
Article · November 1, 2025
ಚಿಗುರು
- ಶ್ರೀಮತಿ ದಿವ್ಯಾ ಶಿರಂತಡ್ಕ
ಅಂದು ಅದೆಲ್ಲಿಂದಲೋ ಕೇಳಿ ತಂದಿದ್ದೆ
ಸಣ್ಣದೊಂದು ಗಿಡದ ಗೆಲ್ಲು..
ಕತ್ತಿಯ ಮರ್ಮಾಘಾತಕ್ಕೆ ಒಳಗಾದ
ಆ ಬಿಸಿಯಾದ ಉಸಿರಿನಲ್ಲೂ..
ಮನೆಗೆ ತಂದ ತಕ್ಷಣ ಚುಮುಕಿಸಿದೆ
ಒಂದಷ್ಟು ತಣ್ಣಗಿನ ನೀರು..
ಯಾಕೋ ನೆನಪಾಗಿರಬಹುದದಕೆ
ಅಲ್ಲೇ ಬಿಟ್ಟು ಬಂದಿಹ ಬೇರು..
ಇನ್ನದಕೆ ಅಳಿವು ಉಳಿವಿನ ಪ್ರಶ್ನೆ
ಅದೊಂದೇ ಕಣ್ಣ ಮುಂದೆ..
ಉಳಿದರೆ ಮತ್ತೆ ಬೆಳೆಯುವ ಯತ್ನ
ಬುಡವು ಕಳಚಿಹುದು ಹಿಂದೆ..
ಹೊಸ ಜಾಗದೊಳು ಹೊಸ ಜೀವವನು
ಸೃಷ್ಟಿಸುವ ಕಾರ್ಯವಿಹುದು
ಮರೆತು ಬಿಡಬೇಕಿನ್ನಾದರೂ ನೋವಿನ
ನೆನಪು ಮಾಯವಾಗಬಹುದು...
ಕನಸುಗಳು ಬೇಗನೆ ಸಾಯುವುದಿಲ್ಲ
ಸಾಕಾರವಾಗಲು ಕಾಯಬೇಕು..
ಚಿಗುರೊಡೆದು ನಕ್ಕು ನುಡಿಯಿತು ಗೆಲ್ಲು
ಕೈ ಬಿಡದ ಆಶಾವಾದದಲ್ಲೂ..
-ಸಾಗರಿ
ಕವಿಯ ಕಿರುಪರಿಚಯ -
ದಿವ್ಯಾ ಬಿ. ಶಿರಂತಡ್ಕ - ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವೀಧರೆ. ಗೃಹಕೃತ್ಯದ ಜೊತೆಗೆ ಮನೆಯಲ್ಲೇ ಲೆಕ್ಕಪತ್ರ ಹಾಗೂ ತೆರಿಗೆ ಸಂಬಂಧಿ ಕೆಲಸ ನಿರ್ವಹಣೆ. ಕಥೆ, ಕವನ, ಹಾಸ್ಯಲೇಖನ, ಇನ್ನಿತರ ಬರಹಗಳಲ್ಲಿ ಆಸಕ್ತಿಯಿಂದ ಕೃಷಿ ಮಾಡುತ್ತಾ 'ಕರಾಡ ವಾಣಿ' ಮಾಸ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿ ಕಾರ್ಯನಿರ್ವಹಣೆ. ಸಮಾಜಮುಖಿ ಕೆಲಸಗಳಲ್ಲಿ ಆಸಕ್ತೆ.

