
Article · September 13, 2026
ಬದುಕು ಜಟಕಾ........
ವೀಣಾ ಎಂ ಭಟ್
ಮಸಣ ಕಾಯುವನೀತ ಇವಗಿಲ್ಲ ದೆವ್ವ ಭೂತ
ಹಸನಾಗಿ ಸಾಗುವುದು ದೈನಿಕ ಜೀವಿತ
ಮತ್ತೆ ಸೆಳೆಯುವ ಮೋಹ ಹೊತ್ತ ಶವದ ಸುತ್ತ
ಹೊತ್ತಿ ಉರಿಯುವ ಧೂಮದೆಡೆ ಸರಿವ ಚಿತ್ತ
ಕಾಯಕವೇ ಕೈಲಾಸ ಈತನ ಮನೋಬಲವು
ನಡು ಯಾಮದಲು ಇವನ ತೀರದ ಧರ್ಮವು
ವಿತ್ತವದು ಕರದೊಳು ಮತ್ತೆ ಹತ್ತೀ ಬರಲು
ವಿಶ್ರಾಂತಿ ಇಲ್ಲದ ಜೀವಕೆ ಆಸರೆಯ ಹೊನಲು
ಝುಂ ಎನ್ನುವ ಇರುಳು ತಾರೆಗಳ ಗಡಣದಲಿ
ಭಯವಿಲ್ಲ ನುಗ್ಗುವನು ಬಾಳ ಜಂಜಾಟದಲಿ
ಪಕ್ಷ ಮಾಸಗಳೆಲ್ಲ ಭೇದವಿಲ್ಲದೆ ಸರಿದು
ಮಾನವಗೆ ಅರಿಯದ ದೈವ ಹುನ್ನಾರವದು
ಸಾವಿರಾರು ಹೃದಯಗಳ ನೋವು ಕಾಣುವನೀತ
ಮನವೊಂದು ಮರ್ಕಟವು ಕಾಣಲು ನಿರ್ಲಿಪ್ತ
ನೋವುಗಳ ಯಾತ್ರೆಯಲಿ ಬಂಧುವಾಗುವನೀತ
ದೆವ್ವಗಳ ಮಡಿಲಲ್ಲಿ ಹೊಂದಿ ಬದುಕುವನೀತ
ಹೃದಯ ಜ್ವಾಲಾಮುಖಿಯು ಚಿತೆಗೆ ಅಗ್ನಿಯ ಸ್ಪರ್ಶ
ದೆವ್ವ ಭೂತ ಅರಿಯದ ಕಾಯಕದ ಹರ್ಷ
ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ
ವಿಧಿ ಲಿಖಿತದ ತನಕ ಇವನಿಲ್ಲಿ ಸಾಹೇಬ
Creative Writings
