೆ ಕೊರೊನಾ, ಒಳಗೆ ಒಬ್ಬಂಟಿತನ. ಆ ರೀಲ್ಸ್ ಗಳೇ ಒಂದು ಕಿಟಕಿಯಾದವು.
ಎರಡನೇ ದಿನ ರಾತ್ರಿ 11 ಗಂಟೆ ಇರಬೇಕು. ಟೆಂಟ್ ನಲ್ಲಿ ಒಬ್ಬನೇ ಕೂತಿದ್ದೆ. ಹೊರಗೆ ಸಿಮೆಂಟ್ ರಸ್ತೆ ಬಿಟ್ಟರೆ ಸೊಳ್ಳೆಗಳ ಸದ್ದು ಮಾತ್ರ.ಇನ್ಸ್ಟಾದಲ್ಲಿ ಒಂದು ಮೆಸೇಜ್ ಬಂತು.

ದೀಪಾಲಿ ಅನ್ನೋ ಐಡಿಯಿಂದ - "ಹಾಯ್"

ನಾನು ನೋಡಿದೆ. ಪ್ರೊಫೈಲ್ ನಲ್ಲಿ ಒಂದು ಹುಡುಗಿಯ ಫೋಟೋ, ಕಣ್ಣಲ್ಲಿ ದೀಪ ಇದ್ದ ಹಾಗೆ.

ನಾನು ಪ್ರತಿಯಾಗಿ "ಹಾಯ್" ಅಂತ ಕಳುಹಿಸಿದೆ.

ಅವಳು ಕೇಳಿದಳು - "ನೀವು ಯಾರು? ಎಲ್ಲಿರುತ್ತೀರಿ?"

ನಾನು ಹೇಳಿದೆ - "ನಾನು ಕಿರಣ. ಈಗ ಗಡಿಯಲ್ಲಿ ಡ್ಯೂಟಿಯಲ್ಲಿದ್ದೇನೆ. ಕೊರೊನಾ ಡ್ಯೂಟಿ."

ಅಲ್ಲಿಂದ ಶುರುವಾಯಿತು.ಮೊದಲು ಪರಿಚಯ, ಆಮೇಲೆ ಮಾತುಕತೆ. ಅವಳು ಕೂಡ ಮನೆಯಲ್ಲಿ ಕೂತು ಬೇಸರಗೊಂಡಿದ್ದಳು. ಕಾಲೇಜು ಇಲ್ಲ, ಹೊರಗೆ ಹೋಗುವ ಹಾಗಿಲ್ಲ. ನಾನು ಗಡಿಯಲ್ಲಿ ಕೂತು ಬೇಸರಗೊಂಡಿದ್ದೆ.
ಇಬ್ಬರಿಗೂ ಸಮಯ ಕಳೆಯಲು ಒಂದು ಕಾರಣ ಬೇಕಿತ್ತು.ಮರುದಿನದಿಂದ ನಮ್ಮ ಡ್ಯೂಟಿ ಬದಲಾಯಿತು. ಹಗಲು ನಾನು ಹೆಸರು ಬರೆಯುವ ಕೆಲಸ ಮಾಡುತ್ತಿದ್ದೆ, ರಾತ್ರಿ 8 ಆದ ಮೇಲೆ ಟೆಂಟ್ ನಲ್ಲಿ ಕುಳಿತು ದೀಪಾಲಿ ಜೊತೆ ಚಾಟಿಂಗ್.ರಾತ್ರಿ ಇಡೀ ಮಾತು. ಕೆಲವೊಮ್ಮೆ 2 ಗಂಟೆಯವರೆಗೂ.
ನಮ್ಮ ಊರಿನ ಕಥೆ, ನನ್ನ ಕನಸು, ಅವಳ ಕನಸು, ಇಷ್ಟ, ಕಷ್ಟ. ನಾವು ಎಂದೂ ಭೇಟಿ ಆಗಿರಲಿಲ್ಲ, ಆದರೂ ಒಬ್ಬರಿಗೊಬ್ಬರು ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದೆವು. ಕೊರೊನಾದ ಭಯ, ಗಡಿಯ ಒಂಟಿತನ - ಎಲ್ಲವೂ ಆ ಚಾಟ್ ನಲ್ಲಿ ಕರಗಿ ಹೋಗುತ್ತಿತ್ತು.ಆ 15 ದಿನ ಹೇಗೆ ಹೋದವು ಎಂದು ನನಗೆ ಗೊತ್ತೇ ಆಗಲಿಲ್ಲ.

ಮೊದಲು ನಾನು ಟೈಮ್ ಪಾಸ್ ಗಾಗಿ ಮಾತನಾಡಲು ಶುರು ಮಾಡಿದ್ದೆ. ನಿಜ. ಸುಳ್ಳು ಹೇಳುವುದಿಲ್ಲ. ಆದರೆ ಆ ಟೈಮ್ ಪಾಸ್ ಯಾವಾಗ ಪ್ರೀತಿಯಾಗಿ ಬದಲಾಯಿತು ಎಂದು ನನಗೆ ಗೊತ್ತಾಗಲಿಲ್ಲ. ಅವಳ "ಗುಡ್ ಮಾರ್ನಿಂಗ್" ಮೆಸೇಜ್ ಗಾಗಿ ನಾನು ಬೆಳಿಗ್ಗೆ ಎದ್ದು ಕಾಯುತ್ತಿದ್ದೆ. ಅವಳ "ಊಟ ಆಯ್ತಾ?" ಎಂಬ ಪ್ರಶ್ನೆಗೆ ನಾನು ಸುಳ್ಳು ಹೇಳಿ "ಆಯ್ತು" ಅಂತ ಹೇಳುತ್ತಿದ್ದೆ, ಯಾಕೆಂದರೆ ಗಡಿಯಲ್ಲಿ ಊಟ ಸರಿಯಾಗಿ ಸಿಗುತ್ತಿರಲಿಲ್ಲ.15 ನೇ ದಿನ ಬಂತು. ಕೊನೆಯ ದಿನ. ನಾಳೆಯಿಂದ ಗಡಿ ಡ್ಯೂಟಿ ಮುಗಿಯುತ್ತದೆ. ನಿಮ್ಮ ಬದಲಿಗೆ ಬೇರೆಯವರ ನಿಗದಿಯಾಗಿದೆ ಎಂದು ಅಧಿಕಾರಿ ಹೇಳಿದರು.

ನಾನು ಖುಷಿಯಿಂದ ಅವಳಿಗೆ ಹೇಳಿದೆ - "ದೀಪಾಲಿ, ನಾಳೆ ನನ್ನ ಡ್ಯೂಟಿ ಮುಗಿಯುತ್ತದೆ. ನಾವು ಭೇಟಿ ಆಗೋಣವಾ? ನಿನ್ನನ್ನು ನೋಡಬೇಕು ಅನಿಸುತ್ತಿದೆ."

ಅವಳು ಸ್ವಲ್ಪ ಹೊತ್ತು ಆನ್ ಲೈನ್ ಇದ್ದಳು, ಟೈಪಿಂಗ್... ಅಂತ ತೋರಿಸುತ್ತಿತ್ತು, ಆಮೇಲೆ ನಿಂತು ಹೋಯಿತು.ಸ್ವಲ್ಪ ಹೊತ್ತಿನ ನಂತರ ಒಂದು ಮೆಸೇಜ್ ಬಂತು.

"ಸಾರಿ ಕಿರಣ ನೀನು ತುಂಬಾ ಒಳ್ಳೆಯವನು. ನಾನು ಈ ಲಾಕ್ ಡೌನ್ ನಲ್ಲಿ ಬೋರ್ ಆಗಿದ್ದೆ, ಅದಕ್ಕೆ ಮಾತನಾಡಿದೆ. ನೀನು ಸೀರಿಯಸ್ ಆಗಿ ತೆಗೆದುಕೊಳ್ಳಬೇಡ. ನನ್ನ ಮನಸ್ಸಿನಲ್ಲಿ ಆ ತರಹ ಏನೂ ಇಲ್ಲ. ನನ್ನ ಆಸೆಗಳು ತುಂಬಾ ಎತ್ತರಕ್ಕಿದೆ ನಾನೊಬ್ಬಳು ಐಎಎಸ್ ಅಧಿಕಾರಿಯಾಗಬೇಕು ಅದರ ತಯಾರಿಯಲ್ಲೂ ಇದ್ದೇನೆ ಹಲವಾರು ಕಾಂಪಿಟೇಟಿವ್ ಪರೀಕ್ಷೆಗಳನ್ನು ಬರೆದಿದ್ದೇನೆ ಅಲ್ಲದೆ ನನಗೆ ಈ ಹಳ್ಳಿಯ ವಾತಾವರಣವೇನು ಇಷ್ಟವಿಲ್ಲ ನನಗೆ ವಿದೇಶಗಳಲ್ಲಿ ಕೆಲಸ ಮಾಡುವ ಆಸೆ ಹಾಗೆ ನನ್ನ ಪಾರ್ಟ್ನರ್ ಆಗುವವರು ಕೂಡ ಒಂದು ಪ್ರತಿಷ್ಠಿತ ಉದ್ಯೋಗದಲ್ಲಿ ಇರಬೇಕೆಂಬುದು ನನ್ನ ಆಸೆ ಅಲ್ಲದೆ ವಿದೇಶಗಳಲ್ಲಿ ಇರುವನಾದರೆ ತುಂಬಾ ಒಳ್ಳೆಯದು"


ನಾನು ಮೊಬೈಲ್ ಪರದೆ ನೋಡುತ್ತಾ ಹಾಗೆಯೇ ಕೂತಿದ್ದೆ. ಹೊರಗೆ ಗಡಿಯಲ್ಲಿ ಯಾರೂ ಇರಲಿಲ್ಲ. ಒಳಗೆ ನನ್ನ ಎದೆಯಲ್ಲಿ ಯಾರೋ ಗಡಿ ಹಾಕಿದ ಹಾಗೆ ಆಯಿತು.ನನಗೆ ಆಗ ಅರ್ಥವಾಯಿತು.
ನನಗೆ ಅವಳು 15 ದಿನಗಳ ಪ್ರಪಂಚವಾಗಿದ್ದಳು. ಅವಳಿಗೆ ನಾನು 15 ದಿನಗಳ ಸಮಯ ಕಳೆಯುವ ಸಾಧನವಾಗಿದ್ದೆ. ನಾನು ಟೈಮ್ ಪಾಸ್ ಗಾಗಿ ಶುರು ಮಾಡಿದ್ದು, ಪ್ರೀತಿಯಲ್ಲಿ ಕೊನೆಗೊಂಡಿತ್ತು.ಅವಳು ಟೈಮ್ ಪಾಸ್ ಗಾಗಿ ಶುರು ಮಾಡಿದ್ದು, ಟೈಮ್ ಪಾಸ್ ನಲ್ಲೇ ಕೊನೆಗೊಂಡಿತ್ತು.

ಮರುದಿನ ಬೆಳಿಗ್ಗೆ ನಾನು ನಾಲ್ಕು ಜೊತೆ ಬಟ್ಟೆ, ನೀರಿನ ಬಾಟಲಿ ಹಿಡಿದು ಮನೆಗೆ ಹೊರಟೆ. ಗಡಿ ಖಾಲಿ ಮಾಡಿದೆ. ಆದರೆ ಮನಸ್ಸಿನ ಗಡಿಯಲ್ಲಿ ಮಾತ್ರ ಆ 15 ದಿನಗಳ ಹೆಸರುಗಳನ್ನು ನಾನು ಇನ್ನೂ ಅಳಿಸಿರಲಿಲ್ಲ. ಕಿರಣನ ಡೈರಿಯ ಕೊನೆಯ ಪುಟದಲ್ಲಿ ಹಾಗೆಯೇ ಉಳಿದಿತ್ತು -

"ಕೆಲವರು ಜೀವನದಲ್ಲಿ ಬರುವುದು ಇರುವುದಕ್ಕಲ್ಲ, ಸಮಯ ಕಳೆಯುವುದಕ್ಕೆ. ಆದರೆ ಹೋದಮೇಲೆ ಗೊತ್ತಾಗುವುದು - ಸಮಯ ಕಳೆದದ್ದು ಅವರು ಅಲ್ಲ, ನಾವು."

Creative Writings