Karada Vishwa

Article · July 7, 2026

ಗಾಂದ್ರ ಎಂಬ ಶೋಬಾನೆಯ ರೂಪಾಂತರ

-- ಡಾ. ರಾಧಾಕೃಷ್ಣ ಬೆಳ್ಳೂರು (ದಿ। ಗಿರಿಜಾ ಎಂ. ಭಟ್ ಎಡಮಲೆ ಅವರ ಗಾಂದ್ರ ಪುಸ್ತಕದ ಮುನ್ನುಡಿಯಿಂದ ....)

ಗಾಂಧರ್ವ ಎಂಬ ಪದ ಗಾಂಧರ ಆಗಿ ಗಾಂದ್ರ ಎಂಬ ರೂಪಕ್ಕೆ ತಿರುಗಿರಬೇಕು. ಗಾಂಧರ್ವ ಎಂದರೆ ಗಂಧರ್ವರಿಗೆ ಸೇರಿದ್ದು ಅಥವಾ ಸಂಬಂಧಿಸಿದ್ದು. ಅದು ಸಂಗೀತ ವಿದ್ಯೆ, ಸರಳ ಕನ್ನಡದಲ್ಲಿ ಹೇಳುವುದಿದ್ದರೆ ಹಾಡುವ ಕಲೆ. ಕರಾಡ ಭಾಷೆಯಲ್ಲಿ ಹಾಡು ಅಥವಾ ಹಾಡುವುದು ಎನ್ನುವ ಅರ್ಥದಲ್ಲಿ ಗಾಂದ್ರ ಎನ್ನುವ ಪದವನ್ನು ಬಳಸಲಾಗುತ್ತದೆ. ಮದುವೆ, ಉಪನಯನ ಇತ್ಯಾದಿ ಸಂದರ್ಭಗಳಲ್ಲಿ ಗಾಂದ್ರಗಳನ್ನು ಹಾಡುತ್ತಾರೆ. ಇದು ಸಂದರ್ಭ ಸಾಪೇಕ್ಷವಾದ ಗಾಯನ. ಆಯಾ ಸಂದರ್ಭಕ್ಕೆ ಹೊಂದಿಕೊಳ್ಳುವ ಹಾಡುಗಳನ್ನು ಆಯಾ ಸಂದರ್ಭಗಳಲ್ಲಿ ಹಾಡುವುದು ಪದ್ಧತಿ. ಹಾಗೆ ಹಾಡುವುದಕ್ಕೆಂದೇ ರಚಿಸಲಾದ ಹಾಡುಗಳಿವೆ ಮತ್ತು ಅವು ಪರಂಪರಾಗತ ಮೌಖಿಕ ನೆಲೆಯಲ್ಲಿ ಪ್ರಸಾರಗೊಳ್ಳುತ್ತ ಬಂದಿವೆ.

ಕನ್ನಡದ ಶೋಬಾನೆ ಹಾಡುಗಳಿಗೂ ಕರಾಡದ ಗಾಂದ್ರಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಕನ್ನಡದಲ್ಲಿ ಹಲವಾರು ಶೋಬಾನೆಗಳಿವೆ. ಶೋಭನ ಎನ್ನುವ ಸಂಸ್ಕೃತ ಪದ ಶೋಭಾನೆಯಾಗಿ, ಸೋಬಾನೆಯಾಗಿ ಹಾಡಿನ ಹೆಸರಲ್ಲಿ ಪ್ರಸಾರಗೊಂಡಿರಬೇಕು. ಅಂತೂ ಶೋಬಾನೆ ಹಾಡುಗಳಿಗೆ ಅವುಗಳದ್ದೇ ಆದ ಧಾಟಿ ಇದೆ. ಅದೇ ಧಾಟಿ ಹಿಡಿದು ಅವುಗಳನ್ನು ಹಾಡಲಾಗುತ್ತದೆ.

ಶೋಭನ ಎನ್ನುವ ಪದ ಶುಭ ಎಂಬ ಮೂಲದಿಂದ ನಿಷ್ಪನ್ನಗೊಂಡಿದೆ. ಹಾಗಾಗಿ ಶುಭ ಸಮಾರಂಭಗಳಲ್ಲಿ ಹಾಡುವ ಹಾಡುಗಳನ್ನು ಶೋಬಾನೆ ಹಾಡುಗಳೆಂದು ಗುರುತಿಸಬಹುದು. ತುಳಸೀ ಪೂಜೆ, ಸತ್ಯನಾರಾಯಣ ಪೂಜೆಗಳಿಂದ ತೊಡಗಿ ವಿವಿಧ ಪೂಜೆಗಳು, ಮದುವೆ ಮತ್ತು ಮದುವೆಯ ಹಿಂದುಮುಂದಿನ ಆಚರಣಾತ್ಮಕ ವಿಧಿಗಳು, ಉಪನಯನಾದಿ ಕರ್ಮಗಳು - ಹೀಗೆ ವಿವಿಧ ಶುಭ ಸಂದರ್ಭಗಳಲ್ಲಿ ಶೋಬಾನೆಗಳನ್ನು ಹಾಡುತ್ತಾರೆ. ವೈದಿಕರಲ್ಲಿ ವೈದಿಕ ವಿಧಿಗಳಿಗೆ ಸಮಾಂತರವಾಗಿ ಇವುಗಳನ್ನು ಹಾಡುವುದು ರೂಢಿ.

ಸಾಮಾನ್ಯವಾಗಿ ಇವು ಪುರಾಣ ಕತೆಗಳ ಸಂದರ್ಭವನ್ನು ಹಿನ್ನೆಲೆಯಾಗಿಟ್ಟುಕೊಂಡು ರೂಪುಗೊಂಡ ಸಾಹಿತ್ಯ ರಚನೆಗಳು. ಮದುವೆಯಾಗಿ ಮನೆಗೆ ಬರುವ ನವ ವಧುವನ್ನು ಮತ್ತು ವರನನ್ನು ವರನ ಮನೆಯ ಬಾಗಿಲಲ್ಲಿ ಅಡ್ಡಗಟ್ಟಿ, ವರನ ಸಹೋದರಿಯರು ಛೇಡಿಸುವುದು ರೂಢಿಯಾದರೆ, ಆ ವಧೂವರರನ್ನು ಕೃಷ್ಣ ರುಕ್ಕಿಣಿಯರ ಮದುವೆಯ ಸಂದರ್ಭದ ಹಿನ್ನೆಲೆಗೆ ತಂದು ನಿಲ್ಲಿಸುವುದು, ವರನ ದಿಬ್ಬಣ ಹೊರಡುವ ಸಂದರ್ಭವನ್ನು ಶಿವನ ದಿಬ್ಬಣ ಹೊರಟ ಸಂದರ್ಭಕ್ಕೆ ಸರಿಹೊಂದಿಸುವುದು, ವರ ಹಸೆಗೆ ಬರುವ ಸಂದರ್ಭದಲ್ಲಿ ಶ್ರೀರಾಮನೇ ಹಸೆಗೆ ಬರುತ್ತಿದ್ದಾನೆಂದು ಕಲ್ಪಿಸುವುದು - ಇತ್ಯಾದಿ. ಇದರೊಂದಿಗೆ ಪುರಾಣಗಳ ನಂಟಿಲ್ಲದ ಶೋಬಾನೆಗಳೂ ಇವೆ, ಸಂದರ್ಭವನ್ನು ವರ್ಣಿಸುವ ಶೋಬಾನೆಗಳೂ ಇವೆ.

ಶೋಬಾನೆಗಳು ಭಾಗಶಃ ಮೌಖಿಕ ಪ್ರಸಾರ ಪಡೆದು, ಕವಿ ಯಾರೆನ್ನುವುದನ್ನೇ ಮರೆತ ಜನಪ್ರಿಯ ರಚನೆಗಳು. ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯ, ದಾಮೋದರ ಪುಣಿಂಚತ್ತಾಯರಂಥವರು ಬರೆದ ಶೋಬಾನೆಗಳು ಪ್ರಕಟವಾಗಿವೆ. ಅವರು ನಿಶ್ಚಿತ ಮದುವೆಗಾಗಿ ವಧೂವರರ ಹೆಸರನ್ನೂ ಸೇರಿಸಿ ಹೆಣೆದ ಶೋಬಾನೆಗಳಿವೆ. ಕರ್ನಾಟಕದಾದ್ಯಂತ ವಿವಿಧ ಸಮುದಾಯಗಳಲ್ಲಿ ಪ್ರಚಲಿತವಿರುವ ಶೋಬಾನೆಗಳನ್ನು ಯಾರು ಬರೆದರೆನ್ನುವುದೇ ಮರೆತು ಹೋಗಿದೆ, ಪಠ್ಯಗಳು ಮಾತ್ರ ಉಳಿದುಕೊಂಡಿವೆ.

ಕರಾಡ ಭಾಷೆಯ ಶೋಬಾನೆ ಅಥವಾ ಗಾಂಧ್ರಗಳು ಕನ್ನಡದ ಅನುವಾದಗಳೇ. ಪಡ್ರೆ ಶ್ರೀಪತಿ ಶಾಸ್ತ್ರಿಗಳು ಮೊದಲ ಬಾರಿಗೆ ಸರಳ ಸುಂದರ ಪದಬಂಧದಲ್ಲಿ ಕನ್ನಡ ಶೋಬಾನೆಗಳನ್ನು ಕರಾಡ ಭಾಷೆಗೆ ಅನುವಾದಿಸಿದರು. ಅವುಗಳನ್ನು ಕರಾಡಕ್ಕೇ ವಿಶಿಷ್ಟವಾದ ಧಾಟಿಯಲ್ಲಿ ಹಾಡುವ ಪರಿಪಾಠ ಬೆಳೆಯಿತು. ಜೊತೆಗೆ ಕನ್ನಡ ಶೋಬಾನೆಗಳೂ ಕರಾಡ ಸಮುದಾಯದಲ್ಲಿ ಉಳಿದುಕೊಂಡವು.

ಮುಂದೆ, ಪೆರ್ಲ ಕೃಷ್ಣ ಭಟ್ಟರು, ವಿ. ಸೀತಾರಾಮಯ್ಯ ಅವರ ಎಮ್ಮ ಮನೆಯಂಗಳದಿ ಎಂದು ತೊಡಗುವ ಕವಿತೆಯನ್ನು ಗಾಂದ್ರ ರೂಪದಲ್ಲಿ ಅನುವಾದಿಸಿದರು. ಅದು ವಧುವನ್ನು ಒಪ್ಪಿಸಿಕೊಡುವ ಗಾಂದ್ರವಾಗಿ ಪ್ರಚಾರಕ್ಕೆ ಬಂತು.

ಇತ್ತೀಚಿನವರೆಗೂ ಹೆಂಗಸರು ಗುಂಪಾಗಿ ಗಾಂದ್ರ ಗಳನ್ನು ಹಾಡುವುದಿತ್ತು. ಗಾಂದ್ರ ಹಾಡುವುದರಲ್ಲೇ ಪಳಗಿದ, ಹಲವಾರು ಗಾಂದ್ರಗಳನ್ನು ಕಂಠಸ್ಥ ಮಾಡಿಕೊಂಡ ಮಹಿಳೆಯರ ಸಂಖ್ಯೆ ಸಾಕಷ್ಟಿತ್ತು. ಅಂಥವರಲ್ಲಿ ಎಡಮಲೆಯ ಗಿರಿಜಾ ಎಂ. ಭಟ್ ಅವರೂ ಒಬ್ಬರು. ಸದ್ಯ ಗಾಂದ್ರ ಅಥವಾ ಶೋಬಾನೆ ಹಾಡುವ ಪದ್ಧತಿ ಕಣ್ಮರೆಯಾಗುತ್ತಿದೆ.

ಗಿರಿಜಾ ಎಂ. ಭಟ್ ಅವರು ತಮಗೆ ಕಂಠಸ್ಥವಿದ್ದ ಶೋಬಾನೆಗಳನ್ನೆಲ್ಲ ಬರೆದಿಟ್ಟಿದ್ದಾರೆ. ಅವರೂ, ಅವರ ಮಗಳು ಸಂಧ್ಯಾಗೀತಾ ಅವರೂ, ಮೊಮ್ಮಗಳು ಮಧುರಾ ಎಡಮಲೆಯೂ ಸೇರಿ ಒಟ್ಟಾಗಿ ಶೋಬಾನೆಗಳನ್ನು ಹಾಡಿ ಧ್ವನಿಮುದ್ರಿಸಿದ್ದಾರೆ. ಸದ್ಯ ಅಂಥವುಗಳನ್ನು ಆಯ್ದು ಪುಸ್ತಕರೂಪದಲ್ಲಿ ಹೊರತರುವ ಕೆಲಸ ನಡೆದಿದೆ. ಈ ಹಿಂದೆ ಈ ಎಲ್ಲ ಶೋಬಾನೆಗಳೂ ಪ್ರಕಟವಾಗಿವೆ, ಆದರೆ ಕರಾಡ ಮತ್ತು ಕನ್ನಡ ಆವೃತ್ತಿಗಳೆರಡೂ ಜೊತೆಯಾಗಿ ಬಂದಿದ್ದಿಲ್ಲ. ಇದು ಅಂತಹ ಒಂದು ಪ್ರಯತ್ನ. ಎಡಮಲೆ ಕುಟುಂಬದವರು ತಾಯಿಯ ಸ್ಮರಣೆಗಾಗಿ ಸಮಾಜಕ್ಕೆ ಕೊಡುವ ಸ್ಮರಣಿಕೆ.

ಡಾ. ರಾಧಾಕೃಷ್ಣ ಬೆಳ್ಳೂರು


ಈ ಪುಸ್ತಕದ ಪ್ರತಿಯನ್ನು ಪಡೆಯಲು ಆಸಕ್ತರು ಈ ಕೆಳಗಿನವರನ್ನು ಸಂಪರ್ಕಿಸಬಹುದು: ಮಧುರಾ ಎಡಮಲೆ (📞 8078724932)

Heritage