
Article · April 20, 2026
ನಮ್ಮನೆ ಲಕ್ಷ್ಮಿ ಇನ್ಮುಂದೆ ಮತ್ತೊಂದು ಮನೆಯ ಭಾಗ್ಯಲಕ್ಷ್ಮಿ!
- ರವೀ ಸಜಂಗದ್ದೆ
ಬೆಳಗಿನ ಜಾವದ ಹೊಂಬಿಸಿಲು, ನಾದಮಯ ಹಕ್ಕಿಗಳ ಕಲರವ ಮತ್ತು ಮಂಜಿನ ಹನಿಗಳಿಗಳಷ್ಟೇ ಪವಿತ್ರವಾದದ್ದು ಹಳ್ಳಿಯಲ್ಲಿ ಇರುವ ತೋಟದ ನಡುವಿನ ಮನೆಯ ದನ-ಕರುಗಳ ಹಟ್ಟಿಯ ಒಡನಾಟ. ಆ ಹಟ್ಟಿಯಲ್ಲಿ ಕಟ್ಟಿ ಹಾಕಿರುವ ಮೂಕ ಪ್ರಾಣಿಗಳು ಕೇವಲ ಜಾನುವಾರುಳಲ್ಲ, ಅವು ಮನೆಯ ಒಡಲ ಪ್ರೀತಿಯ ಮಕ್ಕಳು! ಅಂದು, ಅಂದಾಜು ಒಂದೂವರೆ ವರ್ಷಗಳ ಹಿಂದೆ ಶುಭ ಶುಕ್ರವಾರದಂದು, ತುಂಬು ಗರ್ಭಿಣಿ 'ಗೌರಿ' ತನ್ನ ಕರುಳ ಕುಡಿಗೆ ಜನ್ಮವಿತ್ತಳು! ಶುಕ್ರವಾರ ಹುಟ್ಟಿದ ಹೆಣ್ಣು ಕರುವಿಗೆ ಸಂಭ್ರಮದಿಂದ'ಲಕ್ಷ್ಮಿ' ಎಂದು ನಾಮಕರಣ ಮಾಡಲಾಯಿತು, ಅಂದು ಮನೆ ತುಂಬಾ ಹಬ್ಬದ ಸಡಗರವಿತ್ತು. ಆ ಪುಟ್ಟ ಕರು ಲಕ್ಷ್ಮಿ, ಹಟ್ಟಿಯಲ್ಲಿ ಆಚೀಚೆ ಬಂದು ತುಂಟಾಟವಾಡುತ್ತಾ, ಅಮ್ಮನ ಕೈಗಳನ್ನು ಪ್ರೀತಿಯಿಂದ ನೆಕ್ಕಿ, ತಲೆ ಅಲುಗಾಡಿಸಿ ಆಟವಾಡುತ್ತಾ ಮನೆಯವರ ಮುದ್ದಿನ ಮಗಳಾಗಿ ಬೆಳೆದಳು. ಕಾಲ ಉರುಳಿದಂತೆ, ಕರು ಲಕ್ಷ್ಮಿಗೆ ಯೌವನ ತುಂಬಿ, ಅವಳೀಗ ತಾಯಿಯಾಗುವ ಹೊಸ್ತಿಲಲ್ಲಿದ್ದಾಳೆ! ಅವಳ ಗರ್ಭದಲ್ಲಿ ಹೊಸ ಜೀವವೊಂದು ಮಿಡಿಯುತ್ತಿರುವಾಗ ಆಕೆಯ ಕಣ್ಣುಗಳಲ್ಲಿ ತಾಯ್ತನದ ಶುಭ್ರ ಹೊಳಪು.
ಬದುಕಿನ ವಾಸ್ತವಗಳು ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ಬೇಡುತ್ತವೆ! ಒಟ್ಟಿಗೆ ಎರಡೂ ಹಸುಗಳನ್ನು ಸಾಕಿ, ಸಂಪೂರ್ಣ ಆರೈಕೆ ಮಾಡುವುದು ಮನೆಯವರಿಗೆ ಕಷ್ಟವಾಗತೊಡಗಿತು. ಹಾಗಾಗಿ, ಬಾಣಂತನಕ್ಕೆ ಸಿದ್ಧಳಾಗುತ್ತಿರುವ ಲಕ್ಷ್ಮಿಯನ್ನು, ಅವಳನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುವ ಇನ್ನೊಂದು ಮನೆಗೆ ಕಳುಹಿಸಿಕೊಡುವ ನಿರ್ಧಾರ ಅನಿವಾರ್ಯವಾಯಿತು. ಇದು ಕೇವಲ ಒಂದು ದನವನ್ನು ಬೇರೆಯವರಿಗೆ ಒಪ್ಪಿಸುವ ವಿಚಾರಕ್ಕೆ ಮಾತ್ರ ಸೀಮಿತ ಆಗಿರದೆ, ಮನೆಯಲ್ಲಿ ಹುಟ್ಟಿ ಬೆಳೆದ ಸೌಭಾಗ್ಯವತಿ ಹೆಣ್ಣುಮಗಳನ್ನು ಮದುವೆ ಮಾಡಿಕೊಟ್ಟು, ಮನೆ-ಮನ ಬೆಳಗಿಸಲು ಮತ್ತೊಂದು ಮನೆಗೆ ಕಳುಹಿಸುವಷ್ಟೇ ಭಾವುಕ, ಭಾವನಾತ್ಮಕ ಪ್ರಸಂಗ.
ಲಕ್ಷ್ಮಿಯನ್ನು ಬೀಳ್ಕೊಡುವ ಆ ಕ್ಷಣ ಕರುಳು ಚುರ್ರೆಂದ ಅನುಭವ. ಅವಳ ಹಣೆ-ಕುತ್ತಿಗೆಯ ಭಾಗಕ್ಕೆ ಬಲಗೈಯಿಂದ ಸವರಿ, ಮನೆಯ ಹಗ್ಗ ತೆಗೆದು ಹೊಸ ಮನೆಯವರ ಹಗ್ಗ ಹಾಕಿ 'ಉಶ್ಶಾರಿ ಉಶ್ಶಾರಿ ಆಗಿ ಆರೋಗ್ಯಯುತ ತಾಯಿಯಾಗಿ ಬಾಣಂತನ ಸೊಗಸಾಗಿ ಆಗಲಿ ಲಕ್ಷ್ಮೀ' ಎಂದು ಅಪ್ಪ ಹೇಳಿ ಲಕ್ಷ್ಮಿಯನ್ನು ವಾಹನ ಹತ್ತಿಸಿದಾಗ ಅವರ ಕೈಗಳು ನಡುಗುತ್ತಿದ್ದವು ಮತ್ತು ಸ್ವರ ಗದ್ಗದಿತವಾಯಿತು - ಅಲ್ಲಿಗೆ ಭಾವನೆಗಳ ಒಡಲು ಕಡಲಾಯಿತು!
ತನ್ನನ್ನು ಇಷ್ಟು ದಿನ ಸಾಕಿ ಬೆಳೆಸಿದ ಮನೆಯನ್ನು ಬಿಟ್ಟು ಹೋಗುವಾಗ, ಏನನ್ನೋ ಅರಿತವಳಂತೆ ಲಕ್ಷ್ಮಿ ಅಷ್ಟು ದಿನ ಜತನದಿಂದ ಆರೈಕೆ ಮಾಡಿದ ಅಮ್ಮನ ಹೆಗಲಿಗೆ ತಲೆ ಉಜ್ಜಿ ಮೂಕವಾಗಿ ಮುದ್ದಾಡಿದಳು. ಅದರ ತಾಯಿಯ ಜೋರಾದ 'ಅಂಬಾ' ರೋದನೆಯು ಕರುಳ ಬಳ್ಳಿಯನ್ನು ಅಗಲುವ ಆರ್ದ್ರ ಕೂಗು! ಅಮ್ಮ ಲಕ್ಷ್ಮಿಯ ಬೆನ್ನನ್ನು ನೇವರಿಸುತ್ತಾ, ಗದ್ಗದಿತ ಕಂಠದಿಂದ, ಹೊರಡುವ ಮೊದಲು 'ಹೋದ ಕಡೆ ನೆಮ್ಮದಿಯಿಂದಿರು, ಅವರಿಗೆಲ್ಲಾ ಅಮೃತದಂಥಾ ಹಾಲನ್ನು ಕರುಣಿಸು ನನ್ನ ಲಕ್ಷ್ಮೀ' ಎಂದು ಹಾರೈಸಿದಾಗ, ಅಲ್ಲಿ ಸೇರಿದ್ದವರ ಕಣ್ಣುಗಳೂ ಏನೋ ಒಂಥರಾ ಅನುಭವದಿಂದ ತೇವವಾದವಲ್ಲ...
ಮನೆ ಮಗಳನ್ನು ಇನ್ನೊಂದು ಮನೆಗೆ ಧಾರೆ ಎರೆದು ಕೊಡುವಾಗ ಹೆತ್ತವರ ಎದೆಯಲ್ಲಿ ಉಮ್ಮಳಿಸುವ ಆನಂದಭಾಷ್ಪದ ರೀತಿಯ ಪರಿಸ್ಥಿತಿ, ಇಂದು ಆ ಹಟ್ಟಿಯ ಪರಿಸರದ ತುಂಬಾ ಆವರಿಸಿತ್ತು. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಈ ನಲ್ಮೆಯ ಒಡನಾಟ, ಯಾವುದೇ ರಕ್ತಸಂಬಂಧಕ್ಕೂ ಕಡಿಮೆಯಿಲ್ಲ ಎನ್ನುವುದನ್ನು ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು! 'ಲಕ್ಷ್ಮಿ ಇನ್ನೊಂದು ಮನೆಯ ಹಟ್ಟಿಯನ್ನು ತುಂಬಿ ಬೆಳಗಲಿ, ಅವಳ ಸಂತತಿ ವೃದ್ಧಿಸಲಿ' ಎಂಬ ಶುಭಹಾರೈಕೆಯೊಂದಿಗೆ ಆಕೆಯ ಹೊಸ ಪಯಣಕ್ಕೆ ಭಾರವಾದ ಹೃದಯದಿಂದ ಮನೆಯವರೆಲ್ಲ ವಿದಾಯ ಹೇಳಿದೆವು. ಪ್ರೀತಿಯೆಂಬ ಭಾಷೆಗೆ ಶಬ್ದಗಳ ಹಂಗಿಲ್ಲ, ಅದು ಕೇವಲ ಹೃದಯಕ್ಕೆ ಮಾತ್ರ ನಿಲುಕುವ ಭಾವ ಎಂಬುದಕ್ಕೆ ಈ ಮೂಕಪ್ರೇಮವೇ ಶಾಶ್ವತ, ನಿರಂತರ ಸಾಕ್ಷಿ.
ಇಲ್ಲಿ ಅವಳ ಅಮ್ಮ, ಲಕ್ಷ್ಮಿಯು ತನ್ನಿಂದ ದೂರವಾದ ಅನಾಥ ಭಾವದಿಂದ ಮೌನಕ್ಕೆ ಜಾರಿದ್ದರೆ, ಮನೆಯವರೆಲ್ಲರ ಮನ-ಹೃದಯವೂ ಖಾಲಿ-ಖಾಲಿ. ಲಕ್ಷ್ಮಿಯನ್ನು ಕಳುಹಿಸಿ ಕೊಟ್ಟು ಅದಾಗಲೇ ಐದು ತಾಸುಗಳಾದವು. ಆಕೆಯ ತಾಯಿಗೆ ಹುಲ್ಲು ಹಾಕುವ ನೆಪದಲ್ಲಿ ಅಪ್ಪ ಅದಾಗಲೇ ಐದು ಬಾರಿ ಹಟ್ಟಿಗೆ ಹೋಗಿ ಬಂದರು! - ತನ್ನನ್ನು ಮತ್ತು ಲಕ್ಷ್ಮಿಯ ಅಮ್ಮ ಗೌರಿಯನ್ನು ಸಂತೈಸಲು...! 'ಪ್ರೀತಿನೇ ಆ ದ್ಯಾವ್ರು ತಂದಾ ಆಸ್ತಿ ನಮ್ಮ ಬಾಳಲಿ'. ಬದುಕು, ಸಂಬಂಧ, ಪ್ರಾಣಿಗಳು ತೋರುವ ಪ್ರೀತಿ ಶುದ್ಧ ನೀರಿನಷ್ಟೇ ಶುಭ್ರ ಮತ್ತು ನಿಷ್ಕಲ್ಮಶ. ಮಿಸ್ ಯೂ ಲಕ್ಷ್ಮೀ!
- ರವೀ ಸಜಂಗದ್ದೆ
Creative Writings
