Karada Vishwa

Article · June 26, 2026

ಈ ಸಾವು ನ್ಯಾಯವೇ ?

(ಸಣ್ಣ ಕತೆ ) ✍🏻 ದಿವ್ಯಾ ಶಿರಂತಡ್ಕ

ಆಡಿಸುವಾತನ ಕೈ ಚಳಕದಲಿ ಎಲ್ಲ ಅಡಗಿದೆ

ಆತನ ಕರುಣೆಯೇ ಜೀವವ ತುಂಬಿ ಕುಣಿಸಿ ನಲಿಸಿದೆ...

ಆ ಕೈ ಸೋತರೆ ಬೊಂಬೆಯ ಕತೆಯು

ಕೊನೆಯಾಗುವುದೇ ..

ಕೊನೆಯಾಗುವುದೇ 🎶 🎶

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು 🎶🎶

ಹಾಡು ಮೊಬೈಲ್ ರೇಡಿಯೋದಲ್ಲಿ ತೇಲಿ ಬರುತ್ತಿತ್ತು. 'ಆತನ' ಆಟದ ನಡೆಯನ್ನು ತಿಳಿದವರೇ ಇಲ್ಲ... ಕೇಶವನ ಮನಸ್ಸು ಭಾರವಾಗಿತ್ತು. ಮನುಷ್ಯ ಜೀವನದಲ್ಲಿ ತಾವು ಕಷ್ಟಪಟ್ಟು ಗಳಿಸಬಹುದಾದದ್ದು ಕೆಲವಾದರೆ ವಿಧಿ ನಿಯಮಗಳಿಗೆ ಒಳಪಡಬೇಕಾದ್ದು ಕೆಲವಿದೆ ಎನ್ನುವುದು ಅಷ್ಟೇ ಸತ್ಯ.

ಇಲ್ಲಿ 'ಆತನ' ಎದುರು ನಿಲ್ಲುವ ತಾಕತ್ತು ಯಾರಿಗಿದೆ?

ಮುದ್ದಿನ ಏಕೈಕ ಮಗಳು ರಂಜಿನಿ ಇಹಲೋಕ ತ್ಯಜಿಸಿ ಆರು ತಿಂಗಳೇ ಕಳೆಯುತ್ತಾ ಬಂದಿತ್ತು. ಕನಸು ಎಂಬ ಸ್ವಚ್ಛ ಕನ್ನಡಿಯು ಬಿದ್ದು ಒಡೆದಂತಹ ಹೊಡೆತ. ವಿದ್ಯಾಭ್ಯಾಸವೆಲ್ಲ ಮುಗಿಸಿ ಕೆಲಸಕ್ಕೆ ಸೇರಿ ಇನ್ನೇನು ಮೂರು ತಿಂಗಳೂ ಕಳೆದಿರಲಿಲ್ಲ. ಬಂದಾಗ ಸಣ್ಣ ಜ್ವರ... ಅದುವೇ ಏರಿ ಮೂರೇ ದಿನದಲ್ಲಿ ಏನೆಲ್ಲಾ ಆಗಿ ಹೋಯಿತು.

ಕೋಣೆಯಲ್ಲಿ ವೃದ್ಧ ತಂದೆ ತಾಯಿ ... 'ಬದುಕು ಸಾಕು... ಒಮ್ಮೆ ಕರೆದುಕೊಂಡು ಹೋಗು' ಎಂದು ವರುಷಗಳಿಂದ ದೇವರಲ್ಲಿ ಮೊರೆ ಇಡುತ್ತಿದ್ದರು.‌ ಅವರ ಸೇವೆ ಮಾಡಿ ಮಾಡಿ ಮಡದಿ ಸಂಧ್ಯಾಗೆ ಸಾಕೋ ಸಾಕಾಗಿತ್ತು. ತಾಳ್ಮೆಯಿಂದಲೇ ಸೇವೆ ಮಾಡಿದ್ದ ಅವಳಿಗೂ ಅವಳದ್ದೇ ಆದ ಮೆನೋಪಾಸ್ ಸಮಸ್ಯೆಗಳು ಕಾಡಲಾರಂಭಿಸಿದ್ದವು. ನಾಲ್ಕು ಗಂಡು ಮಕ್ಕಳಿದ್ದ ಅಪ್ಪ ಅಮ್ಮನನ್ನು ಒಂದಷ್ಟು ಸಮಯವಾದರೂ ನೋಡಿಕೊಳ್ಳಲು ಯಾರು ಬರುತ್ತಿಲ್ಲವಲ್ಲ ಎನ್ನುವ ತಕರಾರು ಆಗಾಗ ವ್ಯಕ್ತಪಡಿಸುತ್ತಿದ್ದಳು. ಯಾರೂ ಬರುತ್ತಿಲ್ಲ ಎಂದು ವೃದ್ಧ ತಂದೆ ತಾಯಿಯ ಜವಾಬ್ದಾರಿಯನ್ನು ತೊರೆಯಲಾದೀತೇ ಎಂದುಕೊಳ್ಳುತ್ತಲೇ ಅವಳಿಗೆ ಹಲವು ಕೆಲಸಗಳಲ್ಲಿ ಸಹಾಯವನ್ನು ಮಾಡುತ್ತಿದ್ದ ಕೇಶವ.

ಹಣ್ಣೆಲೆಗಳು ಉದುರುವುದು ಸಹಜ. ಆದರೆ ಆಗಷ್ಟೇ ಚಿಗುರಿ ಕಳೆಕಳೆಯಾಗಿದ್ದ ಆ ಜೀವ ಎಲ್ಲರನ್ನೂ ಬಿಟ್ಟು ಹೋಗಿ ಮನೆಗೂ ಮನಕ್ಕೂ ಮಂಕು ಬಡಿದಂತಾಗಿತ್ತು. ತನ್ನ ದುಃಖವನ್ನು ಹತ್ತಿಕೊಳ್ಳುವುದರ ಜೊತೆಗೆ ಮಡದಿ ಸಂಧ್ಯಾಳು ಏನಾದರೂ ಒಂದು ಅವಘಡ ಮಾಡಿಕೊಳ್ಳದಂತೆ ಕಾಪಾಡುವ ಜವಾಬ್ದಾರಿಯೂ ಕೇಶವನ ಹೆಗಲ ಮೇಲಿತ್ತು. ಸ್ವರ್ಗದಂತಿದ್ದ ಮನೆ ಕೆಲವೇ ಕ್ಷಣದಲ್ಲಿ ಅಕ್ಷರಶಃ ನರಕವಾಗಿತ್ತು.

ಬಾಲ್ಯದಿಂದಲೂ ಕೇಶವನದು ಅತಿ ಎನ್ನಿಸುವಷ್ಟು ಮೃದು ಸ್ವಭಾವ. ಅದೊಂದು ಬಾರಿ ಜಾತ್ರೆಯಿಂದ ನಾಲ್ಕು ಜನರಿಗೂ ಆಟಿಕೆಯನ್ನು ತಂದು ಕೊಟ್ಟಿದ್ದರು ಅಪ್ಪ. ಜಾಗರೂಕತೆಯಿಂದ ತೆಗೆದಿರಿಸಿದ್ದ ಕೇಶವ. ನಾಲ್ಕೇ ದಿನದಲ್ಲಿ ತಮ್ಮಂದಿರ ಆಟಿಕೆ ಹಾಳಾದ ಕೂಡಲೇ ಕೇಶವನಲ್ಲಿ ಉಳಿದ ತಮ್ಮಂದಿರು ಆ ಆಟಿಕೆ ಬೇಕೆಂದು ಹಟ ಹಿಡಿದಾಗ ಅಪ್ಪನ ಆಣತಿಯಂತೆ ತಮ್ಮಂದಿರಿಗೆ ಅದನ್ನು ನೀಡಿದ್ದ. ಇದನ್ನು ಕಂಡ ಅವರ ಪಕ್ಕದ ಮನೆಯ ಮೇಷ್ಟ್ರು ಕೇಶವನನ್ನು ಸಮಾಧಾನ ಪಡಿಸಿದ್ದರು.

" ಮಗು... ಎಲ್ಲವೂ ನಮ್ಮದು ಎನ್ನುವುದಕ್ಕಿಂತ ಯಾವುದೂ ನಮ್ಮದಲ್ಲ, ಈ ಕ್ಷಣ ಮಾತ್ರ ನನ್ನಲ್ಲಿದೆ ಎಂದು ಅಂದುಕೊಳ್ಳಬೇಕು. ಇಷ್ಟು ಸಮಯ ನಿನ್ನಲ್ಲಿ ಇತ್ತು, ಈಗ ತಮ್ಮಂದಿರಿಗೆ ಕೊಟ್ಟೆ.‌ ಬೇಸರಿಸಬೇಡ ಮಗು, ಇದೆಲ್ಲ ಸಾಮಾನ್ಯ" ಎಂದು ಮಕ್ಕಳಲ್ಲಿ ಹಿರಿಯವನಾದ ಕೇಶವನಿಗೆ ಸರಳವಾಗಿ ಬೋಧನೆ ಮಾಡಿದ್ದರು.

ಯಾಕೋ ಅಂದಿನ ಬೋಧನೆ ಇಂದು ಮತ್ತೆ ನೆನಪಾಯಿತು ಕೇಶವನಿಗೆ. ಮುದ್ದಿನ ಮಗಳು ತಮ್ಮ ಜೊತೆ ಇದ್ದಷ್ಟು ಕಾಲ ಆಕೆ ತಮ್ಮವಳಾಗಿದ್ದಳು. ಈಗ ಕಾಲ ತನ್ನ ಜೊತೆ ಕರೆದುಕೊಂಡು ಹೋಗಿದೆ. ಕಣ್ಣೀರಿಡುತ್ತಲೇ ಸಮಾಧಾನ ಪಟ್ಟುಕೊಂಡವರಂತೆ ಹೆತ್ತವರ ಕೋಣೆಗೆ ಹೋದನು... ಅವರ ಸೇವೆಗಾಗಿ.

Creative Writings