Karada Vishwa

Article · March 17, 2026

ಸೋನಿ ಮಾಸ್ಟರ್ ಶೆಫ್ ಕರಾಡ ಖಾದ್ಯಗಳ ಸವಿ

- ಈ ಬಾರಿಯ ನ್ಯೂ ಮಂಗಳೂರು ಟೈಮ್ಸ್ ಪತ್ರಿಕೆಯಲ್ಲಿ ಮಾಸ್ಟರ್‌ಶೆಫ್ ಖ್ಯಾತಿಯ, ಹೆಮ್ಮೆಯ ,'ಖಾದ್ಯ ಕಣ್ಮಣಿ'ಗಳ ಕುರಿತು ರವೀ ಸಜಂಗದ್ದೆ ಅಂಕಣ ಬರಹ_


_ನಮ್ಮ ಆಹಾರ ಸಂಸ್ಕೃತಿ; ನಮ್ಮೆಲ್ಲರ ಹೆಮ್ಮೆ! | ನಮ್ಮ ಸ್ವಾದಿಷ್ಟ ಆಹಾರಕೆ ಸಿಕ್ಕಿದೆ ಪ್ರೀತ್ಯಾದರದ ಹಾರ!_

ತಿನ್ನುವ ಆಹಾರವು ಹಸಿವನ್ನು ನೀಗಿಸುವ ಜೊತೆಗೆ ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಸೊಗಡನ್ನು ಒಳಗೊಂಡಿದೆ! ನಾವು ಸೇವಿಸುವ ಆಹಾರವು ನಮ್ಮ ಮೂಲ-ನೆಲ-ಜಲದ ದ್ಯೋತಕ. ವಿವರಗಳ ಪ್ರಕಾರ, ಭಾರತದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ 2-3 ಕಿಮೀ ಸಾಗಿದಂತೆ ಅಲ್ಲಿನ ರೀತಿ, ರಿವಾಜು, ಸಂಪ್ರದಾಯ, ಸಂಸ್ಕೃತಿಯ ಜೊತೆಗೆ ಆಹಾರ ವಿಧಾನ, ಶೈಲಿಯೂ ಬದಲಾಗುತ್ತಾ ಸಾಗುತ್ತದೆ! ಒಂದೂರಿನ ತಿನಿಸು ಪಕ್ಕದ ಊರಿನಲ್ಲಿ ತಯಾರಿಸುವ ಬಗೆ ಬೇರೆ, ರುಚಿ-ಆಕಾರ ಬದಲು, ಅಲ್ಲಿಗಿಂತ ಇಲ್ಲಿ ಭಿನ್ನ, ಇಲ್ಲಿಗಿಂತ ಮತ್ತೊಂದೆಡೆ ವಿಭಿನ್ನ! ಇದು‌ ದೇಶದ ವೈವಿಧ್ಯಮಯ ಶ್ರೇಣಿ, ಶ್ರೇಷ್ಠತೆ ಮತ್ತು ಅನನ್ಯತೆಗೆ ಅನುಪಮ ಉದಾಹರಣೆ. ಎಲ್ಲಾ ಪ್ರದೇಶಗಳ-ವಿದೇಶಗಳ ತಿಂಡಿ-ತಿನಸುಗಳನ್ನು ಸ್ವೀಕರಿಸಿ, ಸ್ಥಳೀಯ ರುಚಿ, ಆಕಾರ, ವರ್ಣ, ಶೈಲಿಯಲ್ಲಿ ನಮಗೆ ಬೇಕಾದಂತೆ ಮಾಡಿ ತಿಂದು ‌ಸಂಭ್ರಮಿಸುವ ವಿಶಿಷ್ಟತೆ ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ! ಉತ್ತರದಲ್ಲಿ ಸಮೋಸಾದೊಳಗೆ ಆಲೂ ಇದ್ದರೆ, ನಮ್ಮೂರಲ್ಲಿ ಅದರೊಳಗಿನ ಪಲ್ಯವು ಎಲೆಕೋಸು (ಕ್ಯಾಬೇಜ್) ಅಥವಾ ಮಿಶ್ರ ತರಕಾರಿಯದ್ದು. ಅದೂ ಸಮೋಸ, ಇದರ ಹೆಸರೂ ಅದೇ! ಇದೊಂದು ಸಣ್ಣ ಉದಾಹರಣೆಯಷ್ಟೇ. ಇಂಥಾ ಸಾವಿರಾರು ಉದಾಹರಣೆಗಳು, ದೂರದ ಅದ್ಯಾವುದೋ ಊರಿನ ಆಹಾರ ವೈವಿಧ್ಯದ ಹಲವಾರು ಸ್ಥಳೀಯ ಆವೃತ್ತಿ/ರೂಪಾಂತರಗಳು ಎಲ್ಲೆಡೆ ಲಭ್ಯ ಮತ್ತು ಎಲ್ಲವೂ ಅನನ್ಯ-ರುಚಿಕರ! ಭಾರತದ ಆಹಾರ ವಿವಿಧತೆಯ ವಿಚಾರದಲ್ಲಿ 'divided by regions, united by food' ಎನ್ನುವ ಸಾಲು ಹೆಚ್ಚು ಸಮರ್ಪಕ, ಪ್ರಸ್ತುತ.

ವಿಶಾಲ ಭೌಗೋಳಿಕ ವೈವಿಧ್ಯ, ಪ್ರಾದೇಶಿಕ ಹವಾಮಾನ,‌ ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳಿಗೆ ಅನುಗುಣವಾಗಿ ಪ್ರದೇಶದಿಂದ ಪ್ರದೇಶಕ್ಕೆ ಆಹಾರ ಕ್ರಮ ವ್ಯತ್ಯಾಸವಾಗುತ್ತದೆ. ನಾವಿರುವ ದಕ್ಷಿಣ ಭಾರತದ ಆಹಾರವನ್ನು ಹೆಚ್ಚಾಗಿ ಅಕ್ಕಿ, ರಾಗಿ, ಜೋಳ, ಬೆಲ್ಲ, ಸೂರ್ಯಕಾಂತಿ,‌ ಕಡಲೆ ಮತ್ತು ಕೊಬ್ಬರಿ ಎಣ್ಣೆ, ಸ್ಥಳೀಯ ಮಸಾಲೆ ಉಪಯೋಗಿಸಿ ತಯಾರಿಸುತ್ತೇವೆ. ಇಡ್ಲಿ,‌ ಕಡುಬು, ಸೇಮಿಗೆ, ಪುಳಿಯೋಗರೆಯಂಥಾ ಅನ್ನ-ಭಿನ್ನ, ಸಾಂಬಾರ್, ದಾಲ್‌, ಸಾರು,‌ ಸಾಗು ಮತ್ತು ವೈವಿಧ್ಯಮಯ ತಿನಿಸುಗಳಿವೆ. 'ಕರಿಬೇವು' ಸೊಪ್ಪು, ಹುಣಸೆಹಣ್ಣು ಮತ್ತು ತೆಂಗಿನಕಾಯಿಯ ಬಳಕೆಗೆ ಇಲ್ಲಿ ಹೆಚ್ಚು. ಸೂರ್ಯಕಾಂತಿ, ಕಡಲೆ ಮತ್ತು ಕೊಬ್ಬರಿ ಎಣ್ಣೆ ಬಳಸಿ ಆಹಾರ ತಯಾರಿಸಲಾಗುತ್ತದೆ.

ಭಾರತದ ಆಹಾರ ಸಂಸ್ಕೃತಿ-ಪದ್ಧತಿ ಸಾವಿರಾರು ವರ್ಷಗಳ ಹಿಂದಿನ ಉತ್ಕೃಷ್ಟ ಮತ್ತು ಶ್ರೀಮಂತ ಇತಿಹಾಸವನ್ನೇ ಹೊಂದಿದೆ. ಸುವಾಸನೆ, ಆಕಾರ, ಅಲಂಕಾರ, ರುಚಿ, ಕಣ್ಮನ ಸೆಳೆಯುವ ಭಕ್ಷ್ಯ ಭೋಜ್ಯಗಳು ದೇಶಾದ್ಯಂತ ಸಹಸ್ರ ಸಂಖ್ಯೆಯಲ್ಲಿ ಕಾಣಲು, ಸೇವಿಸಲು ಸಿಗುತ್ತವೆ. ವಿಭಿನ್ನ, ವಿಶೇಷ, ವಿಶಿಷ್ಟ ಮತ್ತು ವಿಸ್ಮಯಕಾರಿ ಪಾಕ ಪದ್ಧತಿಗಳು, ಖಾದ್ಯಗಳು ನಮ್ಮ ದೇಶವನ್ನು ಜಾಗತಿಕ ಆಹಾರ ನಕ್ಷೆಯಲ್ಲಿ ಅಗ್ರಸ್ಥಾನದಲ್ಲಿ ಇರಿಸಿವೆ! ಕರ್ನಾಟಕದ ಪ್ರಸಿದ್ಧ ತಿನಸುಗಳಾದ ಮೈಸೂರು ಪಾಕ್, ನೀರು ದೋಸೆ, ದಾವಣಗೆರೆ ಬೆಣ್ಣೆ ದೋಸೆ, ಹೊಸಕೋಟೆ ಬಿರಿಯಾನಿ, ಕಲ್ಲಡ್ಕ ಟೀ, ಮುದ್ದೆ-ಬಸ್ಸಾರು, ಮಂಗಳೂರು ಬನ್ಸ್ ಮುಂತಾದವು ರುಚಿ ಮತ್ತು ಪ್ರಾದೇಶಿಕ ಹೆಸರುಗಳಿಂದ ಪ್ರಸಿದ್ಧಿ ಪಡೆದಿವೆ. ಇಷ್ಟೆಲ್ಲಾ ವೈವಿಧ್ಯಗಳ ಜೊತೆಗೆ, ಕಳೆದ ಕೆಲವು ದಶಕಗಳಿಂದ ಪಾಶ್ಚಾತ್ಯ, ಚೈನೀಸ್, ಇಟಾಲಿಯನ್ ಮುಂತಾದ ಆಹಾರ ಪದ್ಧತಿಯೂ ನಮ್ಮ ನಡುವೆ ಹೇರಳವಾಗಿ ಪ್ರಚುರಗೊಂಡು ಜನರ ಉದರ ಸಂಕಟವನ್ನು ತಣಿಸುತ್ತಿವೆ. 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ' ಎನ್ನುವ ಕವಿವಾಣಿಯಂತೆ ನಮ್ಮಲ್ಲಿಲ್ಲದ, ನಮ್ಮ ಪರಿಸರದ್ದಲ್ಲದ ಆಹಾರ ಸಂಸ್ಕೃತಿಯ ಮೇಲೆ ನಮಗೆಲ್ಲ ಹೆಚ್ಚು ಒಲವು, ಪ್ರೀತಿ, ರುಚಿ ಮತ್ತದು ಆಪ್ಯಾಯಮಾನ!

ಮೂಲತಃ ಆಸ್ಟ್ರೇಲಿಯಾ ದೇಶದಲ್ಲಿ ಜನಪ್ರಿಯತೆ ಪಡೆದ  'ಮಾಸ್ಟರ್ ಶೆಫ್' ರಿಯಾಲಿಟಿ ಅಡುಗೆ ಷೋ ಭಾರತದಲ್ಲೂ ಖ್ಯಾತಿ ಪಡೆದಿದೆ. 'ಮಾಸ್ಟರ್ ಶೆಫ್' ಹಿಂದಿ ಅವತರಣಿಕೆಯ ಹತ್ತನೆಯ ಸೀಸನ್ ಜನವರಿ ಐದರಿಂದ'ಸೋನಿ ಎಂಟರ್ಟೈನ್ಮೆಂಟ್ ಮೀಡಿಯಾ'ದಲ್ಲಿ ಪ್ರಸಾರವಾಗುತ್ತಿದೆ. 'ದೇಶ ಮುನ್ನುಗ್ಗುತ್ತಿದೆ' ಎನ್ನುವ ವಿನೂತನ ಹೇಳಿಕೆಯೊಂದಿಗೆ ಈ ಬಾರಿಯ ಸೀಸನ್ನಿನಲ್ಲಿ ರಕ್ತ ಸಂಬಂಧಿಗಳಿಬ್ಬರು ಜೋಡಿಯಾಗಿ ಸ್ಪರ್ಧಿಸುವ ವಿಶಿಷ್ಟ ಸ್ಪರ್ಧಾ ಸರಣಿ ನಡೆಯುತ್ತಿದೆ. ದೇಶಾದ್ಯಂತ ನಡೆದ ಅಡಿಷನ್‌ನಲ್ಲಿ ಆರಿಸಲ್ಪಟ್ಟ 12 ಜೋಡಿಗಳಿಗೆ ಪ್ರತಿ ವಾರ ಹಣಾಹಣಿ. ಈ ಸ್ಪರ್ಧಾ ಕಣದಲ್ಲಿ ಅಪ್ಪಟ ಕೇರಳ-ಕರ್ನಾಟಕದ ಆಹಾರ ಸಂಸ್ಕೃತಿಯನ್ನು ಪ್ರತಿನಿಧಿಸುವ ಅಪ್ಪ-ಮಗಳ ಜೋಡಿ ಸದ್ದು-ಸುದ್ದಿ ಎರಡೂ ಮಾಡಿದೆ. ಹನ್ನೊಂದು ವಾರಗಳನ್ನು ಯಶಸ್ವಿಯಾಗಿ ಪೂರೈಸಿ ಸೆಮಿಫೈನಲ್‌ವರೆಗೆ ತಲುಪಿದ ಹೆಗ್ಗಳಿಕೆ ಈ ಜೋಡಿಯದ್ದು. ತಮ್ಮ ನೆಲದ, ಹಳ್ಳಿಯ, ಸಮುದಾಯದ, ಸಂಸ್ಕೃತಿಯ, ಹಬ್ಬ ಹರಿದಿನಗಳ, ದೇವಾಲಯದ ಪ್ರಸಾದ ರೂಪದ ಮತ್ತು ಐತಿಹಾಸಿಕ ಸ್ಥಾನವಿರುವ ವಿವಿಧ ತಿಂಡಿ ತಿನಿಸುಗಳನ್ನು ಇಡೀ ದೇಶಕ್ಕೆ ಪರಿಚಯಿಸಿದ ಕೀರ್ತಿ ಅವನಿ ಶರ್ಮಾ-ವೇಣು ಶರ್ಮ ಅವರದ್ದು. 

'ಹೋಟೆಲ್‌ಗಳಲ್ಲಿ ಸಾಮಾನ್ಯವಾಗಿ ಇರುವ ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ಚೈನೀಸ್, ಇಟಾಲಿಯನ್ ಮೆನು ಕಾರ್ಡ್ ಜೊತೆಗೆ ನಾನು ಪ್ರತಿನಿಧಿಸುವ ಸಮಾಜದ ವಿಶಿಷ್ಟ ತಿನಿಸುಗಳೂ 'ಕರಾಡ ಸ್ಪೈಸ್ ಬಾಕ್ಸ್' ಹೆಸರಿನಲ್ಲಿ ನೋಡುವಾಸೆ. ಆ ಮಹದಾಸೆಯೊಂದಿಗೆ ನಮ್ಮ ಆಹಾರ ಸಂಸ್ಕೃತಿಯನ್ನು ಪ್ರಸ್ತುತಪಡಿಸಿ, ಪ್ರಚುರಪಡಿಸಿ, ಗೆಲ್ಲಲು ಇಲ್ಲಿಗೆ ಬಂದಿದ್ದೇವೆ' ಎಂದು ಅವನಿ ಹೇಳಿದ ಮಾತುಗಳನ್ನು ಆಲಿಸುತ್ತಿದ್ದ ಈ ಬಾರಿಯ ಮಾಸ್ಟರ್ ಶೆಫ್ ಸೀಸನ್‌ನ ಜಡ್ಜ್‌ಗಳು ನಿಬ್ಬೆರಗು! 'ಮೇಲೆ ಹೇಳಿದ ಮಹದಾಸೆಯನ್ನು ಪೂರೈಸಲು, ಇಲ್ಲಿ ಅವಳಿಗೆ ನೆರವಾಗಲು-ನೆರಳಾಗಲು ಬಂದಿದ್ದೇನೆ, ಅವಳಾಸೆ ಈಡೇರಿ ನನಸಾಗಿಸುವ ನಿಟ್ಟಿನಲ್ಲಿ ನನ್ನ ಸಹಕಾರ ನೀಡುತ್ತಿದ್ದೇನೆ ಮತ್ತು ಆ ಕುರಿತು‌ ನನಗೆ ಅತೀವ ಹೆಮ್ಮೆಯಿದೆ' ಎಂದು ತಂದೆ ವೇಣು ಶರ್ಮ ಹೇಳುತ್ತಿದ್ದಾಗ ಅವರ ಕಂಗಳು ಹೊಳೆಯುತ್ತಿದ್ದವು. 'ನೂರನಲುವತ್ತು ಕೋಟಿ ಜನಸಂಖ್ಯೆಯ ದೇಶದಲ್ಲಿ ಕೇವಲ ಹದಿನೈದು ಸಾವಿರದಷ್ಟು ಜನರಿರುವ ಸಣ್ಣ ಸಮುದಾಯದ ಆಹಾರ ಸಂಸ್ಕೃತಿಯ ಪ್ರತಿನಿಧಿಗಳಾಗಿ ಅಪ್ಪ-ಮಗಳ ಜೋಡಿ ಮೋಡಿ ಮಾಡುತ್ತಿದೆ' ಎಂದು ಓರ್ವ ತೀರ್ಪುಗಾರರು ಚಪ್ಪಾಳೆಯ ಮೂಲಕ ಆಡಿದ ಮಾತುಗಳು ನಮ್ಮ ದೇಶದ ಆಹಾರ ವೈವಿಧ್ಯಕ್ಕೆ ಹಿಡಿದ ಕೈಗನ್ನಡಿ.

ತನ್ನ ತರವಾಡು ಕುಟುಂಬದ, ಮುತ್ತಜ್ಜಿಯಿಂದ ಅಜ್ಜಿಗೆ, ಅಜ್ಜಿಯಿಂದ ಅಮ್ಮನಿಗೆ,‌ ಅಮ್ಮನಿಂದ ಮಗಳಿಗೆ ಬಳುವಳಿಯಾಗಿ ಬಂದ ಸತ್ವಪೂರ್ಣ ಆಹಾರಕ್ರಮವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜೊತೆಗೆ ಇಡೀ ಪ್ರಪಂಚಕ್ಕೂ ಅದರ ಸ್ವಾದ ಉಣಬಡಿಸಿದ್ದಾರೆ ಮಂಗಳೂರು-ಕಾಸರಗೋಡು ಮೂಲದ ಈ ಅಪ್ಪ-ಮಗಳ ಜೋಡಿ. ಸಣ್ಣ ಹಳ್ಳಿಯಿಂದ ಬಂದಂಥಾ ಅದೆಷ್ಟೋ ಇಂಥಾ ಮಹತ್ವಾಕಾಂಕ್ಷಿ ಕೈಗಳು ಇತಿಹಾಸವನ್ನೇ ಸೃಷ್ಟಿಸಿದ ಉದಾಹರಣೆಗಳು ಹಲವಾರಿವೆ. ಆ ಪಟ್ಟಿಯ ಮೊದಲ ಸಾಲಿಗೆ ವೇಣು-ಅವನಿ ಜೋಡಿ ಸೇರಿ, ಅತ್ಯಂತ ಕಠಿಣ ಸ್ಪರ್ಧೆಯಲ್ಲಿ ಸೆಮಿಫೈನಲ್‌ವರೆಗೆ ಪಯಣಿಸಿ ಇತಿಹಾಸ ನಿರ್ಮಿಸಿದ್ದಾರೆ. ವಿಶಿಷ್ಟ ಪಾಕ ಸಂಸ್ಕೃತಿಯ ಕರಾಡ ಮನೆಯೂಟವನ್ನು ತಯಾರಿಸಿ, ಬಡಿಸಿ, ಈ ಬಾರಿಯ ಮಾಸ್ಟರ್ ಶೆಫ್ ಸೀಸನ್‌‌ನ ಅತ್ಯಂತ ಜನಪ್ರಿಯ ಜೋಡಿಯಾಗಿ ಗುರುತಿಸಿಕೊಂಡಿದ್ದಾರೆ. ನಮ್ಮೆಲ್ಲರ ಹೆಮ್ಮೆಯ ಪುರಾತನ-ಸಾಂಸ್ಕೃತಿಕ-ಐತಿಹಾಸಿಕ-ಅಪರೂಪದ ಶಾಖಾಹಾರಿ ಆಹಾರ ಶೈಲಿ ಮತ್ತು ಇವರ ಪ್ರಾಮಾಣಿಕ ಶ್ರಮ-ಪ್ರಯತ್ನಕ್ಕೆ ಜನರು ತೋರಿದ ಪ್ರೀತ್ಯಾದರವೇ ನಿಜಾರ್ಥದ ಪಾರಿತೋಷಕ. ನೀವಿಬ್ಬರು ನಮ್ಮೆಲ್ಲರ ಅಭಿಮಾನದ, ನಳ ಮಹಾರಾಜನ ಮಟ್ಟದ 'ಪಾಕ ಪ್ರವೀಣರು' (Master Chefs!) ಅವನಿ-ವೇಣು, ನೀವು ಅದಾಗಲೇ ನಮ್ಮ ಹೃದಯ-ಮನಸ್ಸು ಗೆದ್ದಿದ್ದೀರಿ. ಹಾರೈಕೆ ಇಷ್ಟೇ - ಕಂಡಂಥ ಕನಸೆಲ್ಲ ನನಸಾಗುತಿರಲಿ... 

✒️ *ರವೀ ಸಜಂಗದ್ದೆ*
Published
ಸೋನಿ ಮಾಸ್ಟರ್ ಶೆಫ್ ಕರಾಡ ಖಾದ್ಯಗಳ ಸವಿ