Karada Vishwa

Article · June 12, 2026

ವಿವಾಹ - ಮರುವಿವಾಹ

- ವೀಣಾ ಎಂ ಭಟ್

ವಿವಾಹ ನಮ್ಮ ಜೀವನದ ಒಂದು ಪ್ರಮುಖ ಘಟ್ಟ. ಸಮ್ಮಿಶ್ರ ಫಲಗಳು. ಅವರವರ ಹಣೆಬರಹಕ್ಕೆ ಅನುಸಾರವಾಗಿ ಸಿಗುವವು. ಕಷ್ಟವೊ ಸುಖವೊ ಅನುಭವಿಸಬೇಕು. ಇದ್ದುದರಲ್ಲಿ ತೃಪ್ತಿ ಹೊಂದಿ  ನಡೆದರೆ ಸುಖ ದಾಂಪತ್ಯ. ಅದರಲ್ಲಿ ಹುಳುಕು ಹುಡುಕಲು ಹೊರಟರೆ ನರಕಯಾತನೆ. ಒಂದು ಸಲ ಒಡಕು ಬಂದಲ್ಲಿ ನುಣುಚಿಕೊಂಡು ಅದರಿಂದ ಪಾರಾಗಬೇಕಾದರೆ ಹರಸಾಹಸವ ಮಾಡಬೇಕು. ಇಬ್ಬರೂ ಒಬ್ಬರನೊಬ್ಬರು ಹೊಂದಿಕೊಂಡು ಏನಾದರೂ ಕುಂದುಕೊರತೆ ಬಂದಲ್ಲಿಅಂತಹ ಘಟನೆ ನಡೆಯಲೇ ಇಲ್ಲ ಎಂಬ ಧೋರಣೆಯಿಂದ ಮುನ್ನಡೆವ ಸಾಮಾನ್ಯ ಜ್ಞಾನ ಇದ್ದಲ್ಲಿ ಸುಖ ಸಂಸಾರ. ಇಲ್ಲದಿದ್ದರೆ ದಿನಾ ಜಗಳ, ಕದನ ಕಟ್ಟಿಟ್ಟ ಬುತ್ತಿ..

  ನಮ್ಮ ಹಿರಿಯರ ಕಾಲದಲ್ಲಿ ಗಂಡು ಹೆಣ್ಣು ನೋಡುವ ಕಾರ್ಯಕ್ರಮ ರೂಢಿಯಲ್ಲಿ ಇರಲಿಲ್ಲ ಎಂದು ನನ್ನ ಅನಿಸಿಕೆ. ಹೆಣ್ಣಿಗೆ 10, 11 ದಾಟುವ ಮೊದಲೇ ಮದುವೆ ಮಾಡುವುದು  ರೂಢಿ. 10 ರ ಪ್ರಾಯ ಎಂದರೆ ದೊಡ್ಡವಳಾದಳು ಎಂಬ ಧೋರಣೆ. ಗಡಿಬಿಡಿಯಲ್ಲಿ ಸಿಕ್ಕಿದ ಗಂಡನ್ನು ನೋಡಿ ಮದುವೆ ಮಾಡಿ  ಹೆತ್ತವರು ಕೈಚೆಲ್ಲಿ ಬಿಡುತ್ತಿದ್ದರು, ಅಲ್ಲಿ ಗಂಡಿನ ಪ್ರಾಯದ ಲೆಕ್ಕವೇ ಇಲ್ಲ. ಒಟ್ಟಿನಲ್ಲಿ ಮಗಳು ಮದುವೆ ಆಗಿ ಹೋದರೆ ಸಾಕು. ಅವಳ ಗಂಡನ ಮನೆಯಲ್ಲಿ ಯಾವರೀತಿ ಸಂಸಾರ ಸಾಗುತ್ತದೆ, ಹೇಗಿದ್ದಾಳೋ ಏನು ಮಾಡುತ್ತಾಳೋ ಯಾವುದೇ ತಲೆ ಬಿಸಿ ಇಲ್ಲ. ಪಾಪ ಆ ಪುಟ್ಟ ಮಗುವಿನ ಪರದಾಟ !. ಎಲ್ಲರಿಗೂ ಕಷ್ಟ ದುಃಖ ಇದ್ದಿರಲಿಕ್ಕಿಲ್ಲ.. ಅದರ ಬಗ್ಗೆ ತಿಳುವಳಿಕೆ ನನಗಿಲ್ಲ.  ಆದರೂ ಕೆಲವು ಹಿರಿಯರು ಹೇಳಿದ ಪ್ರಕಾರ ಸಂಸಾರ ಜೀವನ ಅತೀವ ದುಸ್ತರವಾಗಿತ್ತು. ಸಣ್ಣ ವಯಸ್ಸಿನ ಹೆಣ್ಣಿಗೆ ಎರಡನೇ ಸಂಬಂಧ. ಮದುವೆ ಎಂದರೆ ಏನೆಂದು ಗೊತ್ತಿಲ್ಲದ ವಯಸು. ಬೇಕು ಬೇಡಾ ಹೇಳಲು ಅರಿಯದ ಪಾಪದ ಮಗು. ಏನು ಮಾಡಲಿ, ಬಲಿ ಪಶುವಂತೆ ಕೊರಳಿಗೆ ತಾಳಿ ಬಿಗಿದರೆ ಆಯ್ತು ಅವಳ ಗತಿ. ಗಂಡ, ಅತ್ತೆಮನೆಯವರು ಒಳ್ಳೆಯವರಾದರೆ ಮುಂದೆ ಸಂಸಾರ ಸಾಗುತ್ತಿತ್ತು.. ಇಲ್ಲವಾದರೆ ಮುಳುಗುವುದರಲ್ಲಿ ಸಂಶಯವೇ ಇಲ್ಲ. ಗಂಡ ಸತ್ತರೆ ಅವಳ ಗೋಳು  ಕೇಳುವವರಿಲ್ಲ. ಮಕ್ಕಳಿದ್ದರೆ ಒಂದು ಆಸರೆ. ಮಕ್ಕಳು ಆಗುವ ಮೊದಲೇ ಗಂಡ ಸತ್ತರೆ ಅವಳ ಗತಿ ಅಧೋಗತಿ...ಆಕೆ ಮೂಲೆಗುಂಪು ಆಗುತ್ತಿದ್ದಳು. ಕೆಲವು ಗಂಡಿಗೆ 2, 3 ಮದುವೆಗಳು. ಹೆಂಡತಿ ಇದ್ದರೂ ಸತ್ತರೂ ಬಹುಪತ್ನಿಯರು ಇರುತ್ತಿದ್ದರು. ಹೇಗೆ ನಿಭಾಯಿಸುತಿದ್ದರೋ ಆ ದೇವನೇ  ಬಲ್ಲ. ಒಂದೇ ಮನೆಯಲ್ಲಿ ಗಂಡನಾದವ ಬದುಕು ಸಾಗಿಸುತ್ತಿದ್ದ. ಅದು ಶ್ಲಾಘನೀಯ. ಅಂದಿನ ಕಾಲ ಹಾಗೆ.....

    ಇಂದು..ಎಲ್ಲವೂ ವಿಪರ್ಯಾಸ.. ಇಂದು ಹೆಣ್ಣಿಗೆ ಸಂಪೂರ್ಣ ಸ್ವಾತಂತ್ರ್ಯ. ಆಕೆ ಬೊಟ್ಟು ಮಾಡಿದ ಗಂಡು. ಹೆಣ್ಣು ನೋಡಲು ಬಂದರೆ ಮಾತನಾಡಬೇಕು. ಅದು ಒಂದು ದಿನದ, ಕ್ಷಣದ ಮಾತಲ್ಲ. ಮಾತಾಡಿ ಮಾತಾಡಿ ಕೊನೆಗೆ ಬೇಡ ಹೇಳಿದ್ದೂ ಇದೆ. ಎಲ್ಲ ಹೆಣ್ಣುಗಳ ವಿಚಾರವಲ್ಲ, ನಮ್ಮ ಪರಿಸರದಲ್ಲಿ ಅಲ್ಲಿ ಇಲ್ಲಿ ಕೆಲವು ವಿಷಯಗಳು ಕಿವಿಗಳಿಗೆ ಬೀಳುತ್ತವೆ.. ಒಂದು ಗಂಡಿಗೆ ಒಂದು ಹೆಣ್ಣು ಸಿಗಬೇಕಾದರೆ ತುಂಬಾ ಕಷ್ಟ.  ವಿದ್ಯೆ ಇರುವ ಗಂಡಿಗೂ ಇಲ್ಲ, ಕಲಿಯದವನಿಗೆ ಹೇಗೂ ಇಲ್ಲ.  ಹೆಣ್ಣು ನೋಡಿ ಎಲ್ಲ ಸೈ ಎಂದು ಮದುವೆ ನಿಶ್ಚಿತಾರ್ಥ ಢಾಂ ಢೀಂ ಆಗಿ hall ನಲ್ಲಿ...! ಖರ್ಚು ವೆಚ್ಚದ ಬಗ್ಗೆ ಹೇಳುವುದೇ ಬೇಡ. ಮನೆಯಲ್ಲಿ ಬೇಡವೇ ಬೇಡ, ಹೋಲ್ನಲ್ಲಿ ಗ್ರ್ಯಾಂಡ್ ಆಗಿ ಮಾಡಬೇಕು. ಫೋಟೋಗ್ರಾಫ್ ಗೆ ಒಂದಷ್ಟು ಖರ್ಚು, ಹೋಲ್ ಗೆ ಇನ್ನೊಂದಷ್ಟು..ಎಲ್ಲರಿಗೂ ಆಮಂತ್ರಣ. ಅಂತೂ ನಿಶ್ಚಿತಾರ್ಥಕ್ಕೇ ಮದುವೆಯ ಖರ್ಚು. ಮತ್ತೆ ಚಿನ್ನ, ಬಟ್ಟೆ, ಮದುವೆ ಖರ್ಚು ಹೇಳಿ  ಲಕ್ಷಗಟ್ಟಲೆ ಸುರಿದು ಕನ್ಯಾದಾನ ಮಾಡುತ್ತಾರೆ. ಸರಿ ಇದ್ದರೆ ಮಾತಾಪಿತೃಗಳ ಯೋಗ. ತಿಂಗಳ ಮೊದಲೇ ಮುರಿದ ಮದುವೆಗಳು ಎಷ್ಟೋ ಇವೆ. ಇಷ್ಟು ಖರ್ಚು ಮಾಡಿ ಏನು ಫಲ?? ಮಾತಿಗೆ ಮಾತು ಖಡಕ್. ಯಾವ ಹೊಂದಾಣಿಕೆಯೂ ಇಲ್ಲ. ಕಡ್ಡಿ ತುಂಡು ಆದರೆ ಮುಗಿಯಿತು ಅಲ್ಲಿಗೆ. ಮದುವೆ ಖರ್ಚು ಹೇಗೂ ಆಯ್ತು. ಅದರ ಮೇಲೆ ವಿಚ್ಛೇದನ. ಕೋರ್ಟು ಕಚೇರಿ. ವಕೀಲರು ಅಂತ ಸಿಕ್ಕಾಪಟ್ಟೆ ಫೀಸು. ಯಾರಲ್ಲಿ ಹೇಳಲಿ?? ಯಾರನ್ನು ದೂರಲಿ?? ಯಾರ ತಪ್ಪು?? ಯಾರ ಒಪ್ಪು?? ಹೆಣ್ಣಿನವರಿಗೆ ಗಂಡಿನ ತಪ್ಪು, ಗಂಡಿನ ಕಡೆಯವರಿಗೆ ಹೆಣ್ಣಿನ ತಪ್ಪು.. ಯಾರನ್ನು ಹೇಳಲಿ ಯಾರನ್ನು ಕೇಳುವುದು.. ಇದೇ ಜಂಜಾಟದಲ್ಲಿ ಕಾಲಹರಣ. ಯಾಕಾದರೂ ಮದುವೆ ಆದೆನೋ ಅನ್ನುವ ಮಾತು ಬಾರದೆ ನಿಲ್ಲುವುದಿಲ್ಲ. ಒಟ್ಟಿನಲ್ಲಿ ಬಾಳ ಸಂಗಾತಿ ಬಾಳ ಕೊನೆತನಕ ಇದ್ದಲ್ಲಿ ಪೂರ್ವಜರ ಸುಕೃತ ಅನ್ನಬೇಕು. 
   ಹೆಣ್ಣಿನ ಕಡೆಯೋ ಗಂಡಿನ ಕಡೆಯಿಂದಲೋ ಒಂದು ಸಣ್ಣ ವಿಷಯಕ್ಕೆ ಅಂತರ ಬಂತು ಎಂದರೆ ಮತ್ತೆ ಅಲ್ಲಿಂದ ಮುಂದೆ ದೊಡ್ಡ ಕಂದಕದ ಸೃಷ್ಟಿ. ಅಲ್ಲಿ ಯಾವ ಮಾತೂ ಸಾಗದು. ವಿಚ್ಛೇದನಕ್ಕೆ ಹೋದರೆ ಹೆಣ್ಣು ಹೇಳಿದ್ದೆಲ್ಲಾ ಕೊಡಬೇಕು . No excuse  ಹೀಗಿದೆ ಇಂದಿನ ಜನಾಂಗ. ಕೇಳಿದರೇ ಭೀತಿ ಹುಟ್ಟಿಸುವ ಕೆಲವು ಮಾತುಗಳು. 
    ಹಿಂದೆ ಹೆಣ್ಣು ನೋಡಲು ಹೋಗಿ ಗಂಡಿನ ಹತ್ತು ಹಲವು ಟೀಕೆಗಳು. ಗಂಡು ಹೇಗೇ ಇರಲಿ ಹೆಣ್ಣು ರೂಪವತಿ ಆಗಿರಬೇಕು. ಬೇರೆ ಬೇರೆ ವ್ಯಾಖ್ಯಾನಗಳು.  ಪಾಪ  ಆಕೆ ಎಷ್ಟರ ಮಟ್ಟಿಗೆ ನೋವನ್ನು ಅನುಭವಿಸಿದ್ದಾಳೋ ಆ ಹೆಣ್ಣಿಗೇ ಗೊತ್ತು .
    ಇಂದು ಎಲ್ಲಾ ವಿಪರ್ಯಾಸ. ಗಂಡು ಹೇಗಾದರೂ ಒಂದು ಹೆಣ್ಣು ಸಿಕ್ಕಿದರೆ ಸಾಕು ಎಂದು ಹೇಳುತ್ತಾರೆ.. ಹೆಣ್ಣಿಗೆ ಆಕೆಗೆ ಮನಸಿಗೆ ತೃಪ್ತಿಕರ ಆದರೆ ಮಾತುಕತೆ. ಇಲ್ಲದಿರೆ ಹೆತ್ತವರಿಗೆ ವ್ಯಥೆ.. ಮದುವೆ ಆಗದೇ ನಿಲ್ಲುವವರೂ ಇದ್ದಾರೆ..
    ಅಂದು ಗಂಡು ಎರಡೆರಡು ಮೂರುಮೂರು ಮದುವೆ ವಿಚ್ಛೇದನ ಇಲ್ಲದೇ. ಇಂದು ವಿಚ್ಛೇದನ ಪಡೆದರೆ ಹೆಣ್ಣಿಗೆ ಮರು ವಿವಾಹ..ಹೀಗಿದೆ ಅಂದು ಇಂದು ಎಂಥಾ ಕಾಲ  ..ಎಲ್ಲದಕ್ಕೂ ಕಾಲವೆ ಉತ್ತರಿಸಲಿ....
  ಕಾಲಾಯೈ ತಸ್ಮೈ ನಮಃ


Creative Writings