
Article · November 9, 2026
ಹೊರಗಿನ ಬೆಳಕಿನೊಂದಿಗೆ ಒಳಗಿನ ಬೆಳಕೂ ಪ್ರಕಾಶಿಸಲಿ
ಹುಬ್ಬಳ್ಳಿ ಆವೃತ್ತಿಯ ವಿಜಯವಾಣಿ ಪತ್ರಿಕೆಯ ದೀಪಾವಳಿ ವಿಶೇಷ ಪುರವಣಿಯಲ್ಲಿ ಪ್ರಕಟವಾದ ಮೇಘನಾ ಕಾನೇಟ್ಕರ್ ಅವರ ಲೇಖನ.
ಕತ್ತಲೆಯನ್ನು ಓಡಿಸಲು ದೀಪ ಸಾಕು; ಆದರೆ ನಮ್ಮೊಳಗಿನ ಅಮಾನವೀಯತೆಯನ್ನು ಗುರುತಿಸಲು ವಿವೇಕದ ಬೆಳಕು ಬೇಕು.
ದೀಪಾವಳಿ ಎಂದರೆ ಕತ್ತಲೆಯ ವಿರುದ್ಧ ಬೆಳಕಿನ, ಕೆಟ್ಟದ್ದರ ವಿರುದ್ಧ ಒಳ್ಳೆಯತನದ ವಿಜಯವನ್ನು ಸಂಭ್ರಮಿಸುವ ಹಬ್ಬ. ಮನೆಯಂಗಳದಲ್ಲಿ ದೀಪಗಳು ಬೆಳಗುತ್ತವೆ, ಆಪ್ತೇಷ್ಟರ ನಡುವೆ ಸಿಹಿತಿಂಡಿಗಳು ಹಂಚಿಕೆಯಾಗುತ್ತವೆ, ಇಷ್ಟಮಿತ್ರರೊಂದಿಗೆ ಶುಭಾಶಯಗಳು ವಿನಿಮಯವಾಗುತ್ತವೆ. ಒಟ್ಟಾರೆ ಬೆಳಕು, ಪ್ರೀತಿ ಮತ್ತು ಮಾನವೀಯತೆಯ ಸಂದೇಶಗಳು ಎಲ್ಲೆಡೆ ಮೊಳಗುತ್ತವೆ. ಆದರೆ ಈ ಸಂಭ್ರಮದ ನಡುವೆ ನಮ್ಮನ್ನು ನಾವೇ ಕೇಳಿಕೊಳ್ಳಬೇಕಾದ ಒಂದು ಪ್ರಶ್ನೆಯಿದೆ: ಹೊರಗಿನ ಕತ್ತಲೆಯನ್ನು ಓಡಿಸುವ ನಾವು, ನಮ್ಮೊಳಗಿನ ಕತ್ತಲೆಯನ್ನು ಗುರುತಿಸಿದ್ದೇವೆಯೇ?
ದೀಪಾವಳಿಯ ದೀಪವು ಕೇವಲ ಮನೆಯ ಅಂಧಕಾರವನ್ನು ದೂರ ಮಾಡುವ ಸಂಕೇತವಲ್ಲ; ಅದು ಅಜ್ಞಾನ, ಅಹಂಕಾರ, ದ್ವೇಷ ಮತ್ತು ಪೂರ್ವಾಗ್ರಹಗಳನ್ನು ತೊಡೆದುಹಾಕುವ ಉದ್ದೇಶವೂ ಹೌದು. ಆದರೆ ನಾವು ಚಿಂತಿಸಬೇಕಾದದ್ದು ವಾಸ್ತವದಲ್ಲಿ ನಮ್ಮ ನಡವಳಿಕೆ ಈ ಸಂದೇಶಕ್ಕೆ ಎಷ್ಟು ಹತ್ತಿರವಿದೆ ಎಂಬುದು.
ಇಂದು ಸಾಮಾಜಿಕ ಜಾಲತಾಣಗಳಲ್ಲಿ ದೀಪಾವಳಿಯ ಶುಭಾಶಯಗಳ ಜೊತೆಗೆ ಮಾನವೀಯತೆಯ ಸಂದೇಶಗಳೂ ಹರಿದಾಡುತ್ತವೆ. ಆದರೆ ಅದೇ ವೇದಿಕೆಗಳಲ್ಲಿ ಮತ್ತೊಬ್ಬರ ಮೈಬಣ್ಣ, ದೇಹದ ಆಕಾರ, ರೂಪ ಅಥವಾ ವೈಯಕ್ತಿಕ ಬದುಕನ್ನು ಹೀಯಾಳಿಸುವ ಕಾಮೆಂಟ್ಗಳೂ ಕಾಣಿಸುತ್ತವೆ. ನಮಗೆ ಕ್ಷಣಿಕ ಮನರಂಜನೆ ನೀಡುವ ಒಂದು ವ್ಯಂಗ್ಯವಾಕ್ಯ, ಮತ್ತೊಬ್ಬರಿಗೆ ದೀರ್ಘಕಾಲದ ಮಾನಸಿಕ ನೋವಾಗಬಹುದು. ಬೆಳಕಿನ ಹಬ್ಬದಂದು ದೀಪ ಹಚ್ಚುವ ಕೈಗಳೇ ಇನ್ನೊಬ್ಬರ ಆತ್ಮಗೌರವಕ್ಕೆ ನೋವುಂಟುಮಾಡುತ್ತಿದ್ದರೆ, ನಮ್ಮ ಸಂಭ್ರಮದ ಅರ್ಥವೇನು?
ವರ್ಣಭೇದ, ದೇಹದ ಕುರಿತ ಅಪಹಾಸ್ಯ ಮತ್ತು ಯಾವುದೇ ವ್ಯಕ್ತಿಯ ವೈಯಕ್ತಿಕ ಬದುಕಿನ ಮೇಲಿನ ಅನಗತ್ಯ ತೀರ್ಪುಗಳು ಇಂದಿಗೂ ನಮ್ಮ ಸಮಾಜದಲ್ಲಿ ಜೀವಂತವಾಗಿವೆ. ಒಂಟಿ ತಾಯಿ, ವಿಚ್ಛೇದಿತ ವ್ಯಕ್ತಿ ಅಥವಾ ರೂಢಿಗತ ಸಂಪ್ರದಾಯಗಳನ್ನು ಪ್ರಶ್ನಿಸುವ ಮಹಿಳೆಯನ್ನು ಅವರ ವ್ಯಕ್ತಿತ್ವಕ್ಕಿಂತ ಸಾಮಾಜಿಕ ಹಣೆಪಟ್ಟಿಗಳ ಮೂಲಕ ಅಳೆಯುವ ಮನೋಭಾವ ಬದಲಾಗಬೇಕಿದೆ. ಮತ್ತೊಬ್ಬರ ಬದುಕಿನ ಸಂಪೂರ್ಣ ಸತ್ಯ ತಿಳಿಯದೆ ತೀರ್ಪು ನೀಡುವುದು ಯಾವ ಸಂಸ್ಕೃತಿಯ ಲಕ್ಷಣ?
ಅದೇ ರೀತಿ, ನಮ್ಮ ದೈನಂದಿನ ಬದುಕಿನಲ್ಲಿ ನಾವು ಮತ್ತೊಬ್ಬರಿಗೆ ನೀಡುವ ಗೌರವವು ವ್ಯಕ್ತಿಯ ಹುದ್ದೆ, ಆದಾಯ ಅಥವಾ ಸಾಮಾಜಿಕ ಸ್ಥಾನಮಾನವನ್ನು ಅವಲಂಬಿಸಬಾರದು. ಮನೆಯ ಕೆಲಸದವರು, ಸ್ವಚ್ಛತಾ ಕಾರ್ಮಿಕರು, ಭದ್ರತಾ ಸಿಬ್ಬಂದಿ ಮತ್ತು ಕಚೇರಿಯ ಕಿರಿಯ ಉದ್ಯೋಗಿಗಳೊಂದಿಗೆ ನಾವು ಹೇಗೆ ವರ್ತಿಸುತ್ತೇವೆ ಎಂಬುದೇ ನಮ್ಮ ಸಂಸ್ಕಾರದ ನಿಜವಾದ ಪರೀಕ್ಷೆ. ದೀಪಾವಳಿಗೆ ಮನೆ ಸ್ವಚ್ಛಗೊಳಿಸುವಾಗ, ನಮ್ಮ ಮನಸ್ಸಿನಲ್ಲಿರುವ ಅಹಂಕಾರ ಮತ್ತು ತಾರತಮ್ಯವನ್ನೂ ಸ್ವಚ್ಛಗೊಳಿಸಿಕೊಳ್ಳುವುದು ಕೂಡಾ ಅಗತ್ಯ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಮ್ಮನಮ್ಮ ಮನೆ, ಕಚೇರಿ, ಅಂಗಡಿಗಳಲ್ಲಿ ಲಕ್ಷ್ಮೀಪೂಜೆ ಮಾಡುತ್ತೇವೆ, ಸಂಪತ್ತು ಸಮೃದ್ಧಿಯನ್ನು ಬಯಸುತ್ತೇವೆ. ಆದರೆ ಮತ್ತೊಬ್ಬರ ಶ್ರಮಕ್ಕೆ ಗೌರವ ನೀಡದಿದ್ದರೆ, ದುರ್ಬಲರ ಹಕ್ಕುಗಳನ್ನು ನಿರ್ಲಕ್ಷಿಸಿದರೆ, ನಮ್ಮ ಸಂಪತ್ತಿನ ಸಂಭ್ರಮಕ್ಕೆ ಎಷ್ಟು ನೈತಿಕ ಮೌಲ್ಯ ಉಳಿಯುತ್ತದೆ? ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲುವುದೂ ಒಳಿತಿನ ವಿಜಯದ ಒಂದು ಭಾಗವೇ.
ಈ ದೀಪಾವಳಿಯಲ್ಲಿ ಮತ್ತೊಂದು ಸಂಕಲ್ಪವನ್ನೂ ಮಾಡೋಣ. ಹಬ್ಬದ ಖರೀದಿಗಾಗಿ ಸಾಧ್ಯವಾದಷ್ಟು ಸ್ಥಳೀಯ ಸಣ್ಣ ವ್ಯಾಪಾರಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳನ್ನೇ ಅವಲಂಬಿಸೋಣ. ಹೂವು, ಹಣ್ಣು, ಬಾಳೆ ಎಲೆ, ಬಾಳೆಕಂಬ, ಹಣತೆ, ಅಲಂಕಾರಿಕ ದೀಪಗಳು ಹಾಗೂ ಪಟಾಕಿಗಳನ್ನು ಅವರಿಂದಲೇ ಖರೀದಿಸುವ ಮೂಲಕ ಅವರ ಬದುಕಿಗೂ ಒಂದಿಷ್ಟು ಆಸರೆಯಾಗೋಣ. ದೊಡ್ಡ ಮಳಿಗೆಗಳ ಬೆಳಕಿನ ನಡುವೆ ಬದುಕು ಕಟ್ಟಿಕೊಳ್ಳಲು ಹೋರಾಡುತ್ತಿರುವ ಈ ಸಣ್ಣ ವ್ಯಾಪಾರಿಗಳ ಮನೆಗಳಲ್ಲೂ ದೀಪಾವಳಿಯ ಬೆಳಕು ಸಂತೋಷದಿಂದ ಬೆಳಗುವಂತಾಗಲಿ. ನಮ್ಮ ಒಂದು ಸಣ್ಣ ಖರೀದಿ ಅವರ ಕುಟುಂಬದ ಹಬ್ಬದ ಸಂಭ್ರಮಕ್ಕೆ ಕಾರಣವಾಗಬಹುದು. ನಾವು ಹಬ್ಬವನ್ನು ಸಂಭ್ರಮಿಸುವುದರ ಜೊತೆಗೆ, ಮತ್ತೊಂದು ಕುಟುಂಬವೂ ಸಂತೋಷದಿಂದ ಹಬ್ಬ ಆಚರಿಸಲು ನೆರವಾದಾಗಲೇ ಬೆಳಕಿನ ಹಬ್ಬದ ನಿಜವಾದ ಆಶಯ ಸಾಕಾರಗೊಳ್ಳುತ್ತದೆ.
ದೀಪಾವಳಿಯ ನಿಜವಾದ ಸಂದೇಶ ಕೇವಲ ಸಾಲುಸಾಲು ಹಣತೆಗಳ ದೀಪ ಹಚ್ಚುವುದರಲ್ಲಿ ಮತ್ತು ಮನೆಯ ಮುಂದೆ ಬಣ್ಣಬಣ್ಣದ ಆಕಾಶಬುಟ್ಟಿಗಳನ್ನು ನೇತು ಹಾಕುವುದರಲ್ಲಿ ಇಲ್ಲ; ನಮ್ಮ ನಡೆ, ನುಡಿ ಮತ್ತು ಚಿಂತನೆಗಳಲ್ಲಿ ಹಾಗೆಯೆ ಮತ್ತೊಬ್ಬರ ಬಾಳಲ್ಲಿ ನಗು, ಸಂತೋಷದ ಬೆಳಕನ್ನು ಮೂಡಿಸುವುದರಲ್ಲಿದೆ. ತಪ್ಪು ಮಾಡಿದಾಗ ಒಪ್ಪಿಕೊಳ್ಳುವುದು, ನೋವುಂಟುಮಾಡಿದಾಗ ಕ್ಷಮೆ ಕೇಳುವುದು, ಭಿನ್ನಾಭಿಪ್ರಾಯವಿದ್ದರೂ ಮತ್ತೊಬ್ಬರ ಘನತೆಯನ್ನು ಗೌರವಿಸುವುದು—ಇವೆಲ್ಲವೂ ನಮ್ಮೊಳಗಿನ ಬೆಳಕಿನ ಅಭಿವ್ಯಕ್ತಿಗಳು. ಹಬ್ಬ ಮುಗಿದ ನಂತರ ದೀಪಗಳು ಆರಬಹುದು, ಅಲಂಕಾರಗಳು ಕಳಚಬಹುದು. ಆದರೆ ದೀಪಾವಳಿ ಕಲಿಸುವ ಮಾನವೀಯತೆಯ ಬೆಳಕು ನಮ್ಮ ಬದುಕಿನಲ್ಲಿ ಸದಾ ಉಳಿಯಬೇಕು.
ಈ ದೀಪಾವಳಿಯಲ್ಲಿ ಮನೆಯ ಅಂಗಳದಲ್ಲಿ ದೀಪ ಹಚ್ಚುವ ಮೊದಲು, ನಮ್ಮೊಳಗಿನ ಅಹಂಕಾರ, ದ್ವೇಷ ಮತ್ತು ಪೂರ್ವಾಗ್ರಹಗಳ ಕತ್ತಲೆಯನ್ನು ಗುರುತಿಸೋಣ. ಏಕೆಂದರೆ ನಿಜವಾದ ಬೆಳಕಿನ ಹಬ್ಬವೆಂದರೆ ಕೇವಲ ನಮ್ಮ ಮುಖವನ್ನು ಹೊಳೆಯುವಂತೆ ತೋರುವುದಲ್ಲ; ನಮ್ಮ ನಡವಳಿಕೆಯಿಂದ ಮತ್ತೊಬ್ಬರ ಬದುಕನ್ನು ಬೆಳಗಿಸುವುದು ಕೂಡಾ ಹಬ್ಬದ ಸಂಭ್ರಮವೇ.
