
Article · June 3, 2026
ಮತ್ತೆ ಚಿಗುರಿದ ಕನಸು
ಕಥೆಗಾರ್ತಿ : ದಿವ್ಯಾ ಬಿ ಶಿರಂತಡ್ಕ
ಇಳಿ ಸಂಜೆಯ ಹೊತ್ತಿನಲ್ಲಿ ನಿಧಾನವಾಗಿ ನಡೆಯುತ್ತಾ ಪಾರ್ಕಿನ ಕಲ್ಲು ಬೆಂಚಿನಲ್ಲಿ ಕುಳಿತು ಸುತ್ತಮುತ್ತಲಿನ ದೃಶ್ಯಗಳನ್ನು ಕಣ್ತುಂಬಿ ಕೊಳ್ಳುವುದು ಶಾರದಕ್ಕ, ಶಾಮರಾಯರಿಗೆ ಆರೇಳು ತಿಂಗಳಿನಿಂದ ಮೈಗೂಡಿದ ಹವ್ಯಾಸ. ಹಳ್ಳಿ ಮನೆಯಲ್ಲಿ ಸಂಪತ್ಭರಿತ ಪರಿಸರದಲ್ಲಿ ಐದು ದಶಕಗಳಿಗೂ ಹೆಚ್ಚು ಬದುಕು ಸವೆಸಿದ್ದ ಅವರಿಗೆ ಈ ಕಾಂಕ್ರೀಟ್ ಕಾಡಿನ ನಡುವೆ ಜೀವನ ಬಲವಂತದ ಬದುಕೇ ಸರಿ. ಹೊಸ ನೀರು ಹಳೆ ನೀರನ್ನು ಕೊಚ್ಚಿಕೊಂಡು ಹೋಗುವಂತೆ ಹಳೆಯದನ್ನು ಹೊಸ ಸಂಗತಿಗಳು ಕರೆದುಕೊಂಡು ಹೋಗುತ್ತದೆ. ಎಲ್ಲಿ ತಲುಪುತ್ತೇವೋ ಬಲ್ಲವರಾರು?!
ತಮ್ಮ ಏಕಮಾತ್ರ ಪುತ್ರ ಮಹೇಶನ ಒತ್ತಾಯಕ್ಕೆ ಮಣಿದು ಹಳ್ಳಿಯ ಮನೆ ತಮ್ಮದೇ ಕುಟುಂಬಸ್ಥರಿಗೆ ಮಾರಿ ಹಿಂದೆಂದೂ ಕಂಡರಿಯದ ಬೆಂಗಳೂರಿನ ಫ್ಲ್ಯಾಟ್ ಸೇರಿಯಾಗಿತ್ತು. ಏಳೆಂಟು ಸಾವಿರ ಮನೆಗಳಿರುವ ಹತ್ತಾರು ವಿಶಾಲ ಅಪಾರ್ಟ್ಮೆಂಟ್. ಶ್ರೀಮಂತರಿಗಷ್ಟೇ ಅಲ್ಲಿನ ವಾಸ ಸಾಧ್ಯ. ಇಂಜಿನಿಯರಿಂಗ್ ವೃತ್ತಿ ಹಿಡಿದು ತನ್ನ ಸಾಮರ್ಥ್ಯದಿಂದಲೇ ಮೇಲೆ ಬಂದ ಮಗನ ಮೇಲೆ ಹೆಮ್ಮೆ ಇದ್ದರೂ ಹಳ್ಳಿಯ ಬೇರು ಕಡಿಯಬೇಕಾಗಿ ಬಂದಾಗ ತೀವ್ರ ಸಂಕಟವಾಗಿತ್ತು. ಆದರೆ ಏರುತ್ತಿರುವ ಪ್ರಾಯದ ಕಾರಣ ಹೇಳಿ ಹಳ್ಳಿ ಮನೆಯಲ್ಲೇ ಇದ್ದು ತಮ್ಮ ಕಷ್ಟಕ್ಕಾಗೆಂದು ಮಗನನ್ನು ಕೇಳುವುದಾದರೂ ಹೇಗೆ?!
ಬಂದಂತೆ ಬದುಕು ಸ್ವೀಕರಿಸಬೇಕು ಎಂದು ಇಬ್ಬರೂ ಪರಸ್ಪರ ಒಪ್ಪಿಗೆ ಸೂಚಿಸಿ ಪೇಟೆ ಸೇರಿದ್ದರು. ಮಗನದೇ ವೃತ್ತಿಯಲ್ಲಿ ತೊಡಗಿದ್ದ ಸೊಸೆ ಶ್ರುತಿ ಸದಾ ಕಾಲ ಆಫೀಸು, ತರಬೇತಿ ವಿದೇಶ ಪ್ರವಾಸ ಹೀಗೆ ಕಾಲದ ಗತಿಯನ್ನೇ ಸೋಲಿಸುವ ಶಕ್ತಿ ಇರುವ ಪಾದರಸದಂತಹ ವ್ಯಕ್ತಿತ್ವದವಳು. ಅಂತೂ ಪೇಟೆ ಮನೆ ಸೇರಿದ ಮೂರೇ ತಿಂಗಳಲ್ಲಿ ಇಬ್ಬರಿಗೂ ಅಮೆರಿಕದಲ್ಲಿ ಉದ್ಯೋಗ ಮಾಡುವ ಅವಕಾಶ ಸಿಕ್ಕಿತ್ತು.
'ಈಗ ವಿಶ್ವವೇ ಒಂದು ಹಳ್ಳಿ. ಎಲ್ಲಿದ್ದರೇನು? ಚಿಟಿಕೆ ಹೊಡೆಯುವುದರಲ್ಲಿ ಯಾವ ಕಾರ್ಯ ಬೇಕಾದರೂ ಮಾಡಲು ಸಾಧ್ಯ. 'ನಿಮ್ಮ ಒಂದು ಕೂದಲೂ ಕೊಂಕದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು' ಎಂದು ಮಗ ಆಶ್ವಾಸನೆ ಕೊಟ್ಟಿದ್ದ. ಮಾತ್ರವಲ್ಲ ಅಂತೆಯೇ ನಡೆದಿದ್ದ ಕೂಡ. ಹಣದಿಂದ ಏನು ಬೇಕಾದರೂ ಕೊಳ್ಳಬಹುದು.. ನಿಜ, ಆದರೆ ಪ್ರೀತಿ ವಿಶ್ವಾಸವನ್ನು?!
ಅಲ್ಲಿ ಹೋದ ವರ್ಷದ ಒಳಗೆ ಸೊಸೆ ಗಂಡು ಮಗುವನ್ನು ಹೆತ್ತ ಶುಭ ಸಮಾಚಾರ ತಿಳಿದು ಮುದಿ ಜೀವಗಳು ಸಂತಸ ಪಟ್ಟರು. ಯಾವಾಗ ಪುಟ್ಟ ಬೊಮ್ಮಟೆಯನ್ನು ಎತ್ತಿ ಮುದ್ದಾಡುವೆವೋ ಎಂದು ಚಾತಕ ಪಕ್ಷಿಯಂತೆ ಕಾಯತೊಡಗಿದರು. ಅವರ ನಿರೀಕ್ಷೆಯು ಸುಳ್ಳಾಗಲಿಲ್ಲ . ಮಗ ಸೊಸೆ ಮಗುವಿನ ಜೊತೆ ಊರಿಗೇನೋ ಬಂದರು. ಆದರೆ ಸೊಸೆ ಊರಲ್ಲಿದ್ದಾಗ ಬಹುಪಾಲು ಕಳೆದದ್ದು ಆಕೆಯ ನೆರಳಿನಂತಿರುವ ಅವಳ ಅಮ್ಮನ ಜೊತೆ. ಶಾಸ್ತ್ರಕ್ಕೆ ಎಂಬಂತೆ ಒಂದೇ ಬಾರಿ ಅದೂ ಅಮ್ಮನ ಪಡಿ ನೆರಳಿನಲ್ಲೇ ಕರೆದುಕೊಂಡು ಬಂದಿದ್ದಳು. ಮೊಮ್ಮಗುವನ್ನು ಮುದ್ದಾಡಲೂ ಏನೋ ಅಂಜಿಕೆ. ಒಂದೇ ಹಗಲು ಇದ್ದು ಹೋದಾಗ ಮನಸ್ಸಿಗೆ ಎಷ್ಟು ನೋವಾಗಿರಬೇಡ?!
ಮತ್ತೆ ತಿಂಗಳೊಳಗೆ ಮಗುವಿನ ಆರೈಕೆಯ ಕಾರಣಕ್ಕೆ ನೆರಳಿನಂತಿರುವ ಆ 'ಅಮ್ಮಮ್ಮ'ನ ಜೊತೆ ಅಮೇರಿಕಾ ಹಾರಿದ್ದರು ದಂಪತಿಗಳು.
ಮೊಮ್ಮಗನನ್ನು ಮುದ್ದಿಸುವ, ಆಡಿಸುವ ತಮ್ಮ ಬಯಕೆ ಈಡೇರಿತೇ? ಮುಂದೆ ಅಂತಹ ದಿನಗಳು ಬಂದೀತೇ?! ಬದುಕು ಯಾಕೋ ನೀರಸವಾಗಿತ್ತು.
ತಮ್ಮ ಫ್ಲ್ಯಾಟ್ ಪಕ್ಕದಲ್ಲಿ ನೆಲೆಸಿದ್ದ ಗುಜರಾತಿ ದಂಪತಿಗಳು ತಮ್ಮ ಪುಟ್ಟ ಮಗುವಿನೊಂದಿಗೆ ಸಂಜೆ ಹೊತ್ತಿನಲ್ಲಿ ಬಾಲ್ಕನಿಯಲ್ಲಿ ಕಾಣಿಸುತ್ತಿದ್ದರು. ಪ್ರೀತಿಗೆ ಭಾಷೆಯ ಹಂಗಿಲ್ಲವಲ್ಲ... ಕೂಸಂತೂ ಆಗಷ್ಟೇ ಬಿರಿಯುವ ಮೊಗ್ಗಿನಂತೆ ಸುಂದರ ನಗು ರವಾನಿಸುತ್ತಿತ್ತು. ಆ ಕಾರಣವೇ ಇರಬಹುದು ಹಿರಿಯರು ಪರಸ್ಪರ ಭಾಷೆ ಗೊತ್ತಿಲ್ಲದಿದ್ದರೂ ಅದ್ಹೇಗೋ ಸಂವಹನ ನಡೆಸುತ್ತಿದ್ದರು. ಅವರೂ ಇಂಜಿನಿಯರ್ ದಂಪತಿಗಳು. ಅಂತರ್ಜಾತಿ ವಿವಾಹ ಆಗಿದ್ದರಿಂದ ಮನೆಯವರ ವಿರೋಧ ಇನ್ನೂ ಆರಿರಲಿಲ್ಲ ಎಂದು ಅವರ ಮಾತಿನಿಂದ ವ್ಯಕ್ತವಾಗಿತ್ತು. ಮೆಟರ್ನಿಟಿ ರಜೆಯಲ್ಲಿ ಮಗುವಿನೊಂದಿಗೆ ಸಂತಸದಿಂದ ಕಳೆಯುತ್ತಿರುವ ಆಕೆಗೆ ಮುಂದೆ ಮಗುವನ್ನು ನೋಡಲು ನಂಬಿಕಸ್ಥ ಹೆಂಗಸನ್ನು ಹುಡುಕಬೇಕಿತ್ತೆಂದು ಅವಳ ಮಾತಿನಿಂದ ತಿಳಿದಾಗ ಆ ಭಾಗ್ಯ ತನಗೆ ದೊರೆತರೆ..
ಎಂದು ಶಾರದಮ್ಮರ ಮನಸು ಒಂದು ಕ್ಷಣ ಯೋಚಿಸಿತು. ಆಗಲೇ ಅವರ ಮುಖದಲ್ಲಿ ಮಂದಹಾಸವೊಂದು ಹುಟ್ಟಿತು. ಗುಜರಾತಿ ದಂಪತಿಗಳ ಮಗು ಕಾಕತಾಳೀಯವೆಂಬಂತೆ ನಕ್ಕಿತು. ಶಾಮರಾಯರು ಒಂದರೆಕ್ಷಣವೂ ತಡ ಮಾಡದೆ " ನಾವಿರುವಾಗ ಮಗುವನ್ನು ನೋಡಿಕೊಳ್ಳಲು ಯಾಕೆ ಬೇರೆಯವರನ್ನು ಹುಡುಕಬೇಕು? ಅದಕ್ಕೆ ನಾವೇ ಅಜ್ಜ ಅಜ್ಜಿಯರಾಗುವೆವು.. ತಮಗೆ ಒಪ್ಪಿಗೆಯಾದರೆ ಮಾತ್ರ" ಎಂದಾಗ ಆ ದಂಪತಿಗಳ ಕಣ್ಣಲ್ಲಿ ಸಾವಿರಾರು ನಕ್ಷತ್ರಗಳು ಒಮ್ಮೆಲೇ ಹೊಳೆದಂತಾಯಿತು. ಮಗು ಮತ್ತೆ ನಗೆ ಮುತ್ತುದುರಿಸುವಾಗ, ಸ್ವತಃ ಶಾರದಮ್ಮನೇ ಎತ್ತಿ ಮುತ್ತಾಡಿಸಿ ಅಂಬಲಿ ತಯಾರಿಸಲು ಒಳಹೋದರು.
Creative Writings
