Karada Vishwa

News · October 28, 2026

ಕೊಂಗೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಪನ್ನ

ಕೊಂಗೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಧಾರ್ಮಿಕ ಶ್ರದ್ಧೆ ಹಾಗೂ ಭಕ್ತಿಭಾವದಿಂದ ಜರುಗಿತು.

ಅಕ್ಟೋಬರ್ 11ರ ಭಾನುವಾರ ಅಶ್ವಯುಜ ಪಾಡ್ಯದಂದು ಬೆಳಿಗ್ಗೆ 9.30ಕ್ಕೆ ಕೊಪ್ಪರಿಗೆ ಮುಹೂರ್ತ ನೆರವೇರಿಸುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಅಕ್ಟೋಬರ್ 20ರ ಮಹಾನವಮಿಯವರೆಗೆ ಪ್ರತಿದಿನ ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ, ಶ್ರೀ ದೇವೀ ಮಹಾತ್ಮೆ ಸಪ್ತಶತೀ ಪಾರಾಯಣ ಹಾಗೂ ಮಧ್ಯಾಹ್ನದ ಪೂಜೆಯ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಪೂಜೆ, ವಿವಿಧ ಸೇವೆಗಳು ಹಾಗೂ ಪ್ರಸಾದ ವಿತರಣೆಯೂ ಹತ್ತು ದಿನಗಳ ಕಾಲ ನೆರವೇರಿತು.

ನವರಾತ್ರಿ ಉತ್ಸವದ ಅಂಗವಾಗಿ ಚೌತಿಯಂದು ಗಣಪತಿ ಹೋಮ, ಮೂಲಾ ನಕ್ಷತ್ರದಂದು ತೆನೆ ಹಬ್ಬ ಹಾಗೂ ಶುಕ್ರವಾರ ಸಂಜೆ ದುರ್ಗಾ ನಮಸ್ಕಾರ ಪೂಜೆ ನಡೆಯಿತು. ಮಹಾನವಮಿಯಂದು ರಾತ್ರಿ ವಿಶೇಷ ಪೂಜೆ ನೆರವೇರಿಸಿ ಭಕ್ತಾದಿಗಳಿಗೆ ಮಂತ್ರಾಕ್ಷತೆ ವಿತರಿಸಲಾಯಿತು.

ವಿಜಯದಶಮಿಯಂದು ವಿದ್ಯಾದಶಮಿ ಪ್ರಯುಕ್ತ ಕಲಶಾಭಿಷೇಕ, ಪಂಚಗವ್ಯ ಹಾಗೂ ಅಕ್ಷರಾಭ್ಯಾಸ ಕಾರ್ಯಕ್ರಮಗಳು ನೆರವೇರಿದವು. ಭಕ್ತರು ದೇವಿಯ ದರ್ಶನ ಪಡೆದು ವಿಶೇಷ ಪೂಜೆಗಳಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾದರು.

ನವರಾತ್ರಿ ಉತ್ಸವವು ದೇವಸ್ಥಾನದ ಧಾರ್ಮಿಕ ಪರಂಪರೆ ಹಾಗೂ ಭಕ್ತರ ಆಧ್ಯಾತ್ಮಿಕ ಶ್ರದ್ಧೆಯನ್ನು ಪ್ರತಿಬಿಂಬಿಸುವ ಮೂಲಕ ಭಕ್ತಿಯುತವಾಗಿ ಸಾಂಗವಾಗಿ ನೆರವೇರಿತು.

Temples