
Article · March 18, 2026
ವಸಂತ ಗೀತೆ
- ಶ್ರೀ ದೇವಿ ಎಸ್ ಭಟ್ , ಕಜಮಲೆ
ಚೈತ್ರ ಶುಕ್ಲದ ಪಾಡ್ಯ
ಮಾಮರದಿ ಕೋಗಿಲೆಯು
ಇಂಪಾದ ಸುಸ್ವರಕೆ ದನಿಯಾಯಿತು.
ಉದಯರವಿ ಪಸರಿಸಿದ
ಉಷೆಯ ಕಿರಣದ ಕಾಂತಿ
ಭುವಿಗೆ ಮುತ್ತನು ನೀಡಿ ನಗೆಯಾಡಿತು
ಬಾಂದಳದ ಮರೆಯಿಂದ
ನೇಸರನು ಉದಯಿಸಲು
ಹೊಂಗಿರಣ ಪಸರಿಸಿದ ಸುಪ್ರಭಾತ.
ಓಂಕಾರ ನಾದದಲಿ
ದುಂಬಿ ಝೇಂಕಾರದಲಿ
ಜಗವನ್ನೆ ಮುತ್ತಿಟ್ಟ ಭಾಗ್ಯದಾತ
ಕಾನನದ ಹಸಿರೆಲ್ಲ
ಸೊಂಪಾದ ಚಿಗುರಿನಲಿ
ಮಧುರತೆಯ ಬಂಧ ರಸಗಂಧವಾಗಿ
ಹೃದಯ ಹೃದಯಗಳಲ್ಲಿ
ಪ್ರೇಮಭಾಷ್ಯವ ಬರೆದು
ವಧುವರರ ಶೃಂಗಾರ ಕಾವ್ಯವಾಗಿ
ಮಮತೆಯಲಿ ಗೋವುಗಳು
ಕರುಗಳನು ಮುದ್ದಿಸಲು
ಬೆಳಕ ನೀಡಿತು ಭುವಿಗೆ ಹಿತವಾದ ಸ್ಪರ್ಶ
ಅಮ್ಮನಾಸರೆಯಲ್ಲಿ
ಬಿಸಿಯುಸಿರ ಬೆಸುಗೆಯಲಿ
ನಗುವ ಕಂದನ ಮಡಿಲ
ತುಂಬಿರುವ ಹರ್ಷ.
Creative Writings
