Karada Vishwa

Article · May 16, 2026

ಸಾಕ್ಷಿ

- ಚಂದ್ರಹಾಸ ಕನ್ನಡ್ಕ

ಎಲ್ಲಿ ಅಡಗಿರುವೆ ಮಗು ನನ್ನ ಒಳಗೆ
ಬಂದು ಬೇಗನೆ ಸೇರು ಈ ಮಡಿಲಿಗೆ

ನಿನ್ನ ಆರೈಕೆಯಲೆ ಕಾಲ ಕಳೆವೆ
ಅಮ್ಮ ಕಲಿಸಿದ ಪಾಠ ನಿನಗೆ ಪೇಳ್ವೆ
ನಿನ್ನ ವದನದಲೇನೆ ನನ್ನ ಪ್ರತಿಬಿಂಬ
ದೃಷ್ಟಿ ಬೊಟ್ಟಿನ ಗುಟ್ಟು ಮನದ ತುಂಬ

ಕಿರುಗಾಲ ನೇವರಿಸಿ ನಾ ಹರಸುವೆ
ಕಿರು ಬೆರಳ ತುದಿಗೆ ಸವಿ ಮುತ್ತನೀವೆ
ನೆತ್ತಿಯಲಿ ನಸುನಗುವ ಎಳೆಗೂದಲು
ಕಣ್ಣಲ್ಲಿ ಕಣ್ಣಿಟ್ಟು ಮಾತಾಡಲು

ಹಣೆತುಂಬ ಮುತ್ತಿಡುವೆ ನನ್ನ ಮಗುವೆ
ಎಳೆಯ ಮೈ ನವಿರಾಗಿ ನೇವರಿಸುವೆ
ನಿನ್ನ ಕಿಲ ಕಿಲ ನಗುವೆ ಸಂಗೀತವು
ದಿವ್ಯ ಅನುಭೂತಿ ನಿನ ಸಾಂಗತ್ಯವು

ಅಮೃತ ತುಂಬಿದ ಕಳಶ ನಿನಗಾಗಿಯೇ
ದಿನರಾತ್ರಿ ನೆನಪೆಲ್ಲ ನಿನ್ನ ಬಳಿಯೇ
ನೀನು ಬಳಿ ಬರಲು ನಾ ಜಗ ಮರೆಯುವೆ
ಸೃಷ್ಟಿ ಸೂತ್ರದ ಗುಟ್ಟು ನಮ್ಮ ಬಳಿಯೇ

ಎಲ್ಲ ತಲ್ಲಣಗಳಿಗು ಪರಿಹಾರ ನೀನು
ಮಾತೆ ಮಮತೆಗೆ ಹೆಸರು ಬೇರಿಲ್ಲ ಇನ್ನು
    

✍️ಚಂಕ ೨೮/೦೪/೨೦೨೬
Creative Writings