Karada Vishwa

Article · July 18, 2026

ಕಣ್ಣೀರಿನ ಭಾಷ್ಪಾಂಜಲಿ

--ವಿವೇಕ್ ಬೆಲ್ಲ

ಸಹಸ್ರಾರು ಜನರಿಗೆ ಊಟ ಹಾಕಿದ ಅನ್ನಪೂರ್ಣೆ ಸುಶೀಲಮ್ಮ ಮಾಣಿಮೂಲೆ ಇನ್ನಿಲ್ಲ ಎಂಬುದನ್ನು ಜೀರ್ಣಿಸಿಕೊಳ್ಳುವುದೇ ಅಸಾಧ್ಯ !

ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ಬೆಂಗಳೂರೆಂಬ ಮಾಯಾನಗರಕ್ಕೆ ಪದಾರ್ಪಣೆ ಮಾಡಿ ಕಷ್ಟಗಳನ್ನೆಲ್ಲ ಸಹಿಸಿ ಐವತ್ತೈದು ವರ್ಷಕ್ಕಿಂತ ಅಧಿಕ ಸಮಯ ರಾಜಧಾನಿಯಲ್ಲಿ ಜೀವನ ಸವೆಸಿರುವುದು ಸಣ್ಣ ಸಾಧನೆಯಲ್ಲ. ಕೇವಲ 100 ಚದರ ಅಡಿಯ ಮನೆಯಲ್ಲಿ ಮೂವರು ಮಕ್ಕಳೊಂದಿಗೆ ಬಹುಕಷ್ಟದಿಂದ ಜೀವಿಸಿದ ಇವರು ಮಾಡಿದ ಅನ್ನದಾನಕ್ಕೆ ಯಾವುದೂ ಸಾಟಿಯಲ್ಲ. ಒಪ್ಪತ್ತಿನ ಊಟಕ್ಕೂ ತತ್ವಾರವಿದ್ದ ಅಂದಿನ ಕಾಲಘಟ್ಟದಲ್ಲಿ ಊರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಅನೇಕ ಮಂದಿಗೆ ಜಾತಿ ಬೇಧವಿಲ್ಲದೆ ಆಶ್ರಯತಾಣವಾಗಿ ಇದ್ದದ್ದು ಮಾಣಿಮೂಲೆ ವಿಷ್ಣುಮೂರ್ತಿಯವರ ಮನೆ.

ರಜೆಯಲ್ಲಿ ಊರು ಸುತ್ತಲು, ಪರೀಕ್ಷೆ ಪತ್ರಿಕೆಗಳನ್ನು ತಿದ್ದಲು,ಹೊಸ ಕೆಲಸಕ್ಕೆ ಸೇರುವವರು ಹೀಗೆ ಅನೇಕ ವಿಧದ ಜನರು ಇವರ ಮನೆಯಲ್ಲೇ ಇದ್ದು ಈಗ ಉನ್ನತ ಹುದ್ದೆಯಲ್ಲಿ ಇರುವವರು ಅದೆಷ್ಟೋ ಮಂದಿ. ತಾವು ಊಟ ಮಾಡದೇ, ಬರೇ ನೀರು ಕುಡಿದು ಮನೆಗೆ ಬಂದ ಅತಿಥಿಗಳಿಗೆ ಸತ್ಕಾರ ಮಾಡಿದವರು ವಿರಳಾತಿವಿರಳ. ಅಂಥವರ ಸಾಲಿನಲ್ಲಿ ಮುಂಚೂಣಿಯಲ್ಲಿ ಇದ್ದವರು ವಿಷ್ಣುಮೂರ್ತಿ ದಂಪತಿಗಳು.

ತಾಯಿ ಮನೆಯಿಂದ ಸಿಕ್ಕಿದ ತುಂಡು ಬಂಗಾರವನ್ನೇ ಮಾರಿ ಮನೆಗೆ ಬಂದವರಿಗೆ ಮೃಷ್ಟಾನ್ನ ಬಡಿಸಿದ ಮಹಾತಾಯಿ ಸುಶೀಲಮ್ಮ. ಪಡ್ರೆ, ಬಾಯಾರು, ಅಗಲ್ಪಾಡಿ, ಮಾಣಿಲ, ನಿಡ್ಪಳ್ಳಿ ಹೇಗೆ ನಾನಾ ಊರಿಂದ ಬಂದು ಇಲ್ಲಿ ಆಶ್ರಯ ಪಡೆದುಕೊಂಡವರು ಬಹಳಷ್ಟು ಮಂದಿ.

ಯಾವುದೇ ಸ್ವಾರ್ಥವಿಲ್ಲದೆ, ಪರೋಪಕಾರ ಮಾಡುತ್ತಿದ್ದ ಈ ದಂಪತಿಗಳನ್ನು ಬಡವರೆಂದು ತಾತ್ಸಾರ ಮಾಡಿದವರ ಸಂಖ್ಯೆಯೂ ಕಡಿಮೆಯೇನಲ್ಲ. ಕೀಳಾಗಿ ನೋಡಿದವರ ಎದುರು ತಲೆಎತ್ತಿ ನಿಂತು, ಯಶಸ್ಸು ಗಳಿಸಿದ ಕಿರಿಮಗನ ಸಾಹಸಕ್ಕೆ ಧೈರ್ಯವಾದದ್ದೇ ಸುಶೀಲಮ್ಮ....

ವ್ಯಂಗ್ಯ ಮಾಡಿದವರೆಲ್ಲರಿಗೂ ಸಾಧನೆಯಿಂದಲೇ ಉತ್ತರ ಕೊಟ್ಟ ಕುಟುಂಬ, ಇಂದು ಅಮ್ಮನನ್ನು ಕಳೆದುಕೊಂಡು ಮೂಕವೇದನೆ ಅನುಭವಿಸುತ್ತಿದೆ.

ತನ್ನ ಮೂವರು ಮಕ್ಕಳಿಗೆ ಮಾತ್ರವಲ್ಲದೆ, ಇನ್ನೂ ಇಬ್ಬರು ಹೆಣ್ಣು ಮಕ್ಕಳಿಗೆ ತಾಯಿ ಸ್ಥಾನದಲ್ಲಿ ನಿಂತು ಆರೈಕೆ ಮಾಡಿ ಬೆಳೆಸಿದವರು. ಅವರಿಬ್ಬರಿಗೂ ಈಗ ಮದುವೆ ಆಗಿ ಅಮೆರಿಕದಲ್ಲಿ ಇರುವುದು ಹೆಮ್ಮೆಯ ವಿಚಾರ.

ಸುಶೀಲಮ್ಮ ಮಾತಿನಲ್ಲಿ ಸ್ವಲ್ಪ ನೇರವಾದರೂ ಅತ್ಯಂತ ಮೃದು ಹೃದಯಿ. ಯಜಮಾನರಾದ ವಿಷ್ಣು ಮೂರ್ತಿಯವರ ಅಸೌಖ್ಯದ ಅಂತಿಮ ದಿನಗಳಲ್ಲಿ ಅವರನ್ನು ಚೆನ್ನಾಗಿ ನೋಡಿಕೊಂಡ ಇವರ ತಾಳ್ಮೆಗೆ ಇವರೇ ಸಾಟಿ. ಕೆಲವು ತಿಂಗಳುಗಳ ಹಿಂದೆ ಅಸೌಖ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದರು. ಆ ಸಮಯದಲ್ಲಿ ಸಾವನ್ನೇ ಪವಾಡ ಸದೃಶ ರೀತಿಯಲ್ಲಿ ಜಯಿಸಿ ಬಂದಿದ್ದರು. ಆ ಬಳಿಕ ಕೆಲ ತಿಂಗಳುಗಳ ಕಾಲ ಅತ್ಯಂತ ಖುಷಿಯಿಂದ, ನಗುನಗುತ್ತಾ ನಮ್ಮ ಜೊತೆಗಿದ್ದರು.

ಎಲ್ಲರ ಹಿತಬಯಸಿ ಹಸಿವು ನೀಗಿಸಿದ ಅನ್ನಪೂರ್ಣೆಗೆ ಇದೋ ಕಣ್ಣೀರಿನ ಭಾಷ್ಪಾಂಜಲಿ 🙏🏻

ಸುಶೀಲಮ್ಮ, ಮತ್ತೆ ಹುಟ್ಟಿ ಬನ್ನಿ🙏🏻

--ವಿವೇಕ್ ಬೆಲ್ಲ

(Nisarga Swarga)

Obituary
ಕಣ್ಣೀರಿನ ಭಾಷ್ಪಾಂಜಲಿ