
News · October 29, 2026
ಆವಳಮಠದಲ್ಲಿ ಭಕ್ತಿಪೂರಿತ ನವರಾತ್ರಿ ...
ವರದಿ ಕೃಪೆ : ಲಕ್ಷ್ಮೀನಾರಾಯಣ ಭಟ್ ಆವಳಮಠ ಹಾಗೂ ಕಾರ್ಯಕರ್ತರು , ಆವಳಮಠ
ಆವಳಮಠದ ಭಗವದ್ಭಕ್ತ ಬಂಧುಗಳೇ
ಪರಾಭವ ನಾಮ ಸಂವತ್ಸರದ ಆಶ್ವೀಜ ಶುದ್ಧ ಪಾಡ್ಯದ ದಿನ ಗಣಪತಿ ಹವನ, ಪೂಜೆ, ಸಾಮೂಹಿಕ ಪ್ರಾರ್ಥನೆಯೊಂದಿಗೆ ನವರಾತ್ರಿ ಉತ್ಸವ ಪ್ರಾರಂಭವಾಯಿತು. ಪ್ರಸ್ತುತ ವರ್ಷ ಹತ್ತುದಿನಗಳ ಉತ್ಸವ ವಿಜೃಂಭಣೆಯಿಂದ ಜರುಗಿತು. ಪದ್ಧತಿಯಂತೆ ಪ್ರಥಮ ಎಂಟು ದಿನ ಸಜಂಕಿಲ, ಮಠದ ಮನೆಯವರು, ಕೆಳಗಿನ ಪಂಜ, ಮೇಲಿನ ಪಂಜ, ದೈತೋಟ, ಕವಿಯಾಲ, ಕೊಮ್ಮುಂಜೆ, ಮೂರ್ವ- ದಂಡೆಪ್ಪಾಡಿ ಈ ಮನೆತನದವರು ಮುಂದಾಳುತ್ವ ವಹಿಸಿಕೊಂಡು ನಡೆಸಿಕೊಟ್ಟರು. ಬೆಳಗ್ಗಿನ ನೈ ಪಾಯಸ ಮತ್ತು ಮಧ್ಯಾಹ್ನದ ಶತಸ್ವ ಪಾಯಸ ದೇವಿಗೆ ಸಮರ್ಪಣೆ ಮಾಡುವ ಮತ್ತು ಎಲ್ಲಾ ಭಕ್ತ ಜನರು ಪುನರಪಿ ಕೇಳಿ ಪಡೆಯುವ ಮುಖ್ಯ ಭಕ್ಷ್ಯ. ಮುಂಜಾನೆ ಸೂರ್ಯೋದಯ ದೊಂದಿಗೆ ಶತಸ್ವ ಪಾಯಸ ತಯಾರಿಯಲ್ಲಿ ಸ್ವಯಂಸೇವಕರು ಮಗ್ನರಾಗಿರುತ್ತಾರೆ. ಪ್ರಸ್ತುತ ವರ್ಷ ಉತ್ಸವದ ಹೆಚ್ಚಿನ ದಿನಗಳಂದು ಶತಸ್ವ ಪಾಯಸದ ಸೇವೆ ನಡೆಯಿತು. ಪಾಯಸ ಮತ್ತು ಅಪ್ಪ ಪ್ರಸಾದ ಮುಂಗಟ್ಟೆಯಲ್ಲಿ ಅತೀ ಬೇಡಿಕೆ ಹೊಂದಿದ ಪ್ರಸಾದ. ಎಲ್ಲ ದಿನ ಬೆಳಿಗ್ಗೆ 6.30ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೂ ಸೇರಿದಂತೆ ಸ್ವಯಂಸೇವಕರು ತರಕಾರಿ ಕೊಯ್ಯುವುದು, ದೇವರಿಗೆ ಅಪ್ಪ ಕಜ್ಜಾಯ, ಹಾಲು ಪಾಯಸ, ತೆಂಗಿನ ಕಾಯಿ ಪಾಯಸ ಮಾಡುವುದರಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿಸಿಕೊಂಡಿದ್ದರು. ಬೆಳಿಗ್ಗೆ 10.30ಕ್ಕೆ ಹರಿಕಥೆ, ಶಾಸ್ತ್ರೀಯ ಸಂಗೀತ, ಭಕ್ತಿಗೀತೆ ಮುಂತಾದ ಕಾರ್ಯಕ್ರಮಗಳು ಜರುಗಿದವು. ಮಹಿಳೆಯರು ಕುಂಕುಮ ಮತ್ತು ಪ್ರಸಾದದ ಪೊಟ್ಟಣ ತಯಾರಿ, ಹೂವುಗಳ ವಿಂಗಡಣೆ ಮುಂತಾದವುಗಳಲ್ಲಿ ಸಹಕರಿಸುತ್ತಿದ್ದರು. ಸುಳ್ಯದ ವೇದ ವಿದ್ಯಾರ್ಥಿಗಳು ವೇದ ಪಾರಾಯಣ, ರುದ್ರಾಭಿಷೇಕ, ಸಂಜೆ ಕುಂಕುಮಾರ್ಚನೆ ಮುಂತಾದ ದೈವೀ ಕಾರ್ಯಗಳಿಂದ ದೇವಸ್ಥಾನದ ಒಳಗೆ ಭಕ್ತಿಯ ಸ್ಪರ್ಶವನ್ನು ನೀಡುತ್ತಿದ್ದರು. ಸಂಜೆ ಸೂರ್ಯಾಸ್ತದೊಂದಿಗೆ ವಿವಿಧ ತಂಡಗಳ ಕುಣಿತ ಭಜನೆ ಆಕರ್ಶಣೀಯವಾಗಿತ್ತು. ರಾತ್ರಿ ಪೂಜೆ ಹಾಗೂ ಪ್ರಸಾದ ವಿತರಣೆಯ ನಂತರ ಪ್ರದರ್ಶನವಾಗುತ್ತಿದ್ದ ನೃತ್ಯ ವೈವಿಧ್ಯಕ್ಕೂ ಕಲಾ ರಸಿಕರ ಸ್ಪಂದನೆ ಪ್ರೋತ್ಸಾಹದಾಯಕವಾಗಿತ್ತು. 18ನೇ ತಾರೀಕಿನಂದು ಜರುಗಿದ ದೀಪೋತ್ಸವ ಅವಿಸ್ಮರಣೀಯ. ಉಳಿದಂತೆ ಪಿಲಿ ಗೊಬ್ಬು, ಸಿಂಗಾರಿ ಮೇಳದೊಂದಿಗೆ ವಯಲಿನ್ ವಿಶಿಷ್ಟ ಕಾರ್ಯಕ್ರಮಗಳಾಗಿದ್ದವು. ರುಚಿರುಚಿಯಾದ ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಭೋಜನ ಪ್ರಸಾದ ತಯಾರಿ ಹಾಗೂ ವಿತರಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಒಟ್ಟಿನಲ್ಲಿ ಹೇಳುವುದಾದರೆ ಆವಳಮಠದ ದಸರಾ ಉತ್ಸವ ಕಾರ್ಯಕರ್ತರ ನಿರಂತರ ಪರಿಶ್ರಮದಿಂದಾಗಿ ಎಂದಿನಂತೆ ಈ ವರ್ಷವೂ ಅವಿಸ್ಮರಣೀಯವಾಗಿತ್ತು.
ಬೆಳಗ್ಗಿನ ಸೂರ್ಯೋದಯಕ್ಕೆ ಯಾರೋ ಕಿವಿಯಲ್ಲಿ ಪಿಸುಗುಟ್ಟಿ ಎಬ್ಬಿಸಿದ ಅನುಭವ. ನಿತ್ಯಕರ್ಮಗಳನ್ನು ಪೂರೈಸಿ ದೇವರ ಸನ್ನಿಧಿಗೆ ಬಂದರೆ ಪ್ರತೀ ತಂಡಗಳೂ ಇರುವೆಗಳಂತೆ ಶಿಸ್ತುಬದ್ಧವಾಗಿ ಕೆಲಸ ಮಾಡುತ್ತಿರುವ ದೃಶ್ಯ. ಎಷ್ಟು ಹುಡುಕಿದರೂ ಯಾರೂ ನಿರ್ದೇಶಕರಿಲ್ಲ, ಮಾರ್ಗದರ್ಶಕರಿಲ್ಲ, ಮೇಲ್ವಿಚಾರಕರಿಲ್ಲ. ಆದರೂ ಪ್ರತಿಯೊಂದೂ ಶಿಸ್ತುಬದ್ಧ. ಇದೆಲ್ಲ ಆ ದೈವೀ ಶಕ್ತಿಗೆ ಮಾತ್ರ ಸಾಧ್ಯ. ಪ್ರತೀ ದಿನದ ಅಂತ್ಯಕ್ಕೆ ದೇಹಕ್ಕೆ ತ್ರಾಸದಾಯಕವಾಗಿ ಭಾಸವಾದರೂ ನವಮಿ ದಿನ ರಾತ್ರಿ ಹಿಂದಿನ 10ದಿನಗಳು ಮಿಂಚಿನಂತೆ ಪ್ರಕಾಶಿಸಿ ಮಾಯವಾದ ಅನುಭವ. ಮತ್ತೆ ಈ ಸಂಭ್ರಮವನ್ನು ಕಾಣಲು 12 ತಿಂಗಳು ಕಾಯಬೇಕಲ್ಲ ಅನ್ನುವ ಕೊರಗು. ಇವೆಲ್ಲ ನಮ್ಮನ್ನು ನಾವು ಆ ದಿವ್ಯ ಶಕ್ತಿಗೆ ಸಮರ್ಪಣೆ ಮಾಡಿದಾಗ ಮಾತ್ರ ಸಿಗುವ ವಿಶಿಷ್ಟ ಅನುಭವಗಳು.



































