
Article · September 19, 2026
ಹಿರಿಜೀವಗಳ ಬಗ್ಗೆ ಇರಲಿ ಸದಾ ಅನುಕಂಪ!
ರವೀ ಸಜಂಗದ್ದೆ
ನಮ್ಮ ನಡುವಿನ, ನಾವು ಆಡುತ್ತಾ, ಬೆಳೆಯುತ್ತಾ, ನೋಡುತ್ತಾ ಬಂದ ಒಂದು ದೊಡ್ಡ ಯುಗ, ಸಂತತಿ, ಸೀನಿಯರ್ ಜನರೇಷನ್ ನಿಧಾನವಾಗಿ ಅಂತ್ಯವಾಗುತ್ತಿದೆ, ಕಮರುತ್ತಿದೆ, ಕರಗುತ್ತಿದೆ, ನೇಪಥ್ಯಕ್ಕೆ ಸರಿಯುತ್ತಿದೆ! ಬದುಕೇ ಹಾಗೆ ಬಿಡಿ. ಹೊಸ ಚಿಗುರು ಬಂದು, ಬೆಳೆದು, ಪಕ್ವಗೊಂಡಾಗ ಹಳೆಯದು ಮಾಗಬೇಕು, ಒಣಗಬೇಕು, ಕೊನೆಗೆ ಉದುರಬೇಕು. ಒಟ್ಟಾರೆ ಎಲ್ಲರೂ-ಎಲ್ಲವೂ 'ಮರಳಿ ಮಣ್ಣಿಗೆ' ಸೇರಲೇಬೇಕು. ಹಾಗೆಂದ ಮಾತ್ರಕ್ಕೆ ಈ ಕಹಿಯನ್ನು, ಬೇಸರವನ್ನು, ನೋವನ್ನು ಅರಗಿಸಿಕೊಳ್ಳಲು ತುಸು ಕಷ್ಟ!
ನಾವು ನೋಡುತ್ತಾ ಬೆಳೆದ ಅಜ್ಜ-ಅಜ್ಜಿಯಂದಿರಲ್ಲಿ ಬಹುತೇಕರು ಅದಾಗಲೇ ನಮ್ಮನ್ನಗಲಿದ್ದಾರೆ. ಬೆರಳೆಣಿಕೆಯಷ್ಟು ಇರುವ ಕೆಲವು ಹಿರಿಯ ಜೀವಿಗಳಲ್ಲಿ ಕಾಯಿಲೆ, ಅನಾರೋಗ್ಯ ಮನೆ ಮಾಡಿದೆ. ಅವರು ಈ ಹಿಂದಿನಂತೆ ಚೈತನ್ಯ, ಲವಲವಿಕೆಯಿಂದ ಇಲ್ಲ. ಮರೆವಿನ ಕಾಯಿಲೆ, ದೇಹದ ಅಂಗಾಂಗಗಳ ಕಾಯಿಲೆ, ಮನಸಿನ ಕಾಯಿಲೆ ಮತ್ತು ಇತರ ವಯೋಸಹಜ ಕಾಯಿಲೆಗಳು ಅವರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಅವರ ಜೊತೆಗಿರುವ ಕಿರಿಯರಿಗೂ ಜವಾಬ್ದಾರಿ ನಿಭಾಯಿಸುವ, ತಂತಮ್ಮ ಹೆತ್ತವರನ್ನು ನೋಡಿಕೊಳ್ಳಬೇಕೆನ್ನುವ ತುರ್ತು. ಹಾಗಾದಾಗ ಎಲ್ಲರ ನಿದ್ರೆ, ನೆಮ್ಮದಿಗೆ ಒಂದಷ್ಟು ತಳಮಳ!
ಊರ ದೇವಸ್ಥಾನದ ಎಲ್ಲಾ ಆಗುಹೋಗುಗಳನ್ನು ದಶಕಗಳಿಂದ ನೋಡಿಕೊಳ್ಳುತ್ತಿದ್ದ, ನಿಭಾಯಿಸುತ್ತಿದ್ದ ಹಿರಿಯ ಜೀವಕ್ಕೆ ಈಗ ತನ್ನನ್ನು ತಾನೇ ನೋಡಿಕೊಳ್ಳಲು, ನಿಭಾಯಿಸಲು ಕಷ್ಟವಾಗುತ್ತಿದೆ, ಬದುಕು ಒಂದಷ್ಟು ಅಯೋಮಯ! ಊರಿನ, ಸಮುದಾಯದ ಸಮಸ್ಯೆಗಳಿಗೆ ಕಿವಿಯಾದ, ತೊಂದರೆಗಳಿಗೆ ದನಿ ಎತ್ತಿದ ಅವರಿಗೀಗ ಕಿವಿ ಕೇಳಿಸುತ್ತಿಲ್ಲ ಮತ್ತು ಮಾತೂ ಸಣ್ಣ ಸ್ವರ, ಅಸ್ಪಷ್ಟ! ಕೂಡು ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ಹೆಗಲು-ತಲೆಯ ಮೇಲೆ ದಶಕಗಳ ಕಾಲ ಹೊತ್ತುಕೊಂಡ ಕುಟುಂಬದ ಹಿರಿಯ ಜೀವಕ್ಕೆ ಈಗ ನಡೆದಾಡಲು ಇತರರ ಹೆಗಲು ಅಥವಾ ಕೈಯಲ್ಲಿ ಕೋಲು ಹಿಡಿಯುವ ಅನಿವಾರ್ಯತೆ! ದುರುಳರನ್ನು ಕಣ್ಸನ್ನೆಯ ಮೂಲಕ ಮಟ್ಟ ಹಾಕುತ್ತಿದ್ದ ಒಂದು ಕಾಲದ ಖಡಕ್, ಈಗ ಮಾಜಿ ಆಗಿರುವ ಪೋಲೀಸಪ್ಪನಿಗೆ ಈಗ ತಂದಿಟ್ಟ ತಟ್ಟೆಯಲ್ಲಿನ ಅನ್ನವೂ ಕಾಣದಷ್ಟು ದೃಷ್ಟಿ ಮಂಜು. ಊರಿನ ಎಲ್ಲೆಡೆ ವರ್ಷಗಳಿಂದ ನೂರಾರು ಸೂರು ಕಟ್ಟಿಸಿ ಕೊಟ್ಟ ಪ್ರಸಿದ್ಧ ಇಂಜಿನಿಯರ್ ಒಬ್ಬರಿಗೆ ಈಗ ಮಕ್ಕಳು ನೋಡಿಕೊಳ್ಳದೇ ಅನಾಥಾಶ್ರಮದ ಶೀಟಿನ ಶೆಡ್‌ನಲ್ಲಿ ಬಂಧಿ! ತನ್ನ ಪರಿಸರದ ಎಲ್ಲಾ ಮಕ್ಕಳಿಗೆ-ಯುವತಿಯರಿಗೆ-ಹೆಂಗಳೆಯರಿಗೆ ಬೇಕಾದ ರೀತಿಯಲ್ಲಿ-ಶೈಲಿಯಲ್ಲಿ ರವಿಕೆ, ಬಟ್ಟೆ ಸೂಪರ್ ಆಗಿ ಹೊಲಿದು ಕೊಟ್ಟ ಹಿರಿಯಕ್ಕನಿಗೀಗ ವಯೋಸಹಜ ಮರೆವಿನ ಕಾಯಿಲೆ - ತನ್ನ ಮೈಮೇಲೆ ಬಟ್ಟೆ ಇದೆಯೇ ಇಲ್ಲವೇ ಎನ್ನುವಷ್ಟೂ ಪರಿಜ್ಞಾನವಿಲ್ಲ! ದಿನಸಿ ಅಂಗಡಿ ಇಟ್ಟುಕೊಂಡು ಊರಿಗೆಲ್ಲ ಒಂದೇ ಸೂರಿನಡಿ ದಿನಸಿ ಕೊಡುತ್ತಿದ್ದ, ಸಾಲಕ್ಕೆ ಸಾಮಾನು ನೀಡುತ್ತಿದ್ದ ಅಂಗಡಿಯವರಿಗೆ ಈಗ ತಾನು ಊಟ ಮಾಡಿದ ನೆನಪಿಲ್ಲ ಮತ್ತು ಎರಡು ತುತ್ತು ಅನ್ನವೂ ಜೀರ್ಣವಾಗುತ್ತಿಲ್ಲ. ಹಲವಾರು ಮಕ್ಕಳಿಗೆ ಲೆಕ್ಕದ ಪಾಠ ಮತ್ತು ಜೀವನ ಪಾಠ ಕಲಿಸಿದ ಗಣಿತದ ಟೀಚರ್‌ಗೆ ಈಗ ತನ್ನ ಮನೆ ಮಕ್ಕಳ ಲೆಕ್ಕ-ಮುಖ ನೆನಪಾಗುತ್ತಿಲ್ಲ! ಮನೆಯ ಮಕ್ಕಳು ಬಹಿರ್ದೆಸೆ ಚೆಡ್ಡಿಯೊಳಗೆ ಮಾಡಿದಾಗ ಸಿಟ್ಟಿಗೆದ್ದು ಬಾರಿಸುತ್ತಿದ್ದ ಆಕೆಗೀಗ ತನ್ನದೇ ಬಹಿರ್ದೆಸೆ ಮಲಗಿದಲ್ಲೇ ಆಗುತ್ತಿದ್ದರೂ 'ಊಹೂಂ' ಅದು ಗೊತ್ತಾಗುತ್ತಿಲ್ಲ! ಊರಿಗೆ ಆರೋಗ್ಯ ಭಾಗ್ಯ ಕಲ್ಪಿಸಿದ ದಶಕಗಳ ಕಾಲದ ಡಾಕ್ಟ್ರಿಗೆ ಆರೋಗ್ಯ ಮತ್ತು ಮನಸು ಈಗ ಕದಡಿದ ಸಮುದ್ರ ಮತ್ತು ಅವರ ಮನೆಯೀಗ ಅವರನ್ನು ನೋಡಿಕೊಳ್ಳುತ್ತಿರುವ ಸಣ್ಣ ಆಸ್ಪತ್ರೆ! ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಜೀವನ ನಡೆಸಿದ, ಎಲ್ಲಾ ಕಷ್ಟಗಳನ್ನು ಹೊತ್ತುಕೊಂಡ ಕೃಷಿಕರೊಬ್ಬರಿಗೆ ಈಗ ತನ್ನ ಪೀಚಲು ದೇಹವೇ ಭಾರ! ಊರಿಗೆ ಒಳಿತು ಮಾಡಿದ ಪುರೋಹಿತರ ಆರೋಗ್ಯಕ್ಕೆ ಶಾಂತಿ, ನೆಮ್ಮದಿ, ಆರೋಗ್ಯ ಇಲ್ಲ ಎನ್ನುವಷ್ಟು ಬಾಧೆ-ಕ್ಷೀಣ. ಸುಶ್ರಾವ್ಯವಾಗಿ ಹಾಡುತ್ತಿದ್ದ, ನಾಟ್ಯವಾಡುತ್ತಿದ್ದ ಹಲವಾರು ಶಿಷ್ಯಂದಿರನ್ನು ಸೃಷ್ಟಿಸಿದ ಆಕೆಗೀಗ ಗಂಟಲು ಬಿದ್ದಿದೆ, ಸೊಂಟ ಸೊರಗಿದೆ - ವ್ಹೀಲ್‌ಚೇರ್ ಆಸರೆ... ಹೀಗೆ ಹಲವರಿಗೆ ಬದುಕು ದುಸ್ತರವಾಗಿರುವ ಅನುಭವ. ಎಲ್ಲಾ ಊರುಗಳಲ್ಲೂ, ಎಲ್ಲಾ ಮನೆಗಳಲ್ಲೂ ಮೇಲಿನ ರೀತಿಯ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಹಿರಿ ಜೀವಗಳು ಕರಗಿ, ಸೊರಗಿ, ಒಣಗುತ್ತಿವೆ.
ಮೇಲೆ ವಿವರಿಸಿದ ಒಂದು ಸುವರ್ಣ ಯುಗದ, ನಿಷ್ಕಲ್ಮಷ ಮನಸ್ಸು-ಹೃದಯದ ಜನರು ನಮ್ಮ ಕಣ್ಣೆದುರೇ ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ಮುಂದಿನ ಕೆಲವೇ ವರ್ಷಗಳಲ್ಲಿ ನಮ್ಮ ಬದುಕಿನಿಂದ ಈ ವಿಧದ ಒಂದು ಇಡೀ ಪೀಳಿಗೆ ಮರೆಯಾಗಲಿದೆ. ಅಪೂರ್ವ-ಅಪರೂಪದ ಜೀವನ ಪದ್ಧತಿ, ಸಂಸ್ಕೃತಿ, ಸರಳತೆ, ನಂಬಿಕೆ, ಮೌಲ್ಯಗಳು, ಸನ್ಮನಸ್ಸು ಮತ್ತು ಅಪಾರ ಮಾನವೀಯತೆಯೂ ಅವರ ದೇಹದೊಂದಿಗೆ ಮಣ್ಣಾಗಿ ನಮ್ಮಿಂದ ಸದಾಕಾಲ ದೂರಾಗಲಿದೆ. ಹಬ್ಬಗಳು, ಕುಟುಂಬದ ಸಮಾರಂಭಗಳು, ಅತಿಥಿ ಸತ್ಕಾರ, ನೆರೆಹೊರೆಯವರ ಬಗ್ಗೆ ಕಾಳಜಿ, ಪರಸ್ಪರ ಸಹಾಯ-ಸಹಕಾರ... ಇವೆಲ್ಲವೂ ಅವರ ಬದುಕಿನ ಸಹಜ ಭಾಗವಾಗಿದ್ದವು. ಮೊಬೈಲ್ ನೆನಪಿಸುವ ಅಗತ್ಯವೇ ಇಲ್ಲದೆ ಏಕಾದಶಿ, ಅಮಾವಾಸ್ಯೆ, ಹುಣ್ಣಿಮೆ, ಸಂಕ್ರಾಂತಿ, ಶ್ರಾದ್ಧ, ಹಬ್ಬ-ಹರಿದಿನಗಳನ್ನು ಮುಂತಾದವುಗಳನ್ನು ನೆನಪಿಟ್ಟುಕೊಳ್ಳುತ್ತಿದ್ದ ಆ ಪೀಳಿಗೆ ನಶಿಸುತ್ತಿದೆ. ಹಳೆಯ ಚಪ್ಪಲಿ, ಸರಳ ಬಟ್ಟೆ, ದಪ್ಪ ಕನ್ನಡಕ, ಕೈಬರಹದ ಚಿಕ್ಕ ಡೈರಿಯಲ್ಲಿ ದೂರವಾಣಿ ಸಂಖ್ಯೆಗಳು, ಎರಡು ಹೊತ್ತಿನ ಊಟ, ಮಲಗಲು ಮನೆಯ ಚಾವಡಿಯಲ್ಲಿ ಸಣ್ಣ ಚಾಪೆ - ಇಷ್ಟೇ ಸಾಕಾಗಿತ್ತು ಅವರಿಗೆ, ಅದೇ ಅವರುಗಳಿಗೆ ನೆಮ್ಮದಿಯ ತಾಣ, ಸ್ವರ್ಗಸುಖ. ನಾವಾದರೋ ನಮಗೀಗ ಭವ್ಯ ಅರಮನೆ ಇದ್ದರೂ ನೆಮ್ಮದಿಯಿಲ್ಲ!
ಜಗತ್ತನ್ನು ಮೆಚ್ಚಿಸಬೇಕೆಂಬ ಹಂಬಲ, ವೈಯಕ್ತಿಕ ಯಾವುದೇ ಇರಾದೆ ಅವರಿಗಿರಲಿಲ್ಲ. ತಪ್ಪು ಸಂಖ್ಯೆಗೆ ಕರೆ ಮಾಡಿಯೂ ಭರಪೂರ ಮಾತನಾಡಿ, ಕೊನೆಯಲ್ಲಿ ಹೊಸ ಸ್ನೇಹಿತನನ್ನು ಹುಡುಕಿಕೊಂಡ ಸಂತೋಷದಿಂದ ಫೋನ್ ಇಡುವ ಸಹೃದಯ ಅವರದಾಗಿತ್ತಲ್ಲ! ಇಡೀ ದಿನಪತ್ರಿಕೆಯನ್ನು ಓದುವವರು, ಬೇಸಿಗೆಯಲ್ಲಿ ಉಪ್ಪಿನಕಾಯಿ, ಹಪ್ಪಳ, ಸಂಡಿಗೆಗಳನ್ನು ತಯಾರಿಸುವವರು, ಸ್ಥಳೀಯ ತರಕಾರಿಗಳು, ಸೊಪ್ಪು, ಬೆಂಡೆಕಾಯಿ, ಬದನೆಕಾಯಿ, ಮುಳ್ಳುಸೌತೆ ಮತ್ತು ಹಳೆಯ ಕಾಲದ ಸೌದೆ ಒಲೆಯ ರುಚಿಯನ್ನು ಕೊಡುವವರು-ಹುಡುಕುವವರು ಈಗ ಕಣ್ಮರೆಯಾಗುತ್ತಿದ್ದಾರೆ! ಅವರು ನಮಗೆ ಹೇಳಿಕೊಟ್ಟದ್ದು 'ಹೋಲಿಕೆಗಿಂತ ತೃಪ್ತಿ, ಭಯಕ್ಕಿಂತ ಭಕ್ತಿ, ಪ್ರದರ್ಶನಕ್ಕಿಂತ ಸರಳತೆ, ಸಾಮಾಜಿಕ ಜಾಲತಾಣಕ್ಕಿಂತ ಸಂಬಂಧಗಳು, ಕೃತಕತೆಗಿಂತ ಪ್ರಕೃತಿ-ಕೃತಜ್ಞತೆ ಮತ್ತು ಅನುಕೂಲಕ್ಕಿಂತ ನಿಜವಾದ ಕಾಳಜಿ ಮುಖ್ಯ' ಎಂಬ ಬದುಕಿನ ಸರಳ ಸತ್ಯವನ್ನು. ಅವರು ನಮ್ಮನ್ನು ಬಿಟ್ಟು ಹೋದಾಗ ಒಂದು ಜೀವಂತ ಗ್ರಂಥಾಲಯ, ಅನುಭವ ಮಂಟಪವೇ ಮುಚ್ಚಿಹೋಗಿ ನಮ್ಮಿಂದ ದೂರಾಗುತ್ತದೆ. ಬದುಕಿನ ಸಾವಿರಾರು ಕಥೆಗಳು, ಅನುಭವಗಳು, ನೆನಪುಗಳು ಮತ್ತು ಬದುಕಿನ ಪಾಠಗಳು ಅವರೊಂದಿಗೆ ಕಣ್ಮರೆಯಾಗುತ್ತವೆ.
ನಮ್ಮ ಮನೆಗಳಲ್ಲಿ ಇಂತಹ ಹಿರಿಯ ಜೀವಗಳು ಇದ್ದರೆ ಅದುವೇ ಬದುಕಿನ ದೊಡ್ಡ ಅದೃಷ್ಟ! ಅವರನ್ನು ಪ್ರೀತಿಸಲು ವಿಶೇಷ ದಿನಕ್ಕಾಗಿ ಕಾಯುವುದು ಬೇಡ. ಅವರ ಬಳಿ ಕುಳಿತುಕೊಂಡು ಸಾಧ್ಯವಾದಷ್ಟು ಅವರ ಮಾತುಗಳನ್ನು ಆಲಿಸೋಣ. ಅವರ ಬಾಲ್ಯದ ಕಥೆಗಳನ್ನು, ಅನುಭವಾಮೃತವನ್ನು ಕೇಳೋಣ. ಅವರೊಂದಿಗೆ ಊಟ ಮಾಡೋಣ. ನಮ್ಮ ಕೈಹಿಡಿದು ನಡೆಸಿದ ಅವರಿಗೀಗ ಆಸರೆ ಬೇಕು - ಅವರ ಕೈ ಹಿಡಿದು ನಡೆಸೋಣ. ಮೀಸಲಿಟ್ಟು ನಮ್ಮ ಸಮಯವನ್ನು ನೀಡೋಣ. ಏಕೆಂದರೆ ಒಂದು ದಿನ ಜಗುಲಿಯ ಕೊನೆಯಲ್ಲಿರುವ ಅವರು ಕುಳಿತುಕೊಳ್ಳುತ್ತಿದ್ದ ಮರದ ಖಾಲಿ ಕುರ್ಚಿ, 'ಇನ್ನಷ್ಟು ಮಾತನಾಡಬಹುದಿತ್ತು, ಇನ್ನಷ್ಟು ಸಮಯ ಕೊಡಬಹುದಿತ್ತು, ಇನ್ನೂ ಏನೇನೋ ಹೇಳುವುದು ಬಾಕಿ ಇತ್ತು, ಅವರ ಮಾತುಗಳಿಗೆ ಇನ್ನಷ್ಟು-ಮತ್ತಷ್ಟು ಕಿವಿಯಾಗಬೇಕಿತ್ತು' ಎಂದು ನಮ್ಮ ಮನಸ್ಸನ್ನು ಕಾಡಿದಾಗ ಅದೆಲ್ಲವನ್ನೂ ನಾವು ಮತೊಮ್ಮೆ ಅನುಭವಿಸಲು ಅವರಿರಲಾರರು! ಹಿರಿಯರು ಕೇವಲ ನಮ್ಮ ಕುಟುಂಬದ ಸದಸ್ಯರು ಮಾತ್ರವಲ್ಲ; ಅವರು ನಮ್ಮ ಬೇರುಗಳು, ನಮ್ಮ ಇತಿಹಾಸ, ನಮ್ಮ ಸಂಸ್ಕೃತಿ, ನಮ್ಮ ಗುರುತು, ನಾವು ಬೆಳೆದು ಬಂದ ಪರಿಸರ-ವಿಳಾಸ, ಅವರೇ ನಮ್ಮ ಒರಿಜಿನಲ್ ಐಡೆಂಟಿಟಿ! ಬದುಕಿನ ಬೇರುಗಳನ್ನು ಮರೆತಾಗ, ನಿಧಾನವಾಗಿ ನಾವು ಯಾರು ಎಂಬುದನ್ನೇ ಮರೆಯಲು ಆರಂಭಿಸುತ್ತೇವೆ ಮತ್ತು ಕೊನೆಗೆ ನಾವೆಲ್ಲೋ ಕಳೆದು ಹೋಗುತ್ತೇವೆ.
ಈ ಎಲ್ಲಾ ಸಕಾರಣಗಳಿಂದಾಗಿ ಮನೆಯ ಹಿರಿ ಜೀವಗಳು ನಮ್ಮೊಂದಿಗೆ ಜೀವಂತವಾಗಿರುವಾಗಲೇ ಅವರನ್ನು ಗೌರವಿಸೋಣ, ಪ್ರೀತಿಸೋಣ, ಆದರಿಸೋಣ, ಅನುಭವಿಸೋಣ, ಅವರಿಂದ ಕಲಿಯೋಣ ಮತ್ತು ಅವರ ಮಧುರ ನೆನಪುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸೋಣ. ನೆನಪಿರಲಿ, ನಾಳೆ ನಾವೂ ಅದೇ ಹಾದಿಯಲ್ಲಿ ಸಾಗಬೇಕಿದೆ ಮತ್ತು ಆಗ ನಮ್ಮನ್ನು ನೋಡಿಕೊಳ್ಳಲು ನಮ್ಮ ನಂತರದ ಪೀಳಿಗೆಯನ್ನು ಸಜ್ಜುಗೊಳಿಸಬೇಕಿದೆ.
'ಹಳೆ ಬೇರು ಹೊಸ ಚಿಗುರು ಕೂಡಿರಲು ಕುಟುಂಬ ಸೊಬಗು' ಎನ್ನುವ ಸಾರ್ವಕಾಲಿಕ ಸತ್ಯ ನೆನಪಿರಲಿ.
