Karada Vishwa

Article · September 18, 2026

ಗ್ರಾಂಡ್ ಟೆಟಾನ್ ರಾಷ್ಟ್ರೀಯ ಉದ್ಯಾನವನ : ನೀಲ ಸರೋವರಗಳ ನಾಡಿನಲ್ಲಿ

ಪದ್ಮಶ್ರೀ ಮಾದೇರಿ

ಅಮೇರಿಕಾ ಪ್ರವಾಸ ಭಾಗ-4

ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನವನದ ವಿಶಿಷ್ಟ ಅದ್ಭುತಗಳನ್ನು ಕಣ್ತುಂಬಿಕೊಂಡು ಅಲ್ಲಿಂದ ಹೊರಟಾಗ, ಇನ್ನುಳಿದ ಆರು ದಿನಗಳ ಪ್ರವಾಸದಲ್ಲಿ ಇಷ್ಟೊಂದು ಸುಂದರವಾದ ಪ್ರಕೃತಿ ಸೌಂದರ್ಯ ನಾವು ಹೋಗುವ ಬೇರೆ ಯಾವ ಸ್ಥಳದಲ್ಲಿಯೂ ಸಿಗಲಾರದು ಎಂದುಕೊಂಡಿದ್ದೆವು. ಆದರೆ, ಗ್ರಾಂಡ್ ಟೆಟಾನ್ ರಾಷ್ಟ್ರೀಯ ಉದ್ಯಾನವನ ತಲುಪಿದ ಕ್ಷಣವೇ ನಮ್ಮ ಊಹೆ ತಪ್ಪೆಂದು ನಮಗೆ ಮನದಟ್ಟಾಯಿತು. ಈ ಉದ್ಯಾನವನದಲ್ಲಿ ಪ್ರಕೃತಿಯು ತನ್ನ ಮತ್ತೊಂದು ಮನಮೋಹಕ ರೂಪದಿಂದ ನಮ್ಮನ್ನು ಸ್ವಾಗತಿಸುತ್ತಿತ್ತು.

ಅಮೆರಿಕದ ವ್ಯೋಮಿಂಗ್ ರಾಜ್ಯದಲ್ಲಿರುವ ಗ್ರಾಂಡ್ ಟೆಟಾನ್ ರಾಷ್ಟ್ರೀಯ ಉದ್ಯಾನವನದ ವಿಸ್ತೀರ್ಣ ಸುಮಾರು 3,10,000 ಎಕರೆಗಳು. ಇಲ್ಲಿ ಬಿಸಿನೀರ ಬುಗ್ಗೆಗಳು, ಗೀಸರ್ ಗಳು ಇಲ್ಲ. ಅದರ ಬದಲಿಗೆ ಆಕಾಶದೆತ್ತರಕ್ಕೆ ಚಾಚಿಕೊಂಡಿರುವ ಹಿಮಾಚ್ಛಾದಿತ ಪರ್ವತಗಳು, ಅದರ ಬುಡದಲ್ಲಿರುವ ನೀಲಿ ಸರೋವರಗಳು, ಹಸಿರು ಕಣಿವೆಗಳು, ಸರ್ಪದಂತೆ ಹರಿಯುವ ನದಿಗಳು ಮತ್ತು ಮುಕ್ತವಾಗಿ ಸಂಚರಿಸುವ ವನ್ಯಜೀವಿಗಳು ಈ ಉದ್ಯಾನಕ್ಕೆ ವಿಶಿಷ್ಟ ಸೌಂದರ್ಯ ನೀಡುತ್ತವೆ. ಈ ಉದ್ಯಾನವನದ ಪ್ರಮುಖ ವಿಶೇಷತೆಯೇ ಅದರ ಭವ್ಯವಾದ ಟೆಟಾನ್ ಎಂಬ ಹೆಸರಿಂದ ಕರೆಯಲ್ಪಡುವ ಪರ್ವತ ಶ್ರೇಣಿ. ಸಾಮಾನ್ಯವಾಗಿ ಪರ್ವತಗಳು ಇಳಿಜಾರಿನಿಂದ ಹಂತಹಂತವಾಗಿ ಮೇಲೇರಿದಂತೆ ಕಾಣುತ್ತವೆ. ಆದರೆ ಟೆಟಾನ್ ಪರ್ವತಗಳ ಸ್ವರೂಪವೇ ವಿಭಿನ್ನ. ಜಾಕ್ಸನ್ ಹೋಲ್ ಎಂಬ ವಿಶಾಲವಾದ ಕಣಿವೆಯಿಂದ ಏಕಾಏಕಿ ಮೇಲಕ್ಕೆ ಏರಿರುವಂತೆ ಕಾಣುವ ಈ ಪರ್ವತಗಳು ಆಕಾಶವನ್ನು ಮುಟ್ಟುವಂತೆ ಭಾಸವಾಗುತ್ತದೆ. ಈ ಪರ್ವತ ಶ್ರೇಣಿಯಲ್ಲಿ ಅನೇಕ ಹಿಮ ನದಿಗಳಿವೆ( Glacier). ಈ ಹಿಮನದಿಗಳು,ಇಂದು ನಾವು ಕಾಣುವ ಪರ್ವತಗಳು,ಅವುಗಳ ನಡುವಿನ ವಿಶಾಲವಾದ ಕಣಿವೆಗಳು ಮತ್ತು ಸುಂದರ ಸರೋವರಗಳ ರೂಪುಗೊಳ್ಳುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಈ ಉದ್ಯಾನವನ ಸುತ್ತಾಡಲು ನಾವು ಎರಡೂವರೆ ದಿನಗಳನ್ನು ಮೀಸಲಿಟ್ಟಿದ್ದೆವು. ಅದರಲ್ಲಿ ಮೊದಲ ದಿನ ಜೋರು ಮಳೆ ಸುರಿದು, ಉಷ್ಣಾಂಶ ವಿಪರೀತ ಕಡಿಮೆ ಆಗಿದ್ದರಿಂದ ನಾವು ರೂಮಿನಲ್ಲಿಯೇ ಉಳಿಯಬೇಕಾಯಿತು. ಆದರೆ ಇದರಿಂದ ಯಾರಿಗೂ ಬೇಸರವಾಗಲಿಲ್ಲ. ನಿಜ ಹೇಳಬೇಕೆಂದರೆ ಎಲ್ಲರಿಗೂ "ಅಬ್ಬಬ್ಬ, ಒಳ್ಳೆಯದಾಯಿತು" ಅಂತ ಅನಿಸಿತ್ತು. ಏಕೆಂದರೆ ಒಂದು ವಾರದಿಂದ ಸುತ್ತಾಡಿ ಎಲ್ಲರೂ ವಿಪರೀತವಾಗಿ ದಣಿದಿದ್ದೆವು. ಒಳ್ಳೆಯ ನಿದ್ದೆ ಮಾಡಿದೆವು. ಮಕ್ಕಳ ಜೊತೆ ಆಟ ಆಡಿದೆವು. ಒಂದು ದಿನ ವಿಶ್ರಾಂತಿ ಸಿಗಲು ಕಾರಣವಾದ ವರುಣದೇವನಿಗೆ ಮನಸ್ಸಿನಲ್ಲಿಯೇ ಕೃತಜ್ಞತೆ ಸಲ್ಲಿಸಿದೆವು. ನಮಗೆ ಈ ಉದ್ಯಾನವನದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಕೇವಲ ಒಂದೂವರೆ ದಿನ ಉಳಿದ ಕಾರಣ ಪ್ರಮುಖ ಸ್ಥಳಗಳಿಗೆ ಮಾತ್ರ ಭೇಟಿಕೊಡಲು ನಿರ್ಧರಿಸಿದೆವು. ಅವುಗಳಲ್ಲಿ ನಮ್ಮ ಮನಸೂರೆಗೊಂಡ ಜಾಗಗಳ ಬಗ್ಗೆ ಬರೆಯುವೆ.

ಜಾಕ್ಸನ್ ಲೇಕ್ :

ಇದು ಗ್ರಾಂಡ್ ಟೆಟಾನ್ ರಾಷ್ಟ್ರೀಯ ಉದ್ಯಾನವನದ ಅತಿ ದೊಡ್ಡ ಸರೋವರವೆಂದು ಪ್ರಸಿದ್ಧವಾಗಿದೆ. ಇದು ಮೂಲತಃ ಹಿಮನದಿಗಳ ಚಲನೆಯಿಂದ ರೂಪುಗೊಂಡ ನೈಸರ್ಗಿಕ ಸರೋವರವಾದರೂ, 1911 ರ ಆಸುಪಾಸಿನಲ್ಲಿ, ಸುಮಾರು 39 ಅಡಿ ಎತ್ತರದ ಅಣೆಕಟ್ಟು ನಿರ್ಮಿಸಿ ನೀರಿನ ಮಟ್ಟವನ್ನು ಹೆಚ್ಚಿಸಲಾಯಿತು. ಶಾಂತವಾದ ದಿನಗಳಲ್ಲಿ, ಸರೋವರದ ನೀರಿನಲ್ಲಿ ಹಿಮಾಮೃತ ಪರ್ವತಗಳ ಪ್ರತಿಬಿಂಬ ಕಾಣಿಸುತ್ತದೆಯಂತೆ. ನಾವು ಹೋದಾಗ ಮೋಡ ಕವಿದ ವಾತಾವರಣವಿದ್ದ ಕಾರಣ, ನಮಗೆ ಪ್ರತಿಬಿಂಬ ಕಾಣಿಸಲಿಲ್ಲ. ಬೇರೆ ಯಾವ ಪ್ರವಾಸಿಗರು ಅಲ್ಲಿರಲಿಲ್ಲ. ಹಾಗಾಗಿ ನಿಶ್ಯಬ್ದತೆ ಆವರಿಸಿತ್ತು. ವಿಶಾಲವಾದ ಸರೋವರ, ಸುತ್ತಲೂ ಎದ್ದು ನಿಂತಿದ್ದ ಟೆಟಾನ್ ಪರ್ವತಶ್ರೇಣಿ, ಸೌಮ್ಯವಾದ ನೀರಿನ ಅಲೆಗಳ ಸದ್ದು, ತಣ್ಣಗೆ ಬೀಸುತ್ತಿದ್ದ ಗಾಳಿ ನಮ್ಮನ್ನು ಮಂತ್ರಮುಗ್ಧಗೊಳಿಸಿತು.

ಜೆನ್ನಿ ಲೇಕ್ :

ಇದು ಗ್ರಾಂಡ್ ಟೆಟಾನ್ ರಾಷ್ಟ್ರೀಯ ಉದ್ಯಾನವನದಲ್ಲಿ, ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸರೋವರವಾಗಿದೆ. ಟೆಟಾನ್ ಪರ್ವತಶ್ರೇಣಿಯ ಬುಡದಲ್ಲಿಯೇ ಇರುವ ಈ ಸರೋವರ, ಹಿಮಾವೃತ ಪರ್ವತಗಳ ಮಡಿಲಲ್ಲಿ ಹುದುಗಿರುವ ನೀಲಿ ರತ್ನದಂತೆ ಕಾಣುತ್ತದೆ. ಇಲ್ಲಿ ಪ್ರವಾಸಿಗರನ್ನು ಮೋಟಾರ್ ಬೋಟಿನಲ್ಲಿ ಸರೋವರದ ಇನ್ನೊಂದು ದಡಕ್ಕೆ ಕರೆದೊಯ್ದು ಬಿಡಲಾಗುತ್ತದೆ. ಆ ಭಾಗದಲ್ಲಿ ನೋಡಲು ಅನೇಕ ಪ್ರವಾಸಿ ತಾಣಗಳಿವೆ. ಪ್ರವಾಸಿಗರು ತಮ್ಮ ಅನುಕೂಲಕ್ಕೆ ತಕ್ಕಂತೆ ಈ ಸ್ಥಳಗಳಿಗೆ ಭೇಟಿ ನೀಡಿ ಸಂಜೆ 5 ಗಂಟೆಯೊಳಗೆ ಮತ್ತೆ ಬೋಟಿಂಗ್ ಡಾಕ್ ಗೆ ಹಿಂದಿರುಗಬೇಕು.

ಪ್ರವಾಸಿಗರ ನೂಕು ನುಗ್ಗಲನ್ನು ತಪ್ಪಿಸಲು, ನಾವು ಬೆಳಗ್ಗೆ ಬೇಗನೆ ಎದ್ದು ಸುಮಾರು 6:30ಗೆ ಜೆನ್ನಿ ಸರೋವರ ತಲುಪಿದ್ದೆವು.ಆದರೆ ಅಷ್ಟು ಮುಂಜಾನೆಯೇ ಬೋಟಿಂಗ್ ಗಾಗಿ ಪ್ರವಾಸಿಗರ ಸರದಿಸಾಲು ಇತ್ತು. ನಾವು ಕೂಡ ಸಾಲಿನಲ್ಲಿ ನಿಂತೆವು. ನಮ್ಮ ಸರದಿ ಬರಲು ಸುಮಾರು ಅರ್ಧ ಗಂಟೆ ಕಾಯಬೇಕಾಯಿತು. ನಮ್ಮ ಸಾಲಿನ ಬದಿಯಲ್ಲಿ ಸರೋವರದ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡುವ ಅನೇಕ ಫಲಕಗಳನ್ನು ಹಾಕಿದ್ದರು. ಸಮಯ ಸಿಕ್ಕಷ್ಟು ಅವುಗಳನ್ನು ಓದಿ ತಿಳಿದುಕೊಂಡೆವು.

ಮೋಟಾರ್ ಬೋಟಿನ ಪ್ರಯಾಣ ಬಹಳ ಚಳಿಯಿದ್ದರೂ, ಆಹ್ಲಾದಕರವಾಗಿತ್ತು. ಸುಮಾರು ಕಾಲು ಗಂಟೆಯಲ್ಲಿ ಆಚೆ ದಡ ತಲುಪಿದ್ದೆವು. ಅಲ್ಲಿ ಇಳಿದು, ಕಾಡಿನಲ್ಲಿ ಮುಗಿಲೆತ್ತರಕ್ಕಿದ್ದ ಮರಗಳ ನಡುವೆ ಇದ್ದ ಕಾಲುದಾರಿಯಲ್ಲಿ ನಡೆಯುತ್ತಾ ಹೋದಂತೆ, ಜುರಾಸಿಕ್ ಪಾರ್ಕ್ ಸಿನಿಮಾದಲ್ಲಿ ನಾವೇ ಇದ್ದಂತೆ ಭಾಸವಾಯಿತು. ಅಷ್ಟು ದಟ್ಟವಾದ ಕಾಡು ಅದು. ಸುಮಾರು ಅರ್ಧ ಗಂಟೆ ನಡೆದ ನಂತರ ಹಿಡನ್ ಫಾಲ್ಸ್ ತಲುಪಿದೆವು. ಹೆಸರಿಗೆ ತಕ್ಕಂತೆ ಹಿಡನ್ (ಅಡಗಿರುವ) ಆಗಿರುವ ಈ ಜಲಪಾತದ ತೀರಾ ಹತ್ತಿರ ಹೋಗುವವರೆಗೂ ಅದು ಕಾಣಿಸುವುದಿಲ್ಲ. ಹಿಮನದಿಗಳಿಂದ ರೂಪುಗೊಂಡು, ಟೆಟಾನ್ ಪರ್ವತದಿಂದ ಹರಿದು ಬರುವ ನೀರು, ಇಲ್ಲಿ ಜಲಪಾತವಾಗಿ ಕೆಳಗೆ ಧುಮ್ಮಿಕ್ಕುವ ದೃಶ್ಯ ಅಪೂರ್ವ. ನಾವು ಇಲ್ಲಿ ಸುತ್ತಮುತ್ತ ಸ್ವಲ್ಪ ಓಡಾಡಿ, ಅನೇಕ ಫೋಟೋಗಳನ್ನು ಕ್ಲಿಕ್ಕಿಸಿ, ಮುಂದಿನ ಪ್ರವಾಸಿ ತಾಣದತ್ತ ನಡೆಯಲಾರಂಭಿಸಿದೆವು.

ದಾರಿಯಲ್ಲಿ ಸ್ವಲ್ಪ ದೂರ ನಡೆದ ನಂತರ,ವಿರಮಿಸಲು ಬದಿಯಲ್ಲಿದ್ದ ಕಲ್ಲು ಬಂಡೆಗಳ ಮೇಲೆ ಕುಳಿತೆವು. ಅಲ್ಲಿ ಅಳಿಲನ್ನೇ ಹೋಲುವ ಪುಟ್ಟ ಪುಟ್ಟ ಪ್ರಾಣಿಗಳಿದ್ದವು. ಅವುಗಳು ಯಾವುದೇ ಭಯ - ಅಂಜಿಕೆಯಿಲ್ಲದೆ, ಪ್ರವಾಸಿಗರ ಬಳಿ ತಿನ್ನಲು ಏನಾದರೂ ಸಿಗುವುದೋ ಎಂದು ಹತ್ತಿರ ಹೋಗುತ್ತಿದ್ದವು. ನನ್ನ ತಂಗಿ ಅದರ ಹೆಸರು ಚಿಪ್ಮಂಕ್ ಎಂದಳು. ಒಂದಂತೂ ನನ್ನ ಪಕ್ಕ ಬಂದು, ನನ್ನ ಕೈಯಲ್ಲಿ ತಿಂಡಿ ಇದೆಯಾ ಅಂತ ತನ್ನ ಪುಟ್ಟ ಕೈಗಳಿಂದ ನೋಡಿತು. ಏನೂ ಸಿಗದೆ ನಿರಾಸೆಯಿಂದ ಅಲ್ಲಿಂದ ಬೇರೆಡೆ ಹೋಯಿತು.

ಹಿಡನ್ ಫಾಲ್ಸ್ ನಿಂದ ಸುಮಾರು ಅರ್ಧ- ಮುಕ್ಕಾಲು ಮೈಲಿ ಕಡಿದಾದ ಪರ್ವತದ ಹಾದಿಯಲ್ಲಿ ಹತ್ತುತ್ತಾ ಹೋದರೆ, ಇನ್ಸ್ಪಿರೇಷನ್ ಪಾಯಿಂಟ್ ಸಿಗುತ್ತದೆ. ಇಲ್ಲಿಂದ ಜೆನ್ನಿ ಸರೋವರದ ವಿಶಾಲವಾದ ನೀಲಿ ನೀರು, ಅದರ ಸುತ್ತಲಿನ ಹಸಿರು ಕಣಿವೆ ಮತ್ತು ದೂರದಲ್ಲಿ ಎದ್ದು ನಿಂತಿರುವ ಟೆಟಾನ್ ಪರ್ವತಶ್ರೇಣಿಯನ್ನು ಒಂದೇ ನೋಟದಲ್ಲಿ ಕಾಣಬಹುದು. ತಂಗಿಯಂತೂ ಭಯದಿಂದ ಅಲ್ಲಿಗೆ ಬರಲು ಒಪ್ಪಲೇ ಇಲ್ಲ. ಕೊನೆಗೆ ಅವಳನ್ನು ಅಲ್ಲಿಯೇ ಬಿಟ್ಟು ನಾವು ಮಾತ್ರ ಹತ್ತಿದೆವು. ಅಂತೂ ಇನ್ಸ್ಪಿರೇಷನ್ ಪಾಯಿಂಟ್ ತಲುಪಿದಾಗ ಅಲ್ಲಿನ ಅದ್ಭುತ ದೃಶ್ಯ ನೋಡಿ ಅವಕ್ಕಾದೆವು. ಕೆಲ ಕ್ಷಣ ನಮ್ಮ ಬಾಯಿಯಿಂದ ಮಾತೇ ಹೊರಡಲಿಲ್ಲ. ಕೆಳಗಿನಿಂದ ನೋಡಿದ ಸರೋವರಕ್ಕಿಂತ ಇಲ್ಲಿಂದ ಕಾಣುವ ಸರೋವರದ ರೂಪವೇ ಸಂಪೂರ್ಣ ಭಿನ್ನವಾಗಿತ್ತು. ಕ್ಯಾಮರಾದಲ್ಲಿ, ಮೊಬೈಲ್ ನಲ್ಲಿ ಎಷ್ಟು ಚಿತ್ರಗಳನ್ನು ಸೆರೆಹಿಡಿದರೂ, ಆ ಕ್ಷಣದಲ್ಲಿ ಮನಸ್ಸಿನಲ್ಲಿ ಮೂಡಿದ ಅನುಭವವನ್ನು ಅದರಲ್ಲಿ ಸಂಪೂರ್ಣವಾಗಿ ಹಿಡಿದಿಡಲು ಸಾಧ್ಯವಿಲ್ಲವೆನಿಸಿತು.ಅಲ್ಲಿಂದ ಹೊರಡಲು ಮನಸ್ಸಿಲ್ಲದಿದ್ದರೂ, ತಂಗಿ ಕೆಳಗೆ ಕಾಯುತ್ತಿದ್ದುದರಿಂದ, ಜಾಸ್ತಿ ಹೊತ್ತು ನಿಲ್ಲಲಾಗದೇ ಹೊರಡಬೇಕಾಯಿತು. ಅವಳ ಬಳಿ, ನಾವು ಮೇಲೆ ಕಂಡದ್ದನ್ನು ಸ್ವಲ್ಪ ಉಪ್ಪು ಖಾರ ಸೇರಿಸಿ ಹೇಳಿ, ಅವಳ ಹೊಟ್ಟೆ ಉರಿಸಿದೆವು. ಅಲ್ಲಿ ಸ್ವಲ್ಪ ವಿರಮಿಸಿ ಬೋಟ್ ನತ್ತ ಹೆಜ್ಜೆ ಹಾಕಿದೆವು.

ಗ್ರಾಂಡ್ ಟೆಟಾನ್ ಉದ್ಯಾನವನದಿಂದ ಹೊರಟಾಗ, ಕಣ್ಣೆದುರಿನ ದೃಶ್ಯಗಳು ದೂರವಾದರೂ, ಅಲ್ಲಿನ ಮೈಮರೆಸುವ ಸೌಂದರ್ಯ ನಮ್ಮ ಮನಸ್ಸಿನಲ್ಲಿ ಹಾಗೆಯೇ ಉಳಿದಿತ್ತು. ಕೆಲವು ಸ್ಥಳಗಳು ಕೇವಲ ನೋಡಲು ಮಾತ್ರ ಸೀಮಿತವಾಗದೇ, ಅವುಗಳನ್ನು ಅನುಭವಿಸಿದಾಗ ಆಗುವ ಸಂತೋಷ ಮತ್ತು ಸಿಗುವ ನೆಮ್ಮದಿ ಶಾಶ್ವತವಾಗಿ ಉಳಿಯುವ ನೆನಪುಗಳಾಗುತ್ತವೆ. ಗ್ರಾಂಡ್ ಟೆಟಾನ್ ನಮಗೆ ಅಂತಹ ಒಂದು ಮರೆಯಲಾಗದ ಅನುಭವವನ್ನು ನೀಡಿತು.

Travel