Article · May 1, 2026
ಊಹೆ
(ಕಥೆ) ✍🏻 ದಿವ್ಯಾ ಶಿರಂತಡ್ಕ
ಅಂದು ಅಕ್ಕನ ಮನೆಗೆ ಹೋಗಲೆಂದು ಬಸ್ಸಿಗಾಗಿ ಕಾಯುತ್ತಿದ್ದೆ. ಎಷ್ಟೊತ್ತಾದರೂ ಬಸ್ಸಿನ ಸುಳಿವೇ ಇಲ್ಲ. ಮಾತನಾಡಿ ಸಮಯ ಕಳೆಯೋಣವೆಂದರೆ ಸರಿಯಾದ ಸಾಂಗತ್ಯವೂ ಇಲ್ಲದೆ ಬಸ್ ಬರುವ ದಾರಿಯತ್ತಲೇ ಕಣ್ಣು ನೆಟ್ಟು ಕುಳಿತಿದ್ದೆ. ಕಥೆ, ಕವಿತೆ ಬರೆಯೋ ಹುಚ್ಚು ಬಾಲ್ಯದಿಂದಲೇ.
ಅದೆಷ್ಟೋ ಬಹುಮಾನ ಬಾಚಿ ಬೀಗುತ್ತಿದ್ದ ನಾನು ನನ್ನ ಊರಿನಲ್ಲಿ ಯುವ ಸಾಹಿತಿಯೇ ಆಗಿದ್ದೆ. 'ಏನು ಸಾಹಿತಿಗಳು' ?ಎಂದೇನಾದರೂ ಯಾರಾದರೂ ಕೇಳಿದರೆ ಒಳಗೊಳಗೆ ಖುಷಿಪಡುತ್ತಿದ್ದೆ. ಏಕಾಂಗಿಯಾಗಿ ಕುಳಿತು ಆಲೋಚಿಸುವುದು, ಬಹು ಮಂದಿ ತುಂಬಿದ ಸಂತೆಯಂತಹ ವಾತಾವರಣದಲ್ಲಿ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸುವುದು, ಸುತ್ತಮುತ್ತಲಿನ ವ್ಯಕ್ತಿಗಳ ಭಾವ, ಮಾತು, ಕಣ್ಣಿನ ಚಲನೆ, ವಸ್ತ್ರಾಲಂಕಾರ, ಅವರ ಸಂತಸ, ಗೋಳು ಹೀಗೆ ಪ್ರತಿಯೊಂದನ್ನೂ ಗಮನಿಸುವ ರೀತಿ ಮೈಗೂಡಿತ್ತು. ಅಂದೂ ಕಣ್ಣಿಗೆ ದಕ್ಕಿದ ಎಲ್ಲವನ್ನೂ ಗಮನಿಸುತ್ತಿದ್ದೆ. ರಸ್ತೆ ಬದಿಯಲ್ಲಿ ಚಪ್ಪಲಿ ಹೊಲಿಯುತ್ತಿದ್ದ ಮುದುಕ, ಮೀನು ಮಾರುತ್ತಿದ್ದ ಮಹಿಳೆ, ಹೀಗೆ ಗಮನ ಎಲ್ಲೆಲ್ಲೋ ಹೋಗುತ್ತಿತ್ತು. ಅಷ್ಟರಲ್ಲೇ ಬಂದ ಬಸ್ಸಿನಿಂದ ದಂಪತಿ ಹಾಗೂ ಮಗು ಇಳಿದಿದ್ದರು. ನನ್ನ ಗಮನ ಅವರತ್ತ ಹೋಯಿತು. ಆತ ಸಣಕಲು ಶರೀರದ ನೀಳ ಕಾಯದ ಗಂಡಸು. ಆಕೆಯೋ ಸ್ಥೂಲದೇಹಿ. ನೋಟದಲ್ಲೇ ಇವರಿಗೆ ಒಂದಿಷ್ಟೂ ಹೊಂದಾಣಿಕೆ ಆಗುತ್ತಿಲ್ಲ ಎಂದು ನನ್ನ ಮನಸ್ಸು ಲೆಕ್ಕ ಹಾಕುತ್ತಿತ್ತು. ಆಕೆಗೆ ಆತನಲ್ಲಿ ಮಾತನಾಡಿದಷ್ಟು ಸಾಲದು. ಒಂದೇ ಸಮನೆ ಕೈ ಸನ್ನೆ ಮಾಡುತ್ತಾ ಅಗಲವಾಗಿ ಕಣ್ಣು ಬಿಡುತ್ತಾ ಅದೇನೋ ಹೇಳುತ್ತಿದ್ದಳು.
ಅವನೂ ಅವಳ ಎಲ್ಲಾ ಮಾತುಗಳನ್ನೂ ಆಲಿಸುತ್ತಾ ಜೊತೆಗೆ ಅತ್ತಿತ್ತ ಹೋಗಲು ಯತ್ನಿಸುವ ಪುಟ್ಟ ಮಗುವನ್ನು ಸಂಭಾಳಿಸುತ್ತಿದ್ದ. ಇವರಿಗೆ ಮನೆಯಲ್ಲಿ ಮಾತನಾಡಿದ್ದು ಸಾಲದೇ.. ಮಾತಿನ ಮಧ್ಯೆ ಮಗುವಿನ ಗಮನ ಕಡಿಮೆಯಾಗಿ ಅದು ರಸ್ತೆಗೆ ಓಡಿದರೆ! ಯೋಚಿಸಿ ಭಯ ನನಗಾಗುತ್ತಿತ್ತು. ಆಕೆಯು ಆಗಾಗ ಮೊಬೈಲ್ ತೆಗೆಯುತ್ತಾ ಯಾರಿಗೋ ಕರೆ ಮಾಡಿ ಮಾತನಾಡುತ್ತಿದ್ದಳು. ಆಗ ಆತ ಮಗುವನ್ನು ಎತ್ತುತ್ತಿದ್ದ. ಆತ ಯಾರೊಡನೆಯೋ ಮಾತನಾಡುವಾಗ ಆಕೆ ಮಗುವನ್ನು ಸಂಭಾಳಿಸುತ್ತಿದ್ದಳು. ಅಷ್ಟರಲ್ಲಿ ಒಂದು ರಿಕ್ಷಾದಲ್ಲಿ ಬಂದ ಜೋಡಿ ಮಗುವನ್ನು ಅಳುತ್ತಲೇ ಎತ್ತಿ ಮುದ್ದಾಡಿದರು. ನನಗೋ.. ಗೊಂದಲ ಪ್ರಾರಂಭವಾಗಿ ಬಿಟ್ಟಿತು. ರಿಕ್ಷಾದಲ್ಲಿ ಬಂದ ಗಂಡಸು ಇಬ್ಬರಿಗೂ ಕೈಮುಗಿಯುತ್ತಿದ್ದ. ಕುಳಿತಲ್ಲೇ ಕುಳಿತು ನನಗೂ ಬೋರ್ ಹೊಡೆದಿತ್ತು. ಹೋಗಿ ಅವರ ಪಕ್ಕ ಬಸ್ಸಿಗೆ ಕಾಯುವವಳಂತೆ ನಿಂತು ಬಿಟ್ಟೆ. ಕಿವಿ ಆ ಕಡೆಯೇ ನೆಟ್ಟೆ. ಆಗಲೇ ಗೊತ್ತಾದದ್ದು ನಾನು 'ಮಗು ಹಾಗೂ ಅದರ ಅಪ್ಪ ಅಮ್ಮ' ಎಂದು ತಿಳಿದಿದ್ದ ಮೂವರೂ ಪರಸ್ಪರ ಅಪರಿಚಿತರಾಗಿದ್ದರು. ಏನಾಯ್ತು ಎಂದು ಕೇಳಿದ್ದಕ್ಕೆ ಎಲ್ಲವನ್ನು ತಕ್ಷಣ ಹೇಳಿಬಿಟ್ಟರು.
ಸ್ಥೂಲ ಕಾಯದ ಮಹಿಳೆ ಬಸ್ಸಿನಲ್ಲಿ ಸೀಟು ಹಿಡಿದಿದ್ದರು. ಅವರ ಪಕ್ಕ ನಿಂತಿದ್ದ ಮಗುವನ್ನು ಎತ್ತಿಕೊಂಡಿದ್ದ ಮಹಿಳೆಯ ಬಗ್ಗೆ ಕನಿಕರಿಸಿ ನಿದ್ರಿಸಿದ ಮಗುವನ್ನು ಎತ್ತಿ ತೊಡೆ ಮೇಲೆ ಇಟ್ಟುಕೊಂಡಿದ್ದರು. ತಾಯಿಗೋ ಮಗು ತನ್ನ ಪತಿಯಲ್ಲಿ ಇದೆ ಎನ್ನುವ ಹಾಗೆ ನೆನಪು .ಆಕೆ ತುಂಬಿದ ಜನಜಂಗುಳಿಯ ಮಧ್ಯೆ ಮುಂದಿನ ಬಾಗಿಲಿನಿಂದ ಆಕೆಯ ನಿಲ್ದಾಣದಲ್ಲಿ ಮಗುವನ್ನು ಮರೆತು ಇಳಿದೇ ಬಿಟ್ಟಿದ್ದಳು. ಹಿಂದಿನ ಬಾಗಿಲಿನಿಂದ ಪತಿಯೂ. ಇಬ್ಬರೂ ಪರಸ್ಪರ ಒಟ್ಟಾದಾಗ ಮಗು ಇಲ್ಲದ್ದನ್ನು ಗಮನಿಸಿ ಆತಂಕಗೊಂಡು ಏನು ಮಾಡುವುದೆಂದೇ ತಿಳಿಯದೆ ಗೋಳಿಡುತ್ತಿದ್ದರು. ಅದಾಗಲೇ ಬಸ್ ಬಹುದೂರ ಸಾಗಿ ಆಗಿತ್ತು. ಇತ್ತ ಮಗುವನ್ನು ಹಿಡಿದ ಮಹಿಳೆಯ ಗಮ್ಯ ಹತ್ತಿರವಾಗುತ್ತಿತ್ತು. ಬಸ್ಸಿನಲ್ಲಿ ಜನಗಳೂ ಕಡಿಮೆಯಾಗಿ ಎಲ್ಲರನ್ನೂ ಸ್ಪಷ್ಟವಾಗಿ ಕಾಣಬಹುದಿತ್ತು. ಮೂರು ಮೂರು ಸಲ ಹುಡುಕಿದರೂ ಮಗುವಿನ ಅಮ್ಮನ ಪತ್ತೆಯೇ ಇಲ್ಲ. ಗಾಬರಿಗೊಂಡ ಆಕೆ ಬಸ್ಸಿನಲ್ಲಿ ಅದೇನು ಹೇಳಲು ಯತ್ನಿಸಿದರೂ ಎಲ್ಲರೂ ಮುಖ ಮುಖ ನೋಡಿದರೇ ವಿನಹ ಸಹಾಯಕ್ಕೆ ಬರಲಿಲ್ಲ. ಬೇರೆ ದಾರಿ ಕಾಣದೆ ಆಕೆ ಇಳಿದ ಕಡೆ ಯಾರೋ ಸಹ ಪ್ರಯಾಣಿಕನೂ ಇಳಿದಿದ್ದ. ಬೇರೆ ದಾರಿ ಕಾಣದೆ ಅವನಲ್ಲಿ ಎಲ್ಲವನ್ನು ಹೇಳಿ ಸಹಾಯ ಕೇಳಿದ್ದಳು. ಅವನು ತನ್ನ ಕೈಲಾದ ಎಲ್ಲಾ ಪ್ರಯತ್ನವನ್ನೂ ಮಾಡಿದ್ದ.
ಸಣಕಲು ದೇಹದ ವ್ಯಕ್ತಿ ಎಡಬದಿಯ ದಾರಿ ಹಿಡಿದರೆ ಸ್ಥೂಲ ಕಾಯದ ಹೆಂಗಸು ಬಲಬದಿಯ ದಾರಿ ಹಿಡಿದಳು. ಮಗು ಸಿಕ್ಕ ಖುಷಿಯಲ್ಲಿ ಆ ಜೋಡಿ ಮಗುವಿನೊಂದಿಗೆ ಮರೆಯಾಯಿತು. ನಾನೋ ನನ್ನ ತಪ್ಪಾದ ಊಹೆಗೆ ಬೆಪ್ಪಾಗಿ ನಿಂತು ಮತ್ತೆ ಬಸ್ಸು ಬರುವ ದಾರಿಯತ್ತ ದೃಷ್ಟಿ ನೆಟ್ಟೆ.
Creative Writings
