Karada Vishwa

News · September 29, 2026

ಕರಾಡ ಸಂಘ ಗುಂಡ್ಯಡ್ಕ - 58 ನೇ ವಾರ್ಷಿಕ ಮಹಾಸಭೆಯ ವರದಿ.

ವರದಿ ಕೃಪೆ : ಚಂದ್ರಶೇಖರ ಭಟ್ ಗುಂಡ್ಯಡ್ಕ

ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘ (ರಿ), ಶ್ರೀನಿವಾಸಪುರ, ಗುಂಡ್ಯಡ್ಕ, ಇದರ 58ನೇ ವರ್ಷದ ವಾರ್ಷಿಕ ಮಹಾ ಸಭೆಯು ದಿನಾಂಕ 27. 9 .2026, ಭಾನುವಾರ ಬೆಳಿಗ್ಗೆ 10.30 ಕ್ಕೆ ಸರಿಯಾಗಿ ರುಕ್ಮಿಣಿ ಪಾಂಡುರಂಗ ಸಭಾಭವನ ಗುಂಡ್ಯಡ್ಕ ಇಲ್ಲಿ ನಡೆಯಿತು.

ಮಹಾಸಭೆಯ ಪೂರ್ವದಲ್ಲಿ ಮೂಡಬಿದ್ರೆಯ ಆಳ್ವಾಸ್ ಆಯುರ್ವೇದಿಕ್ ಕಾಲೇಜಿನ ಉಪನ್ಯಾಸಕರಾಗಿರುವ ಡಾಕ್ಟರ್ ಸುಬ್ರಹ್ಮಣ್ಯ ಪದ್ಯಾಣ ಇವರು ಆರೋಗ್ಯಕರ ಜೀವನಕ್ಕೆ ಬೇಕಾಗುವ ಆಹಾರ ಪದ್ಧತಿಯ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ನಮ್ಮ ಹಿರಿಯರ ಕಾಲದಿಂದ ಬಂದ ಹಳ್ಳಿಯ ಗಿಡಮೂಲಿಕೆಗಳ ಆಹಾರ ಕ್ರಮಗಳು ಹಾಗೂ ಔಷಧಗಳು ಇಂದು ಕೂಡ ಅಗತ್ಯವಾಗಿದೆ ಹಾಗೂ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಅನುಕೂಲವಾಗಲಿದೆ. ಎಂದು ಹೇಳಿದರು .

11:30ಕ್ಕೆ ಸರಿಯಾಗಿ ಮಹಾಸಭೆಯ ಸಭಾ ಕಾರ್ಯಕ್ರಮವು ಪ್ರಾರಂಭಗೊಂಡಿತು. ಸಭಾವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ರಾಮಚಂದ್ರ ಭಟ್ ನಾಟೇಕರ್ , ವಿಠೋಭ ರುಕುಮಾಯಿ ದೇವಸ್ಥಾನದ ನೂತನ ಅಧ್ಯಕ್ಷರಾದ ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ಭಟ್ ಪರಾಡ್ಕರ್ ಯರ್ಫಲೆ ,ನಮ್ಮ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ರಮಾನಂದ ಪಂಡಿತ್ ಜಾಯಿಲೆ, ಬೆಂಗಳೂರು ಕರಾಡ ಬ್ರಾಹ್ಮಣ ಸಮಾಜ ಸುಧಾರಕ ಸಂಘದ ಕೋಶಾಧಿಕಾರಿಗಳಾದ ಶ್ರೀ ಚಂದ್ರಹಾಸ ಕನ್ನಡ್ಕ, ನಮ್ಮ ಸಂಘದ ಕೋಶಾಧಿಕಾರಿ ಶ್ರೀ ಪ್ರಭಾಕರ ಭಾಟೆ ಮುಂತಾದವರು ಉಪಸ್ಥಿತರಿದ್ದರು.ಮೋಹಿತ್ ಭಟ್ ಮುಂಡ್ಕಿನಜಡ್ಡು ಇವರಿಂದ ನಡೆದ ಪ್ರಾರ್ಥನೆ ನಂತರ ಸಂಘದ ಉಪಾಧ್ಯಕ್ಷರಾದ ಶ್ರೀರಾಮಚಂದ್ರ ಪಂಡಿತ್ ರವರು ಆಗಮಿಸಿದ ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸಿದರು.ನಂತರ ಗತ ವರ್ಷದಲ್ಲಿ ಕೀರ್ತಿಶೇಷರಾದ ಸಮಾಜ ಬಾಂಧವರನ್ನು ಸ್ಮರಿಸಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಳೆದ ವರ್ಷದ ವರದಿಯನ್ನು ಸಂಘದ ಕಾರ್ಯದರ್ಶಿಯವರು ವಾಚಿಸಿದರು.

ಪ್ರಾರಂಭದಲ್ಲಿ ಹಿರಿಯರನ್ನು ಗೌರವಿಸುವ ಕಾರ್ಯಕ್ರಮ ನಡೆಯಿತು. ಇದರಲ್ಲಿ ಸಮಾಜದ ಹಿರಿಯರಾದ ಶ್ರೀಮತಿ ಮತ್ತು ಶ್ರೀ ಕೇಮಾರು ಮಹಾದೇವ ಭಟ್ಟ ಹಾಗೂ ಶ್ರೀಮತಿ ಆಶಾ. ಆರ್.ಭಟ್, ಮುಂಡ್ಕಿನಜಡ್ಡು ಇವರನ್ನು ಗೌರವಿಸಿ ಅವರ ಆಶೀರ್ವಾದಗಳನ್ನು ಪಡೆಯಲಾಯಿತು .ನಂತರ ನಡೆದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಕರಾಡ ಸಮಾಜದ ವಂಶಾವಳಿ ಸಂಗ್ರಾಹಕ ಶ್ರೀ ಮಾಧವ್ ಭಟ್ ಅಂಬೇಕರ್ ,ಬೆಂಗಳೂರು, ಶಾಸ್ತ್ರೀಯ ಸೂಜಿ ಚಿಕಿತ್ಸಾ ತಜ್ಞೆ ಶ್ರೀಮತಿ ವೇದಾವತಿ ಪರಾಡ್ಕರ್ ಕೇಮಾರು ,ಕೃತಕ ಬುದ್ಧಿಮತ್ತೆ (AI) ವಿಷಯದಲ್ಲಿ PhD ಪದವಿ ಕಳಿಸಿದ ಡಾ. ರಂಜಿತ್ ಭಟ್ ಕಾರ್ಕಳ, ಸಿಎ ಪದವಿಗಳಿಸಿದ ಮಾಸ್ಟರ್ ರೋಹಿತ್ ಪರಾಡ್ಕರ್ ಹಾಗೂ ಕುಮಾರಿ ನೇಹಾ ಗುರ್ಜರ್ ರವರನ್ನು ತುಂಬಿದ ಸಭೆಯಲ್ಲಿ ಶಾಲುಹೊದಿಸಿ ,ಫಲ ವಸ್ತುಗಳನ್ನು ನೀಡಿ ಸನ್ಮಾನ ಪತ್ರದೊಂದಿಗೆ ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರದಲ್ಲಿ SSLC ಪರೀಕ್ಷೆಯಲ್ಲಿ 90% ಕ್ಕಿಂತ ಅಧಿಕ ಅಂಕಗಳಿದ್ದ ಶ್ರವಣ್ ಪಂಡಿತ್, ಅನಿರುದ್ಧ್ ಭಾಟೆ, ಸುಧನ್ಯ ದೇವಜಿ ಹಾಗೂ PUC ಯಲ್ಲಿ 90% ಕ್ಕಿಂತ ಅಧಿಕ ಅಂಕ ಗಳಿಸಿದ ಮೇಧಾ ಜಿ ಪರಾಡ್ಕರ್, ಶ್ರಾವ್ಯ ಪಿ ಪರಾಡ್ಕರ್ ,ನಿಶಾಂತ್ ಭಟ್ ರವರನ್ನು ಶಾಲು ಹೊದಿಸಿ ನಗದು ಪುರಸ್ಕಾರಗಳೊಂದಿಗೆ ಪ್ರೋತ್ಸಾಹಿಸಲಾಯಿತು. ನಂತರ ವಿದ್ಯಾರ್ಥಿ ವೇತನವನ್ನು ಸಂದೀಪ್‌ ಕೆ , ಅನಿರುದ್ಧ ಭಾಟೆ, ಶ್ರಾವ್ಯಾ ಪಿ ಪರಾಡ್ಕರ್, ಶ್ರೀಕುಮಾರ್ ಡಿ , ಸಿಂಚನ , ಕಾವ್ಯಶ್ರೀ ಸಂತೋಷ್ ಕೆ ಇವರಿಗೆ ವಿತರಿಸಲಾಯಿತು. ಸುಮಾರು 35 ಸಾವಿರ ರೂಪಾಯಿಗಳನ್ನು ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ರೂಪದಲ್ಲಿ ಹಂಚಲಾಯಿತು. ಸನ್ಮಾನಿತರ ಪರವಾಗಿ ಶ್ರೀ ಕೇಮಾರು ಮಹಾದೇವ ಭಟ್, ಶ್ರೀಮತಿ ವೇದಾವತಿ ಪರಾಡ್ಕರ್ ಹಾಗೂ ಡಾ.ರಂಜಿತ್ ಭಟ್ ರವರು ಮಾತನಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ಚಂದ್ರಹಾಸ್ ಕನ್ನಡ್ಕ, ಬೆಂಗಳೂರು ಇವರು ಕರಾಡ ವಿಶ್ವದ ಬಗ್ಗೆ ಮಾಹಿತಿಯನ್ನು ನೀಡಿದರು.ಮುಖ್ಯ ಅತಿಥಿಗಳ ನೆಲೆಯಲ್ಲಿ ಮಾತನಾಡಿದ ಶ್ರೀ ರಮಾನಂದ ಪಂಡಿತ್, ಜಾಯಿಲೆಯವರು ಸಮಾಜದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯನ್ನು ನೆನಪಿಸಿದರು.ಅಧ್ಯಕ್ಷತೆ ವಹಿಸಿದ್ದ ಶ್ರೀರಾಮಚಂದ್ರ ಭಟ್ ನಾಟೇಕರ್ ರವರು ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸರ್ವರನ್ನು ಕೃತಜ್ಞತೆಗಳೊಂದಿಗೆ ಸ್ಮರಿಸಿಕೊಂಡರು. ಕೊನೆಯಲ್ಲಿ ಸಂಘದ ಉಪಾಧ್ಯಕ್ಷೆಯಾದ ಶ್ರೀಮತಿ ಸುನಿತಾ ಚಿಂಚಲ್ಕರ್ ಕೊಪ್ಪಂದಡ್ಕ ಇವರು ಸರ್ವರಿಗೂ ಧನ್ಯವಾದಗಳನ್ನು ಸಮರ್ಪಿಸಿದರು. ಸಂಘದ ಕಾರ್ಯದರ್ಶಿ ಶ್ರೀ ಚಂದ್ರಶೇಖರ್ ಭಟ್ ಕಟೀಲು ಹಾಗೂ ಶಿಕ್ಷಕಿ ಶ್ರೀಮತಿ ಚಿತ್ರಾಶ್ರೀ ಪಂಡಿತ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

Community