Karada Vishwa

News · November 21, 2026

ಕರಾಡ ಬ್ರಾಹ್ಮಣ ಸಭಾ (ರಿ), ಮೈಸೂರು - ವಾರ್ಷಿಕ ಸಂಭ್ರಮ 2026

ಕಾರ್ಯದರ್ಶಿ, ಕಬ್ರಾಸ, ಮೈಸೂರು

ಮಾನ್ಯರೇ,

ಕರಾಡ ಬ್ರಾಹ್ಮಣ ಸಭಾ (ರಿ), ಮೈಸೂರು, ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ), ಅಗಲ್ಪಾಡಿ ಮತ್ತು ಕರಾಡ ಸುವರ್ಣ ಸಂಭ್ರಮ ಸಮಿತಿ 2026 ಇವುಗಳ ಸಂಯುಕ್ತ ಆಶ್ರಯದಲ್ಲಿ ವಾರ್ಷಿಕ ಸಂಭ್ರಮ 2026 ಬಹಳ ವಿಜೃಂಭಣೆಯಿಂದ ನಡೆಯಿತು.

ಬಬ್ಬೂರು ಕಮ್ಮೆ ಸಂಘದ ವಿದ್ಯಾರ್ಥಿ ನಿಲಯ, ಸರಸ್ವತಿಪುರಂ, ಮೈಸೂರು ಇಲ್ಲಿ ದಿನಾಂಕ 14.11.2026 ರಂದು ಸಂಜೆ 5.30 ಕ್ಕೆ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಶುಭಾರಂಭವಾಯಿತು. ಶ್ರೀ ವಿಘ್ನೇಶ ಭಟ್ ಸಜಂಕಿಲ ಇವರ ಪೌರೋಹಿತ್ಯದಲ್ಲಿ ಶ್ರೀ ಶ್ರೀನಿಧಿ ಮತ್ತು ಶ್ರೀಮತಿ ದಿವ್ಯಾ, ನಡುಮನೆ ದಂಪತಿಗಳು ಪೂಜೆ ನೆರವೇರಿಸಿದರು. ಕರಾಡ ಬಂಧುಗಳ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣದೊಂದಿಗೆ 7.30 ಗಂಟೆಗೆ ಮಹಾಮಂಗಳಾರತಿ ನಡೆಯಿತು. ತೀರ್ಥ ಪ್ರಸಾದದ ನಂತರ ಕರಾಡ ಶೈಲಿಯ ಕೊಟ್ಟಿಗೆ, ವಿರ್ಸ, ಚಟ್ನಿ ಮತ್ತು ಪಾಯಸವನ್ನು ರಾತ್ರಿಯ ಭೋಜನದಲ್ಲಿ ವ್ಯವಸ್ಥೆ ಮಾಡಲಾಯಿತು. ಸುಮಾರು 120 ಕರಾಡ ಬಂಧುಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

ಮರುದಿನ ದಿನಾಂಕ 15.11.2026 ರಂದು ಬೆಳಗ್ಗೆ 6.30 ಗಂಟೆಗೆ ಶ್ರೀ ವಿಘ್ನೇಶ ಭಟ್ ಸಜಂಕಿಲ ಇವರ ಪೌರೋಹಿತ್ಯದಲ್ಲಿ ಗಣಹೋಮ ನಡೆಯಿತು. 8 .00 ಗಂಟೆಗೆ ಪೂರ್ಣಾಹುತಿಯ ನಂತರ ರುಚಿಕರವಾದ ಉಪಾಹಾರದ ವ್ಯವಸ್ಥೆ ಮಾಡಲಾಯಿತು. ಸುಮಾರು 80 ಜನ ಕರಾಡ ಬಂಧುಗಳು ಉಪಸ್ಥಿತರಿದ್ದರು.

ಬೆಳಗ್ಗೆ 9.30 ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ಶ್ರೀ ಕೃಷ್ಣ ಮೋಹನ ಐಲುಕುಂಜೆ, ಅಧ್ಯಕ್ಷರು, ಕರಾಡ ಬ್ರಾಹ್ಮಣ ಸಭಾ (ರಿ), ಮೈಸೂರು ಇವರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ರಮಾನಂದ ಎಡಮಲೆ, ಅಧ್ಯಕ್ಷರು, ಶ್ರೀ ಗಣೇಶ್ ಚೇರ್ಕೂಡ್ಲು, ಕಾರ್ಯದರ್ಶಿ, ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ), ಅಗಲ್ಪಾಡಿ; ಶ್ರೀ ಶಿವಕುಮಾರ ಶಾಂತಿಯಡಿ, ಪ್ರಧಾನ ಕಾರ್ಯದರ್ಶಿ, ಕರಾಡ ಸುವರ್ಣ ಸಂಭ್ರಮ 2026 ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿಶೇಷ ಉಪನ್ಯಾಸ ನೀಡಲು ಶ್ರೀ ಡಾ. ಪ್ರದೀಪ ಆಟಿಕುಕ್ಕೆ, ಆರೋಗ್ಯ ಕ್ಲಿನಿಕ್, ನಾವೂರು, ಬೆಳ್ತಂಗಡಿ ತಾಲ್ಲೂಕು ಉಪಸ್ಥಿತರಿದ್ದರು.

ಕುಮಾರಿ ಶರಣ್ಯ ಜಿ. ಭಟ್ ದೈತೋಟ ಇವರ ದೇವತಾ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭವಾಯಿತು. ವೇದಿಕೆಯ ಮೇಲೆ ಇದ್ದ ಗಣ್ಯರು ಮತ್ತು ‘ಸಭಾ’ ದ ಪದಾಧಿಕಾರಿಗಳು ದೀಪ ಪ್ರಜ್ವಲಿಸಿದಾಗ ವೇದಿಕೆಯ ಎರಡೂ ಕಡೆಗಳಿಂದ ಶ್ರೀ ಗೋವಿಂದ ಕೃಷ್ಣ ದೈತೋಟ ಮತ್ತು ಶ್ರೀ ಶ್ರೀವತ್ಸ ಶಂಖನಾದ ಮೊಳಗಿಸುವುದರೊಂದಿಗೆ ಶುಭಾರಂಭ ನೀಡಿದರು. ನಂತರ ಶ್ರೀ ವಿಘ್ನೇಶ ಭಟ್ ಸಜಂಕಿಲ ಇವರಿಂದ ವೇದಘೋಷ ನಡೆಯಿತು. ಸಭೆಗೆ ಆಗಮಿಸಿದ ಗಣ್ಯರು, ಹಾಗೂ ಬಂಧುಗಳನ್ನು ಶ್ರೀ ನಾಗರಾಜ ಕಜಂಪಾಡಿ ಇವರು ಆತ್ಮೀಯವಾಗಿ ಸ್ವಾಗತಿಸಿದರು. ಮೈಸೂರಿನಲ್ಲಿ 2005 ರಲ್ಲಿ ಕರಾಡ ಬ್ರಾಹ್ಮಣ ಸಭಾ ಪ್ರಾರಂಭವಾಗಿ ಇದುವರೆಗೆ ನಡೆದು ಬಂದ ಹಾದಿಯನ್ನು ಶ್ರೀ ಸತ್ಯನಾರಾಯಣ ಭಟ್, ಆನೆಮಜಲು ಇವರು ಸಂಕ್ಷಿಪ್ತವಾಗಿ ಪ್ರಸ್ತಾಪಿಸಿದರು. ಆನಂತರ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮೈಸೂರಿನ ವ್ಯಾಪ್ತಿಯಲ್ಲಿ ನಿಧನ ಹೊಂದಿದ ಕರಾಡ ಬಂಧುಗಳಿಗೆ ಒಂದು ನಿಮಿಷದ ಮೌನದೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು

ಶ್ರೀ ರಮಾನಂದ ಎಡಮಲೆ ಇವರು ಕರಾಡ ಬ್ರಾಹ್ಮಣ ಅಭ್ಯುದಯ ಸಂಘ ಸಾಗಿ ಬಂದ ಹಾದಿಯ ಬಗ್ಗೆ ಪ್ರಸ್ತಾಪಿಸುತ್ತಾ, ಕೈಗೊಂಡ ಕಾರ್ಯಗಳು ಹಾಗೂ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿ ಕೈಗೊಳ್ಳುತ್ತಿರುವ ಕೆಲಸಗಳಿಗೆ ಕರಾಡ ಬಂಧುಗಳು ಸಹಕರಿಸುವಂತೆ ವಿನಂತಿಸಿದರು. ಕರಾಡರ ಸ್ವಾಭಿಮಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ನಾವು ಶೂನ್ಯದಿಂದ ಈ ಹಂತಕ್ಕೆ ಬೆಳೆದು ನಿಲ್ಲಲು ಸಾಧ್ಯವಾದುದರ ಬಗ್ಗೆ ವಿವರಿಸಿದರು. ನಂತರ ಶ್ರೀ ಗಣೇಶ್ ಚೇರ್ಕೂಡ್ಲು ಮತ್ತು ಶ್ರೀ ಶಿವಕುಮಾರ ಶಾಂತಿಯಡಿ ಸಂದರ್ಭೋಚಿತವಾಗಿ ತಮ್ಮ ಅನಿಸಿಕೆಗಳನ್ನು ಸಭೆಯ ಮುಂದಿಟ್ಟರು.

ನಂತರ ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ), ಅಗಲ್ಪಾಡಿ ವತಿಯಿಂದ ಕರಾಡ ಬ್ರಾಹ್ಮಣ ಅಭ್ಯುದಯ ಸಂಘದ ಪ್ರಾರಂಭದ ದಿನಗಳಲ್ಲಿ ಒತ್ತಾಸೆಯಾಗಿ ನಿಂತು ಸಂಘಕ್ಕೊಂದು ರೂಪು ಕೊಟ್ಟು ಅದರ ಬೆಳವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಈಗ ಮೈಸೂರಿನಲ್ಲಿ ನೆಲೆಸಿರುವ ಹಿರಿಯ ಸದಸ್ಯರಾದ ಶ್ರೀ ಸೀತಾರಾಮ ಭಟ್ ಎಡಮಲೆ ಅವರನ್ನು ಅಭಿಮಾನಪೂರ್ವಕ ಸನ್ಮಾನಿಸಲಾಯಿತು. ಅದೇ ಸಂದರ್ಭದಲ್ಲಿ ಶ್ರೀಯುತರನ್ನು ಕರಾಡ ಬ್ರಾಹ್ಮಣ ಸಭಾ, ಮೈಸೂರು ವತಿಯಿಂದಲೂ ಸನ್ಮಾನಿಸಲಾಯಿತು.

ಕರಾಡ ಬ್ರಾಹ್ಮಣ ಸಭಾ, ಮೈಸೂರು ಆರಂಭವಾದ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದ್ದ ಶ್ರೀ ಪಿಲಿಂಗಲ್ಲು ಕೃಷ್ಣ ಭಟ್; ‘ಸಭಾ’ ಪ್ರಾರಂಭವಾದಾಗಿನಿಂದ ಸುಮಾರು18 ವರ್ಷಗಳ ಕಾಲ ಕೋಶಾಧಿಕಾರಿಯಾಗಿ ಸಂಘದ ಹಣಕಾಸಿನ ವ್ಯವಹಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಶ್ರೀ ಸಜಂಕಿಲ ಕೃಷ್ಣ ಭಟ್; ‘ಸಭಾ’ ಪ್ರಾರಂಭವಾದ ದಿನ ನಮ್ಮ ಮೇಲಿನ ಅಭಿಮಾನದಿಂದ ಉಪಸ್ಥಿತರಿದ್ದ ಹಾಗೂ ಇವತ್ತು ಸಹ ಸಭಾದ ಮೇಲಿನ ಪ್ರೀತಿಯಿಂದ ಆಗಮಿಸಿರುವ ಶ್ರೀ ಕೊಟ್ಟಂಗೂಳಿ ಮಾಧವ ಭಟ್, ಕರಾಡ ಬ್ರಾಹ್ಮಣ ಅಭ್ಯುದಯ ಸಂಘ, ಅಗಲ್ಪಾಡಿ ಮತ್ತು ಕರಾಡ ಸುವರ್ಣ ಸಂಭ್ರಮ 2026 ರ ಪದಾಧಿಕಾರಿಗಳಾದ ಶ್ರೀ ರಮಾನಂದ ಎಡಮಲೆ, ಶ್ರೀ ಗಣೇಶ್ ಚೇರ್ಕೂಡ್ಲು, ಶ್ರೀ ಶಿವಶಂಕರ ಶಾಂತಿಯಡಿ ರವರನ್ನು ಕರಾಡ ಬ್ರಾಹ್ಮಣ ಸಭಾ, ಮೈಸೂರು ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ), ಅಗಲ್ಪಾಡಿ ಇದರ ಸುವರ್ಣ ಸಂಭ್ರಮದ ಶುಭ ಅವಸರದಲ್ಲಿ ‘ಸಭಾ’ದ ವತಿಯಿಂದ ₹25000/- ಗಳ ಚೆಕ್ ನ್ನು ಕೋಶಾಧಿಕಾರಿ ಶ್ರೀ ಶ್ರೀಧರ ಭಟ್ ಪಾದೂರುರವರು "ಅಭ್ಯುದಯ ಸಂಘ" ಕ್ಕೆ ನೀಡಿ ಶುಭ ಹಾರೈಸಿದರು.

ಕರಾಡ ಬ್ರಾಹ್ಮಣ ಸಭಾ, ಮೈಸೂರು ಇದರ ಉದ್ಘಾಟನ ಸಮಾರಂಭದಲ್ಲಿ ದೀಪ ಬೆಳಗಿಸಿ ಶುಭ ಹಾರೈಸಿದ್ದ ಶ್ರೀ ಚಂದ್ರಹಾಸ ಕನ್ನಡ್ಕ, ಶ್ರೀ ರಂಗ ಶರ್ಮಾ ಉಪ್ಪಂಗಳರವರಿಗೆ ಅವರ ಅನುಪಸ್ಥಿತಿಯಲ್ಲಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಯಿತು.

ನಂತರ 2024-25 ಮತ್ತು 2025-26 ನೇ ಸಾಲಿನಲ್ಲಿ ವಿವಿಧ ತರಗತಿಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಒಟ್ಟು 15 ವಿದ್ಯಾರ್ಥಿಗಳನ್ನು, ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ 4 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ವಾರ್ಷಿಕ ಸಂಭ್ರಮ 2026ರ ಅಂಗವಾಗಿ ಶ್ರೀ ಮಹೇಶ್ ಜಿ ಘಾಟೆ ಇವರ ನೇತೃತ್ವದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಶ್ರೀ ಕೃಷ್ಣಮೋಹನ, ಐಲುಕುಂಜೆ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಯುವಜನಾಂಗವು ಸಂಘಟನೆಯೊಂದಿಗೆ ಕೈಜೋಡಿಸಿ ಮುಂದಾಳುತನವನ್ನು ವಹಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಶ್ರೀ ಡಾ. ಪ್ರದೀಪ ಆಟಿಕುಕ್ಕೆ ಇವರು ನಿತ್ಯ ಜೀವನದಲ್ಲಿ ಭಗವದ್ಗೀತೆ ಎಂಬ ವಿಷಯದ ಬಗ್ಗೆ ಉಪಯುಕ್ತ ಉಪನ್ಯಾಸ ನೀಡಿದರು. ಭಗವದ್ಗೀತೆಯ ಶ್ಲೋಕ ಮತ್ತು ಮಂಕುತಿಮ್ಮನ ಕಗ್ಗದ ಕಗ್ಗಗಳನ್ನು ಸಮೀಕರಿಸಿ ನಮ್ಮ ಜೀವನದಲ್ಲಿ ಜ್ಞಾನ ಯೋಗ, ಭಕ್ತಿ ಯೋಗ ಮತ್ತು ಕರ್ಮ ಯೋಗಗಳನ್ನು ನಿಜಾರ್ಥದಲ್ಲಿ ಶ್ರದ್ಧೆಯಿಂದ ಅಳವಡಿಸಿಕೊಂಡಲ್ಲಿ ಆತಂಕ ರಹಿತ ಜೀವನ ಸಾಧ್ಯ ಎಂದರು. ಪ್ರತಿ ಮನೆಯಲ್ಲಿ ಪ್ರತಿ ದಿನ ಭಗವದ್ಗೀತೆಯ ಕನಿಷ್ಠ 10 ಶ್ಲೋಕಗಳು, ಕಗ್ಗದ ನಾಲ್ಕಾರು ಕಗ್ಗಗಳನ್ನು ಪಠಣ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು. ಶ್ರೀ ಡಾ. ಪ್ರದೀಪ ಆಟಿಕುಕ್ಕೆ ರವರನ್ನು ‘ಸಭಾ’ದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಪ್ರತಿ ಹಿಂದೂ ಮನೆಯಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಂದರ್ಭದಲ್ಲಿ ಶಂಖನಾದ ಮಾಡುವುದರ ಮೂಲಕ ದುಷ್ಟ ಶಕ್ತಿಗಳನ್ನು ದೂರ ಮಾಡುವುದರೊಂದಿಗೆ ನಮ್ಮ ಶ್ವಾಸಕೋಶ, ಹೃದಯದ ಆರೋಗ್ಯವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ ನಾವೂರು ಶ್ರೀ ಗೋಪಾಲಕೃಷ್ಣ ಸೇವಾ ಟ್ರಸ್ಟ್ (ರಿ) ಆರಂಭಿಸಿರುವ ಮನೆ ಮನೆಗೆ ಪಾಂಚಜನ್ಯ ಯೋಜನೆಗೆ ಕರಾಡ ಬ್ರಾಹ್ಮಣ ಸಭಾ, ಮೈಸೂರು ವತಿಯಿಂದ 5 ಶಂಖಗಳನ್ನು ಟ್ರಸ್ಟ್‌ನ ಶ್ರೀ ಗಣೇಶ್, ನಾವೂರು ರವರಿಗೆ ಹಸ್ತಾಂತರಿಸಲಾಯಿತು.

ಶ್ರೀ ರಾಜಾರಾಮ ಚೋಕೆಮೂಲೆ ಇವರು ಎಲ್ಲರಿಗೂ ಧನ್ಯವಾದ ಸಮರ್ಪಿಸುವುದರೊಂದಿಗೆ ಪೂರ್ವಾಹ್ನದ ಕಾರ್ಯಕ್ರಮಗಳಿಗೆ ತೆರೆ ಬಿತ್ತು.

ತಮ್ಮ ಸುಮಧುರ ಮಾತುಗಳು ಹಾಗೂ ಅಚ್ಚುಕಟ್ಟಾದ ನಿರೂಪಣೆಯ ಮೂಲಕ ಶ್ರೀಮತಿ ಶುಭಾ ಮುರಳೀಧರ್ ನಡುಮನೆ ಇವರು ಇಡೀ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ಮಧ್ಯಾಹ್ನ 1 .00 ಗಂಟೆಗೆ ಸರಿಯಾಗಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಶ್ರೀ ರಾಧಾಕೃಷ್ಣ ಭಟ್, ದೈತೋಟರವರ ನಳಪಾಕ ಎಲ್ಲರೂ ಖುಷಿ ಖುಷಿಯಾಗಿ ಹೊಟ್ಟೆ ತುಂಬ ಊಟ ಮಾಡುವಂತೆ ಮಾಡಿದ್ದು ಸುಳ್ಳಲ್ಲ.

ಭೋಜನಾ ನಂತರ 2.30 ಕ್ಕೆ ಸರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾದವು. ಮಕ್ಕಳ ಹಾಡು, ಏಕಪಾತ್ರಾಭಿನಯ, ವಾದ್ಯ ಸಂಗೀತ, ನೃತ್ಯ, ಭರತ ನಾಟ್ಯ, ಕರಾಡ ಗಾಂದ್ರ, ಎಲ್ಲವೂ ಅದ್ಭುತವಾಗಿ ಮೂಡಿಬಂದವು. ಶ್ರೀಮತಿ ಅಮೃತಾ ದಂಡೆಪ್ಪಾಡಿಯವರ ನಿರ್ದೇಶನದಲ್ಲಿ ಕರಾಡ ಮಹಿಳೆಯರು ಪ್ರದರ್ಶಿಸಿದ ನೃತ್ಯವೂ ಸಹ ಉತ್ತಮ ಮನರಂಜನೆ ನೀಡಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿ, ನಿರೂಪಿಸಿ ಪ್ರಸ್ತುತ ಪಡಿಸಿದ ಶ್ರೀಮತಿ ದೇವಿಕಾ ಮಠದಮೂಲೆ, ಚಂದ್ರಲೇಖಾ ಗದ್ದೆಮನೆ ಮತ್ತು ಅವರೊಂದಿಗೆ ಸಹಕರಿಸಿದವರ ಎಲ್ಲರ ಉತ್ಸಾಹ ಪರಿಶ್ರಮವು ಮೆಚ್ಚುವಂತಹದು. ಮಕ್ಕಳು ಮಹಿಳೆಯರು ಪುರುಷರೆನ್ನದೆ ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ತೋರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಒಟ್ಟಿನಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ನಮ್ಮ ಮುಂದಿನ ಹೆಜ್ಜೆಗಳಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿವೆ.

ಸಂಜೆ 5.00 ಗಂಟೆಗೆ ಬಿಸಿ ಬಿಸಿ ಗೋಳಿಬಜೆ, ಚಹಾ, ಕಾಫಿ ಮತ್ತೆ ಚುರುಗುಟ್ಟಲು ಆರಂಭಿಸಿದ್ದ ಉದರಕ್ಕೆ ಸಾಂತ್ವನ ಹೇಳಿತು.

‘ಸಭಾ’ದ ವತಿಯಿಂದ ಈ ರೀತಿಯ ಉತ್ತಮ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಶ್ರೀ ರಮಾನಂದ ಎಡಮಲೆರವರು ಅಭಿನಂದನೆ ಸಲ್ಲಿಸಿ, ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಈ ಮೊದಲೇ ನಿರ್ಧರಿಸಿದ್ದಂತೆ ಪ್ರತಿ ಮನೆಗೆ ಒಂದರಂತೆ ಒಂದು ಪುಸ್ತಕ ಹಾಗೂ ಒಂದು ಬ್ಯಾಗ್ ನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಂತಿಮ ಭಾಗವಾಗಿ ಭಾಗವಹಿಸಿದ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸುವುದರೊಂದಿಗೆ ಎರಡು ದಿನಗಳ ವಾರ್ಷಿಕ ಸಂಭ್ರಮ 2026 ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ಸುಮಾರು 180 ಜನರು ಭಾಗವಹಿಸಿದ್ದು, ಸಂಘಕ್ಕೆ ಹೊಸ ಚೈತನ್ಯ ಹಾಗೂ ದೊಡ್ಡ ಶಕ್ತಿಯನ್ನು ತುಂಬಿದೆ.

ಕರಾಡ ಬ್ರಾಹ್ಮಣ ಸಭಾ (ರಿ), ಮೈಸೂರು ಮತ್ತು ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ), ಅಗಲ್ಪಾಡಿ ಜೊತೆಯಾಗಿ ಇಂತಹ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ನೀಡುತ್ತಾ ಸಮಾಜ ಮುಖಿ ಚಿಂತನೆಗಳು ಇನ್ನಷ್ಟು ಬಲಿಷ್ಠಗೊಳ್ಳಲಿ ಎನ್ನುವ ಸದಾಶಯದೊಂದಿಗೆ ಪರಸ್ಪರ ಬೀಳ್ಕೊಟ್ಟೆವು.‌

Community