
Article · April 6, 2026
ಅಕ್ಷರ ಸಂತ, ನಿರಕ್ಷರಿ ಇನ್ಮುಂದೆ ಪದ್ಮಶ್ರೀ 'ಡಾಕ್ಟರ್' ಹರೇಕಳ ಹಾಜಬ್ಬ!
ಈ ಬಾರಿಯ ನ್ಯೂಮಂಗಳೂರುಟೈಮ್ಸ್ ಪಾಕ್ಷಿಕದಲ್ಲಿ ರವೀ ಸಜಂಗದ್ದೆ ಬರಹ...
"ನಾನು ಶಾಲೆಗೆ ಹೋಗಿಲ್ಲ, ಆದರೆ ನನ್ನ ಹಳ್ಳಿಯ ಮಕ್ಕಳು ಶಾಲೆಗೆ ಹೋಗಿ, ವಿದ್ಯಾವಂತರಾಗಿ ಯಶಸ್ಸು ಗಳಿಸಬೇಕು ಎಂಬ ಹಂಬಲ ತುಡಿತ ಸದಾ ನನ್ನಲ್ಲಿ ಮನೆಮಾಡಿತ್ತು. ಅದು ಊರಿನಲ್ಲಿ ಶಾಲೆ ಕಟ್ಟಿಸಲು ಪ್ರೇರೇಪಿಸಿತು." - ಹರೇಕಳ ಹಾಜಬ್ಬ
"ಹರೇಕಳ ಹಾಜಬ್ಬನವರ ಜೀವನವು ನಮಗೆಲ್ಲರಿಗೂ ಸ್ಫೂರ್ತಿ. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಮತ್ತು ಅವರ ಸರಳತೆ ಎಲ್ಲರಿಗೂ ಮಾದರಿಯಾಗಿದೆ. ಕಿತ್ತಳೆ ಹಣ್ಣು ಮಾರುವ ಒಬ್ಬ ಸಾಮಾನ್ಯ ವ್ಯಕ್ತಿ, ತನ್ನ ಅಲ್ಪ ಆದಾಯದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಶಾಲೆ ಕಟ್ಟಿಸುವುದು ಅಸಾಮಾನ್ಯ ಸಾಧನೆಯೇ ಸರಿ. ಇದು ಅವರ ಅಸಾಧಾರಣ ದೃಷ್ಟಾಲ ಮತ್ತು ಇಚ್ಛಾಶಕ್ತಿಯನ್ನು ತೋರಿಸುತ್ತದೆ. ಅವರು ನಿಸ್ವಾರ್ಥ ಸೇವೆಯ ಸಾಕಾರ ರೂಪ." - ಸನ್ಮಾನ್ಯ ಶ್ರೀ ನರೇಂದ್ರ ಮೋದಿ.
ಬಾಹ್ಯ ನೋಟಕ್ಕೆ ಅವರು ತೀರಾ ಸಾಮಾನ್ಯ ವ್ಯಕ್ತಿ. ಮೈಮೇಲೊಂದು ಸಾದಾ ಬಿಳಿ ಅಂಗಿ, ಪಂಚೆ, ಚಪ್ಪಲಿಯಿಲ್ಲದ ಬರಿಗಾಲು. ಆದರೆ ಆ ವ್ಯಕ್ತಿತ್ವದ ಎತ್ತರ ಅಳೆಯಲು ಹೋದರೆ ಆಕಾಶವೇ ಕುಬ್ಜವೆನಿಸುತ್ತದೆ. ಅವರೇ ಕಿತ್ತಳೆ ಹಣ್ಣು ಮಾರುತ್ತಾ ಹನಿ ಹನಿ ಕೂಡಿಸಿ ಶಾಲೆಯೆಂಬ ಜ್ಞಾನ ದೇಗುಲವನ್ನು ನಿರ್ಮಿಸಿದ 'ಅಕ್ಷರ ಸಂತ' ಹರೇಕಳ ಹಾಜಬ್ಬ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಹರೇಕಳ ನ್ಯೂಪಡ್ಪು ಎಂಬ ಪುಟ್ಟ ಹಳ್ಳಿಯ ಈ ಸಾಮಾನ್ಯ ಮನುಷ್ಯ ಜಗತ್ತೇ ಬೆರಗಾಗುವಂತಹ ಅಸಾಮಾನ್ಯ ಸಾಧನೆ ಮಾಡಿ ಇತಿಹಾಸ ನಿರ್ಮಿಸಿದ್ದಾರೆ.
ಹಾಜಬ್ಬನವರ ಬದುಕು ಕಿತ್ತಳೆ ಹಣ್ಣು ಮಾರಾಟ ಮಾಡುವುದರೊಂದಿಗೆ ಶುರುವಾಯಿತು. ಹಾಜಬ್ಬ ಪ್ರತಿ ದಿನ ದುಡಿದರೆ ಮಾತ್ರ ಅವರ ಮನೆಯಲ್ಲಿ ಈಗಲೂ ಒಲೆ ಉರಿಯುತ್ತದೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರನಿದ್ದಾನೆ. ಇಂತಹ ಬಡತನದ ಬದುಕಿನ ನಡುವೆಯೂ ತನ್ನ ನೆಲದ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎಂದು ಹಂಬಲಿಸಿದ ಹಾಜಬ್ಬನವರ ವ್ಯಕ್ತಿತ್ವ ನಿಜಕ್ಕೂ ಅಕ್ಷರ ಮತ್ತು ಶಬ್ದಗಳಿಗೆ ನಿಲುಕಲಾರದು. ಅಕ್ಷರ ಜ್ಞಾನವಿಲ್ಲದ ಅವರು ಮಂಗಳೂರಿನ ಬಸ್ ನಿಲ್ದಾಣದಲ್ಲಿ ಕಿತ್ತಳೆ ಹಣ್ಣು ಮಾರುತ್ತಾ ಜೀವನ ಸಾಗಿಸುತ್ತಿದ್ದರು. ಒಮ್ಮೆ ವಿದೇಶಿ ದಂಪತಿಗಳು ಕಿತ್ತಳೆ ಹಣ್ಣಿನ ದರವನ್ನು ಇಂಗ್ಲಿಷ್‌ನಲ್ಲಿ ಕೇಳಿದಾಗ, ಅಕ್ಷರ ಬಾರದ ಹಾಜಬ್ಬನವರಿಗೆ ಉತ್ತರಿಸಲಾಗದೆ ತೀವ್ರ ಸಂಕೋಚವಾಯಿತು. ಆ ಕ್ಷಣ ಅವರ ಮನಸ್ಸಿನಲ್ಲಿ ಒಂದು ಕಿಡಿ ಹೊತ್ತಿತು: "ನನ್ನಂತೆ ನನ್ನೂರಿನ ಮಕ್ಕಳು ಅಕ್ಷರ ಜ್ಞಾನವಿಲ್ಲದೆ ಪರದಾಡಬಾರದು. ನನ್ನ ಗ್ರಾಮಕ್ಕೊಂದು ಶಾಲೆ ಬೇಕು."
ಅಲ್ಲಿಂದ ಆರಂಭವಾಯಿತು ಹಾಜಬ್ಬನವರ ಅವಿರತ, ಮಹಾನ್ ಪಯಣ. ಕಿತ್ತಳೆ ಮಾರಿ ಬಂದ ಹಣದಲ್ಲಿ ದಿನಕ್ಕೆ ಒಂದು ರೂಪಾಯಿ, ಎರಡು ರೂಪಾಯಿ ಉಳಿಸಿ ಶಾಲೆಯ ಕನಸನ್ನು ನನಸು ಮಾಡಲು ಮುಂದಾದರು. 1999ರಲ್ಲಿ ತನ್ನ ಊರಿನ ಮದರಸಾದ ಹಳೆಯ ಕಟ್ಟಡದಲ್ಲಿ ಕೇವಲ 28 ಮಕ್ಕಳೊಂದಿಗೆ ಶುರುವಾದ ಈ ಶಾಲೆ, ಇಂದು ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಾಗಿ ಹೆಮ್ಮರವಾಗಿ ಬೆಳೆದಿದೆ. ಈ ಶಾಲೆಯ ಗೋಡೆಗಳು ಕೇವಲ ಇಟ್ಟಿಗೆಗಳಿಂದಲ್ಲ, ಬದಲಾಗಿ ಹಾಜಬ್ಬನವರ ಬೆವರಿನ ಹನಿಗಳಿಂದ ನಿರ್ಮಾಣವಾಗಿವೆ.
ಹಾಜಬ್ಬನವರ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಭಾರತ ಸರ್ಕಾರವು 2020ರಲ್ಲಿ ಅವರಿಗೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಪದ್ಮಶ್ರೀ' ಬಿರುದು ನೀಡಿ ಗೌರವಿಸಿತು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಬರಿಗಾಲಿನಲ್ಲೇ ನಡೆದುಹೋಗಿ ವಿನಮ್ರತೆಯಿಂದ ಪ್ರಶಸ್ತಿ ಸ್ವೀಕರಿಸಿದ ಅವರ ಚಿತ್ರ ಇಡೀ ದೇಶದ ಗಮನ ಸೆಳೆಯಿತು. ಅವರ ಸರಳತೆ ಮತ್ತು ಸಾಧನೆಗೆ ಸಂದ ಬಹು ದೊಡ್ಡ ಮನ್ನಣೆಯಿದು.
ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯವು ತನ್ನ 44ನೆಯ ಘಟಿಕೋತ್ಸವ ಸಮಾರಂಭದಲ್ಲಿ ಈ ಮಹಾನ್ ಚೇತನಕ್ಕೆ 'ಗೌರವ ಡಾಕ್ಟರೇಟ್' ಪದವಿ ನೀಡಿ, ಗೌರವಿಸಿದ್ದು ಹಾಜಬ್ಬನವರ ಸಾಧನೆಯ ಸಂತಸ-ಸಂಭ್ರಮವನ್ನು ಇಮ್ಮಡಿ ಮಾಡಿದೆ. ಕಾರಣಾಂತರಗಳಿಂದ ಅಕ್ಷರ ಕಲಿಯಲಾಗದ ಒಬ್ಬ ವ್ಯಕ್ತಿ ಇಂದು ಶಿಕ್ಷಣದ ಮಹತ್ವವನ್ನು ಜಗದಗಲ ಸಾರಿದ್ದಕ್ಕಾಗಿ ಹುಟ್ಟೂರಿನ ಪಕ್ಕದ ವಿಶ್ವವಿದ್ಯಾನಿಲಯವೊಂದು ಅವರ ಸಾಧನೆ ಗುರುತಿಸಿ, ಅರ್ಹವಾಗಿಯೇ ಗೌರವಿಸಿದ್ದು ಇತಿಹಾಸದಲ್ಲಿ ಒಂದು ಅಪರೂಪದ, ಸಾತತ್ಯದ ಕ್ಷಣ. ಇದು ಕೇವಲ ಓರ್ವ ವ್ಯಕ್ತಿಗೆ ಸಂದ ಗೌರವವಲ್ಲ; ಬದಲಾಗಿ ಇದು ಸೇವಾ ಮನೋಭಾವ ಮತ್ತು ಅಕ್ಷರ ದಾಸೋಹಕ್ಕೆ ಸಂದ ಆದರ-ಗೌರವ. ಅರ್ಹ ಮತ್ತು ಉತ್ಕೃಷ್ಟ ಇಂತಹಾ ಮಹಾನುಭಾವರಿಗೆ ಪ್ರಶಸ್ತಿ-ಗೌರವಾದರಗಳು ಸಂದಾಗ ಆ ಪ್ರಶಸ್ತಿಗಳ ಮೌಲ್ಯವೂ ಹೆಚ್ಚುತ್ತದೆ! ಈ ಗೌರವ ಡಾಕ್ಟರೇಟ್ ಕೇವಲ ಹಾಜಬ್ಬನವರಿಗೆ ಮಾತ್ರ ಅಲ್ಲ, ಬದಲಾಗಿ, ಅದು:
★ ಅವರ ಪ್ರಾಮಾಣಿಕ ಪ್ರಯತ್ನಕ್ಕೆ ಸಂದ ಆದರ.
★ ಕಡುಬಡತನದಲ್ಲೂ ಉದಾತ್ತ ಚಿಂತನೆ ನಡೆಸುವ ಮನಸ್ಸಿಗೆ ಸಂದ ಮನ್ನಣೆ.
★ ಪದವಿಗಳಿಗಿಂತಲೂ ಪರೋಪಕಾರವೇ ದೊಡ್ಡದು ಎಂಬ ಸತ್ಯಕ್ಕೆ ಸಂದ ಸಾಕ್ಷಿ.
ಹಾಜಬ್ಬನವರ ಹೋರಾಟಭರಿತ ಜೀವನ ಪಯಣದ ಸಾರವನ್ನು ಡಿವಿಜಿಯವರ ಕಗ್ಗದ ಈ ಕೆಳಗಿನ ಸಾಲುಗಳಲ್ಲಿ ಕಾಣಬಹುದು:
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು |
ಕಲ್ಲಾಗು ಕಷ್ಟಗಳ ವಿಧಿಯ ಮಳೆ ಸುರಿಯೆ ||
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ |
ಎಲ್ಲರೊಳಗೊಂದಾಗು - ಮಂಕುತಿಮ್ಮ ||
ಹೌದು! ಹಾಜಬ್ಬನವರು ಬೆಟ್ಟದಡಿಯ ಹುಲ್ಲಿನಂತೆ ವಿನಮ್ರವಾಗಿ ಬದುಕಿದರು. ತನ್ನ ಮಣ್ಣಿನ ಪರಿಸರದ ಮಕ್ಕಳಿಗೆ ಜ್ಞಾನದೀವಿಗೆಯ ಮಲ್ಲಿಗೆಯಾದರು. ಕಷ್ಟಗಳು ಬಂದಾಗ ಕಲ್ಲಿನಂತೆ ಸ್ಥಿರವಾಗಿ ನಿಂತು ಎದುರಿಸಿದರು. ದೀನದಲಿತ ಮತ್ತು ಬಡವರ ಮಕ್ಕಳಿಗೆ ಶಿಕ್ಷಣದ ಸಿಹಿಯನ್ನು ಉಣಬಡಿಸುವ ಸಕ್ಕರೆಯ ಪಾಕವಾದರು. ಯಾವುದೇ ಅಹಂಕಾರವಿಲ್ಲದೆ ಎಲ್ಲರೊಳಗೊಂದಾಗಿ ಬೆರೆತರು. ಅವರ ಬದುಕನ್ನು ಬದುಕಿದ ರೀತಿ ಈ ಕಗ್ಗಕ್ಕೆ ಜೀವಂತ ಉದಾಹರಣೆ.
ಇಂತಿಪ್ಪ ಹಾಜಬ್ಬನವರ ಸಾಧನೆಗಳು ಬೆರಗುಗೊಳಿಸುವಂತಿವೆ:
★ ಶಿಕ್ಷಣ ಕ್ರಾಂತಿ: ಶಾಲೆಯೇ ಇಲ್ಲದ ಊರಿನಲ್ಲಿ ಸ್ವಂತ ಪರಿಶ್ರಮದಿಂದ ಶಾಲೆಯನ್ನು ಕಟ್ಟಿ, ಇಂದು ಅಲ್ಲಿ ಸಾವಿರಾರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.
★ ನಿಸ್ವಾರ್ಥ ಸೇವೆ: ತಮ್ಮ ಸ್ವಂತಕ್ಕಾಗಿ ಏನನ್ನೂ ಇರಿಸಿಕೊಳ್ಳದೆ-ಮಾಡದೆ, ತನ್ನ ಆದಾಯದ ಜೊತೆಗೆ ತಮಗೆ ಬಂದ ವಿವಿಧ ಬಹುಮಾನದ ಹಣವನ್ನೂ ಶಾಲೆಯ ಅಭಿವೃದ್ಧಿಗೆ ವಿನಿಯೋಗಿಸಿದ ಕಾಯಕ ಯೋಗಿ.
★ ಜಾಗತಿಕ ಪ್ರೇರಣೆ: ಒಬ್ಬ ಸಾಮಾನ್ಯ ಮನುಷ್ಯನೂ ಕೂಡ ಸಮಾಜದಲ್ಲಿ ದೊಡ್ಡ ಬದಲಾವಣೆ ತರಬಲ್ಲ ಎಂಬುದಕ್ಕೆ ಇವರು ಜೀವಂತ ಉದಾಹರಣೆ.
ಅಕ್ಷರವನ್ನು ಕಲಿಯದ ಹಾಜಬ್ಬನವರ ಸಾಧನೆಯು ಅದಾಗಲೇ ನಾಲ್ಕು ಯುನಿವರ್ಸಿಟಿಗಳು ಮತ್ತು ಕೇರಳ ರಾಜ್ಯದ ಫ್ರೌಡಶಾಲೆಯ ಕನ್ನಡ ಪುಸ್ತಕದಲ್ಲಿ 'ಸಾಧಕರು' ವಿಷಯವಾಗಿ ಪಠ್ಯವಾಗಿದೆ. ಮಂಗಳೂರು ವಿವಿ, ತುಮಕೂರು ವಿವಿ, ಯೆನೆಪೋಯ ಸ್ವಾಯತ್ತ ವಿವಿ ಮತ್ತು ಕೇರಳ ಫ್ರೌಡಶಾಲಾ ಭಾಗವಾಗಿ ಇಸ್ಮತ್ ಪಜೀರ್ ಅವರು ಹಾಜಬ್ಬರ ಕುರಿತು ಬರೆದ ಬರಹ-ವಿವರಗಳು ಪಾಠಗಳಾಗಿವೆ. ಕುವೆಂಪು ವಿವಿಗೆ ಹಿರಿಯ ಲೇಖಕರಾದ ನಾ. ಕಾರಂತ ಪೆರಾಜೆಯವರು ಹಾಜಬ್ಬರ ಕುರಿತು ಪಠ್ಯ ಬರೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ನೀಡಿರುವ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ಕುಳಿತು ಹಾಜಬ್ಬನವರು ಬಲಗೈಯನ್ನು ಗಲ್ಲದ ಮೇಲೆ ಇಟ್ಟು ಅದೇ ಸರಳತೆ, ಮುಗ್ಧತೆಯಿಂದ ಭಾವುಕರಾದರಲ್ಲ! ಈ ಸನ್ನಿವೇಶವನ್ನು ಕಣ್ತುಂಬಿಕೊಂಡವರೆಲ್ಲರ ಕಂಗಳೂ ಅವರ ಮೇಲಿನ ಗೌರವಾದರದಿಂದ ತೇವವಾದವು. ಹಾಜಬ್ಬಾ, ನಿಮಗೆ ನೀವು ಮಾತ್ರ ಸಾಟಿ!
ಹರೇಕಳ ಹಾಜಬ್ಬ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ನಿಸ್ವಾರ್ಥ ಸೇವೆಯ ಸಾಕಾರ ರೂಪ. ಇಂದು ನಾವು ಸಣ್ಣಪುಟ್ಟ ಕಷ್ಟಗಳಿಗೂ ಎದೆಗುಂದುತ್ತೇವೆ, ಆದರೆ ಹಾಜಬ್ಬನವರು ತಮ್ಮ ಹಸಿವನ್ನೂ ಮರೆತು, ಹತ್ತಿರದವರ ಟೀಕೆಗಳು ಮತ್ತು ಬಂದೊದಗಿದ ಎಲ್ಲ ಅಡೆತಡೆಗಳನ್ನು ಮೀರಿ ನಿಂತು, ತನ್ನ ಹುಟ್ಟೂರಿನ ಮಕ್ಕಳಿಗೆ ವಿದ್ಯಾಮಂದಿರ ಕಟ್ಟಿದರು. ಅಕ್ಷರ ಗೊತ್ತಿಲ್ಲದಿದ್ದರೂ ಇಡೀ ಜಗತ್ತಿಗೆ ಮಾನವೀಯತೆ ಮತ್ತು ಸಾಕ್ಷರತೆಯ ಮಹಾಕಾವ್ಯವನ್ನು ಶ್ರೀಯುತರು ಕಲಿಸಿಕೊಟ್ಟಿದ್ದಾರೆ.
ಅವರ ಈ ಶ್ರೇಷ್ಠ ಪಯಣ ಅನವರತ ಮುಂದುವರಿಯಲಿ. ಅವರ ಕನಸಿನ ಪಿಯು ಕಾಲೇಜು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿ ಎಂಬುದು ನಮ್ಮೆಲ್ಲರ ಆಶಯ. ಹಾಜಬ್ಬನವರ ಬದುಕು ನಮ್ಮೆಲ್ಲರಿಗೂ ಆದರ್ಶ ಮತ್ತು ದಾರಿದೀಪ. ಅವರೀಗ ಪದ್ಮಶ್ರೀ 'ಡಾಕ್ಟರ್' ಹರೇಕಳ ಹಾಜಬ್ಬ. ಇದಲ್ಲವೇ ನಿಜವಾದ ಸಾಧನೆ, ಇದಲ್ಲವೇ ನಿಜಾರ್ಥದ ಸಮಾಜ ಸೇವೆ. ಹಾಜಬ್ಬನವರ ಕಿತ್ತಳೆಯ ಸವಿ ಮತ್ತು ಯಶೋಗಾಥೆಯ ಪಯಣ ಇನ್ನಷ್ಟು ಮತ್ತಷ್ಟು ಪಸರಿಸಲಿ. ಪದ್ಮಶ್ರೀ ಡಾಕ್ಟರ್ ಹರೇಕಳ ಹಾಜಬ್ಬ - ಈ ಹೆಸರು ಕೇವಲ ವ್ಯಕ್ತಿಯ ಹೆಸರಲ್ಲ; ಅದು ಒಂದು ಅಕ್ಷರ ಕ್ರಾಂತಿಯ ಸುವರ್ಣ ಇತಿಹಾಸ.
ಹಾಜಬ್ಬನವರೇ, ನೀವು ನಮ್ಮ ನಡುವಿನ ಗೌರವಾನ್ವಿತ ಶಿಕ್ಷಣ ಕ್ರಾಂತಿಯ ಹರಿಕಾರ! ನಿಮ್ಮಂಥ ದೇವದುರ್ಲಭರ ಸಂಖ್ಯೆ ನೂರ್ಮಡಿಯಾಗಲಿ.
Published
