
Article · October 14, 2026
ಎಷ್ಟು ಸಡಗರ ದೇವಿ
By ರಾಧಾಕೃಷ್ಣ ಭಟ್,ಕುರುಮುಜ್ಜಿ
ರಾಧಾಕೃಷ್ಣ ಕುರುಮುಜ್ಜಿ
ನಮ್ಮೂರ ಗೋಸಾಡ ಶ್ರೀಮಹಿಷಮರ್ದೀನಿ ಕ್ಷೇತ್ರದಲ್ಲಿ ನವರಾತ್ರಿ ಪೂಜೆಯನ್ನು ನೋಡಿ ರಚಿಸಿದ ಭಕ್ತಿಗೀತೆ
ಎಷ್ಟು ಸಡಗರ ದೇವಿ ನವರಾತ್ರಿ ನಿನಗೆ
ಕಾಣುತಿದೆ ಸ್ವರ್ಗವದು ಇಳಿದಂತೆ ಧರೆಗೆ
ವೈಭವವ ಬಣ್ಣಿಸಲು ಮಾತುಗಳೆ ಇಲ್ಲ
ಸೂತ್ರಧಾರಿಣಿ ನೀನು ಈ ಕಾರ್ಯಕೆಲ್ಲ
ಪಟ್ಟೆ ಸೀರೆಯನುಟ್ಟು ಕುಳಿತಿರುವೆ ನೀನು
ಹರಸುತಿರುವೆ ತಾಯೆ ಭಕ್ತವೃಂದವನು
ಸೇವಂತಿಕೆ ಜಾಜಿ ಮಲ್ಲಿಗೆಯ ಮಾಲೆ
ರಾರಾಜಿಸುತ್ತಿಹುದು ನಿನ್ನ ಮೈಮೇಲೆ
ಹಣೆಯಲ್ಲಿ ಶೋಭಿಸುವ ಕಸ್ತೂರಿ ತಿಲಕ
ಅಭಯ ಹಸ್ತದಲಿರುವ ಅಭಯ ಫಲಕ
ಕೊರಳಲ್ಲಿ ಧರಿಸಿರುವ ನವರತ್ನಹಾರ
ನಡುವೆ ಹೊಳೆಯುವ ಪದ ಕಾಣುತಿದೆ ದೂರ
ಮುತ್ತು ರತ್ನಗಳಿರುವ ಕಿರೀಟವದು ಶಿರದಲ್ಲಿ
ಸರಿಸಾಟಿ ನಿನಗಿಲ್ಲ ಮೂರ್ಲೋಕದಲ್ಲಿ
ಸುಮಧುರ ನಾದವದು ಕೇಳುತಿದೆ ಇಲ್ಲಿ
ಶಂಖಜಾಗಟೆ ಘಂಟೆ ನಿನ್ನಪೂಜೆಯಲಿ
ಇಂಪಾದ ಹಾಡುಗಳ ಭಜನೆಯಲಿ ಹಾಡುವರು
ಧನ್ಯತೆಯ ಭಾವದಲಿ ನಿನ್ನ ನೋಡುವರು
ಹಣತೆಗಳ ಸಾಲು ಇದೆ ನಿನ್ನ ಸೇವೆಯಲಿ
ಮೂಡುಮಂಟಪದಲ್ಲಿ ಎರಡು ಬದಿಗಳಲಿ
ವಿವಿಧ ಆರತಿಗಳನು ಎತ್ತುವರು ನಿನಗೆ
ಮಂಗಳಾರತಿಯನ್ನು ಬೆಳಗುವುದು ಕೊನೆಗೆ
ಭಜಿಸುತಿಹ ಭಕ್ತರನು ಕಣ್ತೆರೆದು ನೋಡು
ಅರ್ಚಿಸಿದ ಕುಂಕುಮ ಪ್ರಸಾದವನು ನೀಡು
