
Article · November 3, 2026
ನಗು, ನಲಿವು, ನೆನಪುಗಳು....
ಪದ್ಮಶ್ರೀ ಮಾದೇರಿ
ಅಮೆರಿಕಾ ಪ್ರವಾಸ: ಭಾಗ 6
ಇಲ್ಲಿಯವರೆಗೆ ನಮ್ಮ ಅಮೆರಿಕ ಪ್ರವಾಸದ ಲೇಖನಗಳಲ್ಲಿ, ನಾವು ಹೋದ ಜಾಗಗಳ ಬಗ್ಗೆ ಮಾತ್ರ ಬರೆದಿದ್ದೇನೆ. ಏಕೋ ಏನೋ ನಾವು ಮಾಡಿದ ಗಮ್ಮತ್ತಿನ ಬಗ್ಗೆಯೂ ಬರೆಯಬೇಕು ಅಂತ ಅನಿಸಿತು. ಹಾಗೆಯೇ ಶುರುಮಾಡಿದೆ.
ನಾವು ಪ್ರವಾಸ ಹೊರಟವರು ಆರು ಜನ. ನನ್ನ ತಂಗಿ, ಅವಳ ಗಂಡ, ಎರಡು ಮಕ್ಕಳು, ನಾನು ಮತ್ತು ನನ್ನ ಮನೆಯವರು. ಏಳು ಜನ ಕುಳಿತುಕೊಳ್ಳಬಹುದಾದ ಕಾರನ್ನು 12 ದಿನಗಳಿಗೆ ಬಾಡಿಗೆಗೆ ಬುಕ್ ಮಾಡಿದ್ದರು. ಡ್ರೈವ್ ಮಾಡುವವರು ನನ್ನ ಬಾವ, ಅವನ ಪಕ್ಕ ನನ್ನ ತಂಗಿ, ಅವರ ಹಿಂದೆ ನಾನು ಮತ್ತು ಮನೆಯವರು, ನಮ್ಮ ಹಿಂದೆ ಮಕ್ಕಳು - ಹೀಗೆ ಕುಳಿತಿದ್ದೆವು. ನನ್ನ ಮತ್ತು ಮನೆಯವರ ಮಧ್ಯೆ ಸಣ್ಣ ರೆಫ್ರಿಜರೇಟರನ್ನು ಇಟ್ಟಿದ್ದೆವು. ಹಣ್ಣು, ತರಕಾರಿ ಹಾಗೂ ಮೊಸರನ್ನು ಇಡಲು ಈ ವ್ಯವಸ್ಥೆ ಮಾಡಿದ್ದು. ಇನ್ನು 13 ದಿನಗಳ ಪ್ರವಾಸಕ್ಕೆ ಬೇಕಾದ ಸಾಮಾನುಗಳನ್ನು (ಅಕ್ಕಿ,ಗೋಧಿ, ತಿಂಡಿ ತಿನಿಸುಗಳು,ಮಸಾಲ ಪುಡಿಗಳು ಇತ್ಯಾದಿ) ಪ್ಯಾಕ್ ಮಾಡಿ ಢಿಕ್ಕಿಯಲ್ಲಿ ತುಂಬಿಸಿದ್ದೆವು.
ಕಾರಿನಲ್ಲಿ ಸಮಯ ಕಳೆಯಲು ಹಲವು ಆಟಗಳನ್ನು ಆಡುತ್ತಿದ್ದೆವು. ಗಡಿಯಾರ ನೋಡದೆ ಸೆಕೆಂಡ್ ಗಳನ್ನು ಊಹಿಸುವ ಆಟ ಮಕ್ಕಳಿಗೆ ತುಂಬಾ ಇಷ್ಟವಾಯಿತು. ಅದಾದ ನಂತರ ಇಂಗ್ಲೀಷ್ ಪದಗಳ ಪದ ಬಂಡಿ ಆಡಿದೆವು. ನಾವು ಆಡಿದ ಮತ್ತೊಂದು ಆಟವೆಂದರೆ, ಕಾರೊಳಗಿದ್ದ ಯಾವುದಾದರೊಂದು ವಸ್ತುವನ್ನು ಒಬ್ಬರು ಮನಸ್ಸಿನಲ್ಲಿ ಯೋಚಿಸಿ, ಉಳಿದವರು ಆ ವಸ್ತುವಿನ ಬಣ್ಣ, ಗಾತ್ರ ಇತ್ಯಾದಿ ಎಂದು ಐದು ಪ್ರಶ್ನೆಗಳನ್ನು ಕೇಳುವ ಮೂಲಕ, ಆ ವಸ್ತು ಯಾವುದೆಂದು ಊಹಿಸಬೇಕು. ಬಹಳ ಹೊತ್ತು ಈ ಆಟ ಆಡಿದೆವು. ತಂಗಿಯ ಸಣ್ಣ ಮಗ, ನಾಲ್ಕು ವರ್ಷದ ತುಂಟ ಅಭಿ, ಪ್ರತೀ ಬಾರಿ ಅವನಲ್ಲಿದ್ದ ಕೃಷ್ಣನ ಗೊಂಬೆಯ ಬಗ್ಗೆ ಯೋಚಿಸಿ, ನಾವು ಪ್ರಶ್ನೆ ಕೇಳುವಾಗ ಕೇಕೆ ಹಾಕಿ ನಗುತ್ತಿದ್ದ. ಬೇರೆ ಬೇರೆ ವಸ್ತುಗಳ ಬಗ್ಗೆ ಯೋಚಿಸಲು ಹೇಳಿದರೂ, ಅವನಿಗೆ ಇದು ಬಹಳ ಪ್ರಿಯವಾಯಿತು. ನಮಗೆ ನಗು ಬಾರದಿದ್ದರೂ, ಅವನ ನಗು ಕೇಳಿ ನಾವೂ ನಕ್ಕೆವು.ನಮಗೆ ಬೋರಾದರೂ ಅವನಿಗೆ ಇದೇ ಆಟ ಆಡಬೇಕಿತ್ತು.
ಇದಕ್ಕಿಂತ ಗಮ್ಮತ್ತಾದದ್ದು ನಾವು ಆಡುತ್ತಿದ್ದ ಅಂತ್ಯಾಕ್ಷರಿ. ನಾವು ಯಾರೂ ಹಾಡುಗಾರರಲ್ಲ. ಯಾರಿಗೂ ತುಂಬಾ ಹಾಡುಗಳೂ ಗೊತ್ತಿರಲಿಲ್ಲ. ಡ್ರೈವ್ ಮಾಡುತ್ತಿದ್ದ ಬಾವ, ನಿದ್ದೆ ಬರುತ್ತಿದೆ ಎಂದಾಗ, ಅಂತ್ಯಾಕ್ಷರಿ ಆಡಲು ಶುರು ಮಾಡುತ್ತಿದ್ದೆವು. ತಂಗಿ ಹಾಗೂ ಬಾವ ಒಂದು ಗುಂಪಾದರೆ, ನಾನು ಹಾಗೂ ಯಜಮಾನರು ಇನ್ನೊಂದು ಗುಂಪು. ಒಂದೆರಡು ದಿನಗಳಲ್ಲೇ ಯಾರಿಗೆ ಯಾವ ಅಕ್ಷರ ಸಿಕ್ಕಿದರೆ, ಯಾವ ಹಾಡು ಹಾಡುತ್ತಾರೆ ಎಂದು ಎಲ್ಲರಿಗೂ ಗೊತ್ತಾಗಿ ಹೋಗಿತ್ತು. ಒಂದು ಸಲ ನಮ್ಮ ಗುಂಪಿಗೆ 'ಜ' ಅಕ್ಷರ ಸಿಕ್ಕಿದಾಗ, ಯಾವ ಹಾಡೂ ಹೊಳೆಯದೆ, ನಾನು "ಜಾಜಿ ಮಲ್ಲಿಗೆ ಎಲ್ಲಿರುವೆ, ಕೆಂಡಸಂಪಿಗೆ ಹೇಗಿರುವೆ" ಎಂದು ಹಾಡಿದಾಗ ಎಲ್ಲರೂ ಯಾವುದೋ ಸಿನಿಮಾ ಹಾಡು ಅಂದುಕೊಂಡಿದ್ದರು. ಆದರೆ ನಾನು ಗೊಳ್ ಎಂದು ನಕ್ಕಾಗ, ಇದು ನಾನೇ ರಚಿಸಿದ ಹಾಡು ಅಂತ ಎಲ್ಲರಿಗೂ ಗೊತ್ತಾಯಿತು. ಇದನ್ನೆಲ್ಲ ನೋಡಿದ ಬಾವನಂತೂ ಅಂತ್ಯಾಕ್ಷರಿ ಬೇಡ, ನನ್ನನ್ನು ಬಿಟ್ಟುಬಿಡಿ ಎಂದು ಅಂಗಾಲಾಚುತ್ತಿದ್ದರೂ, ನಾವು ಪ್ರವಾಸದ 12 ದಿನಗಳಲ್ಲಿಯೂ ದಿನಕ್ಕೊಂದು ಬಾರಿಯಾದರೂ ಇದನ್ನು ಆಡಿದೆವು. ನಕ್ಕು ನಕ್ಕು ಸುಸ್ತಾಗಿದ್ದೆವು. ನಮ್ಮನ್ನು ನೋಡಿದ ಮಕ್ಕಳಿಗೂ ಭಾರಿ ಆಶ್ಚರ್ಯ. ಯಾಕೆ ಹೀಗೆ ಕಿರುಚಾಡುತ್ತಿದ್ದೇವೆ ಎಂದು. ಕೊನೆ ಕೊನೆಗೆ, ನನ್ನ ಯಜಮಾನರು ಹಾಗೂ ತಂಗಿ, ಹೊಸ ಹಾಡಿಗಾಗಿ ಗೂಗಲಮ್ಮನ ಮೊರೆ ಹೋದರು. ವಾಪಸ್ ಮನೆಗೆ ಡ್ರೈವ್ ಮಾಡುವಾಗ ಬಾವನದ್ದು ಒಂದೇ ಕಂಡೀಶನ್. ಎಷ್ಟೇ ಬೋರಾದರೂ ಅಂತ್ಯಾಕ್ಷರಿ ಆಡಬಾರದು ಎಂದು.
ಇಷ್ಟು ಆಟಗಳ ಜೊತೆ ಮಕ್ಕಳಿಗೆ ಕನ್ನಡ ಕಲಿಸುವ ಕಾರ್ಯಕ್ರಮವೂ ನಡೆದಿತ್ತು. ಮಕ್ಕಳಿಬ್ಬರೂ ಹುಟ್ಟಿದ್ದು ಅಮೆರಿಕದಲ್ಲಿ. ನನ್ನ ಬಾವ ಗೋವೆಯವನಾದ ಕಾರಣ, ತಂಗಿಯ ಜೊತೆ ಇಂಗ್ಲೀಷ್ ಅಥವಾ ಹಿಂದಿಯಲ್ಲೇ ಮಾತುಕತೆ. ಹಾಗಾಗಿ ಮಕ್ಕಳಿಗೆ ಕನ್ನಡ ಬರುತ್ತಿರಲಿಲ್ಲ. "ಗಜಮುಖನೆ ಗಣಪತಿಯೇ ನಿನಗೆ ವಂದನೆ" ಎಂಬ ಭಕ್ತಿ ಗೀತೆಯಿಂದ ಕನ್ನಡ ಕಲಿಕೆ ಆರಂಭವಾಗಿತ್ತು. ಮಗಳು ಆನ್ಯಳಿಗೆ 7 ವರ್ಷಗಳು. ಬೇಗನೆ ಕಲಿತುಕೊಂಡಳು. ಅವಳು ಅಮೆರಿಕನ್ ಆಕ್ಸೆಂಟಿನಲ್ಲಿ ಹಾಡುವಾಗ, ಕೇಳಲು ವಿಚಿತ್ರವಾದರೂ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದೆವು. ಸಣ್ಣವನ ಉಚ್ಛಾರ ಇನ್ನೂ ಸ್ಪಷ್ಟವಾಗದ ಕಾರಣ, ಅವನು ಹಾಡುವಾಗ ನಗು ಬರುತ್ತಿತ್ತು . ಸುಮಾರು ಹಣ್ಣುಗಳ, ತರಕಾರಿಗಳ ಹೆಸರುಗಳನ್ನು ಕನ್ನಡದಲ್ಲಿ ಹೇಳಿಕೊಟ್ಟೆವು. ಮಗಳಂತೂ ನಾವು ಭಾರತಕ್ಕೆ ಹೊರಡುವವರೆಗೆ ದಿನಕೊಮ್ಮೆಯಾದರೂ ಹೇಳಿಕೊಟ್ಟದ್ದೆಲ್ಲವನ್ನು ಚಾಚೂತಪ್ಪದೆ ವರದಿ ಒಪ್ಪಿಸುತ್ತಿದ್ದಳು. ಮಕ್ಕಳು ಎಲ್ಲವನ್ನು ಎಷ್ಟು ಬೇಗನೆ ಕಲಿಯುತ್ತಾರಲ್ಲವೇ?
ಬೆಳೆಯುವ ಮಕ್ಕಳಿಗೆ ಹಸಿವು ಜಾಸ್ತಿ. ನಾವು ತಿರುಗಾಡುವಾಗ, ಗಂಟೆಗೊಮ್ಮೆಯಾದರೂ ಮಕ್ಕಳು ಹಸಿವು ಎಂದು ತಿನ್ನಲು ಏನನ್ನಾದರೂ ಕೇಳುತ್ತಿದ್ದರು. ಹಣ್ಣು ತಿಂದವರಿಗೆ ಮಾತ್ರ ಕುರುಕಲು ತಿಂಡಿ ಕೊಡಬೇಕೆಂದು ತಂಗಿಯ ಆಜ್ಞೆಯಾಗಿತ್ತು. ತಿಂಡಿಯ ಆಸೆಯಿಂದ ಮಕ್ಕಳು ಹಣ್ಣು ತಿನ್ನುತ್ತಿದ್ದರು. ಇನ್ನು ಅಮೆರಿಕದಲ್ಲಿ ನಾವು ತಿರುಗಾಡಿದಷ್ಟೂ ದಿನಗಳಲ್ಲಿ, ಒಂದು ದಿನವೂ ಕೂಡ ನಮ್ಮ ಮನೆಯ ಅಡುಗೆಯನ್ನು ಮಿಸ್ ಮಾಡಿಕೊಳ್ಳುವ ಪ್ರಮೇಯವೇ ಒದಗಲಿಲ್ಲ . ಅನ್ನ, ಸಾರು, ಸಾಂಬಾರು, ತೋವೆ ಅಂತ ತಂಗಿ ಪ್ರತಿದಿನ ರುಚಿಕರವಾದ ಅಡುಗೆಯನ್ನು ಮಾಡುತ್ತಿದ್ದಳು. ಅಡುಗೆಯ ಸಂಪೂರ್ಣ ಜವಾಬ್ದಾರಿಯನ್ನು ಅವಳು ವಹಿಸಿಕೊಂಡಿದ್ದಳು. ಒಂದು ಸಲ ಚಪಾತಿ ತಿನ್ನಬೇಕೆಂದು ಆಸೆಯಾದಾಗ , ಬಾವನನ್ನು ಪೇಟೆಗೆ ಕಳುಹಿಸಿ, ಲಟ್ಟಣಿಗೆ ತರಿಸಿ, ಚಪಾತಿ ಹಾಗೂ ಪಲ್ಯವನ್ನೂ ಮಾಡಿದ್ದಳು. ನಾನು ಹಾಗೂ ಮನೆಯವರು ತರಕಾರಿ ಹೆಚ್ಚುವ, ಪಾತ್ರೆ ತೊಳೆಯುವ, ಮಕ್ಕಳನ್ನು ಹೊರಡಿಸುವ, ಕೆಲಸಗಳನ್ನು ಮಾಡುತ್ತಿದ್ದೆವು. ಬಾವ ಇಡೀ ದಿನ ಡ್ರೈವ್ ಮಾಡಿ ಸುಸ್ತಾಗಿರುತ್ತಿದ್ದರೂ ತನ್ನಿಂದಾದಷ್ಟು ಸಹಾಯ ಮಾಡುತ್ತಿದ್ದ. ಹೀಗೆ ಎಲ್ಲರೂ ಸೇರಿ ಮಾತನಾಡುತ್ತಾ, ಪರಸ್ಪರ ಕಾಲೆಳೆಯುತ್ತಾ, ಕೆಲಸಗಳನ್ನು ಹಂಚಿಕೊಂಡು ಮಾಡುತ್ತಿದ್ದುದರಿಂದ, ಕೆಲಸಗಳು ಕಷ್ಟವೆನಿಸದೆ ಆನಂದದಾಯಕವಾಗಿದ್ದವು.
ಈ ಪ್ರವಾಸದಲ್ಲಿ, ನಮ್ಮನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ ಅನೇಕ ಸನ್ನಿವೇಶಗಳು ಎದುರಾಗಿವೆ. ಅಂತಹ ಒಂದು ಘಟನೆಯನ್ನು ನಾನು ಹೇಳಲೇಬೇಕು. ನಾಲ್ಕು ವರ್ಷದ ಅಭಿಗೆ, ಪಾಪ ಯಾವ ಸೀಟಿನಲ್ಲಿ ಕುಳಿತರೂ, ಕಿಟಕಿಯಿಂದ ಹೊರಗೆ ನೋಡಲಾಗುತ್ತಿರಲಿಲ್ಲ. ಆದರೆ ಮಕ್ಕಳನ್ನು ಮಡಿಲಲ್ಲಿ ಕುಳ್ಳಿರಿಸುವ ಹಾಗಿರಲಿಲ್ಲವಾದ ಕಾರಣ, ಬೇರೆ ವಿಧಿ ಇಲ್ಲದೇ, ಸೀಟಿನಲ್ಲಿ ಕುಳಿತು, ಕುತ್ತಿಗೆ ಉದ್ದ ಮಾಡಿ ಕಿಟಕಿಯಿಂದ ಆಚೆ ನೋಡಲು ಆದಷ್ಟು ಪ್ರಯತ್ನಿಸುತ್ತಿದ್ದ. ಒಂದು ಸಲ ನನ್ನ ಬಾವ, ಪ್ರವಾಸ ಹೇಗುಂಟು ಅಂತ ಅವನನ್ನು ಪ್ರಶ್ನಿಸಿದಾಗ, ಆ ತುಂಟ, "ನನಗೆ ದೊಡ್ಡಪ್ಪನ ಬೋಳು ತಲೆಬಿಟ್ಟರೆ ಬೇರೇನೂ ಕಾಣಿಸಲಿಲ್ಲ" ಎಂದು ಹತಾಶೆಯಿಂದ ಹೇಳಿದಾಗ, ನನ್ನ ಮನೆಯವರ ಫಜೀತಿ ನೋಡಿ ಎಲ್ಲರಿಗೂ ನಗು ಬಂತು. ನಮ್ಮ ಜೊತೆ ಅವನೂ ನಕ್ಕ. ಅಂದಿನಿಂದ ದೊಡ್ಡಪ್ಪನ ಕಾಲೆಳೆಯುವುದು ಅವನ ಪ್ರಿಯವಾದ ಕೆಲಸವಾಯಿತು.
ಹೀಗೆ 12 ದಿನಗಳ ರೋಡ್ ಟ್ರಿಪ್ ನಲ್ಲಿ, ಮಕ್ಕಳೊಡನೆ ನಾವೂ ಮಕ್ಕಳಾಗಿ, ನಕ್ಕು ,ನಲಿದು ಸಂತೋಷ ಪಟ್ಟೆವು. ಟ್ರಿಪ್ ಮುಗಿಸಿ ತಂಗಿಯ ಮನೆಗೆ ಮರಳಿದ ನಂತರ, ನಾವು ಭಾರತಕ್ಕೆ ವಾಪಾಸಾಗಲು ಇನ್ನೂ ಐದು ದಿನಗಳಿದ್ದವು. ಆ ದಿನಗಳಲ್ಲಿ ಮನಸೋ ಇಚ್ಛೆ ಮಕ್ಕಳೊಡನೆ, ತಂಗಿ ಹಾಗೂ ಬಾವನೊಡನೆ, ಮುದ್ದಿನ ನಾಯಿ ಆರ್ಯಳೊಡನೆ ಆಟವಾಡುತ್ತಾ, ಹರಟುತ್ತಾ, ಸಂಜೆ ಹೊತ್ತಲ್ಲಿ ಶಾಪಿಂಗ್ ಮಾಡುತ್ತಾ ಕಳೆದೆವು. ನಾವು ಏರ್ ಪೋರ್ಟ್ ಗೆ ಹೊರಡುವ ಸಮಯ ಬಂದಾಗ, ಮಕ್ಕಳಿಬ್ಬರೂ ತುಂಬಾ ಅತ್ತರು. ನಮಗೂ ಅವರೆಲ್ಲರನ್ನು ಬಿಟ್ಟು ಹೊರಡಲು ಮನಸಿರಲಿಲ್ಲ. ಆದರೂ, ಮುಂದೆ, ಮತ್ತೊಮ್ಮೆ ಹೀಗೆಯೇ ಎಲ್ಲರೂ ಒಟ್ಟಾಗಿ ಪ್ರವಾಸ ಮಾಡುವೆವು ಎಂಬ ಆಶಯದೊಂದಿಗೆ, ಎಲ್ಲರಿಗೂ ವಿದಾಯ ಹೇಳಿ ಹೊರಟೆವು.
ಪ್ರವಾಸ ಮುಗಿಸಿ ಮನೆಗೆ ಮರಳಿದರೂ, ಆ ದಿನಗಳ ಸಂಭ್ರಮ, ನಗು ಮತ್ತು ಆತ್ಮೀಯ ಕ್ಷಣಗಳು ಮನಸ್ಸಿನಲ್ಲಿ ಇನ್ನೂ ಹಸಿರಾಗಿವೆ. ಈ ಪಯಣ ನಾವು ನೋಡಿದ ಪ್ರೇಕ್ಷಣೀಯ ಸ್ಥಳಗಳಿಂದಾಗಿ ಮಾತ್ರವಲ್ಲದೆ, ನಮ್ಮವರೊಡನೆ ಅನುಭವಿಸಿದ ಸಂತಸದ ಕ್ಷಣಗಳು, ಹಂಚಿಕೊಂಡ ನಗು ಮತ್ತು ನಮ್ಮನ್ನೆಲ್ಲ ಬೆಸೆದ ಪ್ರೀತಿಯ ಬಂಧಗಳಿಂದಾಗಿ ಸದಾ ಹೃದಯಕ್ಕೆ ಹತ್ತಿರವಾಗುತ್ತದೆ. ಕೆಲವು ಪ್ರವಾಸಗಳು ಮುಗಿದರೂ, ಅವು ನೀಡಿದ ನೆನಪುಗಳು ಎಂದೂ ಮಾಸುವುದಿಲ್ಲ. ನಮ್ಮ ಅಮೆರಿಕದ ಈ ಪಯಣವು ಅಂತಹ ಒಂದು ಮರೆಯಲಾಗದ ಪಯಣ.






