
Article · November 3, 2026
ಕಾರ್ಮುಗಿಲು
ವೀಣಾ ಎಂ ಭಟ್
ಭೋರ್ಗರೆವ ಕಡಲಂತೆ ಅಲ್ಲೋಲ ಕಲ್ಲೋಲ
ಮನದಲೆಲ್ಲವು ಶೂನ್ಯ ಏನೊ ಕೋಲಾಹಲ
ಕರಿ ಮೋಡಗಳ ನಡುವೆ ಬಿಳುಪು ಕಂಡಂತೆ
ಮರೆಯಾಗುವುದೇ ಬಾಳಲ್ಲಿ ಈ ಘೋರ ಚಿಂತೆ
ಶೂನ್ಯವಾಗಿಹುದೆಲ್ಲ ಸ್ಮೃತಿಯ ಪಟಲದಲಿ
ಬಯಸಿದ ಕಾಮನೆಯ ಇರಿತ ಹೃದಯದಲಿ
ಯೋಚನೆಯ ಪಥದಲ್ಲಿ ನಿಂದ ಈ ಬಾಲೆ
ಯಾವುದೂ ಅರಿಯದು ಪೃಕೃತಿಯ ಲೀಲೆ
ಕಷ್ಟ ನಷ್ಟಗಳನ್ನು ಯಾರೊಡನೆ ಹಂಚುವುದು
ಇಷ್ಟ ಮಿತ್ರರು ಎಲ್ಲ ಬಲು ದೂರಕ್ಕೆ ಸರಿದು
ದಟ್ಟ ಮೋಡದ ಕಡೆಗೆ ದಿಟ್ಟಿಸಿ ನೋಡಿದ ಕಣ್ಣು
ನಿಟ್ಟುಸಿರ ಬಿಟ್ಟು ನಿಂದಳು ಒಬ್ಬಂಟಿ ಹೆಣ್ಣು
ದಿನಕರನು ಉದಯಿಸುವನೆ ಈ ನನ್ನ ಬಾಳಲ್ಲಿ
ಮೋಡ ಸರಿದು ಬೆಳಕ ನೀಡುವನೆ ಮನದಲ್ಲಿ
ತಬ್ಬಲಿ ನಾನೆಂಬ ಭಾವನೆಯು ಹೃದಯದಲಿ
ತಬ್ಬಿ ಸಂತೈಸುವರಿಲ್ಲ ಎನಗಾರೂ ಈ ಜಗದಲ್ಲಿ
Creative Writings
