Karada Vishwa

Article · July 15, 2026

'ಭವಂತಡಿ'

- ಭವಂತಡಿ ತಂಡ, ಯುವ ಕರಾಡ, ಬೆಂಗಳೂರು (14-7-2026)

ಭವಂತಡಿ ಹೆಸರಿನ ಉದ್ಭವವಾದ್ದು ನಮ್ಮ ಪ್ರಥಮ ಚಾರಣದ ದಿನದಂದು.

ಚಾರಣ ನಮ್ಮಲ್ಲಿ ಕೆಲವರ ಹವ್ಯಾಸ. ನಾವು ಚಾರಣ ಹೋಗುವಾಗ ನಮ್ಮ ಪರಿವಾರವನ್ನು ,ನಮ್ಮ ಸಮುದಾಯವನ್ನು ಯಾಕೆ ಕರೆದುಕೊಂಡು ಹೋಗಬಾರದು ಅನ್ನುವ ಯೋಚನೆ ಬಂದದ್ದೇ ತಡ...ಯುವ ಕರಾಡದ ಚಾರಣದ ಯೋಜನೆಗೆ ನಾಂದಿ. ಭವಂತಡಿಯ ಚೊಚ್ಚಲ ಚಾರಣ ಮಾಗಡಿ ತಾಲೂಕಿನ ಹುತ್ತರಿ ಬೆಟ್ಟ. ಪ್ರಥಮ ಚಾರಣಕ್ಕೆ ಸೇರಿದ ಬಾಂಧವರ ಸಂಖ್ಯೆ 70. ಈ ಜನರ ಗುಂಪನ್ನು ಸಂಭಾಳಿಸುವುದು ಹೇಗೆ, ಬೆಳಿಗ್ಗೆ ತಿಂಡಿ ವ್ಯವಸ್ಥೆ ಹೇಗೆ, ಕಾರ್ ಪೂಲಿಂಗ್ ಹೇಗೆ, ಏನಾದರೂ ತೊಂದರೆ ಆದರೆ ಎಂಬೆಲ್ಲ ಯೋಚನೆಗಳಿದ್ದರೂ ಧೈರ್ಯ ದಿಂದ ಮುಂದಡಿ ಇಟ್ಟ ಐದಾರು ಜನ ಯುವ ಮನಸ್ಕ ಯುವ ಕರಾಡ ತಂಡ. ಪ್ರಥಮ ಚಾರಣಕ್ಕೆ ಸಮಾಜದಿಂದ ಅದ್ಬುತ ಪ್ರತಿಕ್ರಿಯೆ. ಸುಮಾರು70 ಕ್ಕಿಂತ ಹೆಚ್ಚು ಸಮಾಜ ಬಾಂಧವರ ಸಂಪರ್ಕ. ಬೆಟ್ಟದ ಮೇಲೇರಿ ಸೂರ್ಯೋದಯ ವೀಕ್ಷಣೆಗೆ ಕಾದು ಮೋಡದಲ್ಲಿ ಸೂರ್ಯ ಮರೆಯಾದರೂ ನಿಲ್ಲದ ಉತ್ಸಾಹ. ಸಂಘದದಿಂದ ಪ್ರೇರಿತವಾದ ಕೆಲವು ಗುಂಪಾಟ, ಯುವ ಸಮಾಜ ಬಾಂಧವರ ಆತ್ಮವಿಶ್ವಾಸದ ಪ್ರತಿಕ್ರಿಯೆ ಭವಂತಡಿಯ ಹುಟ್ಟು...

ಅಲ್ಲಿಂದ ಹಿಂದಡಿ ಇಡದೆ ಸಮಾಜ ಬಾಂಧವರ ಸಂಪರ್ಕದ, ಬಾಂಧವ್ಯದ, ಸಂಘಟನೆಯ ಉಲ್ಲಾಸದ ಅಭಿವ್ಯಕ್ತಿಯೊಂದಿಗೆ ತಿಂಗಳಿಗೆ ಒಂದರಂತೆ ಸಣ್ಣ ಸಣ್ಣ ಚಾರಣ ಶುರು. ಉದ್ದೇಶ ಇಷ್ಟೇ, ಪ್ರಕೃತಿ ಸೌಂದರ್ಯ ಆರಾಧನೆ, ನಮ್ಮ ಸಂಘಟನೆ ಬಲಪಡಿಸುವಿಕೆ, ಮಕ್ಕಳಿಂದ ವಯಸ್ಕರವರೆಗೂ ಸಮ್ಮಿಲನ.

ಎರಡು ವರುಷಗಳಿಂದ ಭಾಗವಹಿಸಿದವರ ಸಂಖ್ಯೆ 250 ಕ್ಕಿಂತಲೂ ಅಧಿಕ. ಈ ರೀತಿಯೂ ಸಮಾಜ ಸಂಘಟನೆ ಖಂಡಿತ ಸಾಧ್ಯ ಅನ್ನುವುದಕ್ಕೆ ಒಂದು ನಿದರ್ಶನ. ಚಾರಣದ ಬಗ್ಗೆ ನಮ್ಮವರು ತೋರುತ್ತಿರುವ ಆಸಕ್ತಿ ಅಪಾರ. ಅತ್ಯುತ್ಸಾಹದಿಂದ ಮಕ್ಕಳು ಯುವಕರು ವಯಸ್ಕರೆನ್ನುವ ಭೇದವಿಲ್ಲದೆ ಭಾಗವಹಿಸುವ ಸಂಭ್ರಮಿಸುವ ಎಲ್ಲರನ್ನೂ ನೋಡುವುದೇ ಕಣ್ಣಿಗೊಂದು ಹಬ್ಬ. ಅಪರಿಚಿತರೂ ಪರಿಚಿತರಾಗಿ ಕುಟುಂಬದವರಂತೆಯೇ ಆಗಿಹೋಗಿದ್ದೇವೆ. ಭವಂತಡಿ ಬರೀ ತಂಡವಲ್ಲ, ಇದು ಒಂದು ಪರಿವಾರ.

ಸಮಾಜ ಸದಸ್ಯರ ಭೇಟಿಯನ್ನು ಪುನಹ ಪುನಹ ನೆನಪಿಸುವ ಕೆಲವು ಆಹ್ಲಾದಕರ ಕ್ಷಣಗಳು. ನಮ್ಮ ಹಿಮಾಲಯದ ತಪ್ಪಲಿನ ಒಂದು ಚಾರಣವಂತೂ ಅದ್ಭುತ. ದಕ್ಷಿಣ ಕನ್ನಡದ ಕುಮಾರ ಪರ್ವತ ಚಾರಣದ ಅನುಭವ ಅವಿಸ್ಮರಣೀಯ. ಕಷ್ಟ ಎನಿಸಿದರು ಇನ್ನೊಂದು ಸಲ ಚಾರಣ ಮಾಡಬೇಕೆನ್ನುವ ತವಕ.

ಒಂದೆಡೆ ಭಜನಾ ಸಂಜೆಯ ಕಾರ್ಯಕ್ರಮದೊಂದಿಗೆ ಕುಟುಂಬದ ಕುಟುಂಬಗಳ ಮಿಲನ ಇನ್ನೊಂದೆಡೆ ಚಾರಣದೊಂದಿಗೆ ಯುವ ಸಮಾಜದ ಮಿಲನ.

ಸಮುದಾಯಕ್ಕೆ ಅಗತ್ಯವಾದ ಸಂಸ್ಕಾರವನ್ನು ಗಟ್ಟಿಗೊಳಿಸಲು ಅಗತ್ಯವಾದ ಭಜನೆ, ಭೋಜನ, ಭ್ರಮಣ, ಭಾಷೆ, ಭೂಷಣ ಇದೆಲ್ಲದರ ಪರಿಕಲ್ಪನೆಯನ್ನ ಸಾಕಾರ ಗೊಳಿಸುವ ಒಂದು ಸಣ್ಣ ಪ್ರಯತ್ನ. ಈ ಪ್ರಯತ್ನಕ್ಕೆ ಸಮಾಜ ಬಾಂಧವರೆಲ್ಲ ಸಹಕಾರ ಕೊಟ್ಟಿದ್ದಾರೆ, ಕೊಡುತ್ತಿದ್ದಾರೆ. ಇನ್ನು ಮುಂದೆ ಉತ್ತರ ಭಾರತದ ಪ್ರೇಕ್ಷಣೀಯ ಚಾರ್ ಧಾಮ್ ಯಾತ್ರೆ ಮತ್ತು ವರುಷದಲ್ಲಿ ಒಂದು ದಿನ ಹಿಮಾಲಯದ ತಪ್ಪಲಿನಲ್ಲಿ ಒಂದು ಚಾರಣ ಮತ್ತು ಇಲ್ಲೇ ಸುತ್ತಮುತ್ತ ಪರಿಸರದಲ್ಲಿ ಸಾಧ್ಯವಾದರೆ ತಿಂಗಳಿಗೆ ಒಂದು ದಿನ ಭವಂತಡಿ.

ನಾಳೆ ನಮ್ಮ ಕರ್ನಾಟಕದ ಅತ್ಯಂತ ರಮಣೀಯ ಸ್ಥಳ ನೇತ್ರಾವತಿ ನದಿಯ ಉಗಮ ಸ್ಥಾನ ನೇತ್ರಾವತಿ ಪೀಕ್ ಗೆ ಹೊರಟಿದ್ದೇವೆ. ಸುಮಾರು 30 ಬಾಂಧವರು ಜೊತೆ ಸೇರಿ ಪಯಣಿಸುತ್ತಿದ್ದೇವೆ. ಇದಕ್ಕೆ ವಾರಾಂತ್ಯದಲ್ಲಿ ಎಲ್ಲರಿಗೂ ಟಿಕೇಟುಗಳು ದೊರಕದಿರುವ ಕಾರಣ ಬುಧವಾರದಂದು ಆಯೋಜಿಸಲಾಗಿದೆ. ಕಛೇರಿಯ ದಿನವಾದ್ದರಿಂದ ಕೆಲಸದ ಅಡಚಣೆಗಳ ಕಾರಣ ತುಂಬಾ ಜನರಿಗೆ ಬರಲಾಗುತ್ತಿಲ್ಲ, ಇದಕ್ಕಾಗಿ ವಿಷಾದವಿದೆ. ಆದರೆ ವಾರಾಂತ್ಯದಲ್ಲಿ ತೀರಾ ಸಣ್ಣ ಗುಂಪಿಗೆ ಟಿಕೇಟುಗಳು ಸಿಗಬಹುದೇನೋ, ಪ್ರಯತ್ನಿಸಿ ನೋಡಬಹುದು. ಮುಂದೆಯೂ ಇಂತ ಚಾರಣದಲ್ಲಿ ಎಲ್ಲರೂ ಭಾಗಿಯಾಗೋಣ ಸಂಘಟನೆಯನ್ನು ಬಲಪಡಿಸೋಣ ಎಂಬ ಆಶಯ.

ಸಾಧಾರಣವಾಗಿ ನಾವು ಬೆಂಗಳೂರಿಗೆ ಸಮೀಪವಿರುವ 100ಕಿಮೀ ಒಳಗಿನ ಸ್ಥಳಗಳನ್ನು ಆಯ್ಕೆ ಮಾಡುತ್ತೇವೆ. ಭಾನುವಾರದಂದು ಬೆಳ್ಳಂಬೆಳಗ್ಗೆ ಹೊರಟು ಮಧ್ಯಾಹ್ನಕ್ಕೆ ವಾಪಾಸು ನಮ್ಮನಮ್ಮ ಮನೆಗಳಿಗೆ ತಲುಪುವಂತೆ ನಿಗದಿಯಾಗಿರುತ್ತದೆ. ಹಾಗಾಗಿ ಭಾನುವಾರದ ದಿನದ ಸಂಪೂರ್ಣ ಸದ್ವಿನಿಯೋಗವಾಗುತ್ತದೆ. ನಾವು ಇಲ್ಲಿಯವರೆಗೆ ಚಾರಣ ಹೋದ ಕೆಲವು ಸ್ಥಳಗಳು-ಹುತ್ತರಿ ಬೆಟ್ಟ, ಶ್ರೀ ರೇವಣ ಸಿದ್ದೇಶ್ವರ ಬೆಟ್ಟ, ಕುಣಗಾಲು ಬೆಟ್ಟ, ರಾಣಿಪುರಂ, ಹಂದಿಗುಂಡಿ ಬೆಟ್ಟ, ರಾಮ ದೇವರ ಬೆಟ್ಟ, ದೇವರಾಯನ ದುರ್ಗ, ಕುಮಾರ ಪರ್ವತ, ಹಿಮಾಲಯದ ತಪ್ಪಲಿನ ಕುವರಿ ಪಾಸ್ ಹಾಗೂ ಇನ್ನೂ ಕೆಲವು.

ಚಾರಣ ಏಕೆ:

ಚಾರಣವು ಒಂದು ಅತ್ಯುತ್ತಮವಾದ ಹವ್ಯಾಸ. ಚಾರಣ (Trekking) ಎಂದರೆ ಕೇವಲ ನಡಿಗೆ ಎಂದಲ್ಲ.. ಇದು ಸ್ವಲ್ಪ ಸಾಹಸವನ್ನೂ ,ದೈಹಿಕ ಶ್ರಮವನ್ನೂ, ಸಾಮರ್ಥ್ಯವನ್ನೂ ಬಯಸುವ ಚಟುವಟಿಕೆ. ಬೆಟ್ಟ-ಗುಡ್ಡಗಳನ್ನು ಏರುವುದು; ಕಾಡುಗಳಲ್ಲಿ ಸಂಚರಿಸುವುದು; ಅಲ್ಲಿ ಪುರಾತನವಾದ ಗುಡಿಗಳು, ಕೋಟೆಗಳು ಇದ್ದರೆ ಅವುಗಳ ಬಗ್ಗೆ ತಿಳಿದುಕೊಳ್ಳುವುದು; ತೊರೆ,ಝರಿ,ಜಲಪಾತಗಳನ್ನು ಆನಂದಿಸುವುದು; ರಾತ್ರಿ ವೇಳೆ ಪ್ರಕೃತಿಯ ಮಡಿಲಲ್ಲಿ ತಂಗುವುದು ಇಂತಹ ಆಸಕ್ತಿದಾಯಕ ವಿಷಯಗಳನ್ನು ಚಾರಣವು ಒಳಗೊಂಡಿದೆ. ಒಟ್ಟಿನಲ್ಲಿ ನಿಸರ್ಗದ ಮಡಿಲಲ್ಲಿ ಮಗುವಾಗಿ, ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಕಾಲ್ನಡಿಗೆಯಲ್ಲಿ ಸಾಗುವುದೇ ಚಾರಣ.

ಚಾರಣಕ್ಕೆ ಬೇಕಾದ ಪೂರ್ವಸಿದ್ಧತೆಗಳು :

  • ಯಾವುದೇ ಚಾರಣವನ್ನು ಪ್ರಾರಂಭಿಸುವ ಮೊದಲು ಆ ಸ್ಥಳದ ಬಗ್ಗೆ ಮೊದಲು ಮಾಹಿತಿ ಕಲೆ ಹಾಕಬೇಕು.

  • ಚಾರಣದಲ್ಲಿ ಕ್ರಮಿಸಬೇಕಾದ ದೂರವನ್ನು ಅವಲಂಬಿಸಿ ಊಟ ಮತ್ತು ಮಲಗುವ ವ್ಯವಸ್ಥೆಯನ್ನು ಯೋಜಿಸಬೇಕು.

  • ಚಾರಣದ ವೇಳೆಯಲ್ಲಿ ಚಾರಣಿಗರು ತಮಗೆ ಬೇಕಾದ ಆಹಾರ ಪದಾರ್ಥಗಳನ್ನು ಮತ್ತು ನೀರನ್ನು ಜೊತೆಗೆ ಕೊಂಡೊಯ್ಯಬೇಕು. ಶಕ್ತಿಯನ್ನು ನೀಡುವ ಹಣ್ಣು ಅಥವಾ ಡ್ರೈ-ಫ್ರೂಟ್ಸ್ಗಳನ್ನು ಇಟ್ಟುಕೊಳ್ಳಬೇಕು ಮತ್ತು ಬೇಕಾದರೆ ಮಲಗಲು ಸರಂಜಾಮುಗಳನ್ನು ಕೂಡ ಕೊಂಡೊಯ್ಯಬೇಕು.

  • ಅಗತ್ಯಕ್ಕೆ ತಕ್ಕಂತೆ ಟ್ರೆಕ್ಕಿಂಗ್ ಬೂಟುಗಳನ್ನು ಧರಿಸಬೇಕು ಅಥವಾ ಅವಶ್ಯಕತೆಯಿಲ್ಲದಿದ್ದರೆ ಆರಾಮದಾಯಕವಾದ ಪಾದರಕ್ಷೆಗಳನ್ನು ಬಳಸಬೇಕು.

  • ಹವಾಮಾನಕ್ಕೆ ತಕ್ಕಂತೆ ಬಟ್ಟೆಗಳನ್ನು ಧರಿಸಬೇಕು.

  • ಬೇಕಾದ ಪ್ರಥಮ ಚಿಕಿತ್ಸಾ ಸಾಮಗ್ರಿಗಳನ್ನು ತೆಗೆದುಕೊಳ್ಳಬೇಕು.

  • ಹಮ್ಮಿಕೊಂಡ ಚಾರಣವು ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯ ಅಥವಾ ರಕ್ಷಿತ ಅರಣ್ಯಗಳ ಮೂಲಕ ಹಾದು ಹೋಗುವಂತಿದ್ದರೆ ಮೊದಲೆ ಅರಣ್ಯ ಇಲಾಖೆಯಿಂದ ಸೂಕ್ತ ವಿಧಿ ವಿಧಾನಗಳನ್ನು ಅನುಸರಿಸಿ ಅನುಮತಿ ಪಡೆಯುವುದು ಮತ್ತು ಚಾರಣದ ಮಾರ್ಗದಲ್ಲಿ ಎದುರಾಗಬಹುದಾದ ಅಪಾಯಗಳ ಕುರಿತು ಮೊದಲೆ ಮಾಹಿತಿ ಪಡೆಯಬೇಕು. ಯಾವುದೇ ಅನುಮತಿ ಪಡೆಯುವುದು ಬೇಡವಾಗಿದ್ದರೆ, ಅಗತ್ಯಬಿದ್ದಲ್ಲಿ ಅಲ್ಲಿಯ ಸ್ಥಳೀಯರ ಮಾರ್ಗದರ್ಶನ ಪಡೆಯಬಹುದು.

ಚಾರಣದ ಪ್ರಯೋಜನಗಳು:

  • ದೈಹಿಕ ಆರೋಗ್ಯ: ದೇಹಕ್ಕೆ ಉತ್ತಮ ವ್ಯಾಯಾಮ ದೊರೆಯುತ್ತದೆ. ರಕ್ತಸಂಚಲನೆ ಸುಗಮವಾಗುತ್ತದೆ.ಹೃದಯದ ಕ್ಷಮತೆ ಮತ್ತು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

  • ಮಾನಸಿಕ ನೆಮ್ಮದಿ: ನಗರದ ಒತ್ತಡ,ಗದ್ದಲ,ಮಾಲಿನ್ಯದಿಂದ ಮುಕ್ತಿ. ಪ್ರಕೃತಿಯ ಮೌನ ಹಾಗೂ ಕೀಟಗಳು ಪ್ರಾಣಿಗಳು ಹಕ್ಕಿಗಳ ಕಲರವವು ಮನಸ್ಸಿಗೆ ಶಾಂತಿ ನೀಡುತ್ತದೆ. ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಆತಂಕವನ್ನು ದೂರಮಾಡುತ್ತದೆ.

  • ಸಾಹಸ ಪ್ರವೃತ್ತಿ: ಇದು ವ್ಯಕ್ತಿಯಲ್ಲಿ ಆತ್ಮವಿಶ್ವಾಸ, ಧೈರ್ಯ ಮತ್ತು ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಬೆಳೆಸುತ್ತದೆ.

  • ಸಹಬಾಳ್ವೆ ಮತ್ತು ನಾಯಕತ್ವ: ಸ್ನೇಹಿತರೊಂದಿಗೆ ಚಾರಣ ಮಾಡುವಾಗ ಗುಂಪಿನಲ್ಲಿ ಕೆಲಸ ಮಾಡುವ ಗುಣ, ಪರಸ್ಪರ ಸಹಾಯ ಮಾಡುವ ಮನೋಭಾವ ಮತ್ತು ನಾಯಕತ್ವ ಗುಣಗಳು ವೃದ್ಧಿಸುತ್ತವೆ.

  • ಪರಿಸರ ಜ್ಞಾನ: ಗಿಡ ಮರಗಳು, ಪ್ರಾಣಿ ಪಕ್ಷಿ ಕೀಟಗಳ, ಹವಾಮಾನದ ಬಗ್ಗೆ ಅರಿವು

ನಮ್ಮ ಜವಾಬ್ದಾರಿ:

  • ಚಾರಣ ಮಾಡುವಾಗ ಪ್ಲಾಸ್ಟಿಕ್ ಅಥವಾ ಬೇರೆ ಕಸಗಳನ್ನು ಎಲ್ಲಿಯೂ ಎಸೆಯಬಾರದು.

  • ಪ್ರಾಣಿ-ಪಕ್ಷಿಗಳಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು.

  • ಸ್ವಚ್ಛತಾಕಾರ್ಯವನ್ನು ಕೈಗೊಳ್ಳುವ ಯೋಜನೆಯನ್ನು ಹಾಕಿಕೊಳ್ಳಬಹುದು(ಇನ್ನೂ ಕಾರ್ಯಗತ ಮಾಡಿಲ್ಲ)

ಪ್ರಕೃತಿಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ.

ನಮ್ಮ ಭವಂತಡಿ ಪರಿವಾರಕ್ಕೆ ಆಸಕ್ತರೆಲ್ಲರೂ ಸೇರಿಕೊಳ್ಳಬಹುದು, ಉತ್ಸಾಹಿ ಯುವ ಮನಸುಗಳಿಗೆ ಸ್ವಾಗತ. ಕುತೂಹಲ, ಉತ್ಸಾಹ, ಆರೋಗ್ಯ, ಆತ್ಮವಿಶ್ವಾಸ, ಪರಿಸರ ಪ್ರಜ್ಞೆ ಇದು ಭವಂತಡಿ. ಮುಂದಿನ ಚಾರಣಗಳ ಬಗ್ಗೆ ತಿಳಿಯಲು ನಮ್ಮೊಂದಿಗೆ ಸಂಪರ್ಕದಲ್ಲಿರಿ.

ಇದು ನಮ್ಮ ಸಮಾಜ, ನಮ್ಮ ಸಂಸ್ಕೃತಿ, ನಮ್ಮ ಸಂಘಟನೆ ಎಂಬ ಸಂಕಲ್ಪದೊಂದಿಗೆ....

- ಭವಂತಡಿ ತಂಡ, ಯುವ ಕರಾಡ, ಬೆಂಗಳೂರು

Travel
'ಭವಂತಡಿ'