Karada Vishwa

Article · October 24, 2026

ಲೆಕ್ಕಿಗನ ಮನಸ್ಸು

ಸಂತೋಷ್ ಕುಮಾರ್ ನಡುಮನೆ

ಲೆಕ್ಕದಾಳು ನಾನು; ಅಂಕಿಗಳೊಳ್ ದಿನ ಕಳೆವೆ;

ಲೆಕ್ಕಕೆ ಸಿಗದ ಮನವಿದು— ಬರಹದತ್ತ, ಗಿಡದತ್ತ

ಓಡುತಿಹುದೇಕೆ?

ಬರಹಕೆ ಜನ ನೂರು,ಓದಿ ನುಡಿವರು ಹಲವರು;

ಗಿಡಕೆ ಜನ ವಿರಳ—ಅಲ್ಲೊಬ್ಬ, ಇಲ್ಲೊಬ್ಬ

ಹೆಕ್ಕಿ ನೋಡುವನು.

ಮಣ್ಣಿನೊಳ್ ಮುತ್ತಿರಲು ಮಣ್ಣನು ಬಲ್ಲವನೆಷ್ಟು?

ಗಿಡದೊಳ್ ಜೀವವಿರಲು ಗಿಡವನು ನೋಡುವ ಕಣ್ಣು

ಎಷ್ಟೋ ವಿರಳವಯ್ಯ!

ಬಸ್ಸಿನಲಿ, ರೈಲಿನಲಿ ಕಿಟಕಿಯಾಚೆ ಲೋಕ ಹರಿಯೆ;

ಕಂಡುದೆಲ್ಲ ಕಣ್ಣಿನೊಳ್ ನಿಲ್ಲದು—ಮನಕೆ ತಾಕಿದುದೊಂದು

ಪದವಾಗಿ ಮೊಳೆಯುವುದು.

ಕಾಗದವ ಹುಡುಕದೆ ದಾರಿ ತೋರಿದ ದಿಕ್ಕಿನಲಿ,

ಕನ್ನಡವನು ಹೊತ್ತು ಸಾಗುವೆ; ನಡೆಯುತಿಹುದು ಲೋಕ—

ಒಳಗೊಂದು ಸಾಲು ಹುಟ್ಟುವುದು.

ಲೆಕ್ಕದಲಿ ಲಾಭವೊಂದು, ನಷ್ಟವೊಂದು, ಉಳಿಕೆಯೊಂದು;

ಮನದ ಲೆಕ್ಕ ಬೇರೆಯಯ್ಯ— ಕೊಟ್ಟಷ್ಟೂ ಬೆಳೆಯುವುದು,

ಬರೆದಷ್ಟೂ ಉಳಿಯುವುದು.

ಗಿಡ ನೆಟ್ಟವನು, ಹೂವಿನ ಫಲವನು ಕೇಳುವನೆ?

ಬರಹ ಬರೆದವನು ಯಾರು ಓದುವರೆಂದು ಕಾಯುವನೆ?

ಏನೇ ಇರಲಿ,ಅಪ್ಪಣೆಯ ಬೇಡುವೆ ಕರತಾಡನಕ್ಕೆ,

ಪ್ರತಿಯೊಬ್ಬ ಬರಹಗಾರನಿಗೆ ಸಿಗುವ ಜೀವದಾಮೃತವದು!

ನೀವು ಕೊಡುವ ಒಂದು ಸಾಲಿನ ಕಾಮೆಂಟಿನ ಅಬ್ಬರ,

ಬರಹದ ಸಾಲುಗಳಿಗೆ ಪೋಷಿಸುವ ಮಹಾ ಗೊಬ್ಬರ!

ಬೀಜವೊಂದು ಮೊಳೆಯಲಿ, ನೆರಳೊಂದು ಹರಡಲಿ;

ಪದವೊಂದು ಮನ ತಾಕಲಿ— ಇಷ್ಟೇ ಸಾಕು ಬದುಕಿಗೆ,

ಇದೇ ಬರಹದ ಲೆಕ್ಕ!

Creative Writings