
News · October 29, 2026
ಹುಬ್ಬಳ್ಳಿ ಕರಾಡ ಸಂಘದಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ವರದಿ ಕೃಪೆ : ಶ್ರೀ ಚಿದಂಬರ ಕಾನೇಟ್ಕರ್
ಹುಬ್ಬಳ್ಳಿ: ದಿನಾಂಕ 25/10/2026ರ ಭಾನುವಾರ ಹುಬ್ಬಳ್ಳಿಯ ಭಾಸ್ಕರ ಸಭಾಭವನದಲ್ಲಿ ಹುಬ್ಬಳ್ಳಿ ಕರಾಡ ಸಂಘದ ವತಿಯಿಂದ ದಿವಂಗತ ಅರವಿಂದ ನಾಟೇಕರ್ ಅವರ ಸ್ಮರಣಾರ್ಥ ವಿಶೇಷ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮುಂಬೈನ ಪ್ರೊ. ಶ್ಯಾಮ್ ಸಾಯನೇಕರ್ ಅವರಿಗೆ ₹25,000 ನಗದು ಪುರಸ್ಕಾರ ಹಾಗೂ ಸನ್ಮಾನ ಫಲಕ ನೀಡಿ ಗೌರವಿಸಲಾಯಿತು. ಸಿದ್ದಾಪುರ ತಾಲೂಕಿನ ಕಾನಗೋಡ ಗ್ರಾಮದ ಪ್ರಗತಿಪರ ರೈತ ಶ್ರೀ ಉಮೇಶ ಲಕ್ಷ್ಮಣ ಭಟ್ ಅವರನ್ನೂ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಶಿರಸಿಯ ಶ್ರೀ ಶ್ರೀಪಾದ ಶಹಾನೆ ಅವರ ಪುತ್ರಿ ಕುಮಾರಿ ಕೀರ್ತಿ ಅವರು ಸುಶ್ರಾವ್ಯ ಕೊಳಲು ವಾದನದ ಮೂಲಕ ಸಭಿಕರನ್ನು ರಂಜಿಸಿದರು. ಕರಾಡ ಮಹಿಳಾ ತಂಡದ ವತಿಯಿಂದ ಆಕರ್ಷಕ ಕೋಲಾಟ ಹಾಗೂ ಸಮೂಹ ನೃತ್ಯ ಪ್ರದರ್ಶನಗೊಂಡವು. ಬೆಳಗಾವಿಯ ಶ್ರೀಮತಿ ಭಾರತಿ ಭರನೇಕರ ಅವರು ತಮ್ಮ ಸೊಸೆ ಹಾಗೂ ಮೊಮ್ಮಕ್ಕಳೊಂದಿಗೆ ಸಂಗೀತ ಸೇವೆ ಸಲ್ಲಿಸಿದರು. ಶ್ರೀಮತಿ ಅಕ್ಷತಾ ಅವರು ಉತ್ಸಾಹದಿಂದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ಇದೇ ಸಂದರ್ಭದಲ್ಲಿ ವೇಣುಗೋಪಾಲ ಭಟ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಸಮಾಜದ 75 ವರ್ಷ ಮೇಲ್ಪಟ್ಟ 15 ಹಿರಿಯ ನಾಗರಿಕರನ್ನು ಹುಬ್ಬಳ್ಳಿ ಕರಾಡ ಸಂಘದ ಅಧ್ಯಕ್ಷರಾದ ಶ್ರೀ ಚಿದಂಬರ ಎಸ್. ಕಾನೆಟ್ಕರ್ ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರು ಗೌರವಿಸಿ ಸನ್ಮಾನಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಚಿದಂಬರ ಎಸ್. ಕಾನೆಟ್ಕರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಉಪಕಾರ್ಯದರ್ಶಿ ಶ್ರೀಮತಿ ಸರಿತಾ ಶಹಾನೆ ಅವರು ವಿಶೇಷ ಸನ್ಮಾನ ಸ್ವೀಕರಿಸಿದ ಪ್ರೊ. ಶ್ಯಾಮ್ ಸಾಯನೇಕರ್ ಅವರ ಪರಿಚಯ ಮಾಡಿಕೊಟ್ಟರು. ಸಭೆಯ ಕಾರ್ಯದರ್ಶಿ ಮಾನಸಿ ಮೋಘೆ ಅವರು ವಂದನಾರ್ಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಲವು ಹಿರಿಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಮುಂಜಾನೆಯ ಉಪಾಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.
ಸಾಧಕರಿಗೆ ಗೌರವ, ಹಿರಿಯರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಮೂಲಕ ಸಮಾಜದ ಒಗ್ಗಟ್ಟು ಮತ್ತು ಸೌಹಾರ್ದತೆಯನ್ನು ಸಾರಿದ ಈ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.











