Karada Vishwa

Article · April 1, 2026

ಮರೆತೆಯ ಸಖಿಯನು

✍️ಸೌಮ್ಯಾ ಭಟ್ ಅಂಗ್ರಾಜೆ

🌷🌷🌷🌷🌷🌷🌷

ಕಾಯುತಲಿರುವೆನು ಹೊಸ್ತಿಲ ಬಳಿಯಲಿ
ಕೊರಳನು ನೀಳಕೆ ಚಾಚಿ
ಕರಗಿದೆ ಕ್ಷಣಕ್ಷಣ ಮರೆತೆಯ ಸಖಿಯನು 
ಮನವನು ನಿನ್ನೆಡೆ ದೋಚಿ//

ಎದೆಯೊಳ ಬೇಗುದಿ ತಿಳಿಯದೆ ಹೋದೆಯ
ಹಾಕುತ ಭಾವದ ಬೆಸುಗೆ
ಶೋಕದಿ ಬಾಡಿದೆ ಒಲವಿನ ಹೂವದು 
ಬಾರದೆ ಕನಿಕರ ನಿನಗೆ//

ಸೊರಗಿದೆ ಮಲ್ಲಿಗೆ ದಂಡೆಯು ಹೆರಳಲಿ 
ನೋಡುತ ಒಡೆಯನ ದಾರಿ
ಕಳೆಕಳೆ ವದನದ ರಂಗದು ಮಾಸಿದೆ 
ಕಂಬನಿ ಹನಿಗಳು ಜಾರಿ//

ದಿನಗಳು ಸಂದಿವೆ ಮೌನಕೆ ಜಾರುತ
ತುಟಿಗಳು ಮುಷ್ಕರ ಹೂಡಿ
ಗೆಲುವನು ಮರಳಿಸು ತೋಳಲಿ ತಬ್ಬುತ
ಮುತ್ತಿನ ಕಾಣಿಕೆ ನೀಡಿ//

ಉಸಿರಿನ ಕಣಕಣ ಪಿಸುಗುಡುತಲಿಹುದು
ನಿನ್ನಯ ಹೆಸರನು ಕೇಳು
ಬರುವೆಯ ಸೇರಲು ಕಾಡಿಸದೆನ್ನನು
ನೆನಪಲಿ ಇರುವೆನೆ ಹೇಳು//


Creative Writings
ಮರೆತೆಯ ಸಖಿಯನು