
Article · May 27, 2026
ಸ್ವಾರ್ಥ ನಿಸ್ವಾರ್ಥ
✍🏻 ವೀಣಾ ಎಂ ಭಟ್
ಇರಬೇಕು ಹೂವಂತೆ ಮೊಗ ತುಂಬ ನಗುವಿರಲಿ
ಜಗವ ಮೋಹಿಸುವಂತೆ ಬಿರಿದು ಸೌರಭ ಚೆಲ್ಲಿ
ಒಂದು ದಿನದ ಬಾಳು ಮುಡಿಪಾಗಿ ದೇವರೊಳು
ತನುವಿನಲಿ ಸ್ಪೂರ್ತಿ ಧನ್ಯತೆ ಭಾವದೊಳು
ಕಲ್ಲುಮುಳ್ಳಿನ ಹಾದಿಯಲಿ ಹರಿಯುವ ಗಂಗೆ
ದಾಹವನು ನೀಗಿಸುವ ಮನುಜಗೆ ಸುರಗಂಗೆ
ಸುರಿವ ಧಾರೆಯು ಇಳೆಗೆ ಕೊಡುವ ಮನಬಂದ್ಹಂಗೆ
ನೀಡುವಳು ಜಲನಿಧಿಯ ನಿಸ್ವಾರ್ಥದಿಂ ಕೊನೆಗೆ
ತನ್ನ ನೋವ ನುಂಗಿ ಮುನ್ನ ಹಾಲನು ಕೊಡುವ
ನಿಸ್ವಾರ್ಥ ಹಸುವಿನ ಬವಣೆ ದೇವರೆ ಬಲ್ಲ
ತಾನುಂಡು ತನ್ನ ಹಸುಗೂಸಿಗೆ ಉಣಿಸೊ ಹಾಲು
ಕರೆದು ನೀ ಕೊಡುವೆಯಾ ನಿನ್ನ ಕೂಸೆ ಮೇಲು
ಬಯಲಿನ ಮರ ಬಿಸಿಲ ಪ್ರಖರತೆಗೆ ಮೈಯೊಡ್ಡಿ
ಉರಿಬಿಸಿಲ ತಾಪವದು ಮರವನ್ನು ಕಾಡಿ
ನೆರಳಿನಾಶ್ರಯ ಬಯಸಿ ಬಂದ ಜೀವಿಗೆ ತಾನು
ತಂಪೆರೆದು ಸುತ್ತ ತಾ ಮುದ ನೀಡದೇನು?
ಮಾರು ಯೋಜನ ದೂರದ ಮಕರಂದವ ಹೀರಿ
ಸಂಸಾರ ಸಾಗಿಸಲು ನೊಣವೆಲ್ಲ ಸೇರಿ
ಕೂಡಿಟ್ಟ ಮಧುವನ್ನ ನಿಮಿಷಾರ್ಧದಲಿ ಹಿಂಡಿ
ಹಿಪ್ಪೆಯನು ಮಾಡುವೆಯಲ್ಲ ತಿಳಿಗೇಡಿ ಮನುಜ
Creative Writings
