
Article · July 7, 2026
ನಾಕದೆಡೆಗೆ ಸೇತುವೆ ದಾಟಿದ 'ಪದ್ಮಶ್ರೀ', 'ಸೇತುಬಂಧು' ಶ್ರೀ ಗಿರೀಶ್ ಭಾರದ್ವಾಜ್
.....'ಕರಾಡ ವಿಶ್ವ'ದ ಗೌರವ ಸಲಹೆಗಾರರಾಗಿದ್ದು ಹಲವಾರು ಮಹತ್ವದ ಸಲಹೆ ಸೂಚನೆಗಳನ್ನು ನೀಡುತ್ತಿದ್ದ ಹಸನ್ಮುಖಿ, ನಿಗರ್ವಿ ಶ್ರೀಯುತ ಪದ್ಮಶ್ರೀ ಗಿರೀಶ್ ಭಾರದ್ವಾಜ್ ಅವರ ನಿಧನಕ್ಕೆ ಇಡೀ ಕರಾಡ ವಿಶ್ವ ತಂಡ ಕಂಬನಿ ಮಿಡಿಯುತ್ತದೆ. ಭಾವಪೂರ್ಣ ಶ್ರದ್ಧಾಂಜಲಿ......
ಅಕ್ಷರ ನಮನ
ಗ್ರಾಮೀಣ ಭಾರತದ ಸಂಪರ್ಕ ಕ್ರಾಂತಿಯ ಹರಿಕಾರ, 'ಸೇತುಬಂಧು' (bridge man) ಎಂದೇ ಜಗತ್ಪ್ರಸಿದ್ಧರಾಗಿದ್ದ ಪದ್ಮಶ್ರೀ ಶ್ರೀ ಗಿರೀಶ್ ಭಾರದ್ವಾಜ್ ಅವರು ಇಂದು ನಿಧನರಾಗಿದ್ದಾರೆ. ಸಮಾಜಮುಖಿ ಚಿಂತನೆಯ, ಸರಳತೆಯ ಮತ್ತು ನಿಸ್ವಾರ್ಥ ಸೇವೆಯ ಒಂದು ಯುಗದ ಅಂತ್ಯವಾಗಿದೆ. ನದಿ, ತೊರೆಗಳಿಂದ ಕೂಡಿದ ಹಳ್ಳಿಗಾಡಿನ ಪ್ರದೇಶಗಳನ್ನು, ನೂರಾರು ಹಳ್ಳಿಗಳನ್ನು ತಮ್ಮ ತೂಗು ಸೇತುವೆಗಳ ಮೂಲಕ ಬೆಸೆದ ಆ ಮಹಾನ್ ಚೇತನ ಇಂದು ಇಹಲೋಕ ತ್ಯಜಿಸಿದೆ. ಅವರ ಬದುಕು, ಸಾಧನೆ, ಸಮಾಜಸೇವೆ ಮತ್ತು ಅವರು ಸಮಾಜಕ್ಕೆ ನೀಡಿದ ಅಪ್ರತಿಮ ಕೊಡುಗೆಗಳ ಒಂದು ಸಣ್ಣ ನೆನಪಿನ ಬುತ್ತಿ ಇಲ್ಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಜಗದ್ವಿಖ್ಯಾತ ಎಂಜಿನಿಯರ್ ಆಗಿದ್ದ ಗಿರೀಶ್ ಭಾರದ್ವಾಜ್ ಅವರು ಹುಟ್ಟಿದ್ದು ಬೆಳೆದದ್ದು ಎಲ್ಲವೂ ಗ್ರಾಮೀಣ ಪರಿಸರದಲ್ಲಿ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ನಂತರ ಅವರು ಪಟ್ಟಣದ ಐಷಾರಾಮಿ ಬದುಕನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಆದರೆ, ಅವರ ಮನಸ್ಸು ತುಡಿದದ್ದು ಗ್ರಾಮೀಣ ಜನರ ಕಷ್ಟಗಳಿಗೆ ಸ್ಪಂದಿಸಲು! ಮಳೆಗಾಲ ಬಂತೆಂದರೆ ಹಳ್ಳಿಗಳ ಜನರು, ಶಾಲಾ ಮಕ್ಕಳು ನದಿ ದಾಟಲು ಪಡುವ ಪಾಡನ್ನು ಅವರು ಕಣ್ಣಾರೆ ಕಂಡಿದ್ದರು. ಆಧುನಿಕ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಜ್ಞಾನವನ್ನು ಕೇವಲ ಕಾಗದದ ಮೇಲಷ್ಟೇ ಇಡದೆ, ಅದನ್ನು ತಳಮಟ್ಟದ ಜನರ ಬದುಕನ್ನು ಸುಗಮಗೊಳಿಸಲು ಬಳಸಬೇಕೆಂದು ಅವರು ನಿರ್ಧರಿಸಿದರು. ಇದೇ ಅವರ ಬದುಕಿನ ಮಹತ್ತರ ತಿರುವಿಗೆ ಕಾರಣವಾಯಿತು.
ಗಿರೀಶ್ ಭಾರದ್ವಾಜ್ ಎಂದರೆ ತಕ್ಷಣ ನೆನಪಿಗೆ ಬರುವುದು ತೂಗುಸೇತುವೆಗಳು. ಸರ್ಕಾರದ ಕೋಟ್ಯಂತರ ರೂಪಾಯಿ ವೆಚ್ಚದ ಬೃಹತ್ ಯೋಜನೆಗಳಿಗೆ ಪರ್ಯಾಯವಾಗಿ, ಅತ್ಯಂತ ಕಡಿಮೆ ವೆಚ್ಚದಲ್ಲಿ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಸುಲಭವಾಗಿ ನಿರ್ಮಿಸಬಹುದಾದ ತೂಗುಸೇತುವೆಗಳ ವಿನ್ಯಾಸವನ್ನು ಅವರು ರೂಪಿಸಿದರು.
ಮೊದಲ ಹೆಜ್ಜೆ: 1989ರಲ್ಲಿ ಸುಳ್ಯದ ಪಯಸ್ವಿನಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಮೊದಲ ತೂಗುಸೇತುವೆ ಇವರ ಯಶಸ್ಸಿನ ಪಯಣಕ್ಕೆ ಮುನ್ನುಡಿ ಬರೆಯಿತು.
ಸಾಧನೆಯ ಶಿಖರ: ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಒಡಿಶಾ ಸೇರಿದಂತೆ ಭಾರತದಾದ್ಯಂತ ಸುಮಾರು 150ಕ್ಕೂ ಹೆಚ್ಚು ತೂಗುಸೇತುವೆಗಳನ್ನು ಇವರು ಯಶಸ್ವಿಯಾಗಿ ನಿರ್ಮಿಸಿದ್ದಾರೆ.
ಸಂಪರ್ಕ ಕ್ರಾಂತಿ: ಇವರು ನಿರ್ಮಿಸಿದ ಸೇತುವೆಗಳು ಹರಿಯುವ ನೀರಿನ ನದಿ ತಟದ ಎರಡು ದಂಡೆಗಳ ನಡುವಿನ ಜನರ ಭಾವನಾತ್ಮಕ ಬೆಸುಗೆಯ ಬಂಧಗಳಾಗಿದ್ದವು. ಶಿಕ್ಷಣ, ವೈದ್ಯಕೀಯ ನೆರವು ಮತ್ತು ವ್ಯಾಪಾರಕ್ಕಾಗಿ ಹತ್ತಿರದ ಪಟ್ಟಣಗಳನ್ನು ಸೇರಲು ಈ ಸೇತುವೆಗಳು ಲಕ್ಷಾಂತರ ಜನರಿಗೆ ಆಸರೆಯಾದವು.
ಸರ್ಕಾರದ ನೆರವಿಗಾಗಿ ಕಾಯುತ್ತಾ ಕೂರದೆ, ಜನರ ಸಹಭಾಗಿತ್ವದೊಂದಿಗೆ ಕೆಲಸ ಮಾಡಿದರೆ ಎಂತಹ ದೊಡ್ಡ ಸಾಧನೆಯನ್ನಾದರೂ ಮಾಡಬಹುದು ಎಂಬುದನ್ನು ಗಿರೀಶ್ ಭಾರದ್ವಾಜ್ ಅವರು ನಿರೂಪಿಸಿದ್ದರು. ಅಪ್ರತಿಮ ಸಾಧನೆ ಮಾಡಿದರೂ ಗಿರೀಶ್ ಭಾರದ್ವಾಜ್ ಅವರು ಎಂದಿಗೂ ಅಹಂಕಾರ ಪಟ್ಟವರಲ್ಲ - ತುಂಬಿದ ಕೊಡ ತುಳುಕದು! ಅವರ ಸರಳತೆ, ಸೌಮ್ಯ ಸ್ವಭಾವ ಮತ್ತು ಸದಾ ನಗುವ ಮುಖ ಎಲ್ಲರನ್ನೂ ಆಕರ್ಷಿಸುತ್ತಿತ್ತು. ತಮಗೆ ಸಿಕ್ಕ ಪ್ರಚಾರ ಅಥವಾ ಪ್ರಶಸ್ತಿಗಳಿಗಿಂತಲೂ ಜನರ ಮುಖದಲ್ಲಿ ಮೂಡುವ ಸಂತಸವೇ ತಮಗೆ ಸಾವಿರ ಪಾಲು ದೊಡ್ಡ ಬಹುಮಾನ ಎಂದು ಅವರು ನಂಬಿದ್ದರು.
ಸೇತುವೆ ನಿರ್ಮಾಣದ ಜಾಗದಲ್ಲಿ ಅವರು ಸ್ಥಳೀಯ ಕಾರ್ಮಿಕರ ಜೊತೆ ಕುಳಿತು ಊಟ ಮಾಡುತ್ತಿದ್ದರು, ಅವರಲ್ಲೊಬ್ಬರಾಗಿ ಶ್ರಮಿಸುತ್ತಿದ್ದರು. ಯಾವುದೇ ಹಳ್ಳಿಗೆ ಹೋದರೂ ಅಲ್ಲಿನ ಜನರ ಪ್ರೀತಿಯ 'ಗಿರೀಶಣ್ಣ' ಆಗಿಬಿಡುತ್ತಿದ್ದರು! ಕಳಂಕ ರಹಿತ, ಪ್ರಾಮಾಣಿಕ ಮತ್ತು ಉತ್ಕೃಷ್ಟ ಕೆಲಸಕ್ಕೆ ಅವರು ಹೆಸರಾಗಿದ್ದರು. ಹಣ ಗಳಿಸುವುದು ಅವರ ಉದ್ದೇಶ ಆಗಿರದೆ, ಜನರ ಕಣ್ಣೀರನ್ನು ಒರೆಸುವ ಮತ್ತು ಹಳ್ಳಿಗಾಡಿನ ಜನರ ಅಗತ್ಯವಾದ ಸಂಪರ್ಕ ಕೊಂಡಿಗಳನ್ನು ನಿರ್ಮಿಸುವುದೇ ಅವರ ಪರಮ ಧೇಯವಾಗಿತ್ತು.
ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಭಾರತ ಸರ್ಕಾರವು 2017ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಪ್ರಶಸ್ತಿ ಬಂದಾಗಲೂ ಅವರು, 'ಇದು ನನ್ನೊಬ್ಬನ ಸಾಧನೆಯಲ್ಲ, ನನ್ನ ಜೊತೆ ಶ್ರಮಿಸಿದ ಕಾರ್ಮಿಕರು ಮತ್ತು ಗ್ರಾಮಸ್ಥರ ಶ್ರಮಕ್ಕೆ ಸಂದ ಗೌರವ' ಎಂದು ಹೇಳುವ ಮೂಲಕ ತಮ್ಮ ವಿನಮ್ರತೆಯನ್ನು, ಬದುಕಿನ ಸಾರ್ಥಕತೆಯನ್ನು ಮೆರೆದಿದ್ದರು. ಜನರು ಪ್ರೀತ್ಯಾದರಗಳಿಂದ ಇವರನ್ನು ಭಾರತದ ಸೇತುವೆಗಳ ಸರದಾರ (Bridge Man of India) ಎಂದು ಕರೆಯುತ್ತಾರೆ.
ನನಗಿನ್ನೂ ನೆನಪಿದೆ! ಶ್ರೀಯುತರಿಗೆ ಪದ್ಮ ಪ್ರಶಸ್ತಿ ಘೋಷಣೆಯಾದಾಗ ಅಭಿನಂದನೆ ಸಲ್ಲಿಸಲು ಸಾಯಂಕಾಲ ಏಳೂವರೆ ಅಂದಾಜು ಫೋನಾಯಿಸಿದ್ದೆ. ತುಂಬಾ ವಿನಮ್ರತೆಯಿಂದ ನನ್ನ ಅಭಿನಂದನೆ ಸ್ವೀಕರಿಸಿದರು ಮತ್ತು ತಾನು ಅಲ್ಲೆಲ್ಲೊ ಹಳ್ಳಿಯ ಕಾಡಿನ ಮಧ್ಯೆ ಒಂದು ತೂಗು ಸೇತುವೆಯ ಕಾರ್ಯದಲ್ಲಿ ನಿರತರಾಗಿದ್ದೇನೆ ಮತ್ತು ಇಲ್ಲಿ ನೆಟ್ವರ್ಕ್ ಸಮಸ್ಯೆ ಇದೆ ಕ್ಷಮಿಸಿ ಎಂದು ಸರಳತೆ ಮೆರೆದಿದ್ದರು. ಅವರ ಕೆಲಸ ಮತ್ತು ಸಾಧನೆ ಮಾತನಾಡುತ್ತಿತ್ತು! ಸಂದ ಬಿರುದು ಸನ್ಮಾನಗಳನ್ನು ಸ್ವೀಕರಿಸಿ, ಇನ್ನಷ್ಟು ಮತ್ತಷ್ಟು ಹುರುಪಿನಿಂದ ಜನಸೇವೆಗೆ ಅಣಿಯಾಗುತ್ತಿದ್ದ ಅಪರೂಪದ ವ್ಯಕ್ತಿ-ವ್ಯಕ್ತಿತ್ವ!
ಇತ್ತೀಚೆಗೆ ಬಂಧು ಮಿತ್ರರೊಡನೆ ಸೇರಿ ಉತ್ತರಭಾರತದ ಪ್ರವಾಸ ಮುಗಿಸಿ ವಾಪಸಾಗಿದ್ದರು. ಹಠಾತ್ ಆರೋಗ್ಯದಲ್ಲಿ ಏರುಪೇರಾಗಿ ನಿಧನರಾದರು. ಗಿರೀಶ್ ಭಾರದ್ವಾಜ್ ಅವರು ಇಂದು ದೈಹಿಕವಾಗಿ ನಮ್ಮನ್ನು ಅಗಲಿದರೂ ಅವರು ನಿರ್ಮಿಸಿದ ನೂರಾರು ಸೇತುವೆಗಳು, ಅವುಗಳ ಮೇಲೆ ಪ್ರತಿದಿನ ನಡೆದಾಡುವ-ಓಡಾಡುವ ಲಕ್ಷಾಂತರ ಜನರ ಹೆಜ್ಜೆಗುರುತುಗಳು ಮತ್ತು ಕೃತಜ್ಞತಾ ಭಾವಗಳು ಅವರನ್ನು ಸದಾ ಜೀವಂತವಾಗಿಡುತ್ತವೆ. ನದಿ ದಾಟಲು ದೋಣಿಯನ್ನೋ, ತೆಪ್ಪವನ್ನೋ ಕಾಯುತ್ತಿದ್ದ, ಸದಾ ಭೀತಿಯಿಂದ ನೀರಿನ ತೊರೆಗಳನ್ನು ದಾಟುತ್ತಿದ್ದ ಹಳ್ಳಿಯ ಜನರಿಗೆ ಧೈರ್ಯ ಮತ್ತು ಸ್ವಾತಂತ್ರ್ಯ ತಂದುಕೊಟ್ಟ ಮಹಾಶಿಲ್ಪಿ.
ಗಿರೀಶಣ್ಣನವರ ನಿಸ್ವಾರ್ಥ ಬದುಕು ಯುವ ಎಂಜಿನಿಯರ್‌ಗಳಿಗೆ ಮತ್ತು ಇಡೀ ಸಮಾಜಕ್ಕೆ ಒಂದು ದಾರಿದೀಪ. ತಂತ್ರಜ್ಞಾನವನ್ನು ಮಾನವೀಯತೆಯೊಂದಿಗೆ ಬೆಸೆದ ಆ ಮಹಾ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿಗಳು. ಅವರ ಆತ್ಮಕ್ಕೆ ಸದ್ಗತಿ ದೊರಕಲಿ, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ.
ಶ್ರೇಷ್ಠ ಜನಸೇವಾ ಪರಂಪರೆಯನ್ನು ಹಾಕಿಕೊಟ್ಟ ದಾರ್ಶನಿಕರು ನೀವು. ಸಮಾಜ ಸದಾಕಾಲ ನಿಮ್ಮ ನೆನಪನ್ನು ಇಡಲಿದೆ. ನೀವು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗುವೆವು. ಹೋಗಿ ಬನ್ನಿ.
ಓಂ ಶಾಂತಿ ಶಾಂತಿ ಶಾಂತಿಃ 🙏🏻
--ರವೀ ಸಜಂಗದ್ದೆ
(ಕರಾಡ ವಿಶ್ವ )

