
Article · June 6, 2026
ಕನ್ನಡಿಯೊಳಗಿನ ಗಂಟು
ಕಥೆ - ಶಾರದಾ ಕಜೆಗದ್ದೆ, ಬಾಯಾರು
ವಾರದ ಕೊನೆಯಲ್ಲಿ ಮನೆ ಸಂಪೂರ್ಣ ಶುಚಿಗೊಳಿಸುವುದು ಒಂದು ಅಭ್ಯಾಸ. ಹಾಗೆ ಮೊದಲು ಜೇಡನಬಲೆ ತೆಗೆಯೋಣವೆಂದು ಹೊರಟರೆ ಪ್ರತೀ ಮೂಲೆಯಲ್ಲೂ ಹೊಸದಾಗಿ ಕಟ್ಟಿದ ಬಲೆಗಳು. ಕೆಲವುದರಲ್ಲಿ ದೊಡ್ಡ ಜೇಡಗಳಿದ್ದರೆ, ಇನ್ನು ಕೆಲವು ಸಣ್ಣ ಪುಟ್ಟ ಜೇಡಗಳು. ಹಾಸಿಗೆ, ಹೊದಿಕೆ,ದಿಂಬುಗಳನ್ನು ಬಿಸಿಲಿಗೆ ಹಾಕೋಣವೆಂದು ಅಂಗಳದಲ್ಲಿ ಬಿಡಿಸಿದರೆ ಒಂದಷ್ಟು ಹಲ್ಲಿ ಮೊಟ್ಟೆಗಳು. ಬಚ್ಚಲು, ಟಾಯ್ಲೆಟ್ ತೊಳೆಯಲು ಹೊರಟರೆ ಜಿರಳೆಗಳ ಸಂತೆ. ಶೆಲ್ಫ್ ನಲ್ಲಿದ್ದ ಪುಸ್ತಕಗಳನ್ನು ಜೋಡಿಸಿಡೋಣವೆಂದು ನೋಡಿದರೆ ಪುಟಗಳೆಡೆಯಲ್ಲಿ ಇರುವೆಗಳು ತಮ್ಮ ಮೊಟ್ಟೆಗಳೊಡನೆ ವಾಸ ಮಾಡಿದ್ದರೆ, ಶೆಲ್ಫ್ ನ ಸಂದುಗೊಂದಿನಲ್ಲಿ ಮಡಕೆಹುಳ ಸುಂದರ ಮಣ್ಣಿನ ಗೂಡುಗಳನ್ನು ಸಾಲಾಗಿ ಕಟ್ಟಿ ಸಂಸಾರ ಸಾಗಿಸುತ್ತಿದೆ. ಸಾಕಾಯಿತೆಂದು ಹೊರಗೆ ಬಂದು ಕುಳಿತರೆ ಮನೆಯ ಮುಂದಣ ಹೂ ತೋಟದ ತುಂಬೆಲ್ಲ ಅರಳಿದ ಬಣ್ಣಬಣ್ಣದ ಬಗೆಬಗೆಯ ಹೂವುಗಳ ತುಂಬೆಲ್ಲ ಚಿಟ್ಟೆದುಂಬಿಗಳ ಹಾರಾಟ.
ಯಾಕೋ ಬೆಕ್ಕಮ್ಮ ಕಾಣದೆ ಎರಡು ದಿನಗಳಾದುವಲ್ಲಾ ಎಂದು ಅಮ್ಮನಲ್ಲಿ ಕೇಳಿದಾಗ ಮಿಕ್ಸಿ ಹಳೆಪೆಟ್ಟಿಗೆ ನೋಡೆಂದು ಇಣುಕಿದರೆ ಎರಡು ಮರಿಗಳೊಡನೆ ಬೆಚ್ಚನೆ ಬಾಣಂತಿ ಮಲಗಿದೆ. ಅಪ್ಪನ ಜೊತೆ ತೋಟಕ್ಕೆ ಹೋದರೆ ಅಪ್ಪ ಜೇನುಪೆಟ್ಟಿಗೆಯಿಂದ ಎದಿ ತೆಗೆದು ಏನೋ ಹುಡುಕುತ್ತಿದ್ದರು. ಏನಪ್ಪ ಹುಡುಕುವುದು ಎಂದು ವಿಚಾರಿಸಿದಾಗ ಸಾಕಷ್ಟು ಮೊಟ್ಟೆಗಳಾಗಿವೆ, ರಾಣಿ ಇದ್ದಾಳಾ, ಹೊಸ ರಾಣಿ ಮೊಟ್ಟೆಯಿದೆ, ಪಾಲು ಮಾಡಬೇಕೇನೋ ಎಂದುತ್ತರವಿತ್ತರು. ಹಾಗೆ ಮುಂದೆ ಸಾಗಿದಂತೆ ಕೊಕ್ಕೊ ಮರದಲ್ಲಿ ಹಕ್ಕಿಮರಿಗಳ ಸದ್ದಾಯಿತು. ಬಾಗಿ ನೋಡಿದರೆ ಗೂಡಿನಲ್ಲಿ ಮರಿಗಳ ಸಣ್ಣ ಕೊಕ್ಕಿನಲ್ಲಿ ಹುಳಗಳನ್ನು ಹಾಕುತ್ತಿದೆ ತಾಯಿ ಹಕ್ಕಿ. ತೋಟದ ಆ ತಗ್ಗಿನಲ್ಲಿರುವ ಕೆರೆಯ ನೆನಪಾಗಿ ಅತ್ತ ಕಡೆ ಹೋದರೆ ಕೆರೆಪಕ್ಕದ ಮರದ ಮೇಲೆ ಜೋಡಿ ಮಿಂಚುಳ್ಳಿಗಳು ಮೀನಿಗಾಗಿ ಹೊಂಚು ಹಾಕುತ್ತಿವೆ. ಇಣುಕಿ ನೋಡಿದರೆ ಸ್ಫಟಿಕ ಶುದ್ಧ ನೀರಿನಲ್ಲಿ ಸಣ್ಣಪುಟ್ಟದೊಡ್ಡ ಮೀನುಗಳು.
ತೋಟವೆಲ್ಲ ಸುತ್ತಿ ಮನೆಗೆ ಹಿಂತಿರುಗಿದಾಗ ಅಪ್ಪ ಮೈಕೈ ಉಜ್ಜುದು ಕಂಡಿತು. ಏನಾಯಿತೆಂದು ಕೇಳಿದರೆ ಸೌದೆ ಒಟ್ಟಿನಲ್ಲಿ ಕಂಚಿಗಾರನ ಗೂಡು ಇದ್ದು, ಅವುಗಳು ತನ್ನ ಮೇಲೆ ದಾಳಿ ಮಾಡಿದವೆಂದರು. ಸಂಜೆ ಹೊತ್ತಿಗೆ ಮೊಬೈಲ್ ಹಿಡಿದು ಸಿಟೌಟ್ ನಲ್ಲಿ ಕುಳಿತರೆ ಪಕ್ಕದ ಮನೆಯಲ್ಲಿ ಗಲಾಟೆ. ಏನೆಂದು ಇಣುಕಿದರೆ ನಾಯಿಗಳೆರಡು ತಮ್ಮ ನಾಲ್ಕು ಮರಿಗಳೊಡನೆ ಆಟವಾಡುತ್ತಿವೆ.
ಮುಸ್ಸಂಜೆಯಾಗುತ್ತಿದ್ದಂತೆ ಅಮ್ಮ ಹಾಲು ತಾರೆಂದು ಹಿಂದಿನ ಮನೆಗೆ ಕಳಿಸಿದಳು. ಅಲ್ಲಿ ನೋಡಿದರೆ ಹಸು ಎರಡು ಮುದ್ದಾದ ಅವಳಿ ಕರುಗಳಿಗೆ ಹಾಲು ಕುಡಿಸುತ್ತಿದೆ. ಅಲ್ಲಿರುವ ತೆಂಗಿನ ಮರಗಳ ಬುಡವನ್ನೆಲ್ಲ ಕೋಳಿಗಳು ತಮ್ಮ ಮರಿಗಳೊಡಗೂಡಿ ಕೆದಕಿ ಹುಡುಕಿ ಹುಳುಹುಪ್ಪಟೆಗಳನ್ನೆಲ್ಲ ಭಕ್ಷಿಸುತ್ತಿವೆ. ಹಿಂತಿರುಗಿ ಬರುವ ದಾರಿಯಲ್ಲಿ ಕೇರೆಹಾವೊಂದು ತನ್ನ ಮೊಟ್ಟೆಗಳ ರಕ್ಷಣೆಗಾಗಿ ಸುತ್ತು ಹಾಕಿ ಮಲಗಿದೆ. ಶಬ್ದ ಮಾಡದೆ ಅಲ್ಲಿಂದ ಕಾಲ್ಕಿತ್ತೆ. ಹಾಗೆ ಸುತ್ತಮುತ್ತ ಕಣ್ಣುಹಾಯಿಸಿದರೆ ತೋಟದಲ್ಲಿರುವ ಹೆಸರರಿಯದ ಹುಲ್ಲು, ಬಳ್ಳಿ, ಗಿಡಗಳಲ್ಲದೇ ಅಪ್ಪ, ಅಣ್ಣ ನೆಟ್ಟು ಬೆಳೆಸಿದ ಅಡಿಕೆ, ತೆಂಗು, ಬಾಳೆ, ಕೊಕ್ಕೊ, ಜಾಯಿಕಾಯಿ, ಕರಿಮೆಣಸು, ಪೇರಳೆ,ಚಿಕ್ಕು, ಮಾವು, ಹಲಸು, ಜಂಬುನೇರಳೆ ಹೀಗೆ ಪ್ರತಿಯೊಂದೂ ಹೂವು , ಕಾಯಿ, ಹಣ್ಣುಗಳನ್ನು ಬಿಟ್ಟು ಸಮೃದ್ಧಿಯಾಗಿವೆ. ಮನೆತಲುಪಿದಾಗ ಅಂಗಡಿ ಅಬ್ಬಾಸು ಮತ್ತು ಅಪ್ಪ ಬಾಳೆಕಾಯಿ, ತೆಂಗಿನಕಾಯಿ ವ್ಯಾಪಾರ ಕುದುರಿಸುತ್ತಾ ಅವನ ಸೊಸೆ ನಾಲ್ಕನೇ ಮಗುವಿಗೆ ಜನ್ಮ ನೀಡಿದಳೆಂದೂ, ಅವನ ಕೊನೆ ಮಗಳಿಗೆ ಇನ್ನೆರಡು ತಿಂಗಳಲ್ಲಿ ನಿಕಾಹ್ ಇರುವುದಾಗಿ ತಿಳಿಸಿದನು. ಅಪ್ಪ ತಮಾಷೆಗೆ ಆತನಿಗೆಷ್ಟು ಮಕ್ಕಳು ಎಂದು ಕೇಳಿದಾಗ ಇಬ್ಬರು ಹೆಂಡಿರು, 13 ಮಕ್ಕಳು, ಎಲ್ಲರಿಗೂ ವಿವಾಹವಾಗಿ ಒಟ್ಟಾರೆ 50 ಜನರ ಸಣ್ಣ ಸಂಸಾರ ಎಂದು ಜೋರಾಗಿ ನಗುತ್ತಾನೆ.
ಬೆಳದಿಂಗಳಲ್ಲಿ ಸುಮ್ಮನೆ ಓಡಾಡೋಣವೆಂದು ಅಂಗಳಕ್ಕಿಳಿದರೆ ಸಣ್ಣ ದೊಡ್ಡ ಬಾವಲಿಗಳು ಸೊಳ್ಳೆ, ನೊಣಗಳನ್ನು ಹಿಡಿಯಲು ಅತ್ತಿಂದಿತ್ತ ಹಾರುತ್ತಿವೆ. ಯಾಕೋ ಕಣ್ಣುಕುಟ್ಟುತ್ತಿದೆ ಎಂದು ಹಾಸಿಗೆ ಬಿಡಿಸಿ ಲೈಟ್ ನಂದಿಸಿ ಮಲಗಿದರೆ ಅಡಿಕೆ ಗೋಡೌನ್ ನಿಂದ ಜೋರು ಶಬ್ದ, ಏನೆಂದು ಅಣ್ಣನಲ್ಲಿ ಕೇಳಿದರೆ ಇಲಿ ಮರಿಗಳು ಅಡಿಕೆ ಸುಲಿಯುತ್ತಿವೆ ಎಂದು ಮರುನುಡಿದು ಹೊದ್ದು ಮಲಗಿದನು. ಪಂಖಾ ಹಾಕಲು ಮರೆತಿದ್ದೇ ಕಿವಿ ಸುತ್ತ ಸೊಳ್ಳೆಗಳ ಗುಯಿಂಗಾನ ಕೇಳಿ ತಲೆಚಿಟ್ಟು ಹಿಡಿದಂತಾಗಿ ಎದ್ದು ಪಂಖಾ ಗುಂಡಿ ಅದುಮಿ ಹೊದ್ದು ಮಲಗಿದೆ.
ಬೆಳಗೆದ್ದು ಚಾ ಹೀರುತ್ತಾ ಈ ಎಲ್ಲಾ ವಿಚಾರಗಳನ್ನು ವಿವೇಚನೆಯಿಂದ ಅವಲೋಕಿಸಿದಾಗ ಹೊಳೆದದ್ದು ಇಂದು ನನ್ನ ಹುಟ್ಟಿದ ದಿನ, 33 ಮುಗಿದು 34ನೇ ವರ್ಷಕ್ಕೆ ಪ್ರಾಯ ಮುನ್ನುಗ್ಗುತ್ತಿದೆ. ಹತ್ತು ವರುಷಗಳ ಹಿಂದಕ್ಕೆ ಮನಸ್ಸು ನಿಧಾನಕ್ಕೆ ಹೆಜ್ಜೆ ಇಡತೊಡಗಿತು. ಪ್ರತಿಷ್ಠಿತ ಕಾಲೇಜೊಂದರಲ್ಲಿ ತಾಂತ್ರಿಕಪದವಿಯಲ್ಲಿ ಉತ್ತೀರ್ಣಗೊಂಡು ಅಂತಾರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಸಿಕ್ಕಿದಾಗ ಆಕಾಶಕ್ಕೆ ಮೂರೇ ಗೇಣು. ಅಮ್ಮ, ಅಪ್ಪ, ಅಣ್ಣ ತಾಮುಂದು, ನಾಮುಂದು ಎಂದು ಎಲ್ಲಾ ನೆಂಟರಿಷ್ಟರ, ಆಪ್ತರ ಮುಂದೆ ನನ್ನನ್ನು ಹೊಗಳಿದ್ದೇ ಹೊಗಳಿದ್ದು. ಇನ್ನು ನನ್ನ ಸಂಬಳದ ಅಂಕಿಯನ್ನು ಕೇಳಿದಾಕ್ಷಣ ತೋಟದ ಕೂಲಿಯವ ತನ್ನ ಪಗಾರವನ್ನು 200 ರೂ ಹೆಚ್ಚಿಸಬೇಕೆಂದ. ಇನ್ನೆರಡು ತಿಂಗಳಲ್ಲಿ ಅವನ ತಂಗಿಯ ಮದುವೆಗೆ ಧಾರೆ ಸೀರೆ ನಾನೇ ತೆಗೆದುಕೊಡುವುದಾಗಿ ಮಾತುಕೊಟ್ಟೆ.
ಎರಡು ವರ್ಷಗಳ ಅನುಭವದ ನಂತರ ವಿದೇಶವಾಸದ ಯೋಗ ಸಿಕ್ಕಿದಾಗ ಅಮ್ಮ ಮೆಲ್ಲನೆ ಈಗ ಬೇಡ, ಒಂದೆರಡು ಒಳ್ಳೆ ಸಂಬಂಧಗಳು ಬಂದಿವೆ, ನೋಡಿ ಇಷ್ಟವಾದರೆ ಮದುವೆ ಮಾಡಿಕೊಂಡು ಮುಂದಿನ ಯೋಚನೆ ಮಾಡಿದರಾಯಿತು ಎಂದರು. ತಕ್ಷಣ ನನ್ನ ಜೀವನಸಂಗಾತಿಯಾಗುವವನ ಗುಣಲಕ್ಷಣಗಳ ದೊಡ್ಡ ಪಟ್ಟಿಯನ್ನೇ ಮುಂದಿಟ್ಟಾಗ ಮೂವರು ಮುಖಮುಖ ನೋಡಿಕೊಂಡರು.
ಅದಾಗಲೇ ಬಂದಂತಹ ಜಾತಕಗಳಿಗೆ ನಕಾರ ಹೇಳಿ ತಾವೇ ವರಾನ್ವೇಷಣೆಗೆ ತೊಡಗಿದರು. ಈ ದಶಮಾನದಲ್ಲಿ ಒಂದಿಪ್ಪತ್ತೈದು ವರದಾನಗಳಾಗಿವೆಯೇನೋ. ಒಂದೂ ಮೆಚ್ಚಿಗೆಯಾಗಿಲ್ಲ. ಶಿಕ್ಷಣ ಮಟ್ಟ ಸಾಲದು, ಉದ್ಯೋಗ ನನ್ನದಕ್ಕಿಂತ ಕೆಳಮಟ್ಟದ್ದು, ಸಂಬಳ ಕಡಿಮೆ, ಕಂಪನಿಯ ಭದ್ರತೆ ಸಾಲದು, ಪ್ರಾಯದಂತರ ಹೆಚ್ಚು,ವಾಸವಿರುವ ಊರು/ ಮನೆ ಚೆನ್ನಾಗಿಲ್ಲ, ಹುಡುಗನ ಅಪ್ಪ ಅಮ್ಮ ಜೋರು, ತಮ್ಮ ತಂಗಿ ಇದ್ದಾರೆ, ಹುಡುಗನ ಎತ್ತರ / ತೂಕ ಜಾಸ್ತಿ ಯಾ ಕಮ್ಮಿ, ಬಣ್ಣ ಸ್ವಲ್ಪ ಕಪ್ಪು, ತಲೆಕೂದಲು ಭಾರೀ ಕಮ್ಮಿ, ಜನಿಸಿದ ಊರು ಬರೀ ಹಳ್ಳಿ, ಮನೆತನ ಸರಿ ಇದ್ದಂಗಿಲ್ಲ ಹೀಗೇ ಇಲ್ಲಸಲ್ಲದ ಕುಂದುಕೊರತೆಗಳನ್ನೇ ಹುಡುಕಿ ತೆಗೆದು ನಾನೇ ಶ್ರೇಷ್ಠ, ಅತ್ಯುತ್ತಮಳು ಎನ್ನುವ ನನ್ನೊಳಗಿನ ಅಹಮ್ಮಿನ ಕಾಲ್ಪನಿಕ ಜೀವನದ ವಾಸ್ತವ ಚಿತ್ರಣ ಮನಃಪಟಲದಲ್ಲಿ ಪ್ರದರ್ಶನವಾಗತೊಡಗಿತು.
ಹಾಗೇ ಸುಮ್ಮನೆ ಆರಾಮಕುರ್ಚಿಯಲ್ಲಿ ಕಣ್ಣುಮುಚ್ಚಿಕೊಂಡು ಒರಗಿಕೊಂಡೆ. ನನಗೆ 34 ಆದರೆ ಅಣ್ಣ ನನಗಿಂತಲೂ 4 ವರ್ಷ ಹಿರಿಯ, ಅಂದರೆ 38. ಅವನು ಮತ್ತು ಆಚೆ ಮನೆ ಅತ್ತೆ ಮಗಳು ಬಾಲ್ಯದಿಂದಲೂ ಪರಸ್ಪರ ಸ್ನೇಹದಿಂದಿದ್ದರು. ಎರಡೂ ಕಟುಂಬದವರಿಗೂ ಒಪ್ಪಿಗೆಯೂ ಇತ್ತು. ನನ್ನ ವಿವಾಹವಾದ ನಂತರ ತನ್ನದೆಂಬ ಹುಂಬತನದಿಂದ ಅವನೂ ಒಬ್ಬಂಟಿಯಾದ. ಆ ಗೆಳತಿ ಒಂದೈದು ವರುಷಗಳು ಕಾದು ಪಕ್ಕದೂರಿನ ಕೃಷಿಕಹುಡುಗನನ್ನು ವರಿಸಿದಳು.
ನನಗಾಗ 30 ವರುಷಗಳು. ಅಪ್ಪ ಅಮ್ಮ ನನ್ನನ್ನು ತಮ್ಮೆದುರಲ್ಲಿ ಕುಳ್ಳಿರಿಸಿ ಸೋತ ಭಾವದಲ್ಲಿ ಒಂದಷ್ಟು ಲೋಕಾನುಭವದ ನುಡಿಮಾತುಗಳನ್ನಾಡಿದರು, ನನ್ನ ಮನವೊಲಿಸುವ ತಮ್ಮ ಕೊನೆಯ ಪ್ರಯತ್ನವೆಂಬಂತೆ. ಬಾಳಸಂಗಾತಿಯ ಲಕ್ಷಣಗಳೆಂದರೆ ಹೆಣ್ಣು ಗಂಡು, ಒಳ್ಳೆ ಗುಣ, ದೈಹಿಕ ಮಾನಸಿಕ ಆರೋಗ್ಯ, ಪರಸ್ಪರ ಅರ್ಥೈಸುವ ಗೌರವಿಸುವ ಮನೋಭಾವ, ಜ್ಞಾನಕ್ಕಾಗುವಷ್ಟು ವಿದ್ಯೆ, ಜೀವನಾಧಾರಕ್ಕೆ ತಕ್ಕಷ್ಟು ಸಂಪಾದನೆ, ಸುಖ,ಸಂತೋಷ, ನೆಮ್ಮದಿಗಳೇ ಸುಭದ್ರ ಬದುಕಿಗಾಸರೆ ಎಂದರೂ ಪೇಟೆಯ ಸ್ವಚ್ಛಂದದ ಬದುಕ ಸುಖ ಇವರಿಗೆ ತಿಳಿಯದು ಎಂದು ಮರುಮಾತನಾಡದೆ ಸುಮ್ಮನಿದ್ದೆ.
ಅಣ್ಣನ ಮುಂದಿನ ಜೀವನದ ಚಿಂತೆ ನಿನಗಿದೆಯೇ ಎಂದು ಕೇಳಿದಾಗ ಮಾತ್ರ ನನ್ನ ಹೃದಯಮನಸ್ಸುಗಳೆರಡು ಸ್ತಬ್ಧವಾದ ಭಾವ. ಕಣ್ಣುಗಳು ಮಂಜಾದಂತೆ ಅನಿಸಿತು. ಇದು ಕೇವಲ ಈ ಒಂದು ಮನೆಯ ಸಮಸ್ಯೆಯಲ್ಲ ಮಗಳೇ. ಯೋಚನೆ ಮಾಡಿ ನೋಡು. ಎಷ್ಟು ಮನೆಮಗಂದಿರು ಸಂಗಾತಿಯಿಲ್ಲದೆ ಏಕಾಂಗಿತನದ ಬದುಕು ಬಾಳುತ್ತಿದ್ದಾರೆ? ಅವರ ಪ್ರಾಯಸ್ಥ ಹೆತ್ತವರು ಸೋತಭಾವದಲ್ಲಿ ಜೀವನ ಸಾಗಿಸುತ್ತಿದ್ದಾರೆ? ಆ ಮಗಂದಿರ ಹಾಗೂ ಹೆತ್ತವರ ತಪ್ಪೇನು? ತಮ್ಮ ಭವಿಷ್ಯತ್ತನ್ನು ಲೆಕ್ಕಿಸದೆ ಹೆತ್ತವರಿಗೊಸ್ಕರ ಹಳ್ಳಿಬದುಕನ್ನೇ ಆಯ್ದದ್ದೇ ಅಥವಾ ಅಪ್ಪಅಮ್ಮoದಿರ ಅರ್ಧಶತಮಾನದ ಬೆವರಿನ ಪ್ರತಿಫಲದ ಸಮೃದ್ಧ ಕೃಷಿಬದುಕನ್ನು ನೆಚ್ಚಿಕೊಂಡದ್ದೇ?ಹಳ್ಳಿಯ ಸಣ್ಣಪುಟ್ಟ ಉದ್ಯೋಗಗಳಾದ ಅಡುಗೆ, ಪೌರೋಹಿತ್ಯ, ಟೈಲರಿಂಗ್, ಮಾಷ್ಟ್ರತಿಗೆ, ಇಂತಹವನ್ನು ಮುಂದುವರಿಸಿದ್ದೇ? ಯಾವ ಮನೆಮಗ ಭವಿಷ್ಯದ ಜೀವನಕ್ಕೆ ಸುಭದ್ರತೆ ಇಲ್ಲದೆ ಸಂಸ್ಕಾರಹೀನನಾಗಿ ಬಾಳುತ್ತಿದ್ದಾನೆ? ನಮ್ಮ ಹಾಗೇ ಇನ್ನೂ ಅದೆಷ್ಟೋ ಕುಟುಂಬಗಳು ತೋಟ, ಗದ್ದೆ, ಹಸು, ಕಾರು, ಆಡು, ಕುರಿ, ಕೋಳಿ ಹೀಗೆ ಪ್ರಕೃತಿಪೂರಕ ಸೇವೆ ಜೊತೆಗೆ ಸಣ್ಣಪುಟ್ಟ ಉದ್ಯೋಗ ಅಂತ ಚಿಕ್ಕದಾಗಿ, ಚೊಕ್ಕವಾಗಿ ಸಂಸಾರ ಸಾಗಿಸ್ತಾ ಹಳ್ಳಿಯಲ್ಲೇ ಜೀವನ ಸಾಗಿಸೋದು ಅಷ್ಟೊಂದು ಕೀಳುಮಟ್ಟವ?
ಉತ್ತರವಿಲ್ಲದ ನೂರೆಂಟು ಪ್ರಶ್ನೆಗಳೊಂದಿಗೆ ವಾರಾಂತ್ಯದ ರಜೆ ಮುಗಿದು ನನ್ನ ಹೆಮ್ಮೆಯ ಕೆಲಸಕ್ಕೆ ಮರಳಲನುವಾದೆ. ಅಣ್ಣ ಬಸ್ಟ್ಯಾಂಡ್ ಗೆ ಬಿಟ್ಟು ಹಿಂತಿರುಗಿದ. ಬಸ್ಸೇರಿ ನನ್ನ ಆಸನದಲ್ಲಿ ಕುಳಿತು ಹಿಂದಕ್ಕೋಡುತ್ತಿದ್ದ ಗಿಡಗಂಟಿಗಳನ್ನು ನೋಡುತ್ತಾ ನಿಟ್ಟುಸಿರು ಬಿಟ್ಟು ಹಾಗೆ ಕಾಲುನೀಡಿ ಕುಳಿತೆ. ಕಳೆದ ವರುಷದ ನನ್ನ ಹುಟ್ಟುಹಬ್ಬವನ್ನು ನನ್ನ ಸಹೋದ್ಯೋಗಿ ಮಿತ್ರರೊಡನೆ ನಮ್ಮ ಹಳ್ಳಿ ಮನೆಯಲ್ಲೇ ಆಚರಿಸಿದ ಸವಿನೆನಪು. ಅಪ್ಪ ಅಮ್ಮ ಅಣ್ಣ ತುಂಬುಮನದಿಂದ ಎಲ್ಲ ತಯಾರಿಗಳನ್ನು ಮಾಡಿ ನಮ್ಮೆಲ್ಲರನ್ನು ಆದರದಿಂದ ಬರಮಾಡಿದ್ದರು. ಎಲ್ಲರು ಜೊತೆಗೂಡಿ ಎರಡು ದಿನ ಸಂಭ್ರಮಿಸಿದ್ದೆವು. ಹಾಲು, ಮೊಸರು, ಬೆಣ್ಣೆ,ತುಪ್ಪ, ಜೇನು, ತರಕಾರಿ, ಹಣ್ಣುಗಳು, ಬಗೆ ಬಗೆ ತಿಂಡಿ ತಿನಿಸುಗಳು, ಪಾಯಸದೂಟ ಸವಿದದ್ದೇ. ನನ್ನ ಪ್ರೀತಿಯ ಗೆಳತಿ ಎಲೆ ಖಾಲಿ ಮಾಡಿ ಕೈಬೆರಳುಗಳನ್ನು ಚೀಪುತ್ತಾ ನನ್ನ ಅಣ್ಣನೆಡೆಗೆ ನೋಡಿ ಕಣ್ಣು ಮಿಟುಕಿಸಿದ್ದು ನೆನಪಾಯಿತು. ಹೊರಡಲನುವಾದಾಗ ಎಲ್ಲರೂ ಅಪ್ಪ ಅಮ್ಮನ ಕಾಲು ಮುಟ್ಟಿ ನಮಸ್ಕರಿಸಿ ಅಣ್ಣನ ಕೈಕುಲುಕಿ, ಬೆನ್ನು ತಟ್ಟಿದರೆ, ಈಕೆ ಮಾತ್ರ ಮೆಲ್ಲಗೆ ಅಪ್ಪಿ ಕೈ ಬೀಸಿದಳು.
ನನ್ನ ನಿಲ್ದಾಣ ತಲುಪಿದ ಕಾರಣ ಬಸ್ಸಿನಿಂದಿಳಿದು ನೇರ ಆ ಗೆಳತಿಯ ರೂಮಿಗೆ ಹೋಗಿ ಮೆಲ್ಲಗೆ ಕೇಳಿದೆ. ನನ್ನ ಅಣ್ಣನ ಬಗ್ಗೆ ನಿನ್ನ ಅಭಿಪ್ರಾಯ ಏನೆಂದು? 40ರ ಹರೆಯದ ಹಳ್ಳಿಗಮಾರ ಎಂದುಸುರಿ ನನ್ನ ಕೆನ್ನೆತಟ್ಟಿ ಹೊರನಡೆದಳು. ದುಬಾರಿ ರೇಶಿಮೆ ದುಪ್ಪಟ್ಟಾದಲ್ಲಿ ಹೈಹೀಲ್ ಸುತ್ತಿ ಮುಖಕ್ಕೆ ಬಾರಿಸಿದಂತಾಯಿತು.
ಹತ್ತು ವರುಷಗಳಲ್ಲಿ ನಾನು ಅಕಾರಣಗಳನ್ನು ನೀಡಿ ತಿರಸ್ಕರಿಸಿದ ಎಲ್ಲಾ ಹುಡುಗರ ಭಾವಚಿತ್ರಗಳು ಕುಹಕವಾಡಿ ನಕ್ಕಂತಾಯಿತು. ತಲೆತಿರುಗಿ ಬಂದಂತಾಗಿ ಕಣ್ಣು ಮಂಜಾಯ್ತು. ಹತ್ತು ನಿಮಿಷ ಕಳೆದು ಬಾಸ್ ಗೆ ಫೋನಾಯಿಸಿ ಒಂದು ದಿನದ ರಜೆ ಕೇಳಿ ಪಡೆದು ಹಾಸಿಗೆಯಲ್ಲಿ ಸುಮ್ಮನೆ ಅಡ್ಡಬಿದ್ದೆ. ಹೋಟೆಲ್, ಮಾಲ್, ಬೀಚ್, ಟ್ರೆಕ್ಕಿಂಗ್, ಸಿನಿಮಾ, ವಿದೇಶ ಪ್ರವಾಸ, ಭಾರತ ದರ್ಶನ, ನಮ್ಮೂರು ಹೀಗೆ ಎಲ್ಲೆಂದರಲ್ಲಿ ಸುತ್ತಿ ತಿರುಗಿ ಸಂಭ್ರಮಿಸಿದಾಗ ನನ್ನವರೆ ಅಂತನಿಸಿದ ಇವರೆಲ್ಲ ಇಂದು ಒಂದು ಪರಿಧಿಯಿಂದ ಹೊರಗಿನವರು ಎನ್ನುವ ವಾಸ್ತವ ಖಾತ್ರಿಯಾಯಿತು.
ಇಷ್ಟು ವರ್ಷಗಳ ಕಾಲ ತೃಪ್ತಗೊಳಿಸಿದ ಆತ್ಮಾಭಿಮಾನದ ಈ ಏಕಾಂಗಿ ಬದುಕು ಭವಿಷ್ಯವಿಲ್ಲದ್ದು ಎಂದು ಅರಿವಾದೊಡನೆ
ಸುಮ್ಮನೆ ಕನ್ನಡಿ ಮುಂದೆ ನಿಂತುಕೊಂಡು ನೋಡಿದೆ. ನಾನು ಒಬ್ಬಳೇ ಮತ್ತು ಕಣ್ಣಮುಂದೆ ನನ್ನ ಪ್ರತಿಬಿಂಬ(ವಾಸ್ತವ ಸತ್ಯ), ಬೆನ್ನಹಿಂದೆ ನನ್ನದೇ ಕರಿನೆರಳು (ನೈಜಸುಳ್ಳುಗಳು). ಈ ಭೂಮಿಯಲ್ಲಿ ವಾಸಿಸುವ ಕೋಟ್ಯಂತರ ಜೀವಿಗಳಿಗೆ ಅನ್ವಯವಾಗುವ ಪ್ರಕೃತಿ ನಿಯಮ ಕೇವಲ ನನಗೊಬ್ಬಳಿಗೇ ಏಕೆ ಹೊಂದಿಕೆಯಾಗುತ್ತಿಲ್ಲ? ಹಾಗಾದರೆ ಈ ಉನ್ನತ ವ್ಯಾಸಂಗ, ಸುಭದ್ರ ಉದ್ಯೋಗ, ಲಕ್ಷಲಕ್ಷ ಸಂಪಾದನೆ, ಅತ್ಯಾಧುನಿಕ ಜೀವನಶೈಲಿ ಇವು ಯಾವುವು ಭವ್ಯಭವಿತವ್ಯದ ಭದ್ರಬುನಾದಿಗಳಲ್ಲವೇ?
(ವ್ಯಕ್ತಿಗತವಾಗಿ ಯಾರನ್ನೂ ಉದ್ದೇಶಿಸಿದ್ದಿಲ್ಲ. ತೇನವಿನಾ ತೃಣಮಪಿ ನ ಚಲತಿ ಅಂತೇ ಯುಗಧರ್ಮ ಮೀರಲು ಯಾರಿಂದಲೂ ಅಸಾಧ್ಯ.)
(ಚಿತ್ರ : ಮನಸ್ವಿನಿ ಭಟ್)
Creative Writings
