
News · October 4, 2026
ಅವಿನಾಶ್ ಬಲೆಕ್ಕಳ ಹಾಗೂ ಅವರ "ಹೆಗ್ಗಣ ಮುದ್ದು" ಸಿನಿಮಾದ ಬಗ್ಗೆ ಅನಿಸಿಕೆ
ಕನ್ನಡ ಪ್ರಭ ಪತ್ರಿಕೆಯ ಪ್ರಧಾನ ಸಂಪಾದಕರ( ಜೋಗಿ) ಬರಹ
ಈ ಅವಿನಾಶ್ ಬಲೆಕ್ಕಳ ಎಂಥ ಸಂಕೋಚದ ಹುಡುಗ ಎಂದರೆ ಆತನ ಹೊಸ ಸಿನಿಮಾವನ್ನು ನೋಡು ಅಂತಲೂ ನನಗೆ ಹೇಳಿರಲಿಲ್ಲ. ನಿನ್ನೆ ಅರುಣ್ ಸಾಗರ್ ಫೋನ್ ಮಾಡಿ ನನ್ನ ಮಗಳು ಅದಿತಿ ನಟಿಸಿದ್ದಾಳೆ, ನೋಡಿ ಅಂತ ಹೇಳಿದ ತಕ್ಷಣ ಥೇಟರಿಗೆ ಹೋದೆ. ‘ಹೆಗ್ಗಣ ಮುದ್ದು’ ನನ್ನ ನೆನಪಿನಲ್ಲಿ ಉಳಿಯುವ ಸಿನಿಮಾ.
ನಮ್ಮ ಸುತ್ತಮುತ್ತ ನಡೆಯುವ ಸಣ್ಣಸಣ್ಣ ಘಟನೆಗಳೇ ಈ ಸಿನಿಮಾದ ಜೀವಾಳ. ಹೊಸದಾಗಿ ಮದುವೆ ಆದವರು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಮಾಡುವ ಪ್ರಯತ್ನ, ಪ್ರೀತಿಯೊಳಗೆ ಹುಟ್ಟುವ ಅನುಮಾನ, ಅನುಮಾನದೊಳಗೆ ಹುಟ್ಟುವ ಭಯ, ಆ ಭಯ ಮನುಷ್ಯನನ್ನು ಬದಲಾಯಿಸುವ ಕ್ರಮ- ಇವನ್ನೆಲ್ಲ ಅವಿನಾಶ್ ಬಹಳ ಸಹಜವಾಗಿ ಕಟ್ಟಿಕೊಟ್ಟಿದ್ದಾರೆ. ಗಂಡ-ಹೆಂಡತಿಯ ಕಥೆ ಅಂತ ಶುರುವಾದರೂ ನಿಧಾನವಾಗಿ ಇದು ‘ಒಬ್ಬರು ಇನ್ನೊಬ್ಬರನ್ನು ಎಷ್ಟು ಅರ್ಥಮಾಡಿಕೊಳ್ಳಬಲ್ಲರು?’ ಎನ್ನುವ ಪ್ರಶ್ನೆಯಾಗಿ ಬದಲಾಗುತ್ತದೆ.
ಅವಿನಾಶ್ ಅವರ ನಿರ್ದೇಶನದ ಸದ್ಗುಣ ಎಂದರೆ ಅವರ ಸಂಕೋಚ ಮತ್ತು ಕತೆಯನ್ನು ಸ್ಪರ್ಶಿಸುವಾಗಲೂ ತೋರುವ ಮೃದುತ್ವ. ಇಲ್ಲಿ ಒಳ್ಳೆಯವರಿಲ್ಲ, ಕೆಟ್ಟವರೂ ಇಲ್ಲ. ಬೆಳಿಗ್ಗೆ ಒಳ್ಳೆಯವನಾಗಿರುತ್ತಾನೆ. ಮಧ್ಯಾಹ್ನ ಸ್ವಲ್ಪ ಸ್ವಾರ್ಥಿಯಾಗಿರುತ್ತಾನೆ. ಸಂಜೆ ಯಾರಿಗೋ ನೋವು ಕೊಡುತ್ತಾನೆ. ರಾತ್ರಿ ಅದೇ ನೋವನ್ನು ನೆನೆದು ಪಶ್ಚಾತ್ತಾಪ ಪಡುತ್ತಾನೆ. ‘ಹೆಗ್ಗಣ ಮುದ್ದು’ ಮನುಷ್ಯನ ಈ ಗೊಂದಲವನ್ನು ಹಿಡಿಯಲು ಪ್ರಯತ್ನಿಸುತ್ತದೆ.
ಪೂರ್ಣಚಂದ್ರ ಮೈಸೂರು ಅಭಿನಯ ಈ ಚಿತ್ರದ ಬೆಸ್ಟ್ ಪಾರ್ಟ್. ಕಣ್ಣಲ್ಲಿ ಅನುಮಾನ ವ್ಯಕ್ತಪಡಿಸುವಾಗ ಮಾತು ಬೇಕಾಗುವುದಿಲ್ಲ. ಕೋಪಕ್ಕೂ ತಾರಕ ಸ್ಥಾಯಿ ಬೇಕಿಲ್ಲ. ಏಕಕಾಲಕ್ಕೆ ಪ್ರೀತಿ, ಅಸೂಯೆ, ಗೊಂದಲ, ಅಪರಾಧಪ್ರಜ್ಞೆ ಎಲ್ಲವೂ ಒಟ್ಟಿಗೆ ಕಾಣಿಸಿಕೊಳ್ಳುತ್ತದೆ. ಇಂಥ ಪಾತ್ರವನ್ನು ಸುಲಭವಾಗಿ ‘ಹೀರೋ’ ಮಾಡಿಬಿಡಬಹುದಿತ್ತು. ಆದರೆ ಪೂರ್ಣಚಂದ್ರ ಆತನನ್ನು ನಮ್ಮಂಥ ಮನುಷ್ಯನನ್ನಾಗಿಯೇ ಉಳಿಸಿದ್ದಾರೆ.
ಅದಿತಿ ಸಾಗರ್ ಕೂಡ ಹಾಗೆಯೇ. ಆಕೆಯ ಮೌನವೇ ಹಲವಾರು ಕಡೆ ಸಂಭಾಷಣೆಯಾಗುತ್ತದೆ. ಆಕೆಯ ಮುಖದಲ್ಲಿ ಬದಲಾಗುವ ಭಾವನೆಗಳನ್ನು ನೋಡುತ್ತಾ ಇದ್ದರೆ ಮದುವೆಯೊಳಗೆ ಒಬ್ಬ ಹೆಣ್ಣು ಎಷ್ಟು ಮಾತುಗಳನ್ನು ತನ್ನೊಳಗೇ ಉಳಿಸಿಕೊಳ್ಳುತ್ತಾಳೆ ಎನ್ನುವುದು ಗೊತ್ತಾಗುತ್ತದೆ. ಈ ಇಬ್ಬರ ನಡುವಿನ ಪ್ರೇಮವಿರಸ ರಸಾಯನವೇ ಚಿತ್ರದ ಹೃದಯ.
ಇವತ್ತು ಸಿನಿಮಾ ಎಂದರೆ ಬಿಗ್ ಥಿಂಗ್ ಅಂತ ಮಾತಾಡುವ ಹೊತ್ತಿಗೆ, ಇವರು ಇಬ್ಬರನ್ನು ಕೂರಿಸಿಕೊಂಡು ಅವರ ನಡುವೆ ಏನೇನು ನಡೆಯಬಹುದು ಅನ್ನುವುದನ್ನು ಹೇಳಲು ಹೊರಟಿದ್ದಾರೆ. ನಮ್ಮಂಥ ಸಿನಿಮಾ ಪ್ರಿಯರಿಗೆ ಇಂಥ ಸಿನಿಮಾಗಳೇ ಧೈರ್ಯ ತುಂಬುತ್ತವೆ. ಇಲ್ಲಿ ನಿರ್ದೇಶಕನ ಪ್ರತಿಭೆ ಕೆಲಸ ಮಾಡುತ್ತದೆ, ದುಡ್ಡು ಗೌಣವಾಗುತ್ತದೆ. ಜಾಸ್ತಿ ದುಡ್ಡು ಖರ್ಚು ಮಾಡಿದರೆ ಒಳ್ಳೇ ಸಿನಿಮಾ ಮಾಡಬಹುದು ಎಂಬ ದೌಲತ್ತು ತೋರುವವರಿಗೆ ಇದು ಒಳ್ಳೆಯ ಉತ್ತರ.
ಚಿತ್ರವನ್ನು ಮತ್ತೊಮ್ಮೆ ತಿದ್ದಿ ಬರೆಯುವ ಅವಕಾಶ ಇತ್ತು. ಆದರೆ ಪರಿಪೂರ್ಣವಾಗದಿರುವುದೇ ಕೆಲವೊಮ್ಮೆ ಆ ಸಿನಿಮಾದ ಪ್ರಾಮಾಣಿಕತೆ. ಹೊಸ ನಿರ್ದೇಶಕನೊಬ್ಬ ತನ್ನದೇ ಸ್ವರದಲ್ಲಿ, ಆರ್ಕೆಸ್ಟ್ರಾದ ಅಬ್ಬರ ಇಲ್ಲದೇ, ತನ್ನದೇ ಹಾಡು ಹಾಡುತ್ತಿದ್ದಾನೆ ಅನ್ನುವುದು ಖುಷಿ.
ಇಂಥ ಕತೆಗಳನ್ನು ಪ್ರೋತ್ಸಾಹಿಸುತ್ತಿರುವ ಡಾಲಿ ಧನಂಜಯ್‌ಗೆ ಪ್ರೀತಿ.
ಜೋಗಿ_ಪ್ರಧಾನ ಸಂಪಾದಕರು ,ಕನ್ನಡ ಪ್ರಭ
