
Article · September 5, 2026
ಆದರ್ಶ ಶಿಕ್ಷಕರಾಗಿ ಸ್ಮರಣೀಯರಾದ ಶ್ರೀ ತ್ರಿಯಂಬಕ ಸ್ವಾದಿ
- ಸುಜಾತ ಶ್ರೀನಿವಾಸ
ತ್ರಿಯಂಬಕ ಸ್ವಾದಿ ಶಿಕ್ಷಕರಾಗಿ ಶಿರಸಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಶ್ರೀಯುತರು ಶಿರಸಿ ತಾಲೂಕು ಆಲೆಸರ ಹಳ್ಳಿಯ ಶ್ರೀ ಕಮಲಾಕರ ಸ್ವಾದಿ ಹಾಗೂ ಶ್ರೀಮತಿ ಅನ್ನಪೂರ್ಣ ದಂಪತಿಯ ಹಿರಿಯ ಪುತ್ರರಾಗಿದ್ದರು. ಜನವರಿ 6, 1934 ಇವರು ಜನಿಸಿದರು, ಹಾಗೂ 90 ವರ್ಷ ಪೂರ್ಣ ಜೀವನ ನಡೆಸಿ 9 ಡಿಸೆಂಬರ್,2025 ರಂದು ನಿಧನರಾದರು. ಕೃಷಿ ಹಿನ್ನೆಲೆಯ ಕುಟುಂಬದಿಂದ ಬಂದಿದ್ದರು ಇವರ ಆಸಕ್ತಿ ವಿದ್ಯಾಭ್ಯಾಸದ ಕಡೆಗಿತ್ತು. ಪ್ರಾಥಮಿಕ ಶಿಕ್ಷಣವನ್ನು ಶಿರಸಿಯ ರಾಯಪ್ಪ ಹುಲೇಕಲ್ ಶಾಲೆಯಲ್ಲಿ, ಹಾಗೂ ಪ್ರೌಢಶಿಕ್ಷಣವನ್ನು ಮಾರಿಕಾಂಬಾ ಶಾಲೆಯಲ್ಲಿ ಪೂರೈಸಿ ಅಂದಿನ SSLC ಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಹೆಚ್ಚಿನ ವ್ಯಾಸಂಗಕ್ಕೆ ಪುಣೆ ಶಹರಕ್ಕೆ ತೆರಳಿದರು. ಅಂದಿನ/ಇಂದಿನ ಹೆಸರಾಂತ ಮಹಾವಿದ್ಯಾಲಯದಲ್ಲಿ ಒಂದಾದ ಫರ್ಗ್ಯುಸನ್ ಕಾಲೇಜಿನಿಂದ B Sc ಮುಗಿಸಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ
B Ed ಶಿಕ್ಷಣ ಪೂರೈಸಿದರು ಶಿಕ್ಷಣ ಪ್ರೇಮಿಯಾದ್ದರಿಂದ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡು 1961-62 ರಲ್ಲಿ ಶಿರಸಿಯ ಆವೆ ಮರಿಯಾ ಪ್ರೌಢಶಾಲೆಯಲ್ಲಿ ಸ್ವಲ್ಪ ಸಮಯ ಶಿಕ್ಷಕ ಸೇವೆ ಸಲ್ಲಿಸಿ, ನಂತರ 1963 ರಲ್ಲಿ ಪ್ರೋಗ್ರೆಸಿವ್ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಮುಂದುವರೆಸಿ 1992ರಲ್ಲಿ ನಿವೃತ್ತರಾದರು. 30 ವರ್ಷಗಳ ಕಾಲ ನಿರಂತರವಾಗಿ ಒಂದೇ ಸಂಸ್ಥೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ ಶ್ರೇಯಸ್ಸು ಇವರದ್ದು. ಗಣಿತ ಹಾಗೂ ವಿಜ್ಞಾನ ಶಿಕ್ಷಕರಾಗಿ, ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದರು. ಪಾಠ ಅರ್ಥವಾಗಿಲ್ಲ ಎಂದ ವಿದ್ಯಾರ್ಥಿಗಳಿಗೆ ಶಾಲೆ ಬಿಟ್ಟ ನಂತರ ಮನೆ ಪಾಠಕ್ಕೆ ಕರೆದು ಅವರಿಗೆ ಮನದಟ್ಟು ಮಾಡುತ್ತಿದ್ದರು. ಈ ಸೇವೆಯು ಸಂಪೂರ್ಣ ಉಚಿತವಾಗಿ ಮಾಡಿದ್ದರು. ಇವರು ಸಿಟ್ಟಿನಿಂದ ಯಾವ ವಿದ್ಯಾರ್ಥಿ ಮೇಲೂ ಕೈ ಎತ್ತಿದ ನಿದರ್ಶನಗಳಿಲ್ಲ. ಹಳೇ ವಿದ್ಯಾರ್ಥಿ ಸಂಘದಿಂದ 2022 ರಲ್ಲಿ ಇವರನ್ನು ಹುಡುಕಿಕೊಂಡು ಇವರ ಮಗಳ ಮನೆಗೆ(ಬೆಂಗಳೂರು) ಬಂದು ಗುರು ಸಮ್ಮಾನ ಕೂಡ ಸಲ್ಲಿಸಿದ್ದಾರೆ ಇವರ ನೆಚ್ಚಿನ ವಿದ್ಯಾರ್ಥಿ ವೃಂದದವರು. ಹಳೇ ವಿದ್ಯಾರ್ಥಿಗಳು ಇವರನ್ನ ಹುಡುಕಿಕೊಂಡು ಬಂದಾಗ ಇವರ ಆನಂದ ಹೇಳತೀರದು, ತುಂಬಾ ಸಂಭ್ರಮಿಸುತ್ತಾ, ಸಂತೋಷ ಪಡುತ್ತಿದ್ದರು.
ಅಚ್ಚು ಮೆಚ್ಚಿನ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ಕಲಿಸಿದ ನನ್ನ ತಂದೆಯ ಬಗ್ಗೆ ತುಂಬಾ ಹೆಮ್ಮೆ ಹಾಗು ಗೌರವವಿದೆ.
