Karada Vishwa

Article · July 8, 2026

ಇರುವುದೆಲ್ಲವ ಬಿಟ್ಟು........

-ಯಶೋದ.ಎನ್.ಭಟ್. ಬಿಸಿಲುಮಲೆ

ಮಳೆ ಜೋರಾಗಿ ಬರುತ್ತಿತ್ತು. ಸಿಟೌಟಲ್ಲಿ ಕಾಲು ಚಾಚಿ ಹಾಗೆಯೇ ಕುಳಿತಿದ್ದೆ. ಮಳೆಯ ಇರಿಚಲಿನ ಸಿಂಚನ ಮನಸ್ಸಿಗೆ ಸುಖವನ್ನು ಕೊಡುತ್ತಿತ್ತು. ದೂರದಲ್ಲಿ ಕೇಳಿಸುವ ಕಪ್ಪೆಗಳ ಕೂಗು, ಜೀರುಂಡೆಗಳ ಸದ್ದು ಮಾಯಾ ಲೋಕವನ್ನೇ ಸೃಷ್ಟಿಸಿತ್ತು. ಕತ್ತಲಾದದ್ದು ಅರಿವಿಗೆ ಬಂದಿರಲಿಲ್ಲ.

ಮನೆಯ ಲೈಟ್ ಗಳು ಉರಿಯತೊಡಗಿದವು. ಪತಂಗವೊಂದು ಬಲ್ಬಿನ ಸುತ್ತ ಹಾರಾಡುತ್ತಾ ತನ್ನ ಪ್ರೇಮವನ್ನು ಪ್ರಕಟಿಸತೊಡಗಿತು. ನೆನಪಿನ ಸುಳಿಯಲ್ಲಿ ತೇಲುತ್ತಾ ಅಲ್ಲೊಂದು ಲಾಂದ್ರ ಕಾಣಿಸಿತೊಡಗಿತ್ತು.

ಅದು ತೆಳ್ಳಗಿನ ಕಬ್ಬಿಣದ ಸರಳಿನಲ್ಲಿ ನೇತಾಡುತ್ತಿದೆ. ಸಣ್ಣ ಗಾಜಿನ ಬುರುಡೆ. ಬತ್ತಿಯನ್ನು ಇಟ್ಟು ಸೀಮೆಎಣ್ಣೆ ತುಂಬಲಾಗಿದೆ. ಬತ್ತಿಯು ಮೇಲೆ ಬರಲು ಬರ್ನರ್ ಇದೆ. ಬತ್ತಿ ಮೇಲೆ ಕೆಳಗೆ ಬರಲು ಬರ್ನ ರಿಗೆ ಒಂದು ಕಡ್ಡಿ ಇದೆ ಗಾಳಿಗೆ ದೀಪವು ಆರಿ ಹೋಗದಂತೆ ಬರ್ನರಿನ ಒಳಗೆ ಇಳಿಬಿಟ್ಟ ಗಾಜಿನ ಕುಪ್ಪಿಯ ರಕ್ಷಣೆ ಇದೆ. ಭದ್ರತೆಗೆ ಸರಳಿನ ಮೂಲಕ ಇಳಿಬಿಟ್ಟ ಒಂದು ತಟ್ಟೆ..ಮಕ್ಕಳೆಲ್ಲ ವೃತ್ತಾಕಾರದಲ್ಲಿ ನಿಂತು ಕೈ ಕೈ ಹಿಡಿದುಹಾಡು ಹಾಡುತ್ತಾ ಏನೋ ಆಟವಾಡುತ್ತಾ ಇದ್ದಾರೆ. ಅಜ್ಜ ಊಟದ ನಂತರ ನಡೆಯುವ ಅವರ ನೂರು ಹೆಜ್ಜೆಗಳನ್ನು ಇಡುತ್ತಾ ಇದ್ದಾರೆ. ಮಕ್ಕಳ ಗಲಾಟೆ ಅವರಿಗೆ ಹಿಡಿಸದು. ಅತ್ತೆ ತೋಟದಿಂದ ತಂದ ಎಳೆಯ ಅಡಿಕೆಯನ್ನು ಕೊಯ್ದು ಅದರ ಬೊಂಡನ್ನು ಬುಟ್ಟಿಗೆ ತುಂಬುತ್ತಿದ್ದಾರೆ. ಅಪ್ಪನ ಸಣ್ಣ ತಂಗಿ ಅವರು. ಒಲೆಯ ಕಟ್ಟೆಯ ಮೇಲೆ ಇಟ್ಟು ಒಣಗಿಸಿದ ಅಡಿಕಗೆ ಸಿಕ್ಕ ದುಡ್ಡು ಜಾತ್ರೆಯಲ್ಲಿ ಬಳೆ ರಿಬ್ಬನ್ ಕೊಳ್ಳಲು ಬೇಕು ಅವರಿಗೆ

ಅಂಗಳದಲ್ಲಿ ಕೆಲಸದಾಳುಗಳು ಸೀಮೆಎಣ್ಣೆಯ ಬುಡ್ಡಿಯನ್ನು ಇಟ್ಟು ಅಡಿಕೆ ಸುಲಿಯುತ್ತಾ ಇದ್ದಾರೆ ವಯಸ್ಸಾದ ಅಜ್ಜಿಯ ಬಾಯಿಯಿಂದ ಕಥೆಗಳು ಎಡೆಬಿಡದೆ ಹೊರ ಬರುತ್ತಾ ಇದೆ. ಏಳು ಸುತ್ತಿನ ಕೋಟೆ ರಾಕ್ಷಸರು ಹಾರುವ ಕುದುರೆ ಇನ್ನೂ ಏನೇನೋ ಕಥೆಗಳು. ಕೆಲಸ ರಂಗೇರುತ್ತಿದೆ. ಅಂಗಳದ ಬದಿಯಲ್ಲಿ ಇಟ್ಟ ಸುಡುಮಣ್ಣಿನಿಂದ ಹೊಗೆ ಮೆಲ್ಲನೆ ಹೊರಗೆ ಬರುತ್ತಾ ಇದೆ. ದೊಡ್ಡಪ್ಪ ಅದರಲ್ಲಿ ಹಾಕಿದ ಗೇರು ಬೀಜದ ಪರಿಮಳ ಎಲ್ಲೆಲ್ಲೂ ಪಸರಿಸುತ್ತಾ ಇದೆ. ಕಥೆ ಕೇಳುತ್ತಿದ್ದ ಮಕ್ಕಳು ದೊಡ್ಡಪ್ಪನ ಸುತ್ತ ಕುಳಿತಿದ್ದಾರೆ. ಅರೆ ಕತ್ತಲಲ್ಲಿ ಮಕ್ಕಳು ಗೇರುಬೀಜವನ್ನು ಸವಿಯುತ್ತಿದ್ದಾರೆ.

ಅಮ್ಮಾ ಎನ್ನುವ ಸ್ವರಕ್ಕೆ ಎಚ್ಚೆತ್ತುಕೊಂಡೆ.

ಆದರೂ ಒಳಗೆ ಹೊರಗೆ ಬಂದಾಗೆಲ್ಲ ಗೋಡೆಯಲ್ಲಿ ದೀಪಗಳ ಕಲ್ಪನೆ ಸಂತೋಷವನ್ನು ಕೊಡುತ್ತಿತ್ತು. ಎಷ್ಟೊಂದು ತರದ ದೀಪಗಳು. ಲಾಟಾನುಗಳು, ಲ್ಯಾಂಪುಗಳು, ಬುಡ್ಡಿ ದೀಪಗಳು ಬೇರೆ ಬೇರೆ ಆಕಾರದಲ್ಲಿ, ದೊಡ್ಡದು, ಸಣ್ಣದು ಹೀಗೆ ಹಲವಾರು ದೀಪಗಳು

ಅವಿಭಕ್ತ ಕುಟುಂಬದಲ್ಲಿ ದೊಡ್ಡ ಮನೆಯಲ್ಲಿ ಇದ್ದ ನಾವು ವಿಭಕ್ತರಾಗಿ ಒಂದು ಸಣ್ಣ ಮನೆಗೆ ಅಪ್ಪ ಅಮ್ಮನೊಡನೆ ಬಂದಿದ್ದೆವು. ಆ ಮನೆಗೆ ಅರ್ಧಂಬರ್ಧ ಗೋಡೆಗಳು. ಅರ್ಧದ ಮೇಲೆ ಮಡಲಿನ ತಟ್ಟಿಯ ರಕ್ಷಣೆ. ಜೋರು ಮಳೆ ಬಂದಾಗ ಮಳೆಯ ಇರಿಚಲು ಹನಿಗಳು ಒಳಗೆ ನುಗ್ಗುತ್ತಿತ್ತು. ಲ್ಯಾಂಪಿನ ಕುಪ್ಪಿಗಳು ಅಲ್ಲಲ್ಲಿ ಬಿರುಕು ಬಿಡುತ್ತಿದ್ದವು. ದಿನಕ್ಕೊಂದು ಕುಪ್ಪಿ ಅಸಾಧ್ಯದ ಮಾತು. ಕಷ್ಟದ ದಿನಗಳು.

ಆ ದಿನಗಳಲ್ಲಿ ಕಡಿಮೆ ಖರ್ಚಿನಲ್ಲಿ ಆಗುವ ಹೊಸ ಸಂಶೋಧನೆಗಳು ಅಣ್ಣನಿಂದ ಆರಂಭವಾದವು. ಒಡೆದಲ್ಲಿ ಫೆವಿಕಾಲ್ ಹಚ್ಚಿದಲ್ಲಿ ಅದು ತಾತ್ಕಾಲಿಕವಾಗಿ ನಿಲ್ಲುತ್ತಿತ್ತು. ಕೊನೆಗೆ ಚಿತ್ರ ವಿಚಿತ್ರ ಆಕಾರಗಳಲ್ಲಿ ಫೆವಿಕಾಲ್ ಕುಪ್ಪಿಯ ತುಂಬಾ ತುಂಬಿದದು ನಮಗೆ ತಮಾಷೆಯ ವಿಷಯವಾಗಿತ್ತು

ಹಾಗೆಯೇ ನಾನು ಬಾಣಂತಿ ಇದ್ದಾಗ ಒಂದು ಘಟನೆ ನಡೆಯಿತು. ತೊಟ್ಟಿಲ ಶಾಸ್ತ್ರ ನಡೆಯುವ ಮೊದಲು ಬಾಣಂತಿಯ ಹತ್ತಿರವೇ ಮಗುವನ್ನುಮಲಗಿಸುವುದು ಹಳ್ಳಿಯಲ್ಲಿ ವಾಡಿಕೆಯಾಗಿತ್ತು. ಹಾಳೆಯಲ್ಲಿ ಮಲಗಿದ ಮಗು ಜೋರಾಗಿ ಅಳುತ್ತಿತ್ತು. ಹತ್ತಿರದಲ್ಲೇ ಇಟ್ಟಿದ್ದ ಲ್ಯಾಂಪ್ ಎತ್ತಿ ನೋಡಬೇಕಿದ್ದರೆ ಲ್ಯಾಂಪಿನ ಕುಪ್ಪಿ ಜಾರಿ ಹಾಳೆಯ ಮೇಲೆ ಬಿದ್ದಿತ್ತು.. ಕಣ್ಣು ಕತ್ತಲೆ ಬರುವಷ್ಟು ಹೆದರಿ ಬಿಟ್ಟಿದ್ದೆ. ದೇವರ ದಯೆ ಆದರೆ ಆ ಕುಪ್ಪಿ ಹಾಳೆ ಮತ್ತು ಬಟ್ಟೆಯ ನಡುವೆ ಬಿದ್ದಿತ್ತು ಲ್ಯಾಂಪುಗಳನ್ನು ನೋಡಿದರೆ ಈಗಲೂ ಆ ನೆನಪು ಬರುವುದು ಉಂಟು .

ಈಗ ಕರೆಂಟ್ ಇಲ್ಲದ ಮನೆಗಳಿಲ್ಲ. ಇಲ್ಲದಿದ್ದಾಗ ಪರ್ಯಾಯ ವ್ಯವಸ್ಥೆಗಳೂ ಸಾಕಷ್ಟು ಉಂಟು. ಈ ಎಲ್ಲ ವ್ಯವಸ್ಥೆಗಳಿಗೆ ನಾವೂ ಹೊಂದಿಕೊಂಡಿದ್ದೇವೆ. ಆದರೂ ಒಮ್ಮೊಮ್ಮೆಆ ಮಬ್ಬು ಕತ್ತಲು ಹಳೆಯ ದಿನಗಳು ಚೆನ್ನಾಗಿತ್ತೇನೋ ಅನ್ನಿಸುವುದು. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ....

Creative Writings
ಇರುವುದೆಲ್ಲವ ಬಿಟ್ಟು........