Karada Vishwa

Article · August 24, 2026

ಮಧುರ ಭಾವ

ವೀಣಾ ಎಂ ಭಟ್

ತಾರುಣ್ಯ ಲಹರಿಯಲಿ ಮಿಂದು ಬಂದ ಜೀವ

ಬಾಳ ಸಂಜೆಯ ಹೊಸಿಲಲಿ ಬಿಡದ ವ್ಯಾಮೋಹ

ನಸುಕಿನಲಿ ಕರ ಪಿಡಿದು ಮೆಲ್ಲ ಮೆಲ್ಲನೆ ನಡೆದು

ತಂಗಾಳಿಯಲಿ ಮನ ತಣಿಸುವ ಬಯಕೆಯಿದು

ದೀರ್ಘ ಕಾಲದ ಪಯಣ ಸಾಗಿ ಬಂದಿಹ ದಾರಿ

ಜತೆ ಜತೆಯಲಿ ಸರಸ ವಿರಸ ಭಾವದಿ ಸೇರಿ

ಸುಪ್ರಭಾತದ ವೇಳೆ ಇಬ್ಬನಿಯ ಹನಿಗಳಲಿ

ಸುಪ್ತವಾಗಿಹ ನವ ಚೇತನವು ದೇಹದಲಿ

ಆಗಸದಿ ಹೊಂಗಿರಣ ದಿಕ್ಕು ದಿಕ್ಕಲಿ ಹೊಸೆದು

ಸೊಗಸಾದ ಕವನ ಸಾಲುಗಳು ಲೇಖನಿಯ ಬೆಸೆದು

ತೇಲಾಡುವ ಹೇಮ ಬಿಂಬ ಸಲಿಲದಿ ಬೆರೆತು

ಓಲಾಡುತಿದೆ ತರಂಗಿಣಿಯಲಿ ಮೈ ಮರೆತು

ತುದಿಯಲ್ಲಿ ಬಾನು ಧರೆ ಮಿಲನ ಚುಂಬನದಲ್ಲಿ

ಏರು ಪರ್ವತ ಶ್ರೇಣಿ ಮೇಘಗಳ ಅಂಚಿನಲಿ

ಯಕ್ಷಲೋಕವ ಸೃಷ್ಟಿಸಿದ ಭಾನು ಬಾನಿನಲಿ

ಕದಿರ ಮಂಟಪದ ಸೃಷ್ಟಿ ಕಣ್ಣೆದುರು ಪೃಕೃತಿಯಲಿ

ಸೃಷ್ಟಿಕರ್ತನೆ ನಿನ್ನ ಗುಣಗಣವು ಅಗಣಿತ

ಸುಪ್ರಭಾತ ಚೆಲುವ ರವಿಯ ಮೊಗ ಕಾಂತಿಯುತ

ಹಕ್ಕಿಗಳಿಂಚರವು ದುಂಬಿಗಳ ಝೇಂಕಾರ

ತುಷಾರ ಬಿಂದುಗಳಿಂದ ಮುತ್ತು ಪೋಣಿಸಿಹಾರ

ಪ್ರೇಮಬಂಧವ ಬೆಸೆದ ಜೀವನ ಅತಿ ಸುಂದರವು

ಮುಪ್ಪಿಲ್ಲ ಪ್ರೀತಿಗೆ ತನು ಮನಕೆ ಸಿಂಚನವು

ವಾರ್ಧಕ್ಯದಲಿ ಸತಿ ಪತಿಯು ಜೊತೆಯಲಿ ಇರಲಿ

ಹಾರ್ದಿಕ ಮಂಗಳವು ಜೀವನವು ಶುಭವಾಗಿರಲಿ

Creative Writings