
Article · March 26, 2026
ದೇಶ ಕಾಯುವ ಸೈನಿಕರು
- ಶ್ರೀದೇವಿ ಎಸ್ ಭಟ್ ಕಜಮಲೆ
ಪ್ರತೀಯೊಬ್ಬರಿಗೂ ಅವರವರ ದೇಶವೆಂದರೆ,ಅಭಿಮಾನವಿರಬಹುದು. ಭಾರತೀಯರಾದ ನಮಗೆ ಈ ಭಾರತವೆಂದರೆ ಅತ್ಯಂತ ಅಭಿಮಾನ. ಆದರೆ ದೇಶವೆಂದಾಗ, ಇಲ್ಲಿ ಪ್ರತಿಯೊಬ್ಬನ ಪಾತ್ರವಿದೆ. ಅಡುಗೆ ಮಾಡುವ ಅಮ್ಮನಿಂದ ಹಿಡಿದು, ದೇಶ ಕಾಯುವ ಸೈನಿಕರ ತನಕವೂ, ಇಲ್ಲಿ ಪ್ರತೀ ವ್ಯಕ್ತಿಯೂ ತಾನಿರುವ ಕ್ಷೇತ್ರದಲ್ಲಿ ದೇಶಕ್ಕಾಗಿ ತನ್ನ ಕೆಲಸಕಾರ್ಯಗಳನ್ನ ಸಮರ್ಪಕವಾಗಿ ನಿರ್ವಹಿಸಿದಾಗ ಮಾತ್ರ ದೇಶವು ಅಭಿವೃದ್ಧಿ ಹೊಂದಲು ಸಾಧ್ಯ, ಹಾಗೂ ಮುಂದಿನ ಪೀಳಿಗೆಯ ಏಳಿಗೆಗೋಸ್ಕರವೂ, ಭವಿಷ್ಯದಲ್ಲಿಯೂ ಇದು ಮುಂದುವರಿಯಬೇಕಿದೆ. ಹೀಗೇ ದೇಶ ಅಂತ ಬಂದಾಗ ಇಲ್ಲಿ ರೈತ ಹಾಗೂ
ಸೈನಿಕರು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರಿಬ್ಬರು ದೇಶದ ಎರಡು ಕಣ್ಣುಗಳಿದ್ದಂತೆ. ಆದರೆ ಇಲ್ಲಿ ರೈತ ಹಾಗೂ ಸೈನಿಕರಲ್ಲಿ ಯಾರು ಮೊದಲಿಗರು?.ಇದೊಂದು ವೃಕ್ಷ ಬೀಜ ನ್ಯಾಯವಾದರೂ ಇಲ್ಲಿ ಸೈನಿಕನಿಗೇ ಮೊದಲ ಆದ್ಯತೆ. ಯಾಕೆಂದರೆ, ಯಾವ ಸಮಯದಲ್ಲಾದರೂ ವೈರಿಗಳು ನಮ್ಮ ದೇಶವನ್ನ ಸುತ್ತುವರಿದು ಆಕ್ರಮಿಸಿದಾಗ, ದೇಶ ರಕ್ಷಣೆ ಮಾಡುವವರು ಇದೇ ಸೈನಿಕರು. ಹಗಲು ರಾತ್ರಿ ಎನ್ನದೆ, ನಿದ್ದೆಗೆಟ್ಟು, ಮೈಯೆಲ್ಲಾ ಕಣ್ಣಾಗಿಸಿಕೊಂಡು, ಕಣ್ಣಿಗೆ ಎಣ್ಣೆ ಬಿಟ್ಟಂತೆ, ಕಡಿದಾದ ಗುಡ್ಡ ಬೆಟ್ಟಗಳು, ಕಲ್ಲು ಬಂಡೆಗಳನ್ನ, ಎತ್ತರವಾದ ಪರ್ವತಗಳನ್ನ ದಾಟಿ ವೈರಿಗಳನ್ನ ಸದೆಬಡಿಯುವ ಕೆಲಸವೆಂದರೆ ಅದು ಸಾಮಾನ್ಯವಾದುದಲ್ಲ. ಅಲ್ಲದೇ ದೇಶರಕ್ಷಣೆಗಾಗಿ ತಮ್ಮ ಇಡೀ ಕುಟುಂಬವನ್ನ ಬಿಟ್ಟು ಬರುವುದೆಂದರೆ, ಇದೊಂದು ಯಾರೂ ಊಹಿಸಲಾಗದ ಘಟನೆ. ನಡೆದಾಗ, ಕಾಲಿಗೆ ಒಂದು ಸಣ್ಣ ಮುಳ್ಳು ಚುಚ್ಚಿದರೂ ಚೀರಾಡುವ ನಾವುಗಳು, ಈ ಸೈನಿಕರ ಪಾಡನ್ನು ಊಹಿಸಲೂ ಅಸಾಧ್ಯ. ದುಷ್ಟ ರಕ್ಕಸರೊಡನೆ ಹೋರಾಡಿದ ಅದೆಷ್ಟೋ ನಮ್ಮ ಸೈನಿಕರು ತಮ್ಮ ಅಂಗಾಂಗಗಳನ್ನ ಕಳೆದುಕೊಂಡಿದ್ದಾರೆ. ಹಾಗೂ ದೇಶದ ರಕ್ಷಣೆಗಾಗಿ ಅದೆಷ್ಟೋ ಸೈನಿಕರು ಜೀವತೆತ್ತಿದ್ದಾರೆ. ಈ ಕುಟುಂಬಕ್ಕೆ ದೇಶ ರಕ್ಷಣೆಯ ಸಂತಸ ಒಂದು ಕಡೆಯಾದರೆ, ಇವರ ಕುಟುಂಬದ ಕಣ್ಣೀರು ಇನ್ನೊಂದು ಕಡೆ. ಹೀಗೇ ದೇಶಕಾಯುವ ಸೈನಿಕರಿಗೇ ಇಲ್ಲಿ ಮೊದಲ ಆದ್ಯತೆ. ಇವರುಗಳು ದೇಶಕ್ಕಾಗಿ ಹೋರಾಡುವುದರಿಂದಲೇ ನಾವಿಂದು ನೆಮ್ಮದಿಯಾಗಿ, ನಿಟ್ಟುಸಿರು ಬಿಡಲು ಸಾಧ್ಯ. ದೇಶ ರಕ್ಷಣೆ ಮಾಡಲು ಈ ಸೈನಿಕನೆಂಬ ಶಕ್ತಿ ಇಲ್ಲವಾಗಿರುತ್ತಿದ್ದರೆ, ಶತ್ರುಗಳು, ನಮ್ಮ ದೇಶವನ್ನ ಕೊಳ್ಳೆಹೊಡೆದು ಬಲಾತ್ಕಾರದಿಂದ ಅತ್ಯಾಚಾರ, ಅನಾಚಾರಗಳು, ಮತಾಂತರ, ಹಾಗೂ ಇನ್ನಿತರ ದುಷ್ಕೃತ್ಯಗಳನ್ನ ಮಾಡಿ ಇಡೀ ದೇಶವನ್ನ ತಮ್ಮ ತೆಕ್ಕೆಗೆ ತೆಗೆದುಕೊಂಡು ರಾಜಾರೋಷವಾಗಿ ಮೆರೆದಾಡುತ್ತಿದ್ದರು. ಹೀಗಾಗಿ ದೇಶಕ್ಕಾಗಿ ಈ ಸೈನಿಕರ ತ್ಯಾಗ ಅನನ್ಯ. ನಮ್ಮ ಇಂದಿನ ಪ್ರಧಾನಿ ಕೂಡಾ ಸೈನಿಕರನ್ನ ಹುರಿದುಂಬಿಸಿ, ದೇಶದ ಗಮನ ಸೆಳೆಯುವ ಕೆಲಸವನ್ನ ಮಾಡುತ್ತಿದ್ದಾರೆ. ಹೀಗೇ ದೇಶ ಕಾಯುವ ಸೈನಿಕರಿಗೂ, ಅವರ ಕುಟುಂಬಕ್ಕೂ, ನಮ್ಮೆಲ್ಲರಿಗೂ ದೇವರು ಆರೋಗ್ಯ ಭಾಗ್ಯವನ್ನ ಕರುಣಿಸಲಿ. ಮುಂದೆ, ಎಂದೆಂದಿಗೂ ನಮ್ಮ ಭಾರತ ವಿಶ್ವಗುರುವಿನ ಸ್ಥಾನವನ್ನ ಅಲಂಕರಿಸಲಿ, ನಮ್ಮೆಲ್ಲರ ಮುಂದಿನ ಪೀಳಿಗೆಯ ಭವಿಷ್ಯ ಉಜ್ವಲವಾಗಿರಲಿ ಎಂಬುದೇ
ವಿನಮ್ರತೆಯ ಪ್ರಾರ್ಥನೆ.
ಜೈ ಹಿಂದ್, ಜೈ ಶ್ರೀರಾಮ್. 🙏🙏🙏
ಸರ್ವೇ ಜನಾ:ಸುಖಿನೋ ಭವಂತು: 🙏🙏🙏
Creative Writings
