
News · November 19, 2026
ಬಹುಶ್ರುತ ವಿದ್ವಾಂಸ ಡಾ| ಡಿ. ಸದಾಶಿವ ಭಟ್ ಪಳ್ಳು ಅವರಿಗೆ ಯಕ್ಷಾಂಗಣ ಗೌರವ ಪ್ರಶಸ್ತಿ 2026
ಸುದ್ದಿ ನ್ಯೂಸ್ ಪುತ್ತೂರು ಪ್ರಕಟಿಸಿದ ಸುದ್ದಿ .
ಬೆಟ್ಟಂಪಾಡಿ: ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ವೇದಿಕೆಯು ಕಲಾವಿದ, ವಿದ್ವಾಂಸರಿಗೆ ಕೊಡ ಮಾಡುವ 'ಯಕ್ಷಾಂಗಣ ಗೌರವ ಪ್ರಶಸ್ತಿ'ಗೆ 2025 - 26ನೇ ಸಾಲಿನಲ್ಲಿ ಸಾರಸ್ವತ ಲೋಕದ ಬಹುಶ್ರುತ ವಿದ್ವಾಂಸ ಹಾಗೂ ಬಹುಭಾಷಾ ಪ್ರಸಂಗಕರ್ತ ಡಾ| ಡಿ. ಸದಾಶಿವ ಭಟ್ ಪಳ್ಳು ಆಯ್ಕೆಯಾಗಿದ್ದಾರೆ.
ಬಹುಮುಖೀ ಸಾಧಕ:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ನಿಡಳ್ಳಿ ಗ್ರಾಮದ ಪಳ್ಳು ಸದಾಶಿವ ಭಟ್ಟ ಅವರು ಯಕ್ಷಗಾನ ಮತ್ತು ಸಾಹಿತ್ಯ ಲೋಕದ ಅಗ್ರಪಂಕ್ತಿಯಲ್ಲಿ ಕಾಣುವ ಶ್ರೇಷ್ಠ ಸಾಧಕರು. ಕನ್ನಡ ವಿದ್ವಾನ್, ಸಂಸ್ಕೃತ ಶಿರೋಮಣಿ, ಹಿಂದಿ ವಿಶಾರದರಾದ ಅವರು ಎಳವೆಯಿಂದಲೇ ಯಕ್ಷಗಾನ ಅರ್ಥಗಾರಿಕೆ, ಪ್ರಸಂಗ ರಚನೆ, ವೇಷಗಾರಿಕೆಯಲ್ಲಿ ತೊಡಗಿಸಿಕೊಂಡವರು. ಕನ್ನಡ, ತುಳು, ಸಂಸ್ಕೃತ, ಮಲಯಾಳ, ಇಂಗ್ಲಿಷ್, ಹಿಂದಿ, ಕರಾಡ, ಮರಾಠಿ, ಕೊಂಕಣಿ - ಹೀಗೆ 9 ಭಾಷೆಗಳಲ್ಲಿ ಯಕ್ಷಗಾನ ಪ್ರಸಂಗಗಳನ್ನು ಬರೆದ ಅವರದು ಬಹುಮುಖೀ ವ್ಯಕ್ತಿತ್ವ. ಅವರಿಗೀಗ ನಡೆಯುತ್ತಿರುವುದು 94ರ ತುಂಬು ಹರೆಯ.
ಬದುಕು – ಬರಹ:
ನಿಡ್ನಳ್ಳಿ ಗ್ರಾಮದ ಪಳ್ಳು ಡಿ.ನಾರಾಯಣ ಭಟ್ ಮತ್ತು ಗೋದಾವರಿ ಅಮ್ಮ ದಂಪತಿಗೆ ಮೇ 15,1933 ರಲ್ಲಿ ಜನಿಸಿದ ಸದಾಶಿವ ಭಟ್ಟರು 1954ರಲ್ಲಿ ಕನ್ನಡ ವಿದ್ವಾನ್ ಪದವಿ ಪಡೆದರು. ಬಿ.ಎ., ಬಿ.ಎಡ್. ಪದವೀಧರರಾಗಿ 1964 ರಲ್ಲಿ ಬೆಟ್ಟಂಪಾಡಿ ನವೋದಯ ಹೈಸ್ಕೂಲ್ ನಲ್ಲಿ ಕನ್ನಡ ಪಂಡಿತರಾಗಿ ಒಟ್ಟು 28 ವರ್ಷಗಳ ಸೇವೆ ಸಲ್ಲಿಸಿ 1992 ರಲ್ಲಿ ನಿವೃತ್ತರಾದರು. ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿ ವಿಶೇಷ ಅಧ್ಯಯನ ನಡೆಸಿ ವಿಶಾರದರಾದ ಅವರು ಕನ್ನಡದಲ್ಲಿ ಎಂ.ಎ., ಮತ್ತು ಪಿ.ಎಚ್.ಡಿ. ಪದವಿ ಗಳಿಸಿದ್ದಾರೆ. ಪ್ರೌಢಶಾಲಾ ಶಿಕ್ಷಕರೊಬ್ಬರು ಡಾಕ್ಟರೇಟ್ ಮಾಡಿದ್ದು ನಮ್ಮ ಜಿಲ್ಲೆಯಲ್ಲಿ ಇದೇ ಪ್ರಥಮ ಎಂಬ ಹೆಗ್ಗಳಿಕೆ ಅವರಿಗಿದೆ. ಅಲ್ಲದೆ 60ರ ದಶಕದಲ್ಲಿ ಶಾಲೆಯಲ್ಲಿ ಹುಡುಗಿಯರಿಂದಲೇ ಯಕ್ಷಗಾನ ಮಾಡಿಸಿದ ಮೊದಲ ದಾಖಲೆ ಅವರದೇ. ಆಗಿನ ಮದ್ರಾಸ್, ಮೈಸೂರು, ಬೆಂಗಳೂರು, ಧಾರವಾಡ, ಮಂಗಳೂರು – ಈ ಐದು ವಿಶ್ವವಿದ್ಯಾನಿಲಯಗಳಿಂದ ಪದವಿ ಗಳಿಸಿದ್ದು ಅವರ ಅಪೂರ್ವ ಸಾಧನೆ. ವಿವಿಧ ಭಾಷೆಗಳಲ್ಲಿ ನೂರಾರು ಯಕ್ಷಗಾನ ಪ್ರಸಂಗಗಳು, ನಾಟಕ - ರೂಪಕಗಳು, ಕನ್ನಡ ಸಂಸ್ಕೃತ ಸ್ತೋತ್ರ, ಸುಪ್ರಭಾತ, ಭಕ್ತಿಗೀತೆ - ಭಾವಗೀತೆಗಳು, ಧ್ವನಿಸುರುಳಿ ಸಾಹಿತ್ಯ, ಮಹಾಕಾವ್ಯ, ಸಂಶೋಧನಾ ಪ್ರಬಂಧಗಳು ಸಾರಸ್ವತ ಲೋಕಕ್ಕೆ ಅವರಿತ್ತ ಅಮೋಘ ಕೊಡುಗೆಗಳು. 'ಕರಾಡ ರಾಮಾಯಣ' ಮಹಾ ಕಾವ್ಯ, ಕರಾಡ ಬ್ರಾಹ್ಮಣರು - ಒಂದು ಅಧ್ಯಯನ, ಶ್ರೀ ಕೃಷ್ಣ ಚರಿತ' ಮಹಾಕಾವ್ಯ, 'ಯಕ್ಷಗಾನ ತ್ರಿಂಶತಿ' ಪ್ರಸಂಗ ಸಂಪುಟ, 'ಬ್ರಹ್ಮಶ್ರೀ ಮವ್ವಾರು ಸುಬ್ರಹ್ಮಣ್ಯ ಭಟ್ಟರು' ವ್ಯಕ್ತಿಚಿತ್ರ - ಇತ್ಯಾದಿ ಅವರ ಪ್ರಕಟಿತ ಕೃತಿಗಳು. ವಿದ್ವತ್ ಲೋಕದ ಮಹಾಸಾಧಕರು ಡಿ. ಸದಾಶಿವ ಭಟ್ಟರು ಕರಾಡ ಸಂಸ್ಕೃತಿಯ ಜೀವಂತ ದಂತಕಥೆ. ಯಕ್ಷಗಾನ ಅರ್ಥಗಾರಿಕೆ, ವೇಷಗಾರಿಕೆ ಮತ್ತು ಪ್ರವಚನಗಳಲ್ಲಿ ಅವರದು ಹಿರಿಯಸಾಧನೆ. ಅವರ 'ಹೂವು ಎನ್ನುವ ಕವಿತೆ ಮಹಾರಾಷ್ಟ್ರದ ಆರನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಸ್ಥಾನ ಪಡೆದಿದೆ. ಪುತ್ತೂರು ತಾಲೂಕು ಹದಿಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಅವರಿಗೆ ಲಭಿಸಿದೆ.
ಪ್ರಶಸ್ತಿ - ಗೌರವ:
ಸೀತಾನದಿ ಗಣಪಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ, ಪೊಳಲಿ ಶಂಕರನಾರಾಯಣ ಶಾಸ್ತ್ರಿ ಪ್ರಶಸ್ತಿ, ಕಡವ ಶಂಭು ಶರ್ಮ ಪ್ರಶಸ್ತಿ, ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರಶಸ್ತಿ, ಉಡುಪಿ ಕಲಾರಂಗ ಪ್ರಶಸ್ತಿ, ಪುಂಡೂರು ದಾಮೋದರ ಪುಣ್ಣತ್ತಾಯ ಪ್ರತಿಷ್ಠಾನ ಪ್ರಶಸ್ತಿ, ಕೀರಿಕ್ಕಾಡು ಮಾಸ್ಟರ್ ವಿಷ್ಣು ಭಟ್ಟ ಪ್ರಶಸ್ತಿ, ಮಂಗಳೂರು ವಿ.ವಿ. ಯಕ್ಷಮಂಗಳ ಪ್ರಶಸ್ತಿ; ಶಂಕರ ಸಾಹಿತ್ಯ, ಗುರು ಮಾಧವ, ಗುರು ಸಾಂದೀಪನಿ ಪ್ರಶಸ್ತಿಗಳು; ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪುಸ್ತಕ ಬಹುಮಾನ, ಪಂಜೆ ಮಂಗೇಶರಾಯ ರಾಷ್ಟ್ರೀಯ ಪ್ರಶಸ್ತಿಗಳು - ಹೀಗೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಡಾ| ಡಿ. ಎಸ್. ಭಟ್ಟರು 60ಕ್ಕೂ ಮಿಕ್ಕಿದ ಸನ್ಮಾನ – ಗೌರವಗಳನ್ನು ಪಡೆದಿದ್ದಾರೆ.
ಪ್ರಶಸ್ತಿ ಪ್ರದಾನ:
'ಯಕ್ಷಾಂಗಣ ಮಂಗಳೂರು' ಯಕ್ಷಗಾನ ಚಿಂತನ - ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾನಿಲಯ ಡಾ| ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷಭಾರತಿ (ರಿ.) ಪುತ್ತೂರು ಇವರ ಸಹಯೋಗದಲ್ಲಿ 2026 ನವೆಂಬರ 22 ರಿಂದ 28ರ ವರೆಗೆ ನಡೆಸುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ 'ಯಕ್ಷಗಾನ ತಾಳಮದ್ದಳೆ ಸಪ್ತಾಹ' 14ನೇ ವರ್ಷದ ನುಡಿಹಬ್ಬದ ಅಂಗವಾಗಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನವೆಂಬರ 28 ರಂದು ಶನಿವಾರ 'ಸಪ್ತಾಹದ ಸಮಾರೋಪ ಸಮಾರಂಭ'ದಲ್ಲಿ ಡಾ| ಡಿ. ಸದಾಶಿವ ಭಟ್ ಪಳ್ಳು ಅವರಿಗೆ 2026 ನೇ ಸಾಲಿನ 'ಯಕ್ಷಾಂಗಣ ಗೌರವ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಗುವುದು.
