
Article · March 28, 2026
ಎಲ್ಲಿ ಹೋದಳು ಜನ ಮನವ ಗೆದ್ದವಳು?
- ಜಯಶ್ರೀ ಕೆ. ಆರ್. ಭಟ್ ಪಳ್ಳತಡ್ಕ
☘️☘️☘️☘️
ಮನದ ಅಂಗಳದಲ್ಲಿ ಮೂಡಿ ಬಂದವಳು
ಕನ್ನಡಿಗರ ಹೃದಯದಲಿ ನೆಲೆನಿಂತವಳು
ಕನ್ನಡದ ವರ್ಣ ಮಾಲೆಗೆ ಮೆರುಗನಿತ್ತವಳು
ಕನ್ನಡ ನಿರೂಪಣೆಗೆ ಶಕ್ತಿ ತುಂಬಿದವಳು /
ಕನ್ನಡ ಭಾಷೆಯ ಧ್ರುವತಾರೆ ಇವಳು
ಕನ್ನಡದಿ ಮೆಟ್ರೋಗೆ ಧ್ವನಿಯನಿತ್ತವಳು
ಕನ್ನಡಕೆ ಮುನ್ನುಡಿಯ ಶಬ್ದವಾದವಳು
ಇಂದು ನಿಶ್ಯಬ್ದವಾಗಿ ಮರೆಯಾದವಳು/
ಕನ್ನಡ ಭಾಷೆಗೆ ಹಚ್ಚಿದಳು ಬಣ್ಣ,
ಮೇಲಕೆತ್ತರಿಸಿದಳು ಕನ್ನಡ ಭಾಷೆಯನ್ನ
ಅಂದೊಮ್ಮೆ ತೃಪ್ತಿಯಲಿ ಮುಚ್ಚಿದಳು ಕಣ್ಣ
ಮತ್ತೆ ತೆರೆಯಲೆ ಇಲ್ಲಮುಚ್ಚಿರುವ ಕಣ್ಣ/
ಎಳೆದಳಲ್ಲಿಯವರೆಗೆ ಕನ್ನಡದ ತೇರು
ಉಳಿಸಿ ಹೋದಳು ಜನಕೆ ಬರಿಕಣ್ಣ ನೀರು
ಗೊತ್ತೆ ಇವಳನು ನಿಮಗೆ ? ಹೇಳಿ ಅವಳಾರು?
ನಟಿಯಾಗಿ ನಟಿಸಿದಳು ಅಭಿನಯದ ಮೇರು/
ಒಳ್ಳೆಯವರಿಗೆ ಇಲ್ಲಿಉಳಿಗಾಲವಿಲ್ಲ
ಬರಬಾರದಾ ಖಾಯಿಲೆಯು ಕಾಡಿತಲ್ಲಾ!
ಒಳಗೊಳಗೆ ನುಂಗಿದಳು ನಗುತ ನೋವೆಲ್ಲ
ಸಾವು ಬಳಸಿತು ತೋಳ,ಅವಳ ಸೆಳೆದುಕೊಂಡು ಮೆಲ್ಲಮೆಲ್ಲ /
ಮರೆಸುತ ಹೃದಯದಿಂ ನಗುವ ಚೆಲ್ಲಿ
ಮರೆಯಾಗಿ ಹೋಗಿಹಳು ಮಾತಿನಾ ಮಲ್ಲಿ
ಮುತ್ತು ಉದುರಿದ ಹಾಗೆ ನುಡಿಯುತಿದ್ದವಳು
ಜೊತೆಗಿದ್ದವರನೆಲ್ಲ ನಗಿಸುತಿದ್ದವಳು/
ಹನಿಗವನ, ರಸಕಾವ್ಯ ಹಂಚುತಿದ್ದವಳು
ನಿರೂಪಣೆಗೆ ಹೊಸ ಭಾಷ್ಯವನ ಬರೆದವಳು
ಅಂದು ಶಬ್ದವಾಗಿದ್ದವಳು
ಇಂದು ನಿ:ಶ್ಯಬ್ದವಾದವಳು/
Creative Writings
