Karada Vishwa

Article · June 14, 2026

ರವಿಕೆ ಪ್ರಸಂಗ

ಲೇಖನ: ದಿವ್ಯಾ ಬಿ ಶಿರಂತಡ್ಕ

    ಇದೇನು 'ರವಿಕೆ ಪ್ರಸಂಗ' ಎನ್ನುತ್ತಾ ಅಧಿಕ ಪ್ರಸಂಗ ಬರೆಯಲು ಹೊರಟಿದ್ದಾಳಾ ಎಂದು ಮೂಗು ಮುರಿಯಬೇಡಿ ಮತ್ತೆ... ಇತ್ತೀಚೆಗಷ್ಟೇ 'ರವಿಕೆ ಪ್ರಸಂಗ' ಎನ್ನುವ ಒಂದು ಸಿನಿಮಾ ಬಿಡುಗಡೆ ಆಯ್ತು. ಯಕಶ್ಚಿತ್ ಒಂದು ರವಿಕೆ,  ಸಿನಿಮಾ ವಸ್ತುವೇ ಆಗಬೇಕಾದರೆ ನಾನು ಅದರ ಬಗೆಗೊಂದು ಲಘು ಬರಹ ಬರೆಯಲು ಹೊರಟದ್ದು ದೊಡ್ಡ ವಿಷಯವೇ?.. ಅಲ್ಲವೇ ಅಲ್ಲ ಎಂದೇ ಹೇಳಿದಿರಲ್ಲಾ.... ಸರಿ

         ನಾನು ಚಿಕ್ಕವಳಿದ್ದಾಗ ನಮ್ಮಲ್ಲಿ ಗೌರಕ್ಕ ಎನ್ನುವ ಅಜ್ಜಿ ಇದ್ದರು. ಸಂಬಂಧದಲ್ಲಿ ಅವರು ನನ್ನ ತಂದೆಯ ಸೋದರತ್ತೆ. ವಿಧವೆಯಾಗಿದ್ದ ಅವರು ಫಣಿಯಮ್ಮರಂತೆ ತಲೆ ನುಣ್ಣಗೆ ಬೋಳಿಸಿಕೊಂಡು,  ಕುಪ್ಪಸ ಧರಿಸದೆ, ಸದಾ ಕೆಂಪು ಬಟ್ಟೆ (ಸೀರೆ ಎನ್ನಬಹುದೇ ಗೊತ್ತಿಲ್ಲ) ಸುತ್ತಿಕೊಂಡು ಬೋಳು ಬೋಳಾಗಿ ಕಾಣಿಸುತ್ತಿದ್ದರು. ನಮ್ಮ ಹಲವರ ಅಮ್ಮಂದಿರಂತೆ ಕಾಣಿಸದ ಅವರನ್ನು ನೋಡಿ ವಿಶೇಷವೆನಿಸುತ್ತಿತ್ತು. ಆ ಕಾಲಕ್ಕೆ ನಮ್ಮಮ್ಮ ಇದ್ದೆರಡು ಕಪ್ಪು ಬಿಳಿ ಬಣ್ಣದ ಕುಪ್ಪಸ ಬಟ್ಟೆಯನ್ನು ವಿ ನೆಕ್, ಯು ನೆಕ್, ರೌಂಡ್ ನೆಕ್ ಎನ್ನುತ್ತಾ ಅದನ್ನು  ಹೊಲಿಸಲು‌ ಸಂಭ್ರಮ ಪಡುತ್ತಿದ್ದಾಗ ಗೌರಕ್ಕ ರವಿಕೆ ಧರಿಸದೇ ಇರುತ್ತಿದ್ದುದು ಯಾಕೆಂದೇ ಅರ್ಥ ಆಗುತ್ತಿರಲಿಲ್ಲ. ಅಂತೂ ಗೌರಕ್ಕ ಎಂದರೆ ಹಾಗೇ ಇರಬೇಕು ಎನ್ನುವಷ್ಟು ನಮ್ಮ ಮನಸು ಅವರನ್ನು ಇದ್ದ ಹಾಗೆ ಒಪ್ಪಿಕೊಂಡಿತ್ತು.

       ಆಗಿನ ಸಾಮಾನ್ಯ ಹೆಣ್ಣು ಮಕ್ಕಳಂತೆ ನನಗೂ ಬಾಲ್ಯದಲ್ಲಿ ಸೀರೆ ಉಡುವ ಹುಚ್ಚು. ಅಮ್ಮನ ಸೀರೆಯೇನೋ ಸುಲಭವಾಗಿ ಸಿಗುತ್ತಿತ್ತು. ಆದರೆ ನಮ್ಮಳತೆಯ ಕುಪ್ಪಸವೋ?...  ಅದು ಸಿಗದೆ ಮಾರುದ್ದ ಸೀರೆ ಉಟ್ಟರೂ ಮುಖ ಗೇಣುದ್ದವಾಗುತ್ತಿತ್ತು. ಕೊನೆಗೆ ಅದೇ ಗೌರಕ್ಕನನ್ನು ಅನುಕರಿಸುತ್ತಾ ಸೀರೆಯ ಸೆರಗನ್ನು ಬಲಭಾಗಕ್ಕೆ ಹೊದ್ದು ಸುಧಾರಿಸುತ್ತಿದ್ದೆ!..

      ಯಾವಾಗ ಈ ಬಾಲ್ಯ ಕಳೆದು ನಾನೂ ಅಮ್ಮನಂತೆ   ಸೀರೆ ಕುಪ್ಪಸ ತೊಡುತ್ತೇನೋ ಎಂದು ಮನಸ್ಸು ಹಾತೊರೆಯುತ್ತಿತ್ತು.  ಸಿನಿಮಾ ನೋಡಿದಾಗ ಅಪರೂಪಕ್ಕೊಮ್ಮೆ ಅದರಲ್ಲಿ ತುಂಡು ತೋಳಿನ ನಟಿ ಕಂಡರೆ ಏನೋ ಇರಿಸು ಮುರಿಸಾಗುತ್ತಿತ್ತು. ಏನಿದ್ದರೂ ದೊಡ್ಡವರಾದಾಗ ಇಂಥ ಕುಪ್ಪಸ ಬೇಡವೇ ಬೇಡಪ್ಪ ಎಂದು ಮನಸ್ಸು ಅದಾಗಲೇ ನಿರ್ಧರಿಸುತ್ತಿತ್ತು.

         ಅಂತೂ ನಾನೂ ಸೀರೆ ಉಡುವ ಕಾಲ ಬಂದೇ ಬಿಟ್ಟಿತು. ಹೆಚ್ ಎಸ್ ವೆಂಕಟೇಶಮೂರ್ತಿಯವರ 'ಹುಚ್ಚುಕೋಡಿ ಮನಸ್ಸು, ಅದು ಹದಿನಾರರ ವಯಸ್ಸು' ಹಾಡಿನ ಹುಡುಗಿಯಂತೆ .. ಒಂದು ಕುಪ್ಪಸವನ್ನು ತೊಟ್ಟು ಸೆರಗು ತೀಡಿದಷ್ಟು ಸೊಕ್ಕು, ಹಟ ಮಾಡುವ ಕೂದಲು..ನಿರಿ ಏಕೋ ಸರಿಯಾಗದು ಎನ್ನುತ್ತಾ ಒಳಗೆ ಓಡಿದ್ದೇ ಓಡಿದ್ದು. ಬಾಲ್ಯದಲ್ಲಿ ಸೀರೆ ಸರಿಯಾದರೂ ಕುಪ್ಪಸ ಇಲ್ಲ ಎನ್ನುವ ದುಃಖವಾದರೆ, ಹರೆಯದಲ್ಲಿ ಕುಪ್ಪಸವಿದ್ದೂ ಸೀರೆ ಉಟ್ಟದ್ದೇ ಸರಿಯಾಗುವುದಿಲ್ಲ ಎನ್ನುವ ಸಮಸ್ಯೆ ಅದು ಹೇಗೆ ಹುಟ್ಟಿತೋ ಗೊತ್ತಿಲ್ಲ. ಅಂತೂ ಬಾಲ್ಯವೂ, ಹರೆಯವೂ ಸರಿಯಿತು ಅನ್ನಿ.

        ಹಿಂದಿನ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ತನ್ನೆಲ್ಲಾ ಬಯಕೆಗಳನ್ನು ಮನದ ಮೂಲೆಯಲ್ಲೆಲ್ಲೋ ಹೂತಿಟ್ಟುಬಿಡುತ್ತಿದ್ದಳು.  ಮನೆ ಯಜಮಾನ ಎಲ್ಲರಿಗೂ ವರುಷಕ್ಕೆ ಇಂತಿಷ್ಟೇ ಬಟ್ಟೆ ಖರೀದಿಸಿ ಮನೆಮಂದಿಗೆ ಹಂಚುತ್ತಿದ್ದ. 'ಪಾಲಿಗೆ ಬಂದದ್ದೇ ಪಂಚಾಮೃತ' ಎಂದುಕೊಂಡ ಮನೆಯ ಗೃಹಿಣಿಯರು ಅದನ್ನೇ ಕಣ್ಣಿಗೊತ್ತಿಕೊಂಡು ಸಾರ್ಥಕತೆ ಪಡೆಯುತ್ತಿದ್ದರು. ಆ ಕಾಲದಲ್ಲಿ ಹೆಣ್ಣು ಮಕ್ಕಳು ಹೊರಹೋಗುವ ಕ್ರಮ ಇರಲಿಲ್ಲ. ಆಗ ರವಿಕೆ ಹೊಲಿಸುವುದಾದರೂ ಹೇಗೆ?  ಆಗ ಮನೆಯ ಗೃಹಿಣಿಯ ಪತಿ ತನ್ನ ಅಳತೆಯನ್ನು ಕೊಟ್ಟು ಪತ್ನಿಗೆ ರವಿಕೆ ಹೊಲಿಸಿ ತಂದುಕೊಡುತ್ತಿದ್ದನಂತೆ! ಅಬ್ಬಾ ಆಗಿನ ಕಾಲದ ಹೆಣ್ಣಿನ ಸಹಿಷ್ಣುತಾ ಶಕ್ತಿಯೇ!

        ಹೆಣ್ಣಿನ ಬಾಳಿನಲ್ಲಿ ಟೈಲರಿಂಗ್ ವೃತ್ತಿಯವರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಕಾಲಕಾಲದ ಸ್ಟೈಲುಗಳಿಗೆ ಸರಿಯಾಗುವಂತೆ, ಸಮಯಕ್ಕೆ ಸರಿಯಾಗಿ ದೊರಕಿ,  ರವಿಕೆ ಪೂರ್ತಿಯಾಗಿ ಒಪ್ಪವಾಗಿದ್ದರೆ ಮಾತ್ರ ನವಯುಗದ  ನಾರಿಗೆ ಅವರು ಒಪ್ಪಿಗೆಯಾದಾರು. ಫ್ಯಾಷನ್ ಲೋಕದ ತೀವ್ರ ಬೆಳವಣಿಗೆಯಿಂದಾಗಿ ನಾನೂ ಇತ್ತೀಚೆಗೆ ಹೆಂಗಳೆಯರ ಬೆನ್ನ ಹಿಂದೆ ಮಾತನಾಡುವುದನ್ನೇ ಅಭ್ಯಾಸ ಮಾಡಿದ್ದೇನೆ. ತಪ್ಪು ತಿಳಿಯಬೇಡಿ, ಅಂದ್ರೆ ಫ್ಯಾಶನ್ ಪ್ರಿಯ ನಾರಿ ಮಣಿಯರು ಧರಿಸುವ ಕುಪ್ಪಸದ ವಿನ್ಯಾಸಗಳನ್ನು ನೋಡಿ ಮಂತ್ರಮುಗ್ಧಳಾಗಿದ್ದೇನೆ. ಕೆಲವೊಮ್ಮೆ ಸಂತಸ ಹಲವು ಸಲ  ಸಂಕಟವನ್ನೂ ಪಟ್ಟಿದ್ದೇನೆ. ತೋಳು, ಭುಜ, ಬೆನ್ನುಗಳ ಚಿತ್ತಾರದ ಬೆಡಗಿಗೆ ಮನಸೋತಿದ್ದೇನೆ. ಮದುವೆಯಂತಹ ಸಮಾರಂಭಗಳಿಗೆ ಹೋದಾಗ ಹತ್ತು ಹಲವು ವಿನ್ಯಾಸಗಳನ್ನೊಳಗೊಂಡ ಕುಪ್ಪಸ ಧರಿಸಿ ಓಡಾಡುವ ಗೆಳತಿಯರನ್ನು ನೋಡುವುದೆಂದರೆ ನನಗೆ ಅಚ್ಚು ಮೆಚ್ಚು. ಬಹಳ ಚೆನ್ನಾಗಿದೆ, ಎಲ್ಲಿ ಹೊಲಿಸಿದ್ರಿ ಮುಂತಾಗಿ ಕೇಳಿದಾಗ ಅವರ ನಾಲಗೆಯಲ್ಲಿ ಮಾತುಗಳು ಅರಳು ಹುರಿದಂತೆ  ಚಟಪಟ ಸಿಡಿಯುತ್ತದೆ.

       ಕೆಲವು ವರ್ಷಗಳ ಹಿಂದೆ ಸೀರೆಗೆ ಒಪ್ಪುವ ಕುಪ್ಪಸ ಧರಿಸುವ ಪರಿಪಾಠವಿತ್ತು. ಆದರೀಗ ಕುಪ್ಪಸಕ್ಕೊಪ್ಪುವ ಸೀರೆಯನ್ನು ಆರಿಸಿ ಉಟ್ಟುಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಸೀರೆಗಿಂತಲೂ ಹೆಚ್ಚಿನ ಮೌಲ್ಯ ರವಿಕೆಗಿದೆ. ಟೈಲರ್ ಕೊಡುವ ಡಿಸೈನ್ ಪುಸ್ತಕದ ಹೊರತಾಗಿ ಅಂತರ್ಜಾಲದಲ್ಲಿ ಸಾವಿರಾರು ಡಿಸೈನ್ ಗಳು ನಾ ಮುಂದು ತಾ ಮುಂದು ಎಂದು ನಮ್ಮ ಮನಸ್ಸಿಗೆ ಲಗ್ಗೆ ಇಡುತ್ತಿದೆ. ಡಿಸೈನರ್ ಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೂ ಇದೆ. ಶುಲ್ಕವೂ ಸಾವಿರದ ಗಡಿ ದಾಟುತ್ತಲೇ ಇದೆ. ಕಸೂತಿಯೊಂದಿಗೆ ಕುಂದನ್, ಬೀಡ್ಸ್  ವರ್ಕ್, ಸ್ಟೋನ್ ವರ್ಕ್ ಗಳು ಇದ್ದರಂತೂ ಮುಗೀತು. ರವಿಕೆ ಕಣದ  ಜೊತೆಗೆ ನಿಮ್ಮ ಜೇಬಿಗೂ ಕತ್ತರಿ ಬಿದ್ದಂತೆಯೇ ಸರಿ.

      ಕೆಲವು ಹೆಂಗಳೆಯರ ವಿಶಾಲ ಮನೋಭಾವ ಎಷ್ಟಿರುತ್ತದೆಂದರೆ ಅವರ ಬೆನ್ನು ವಿಶಾಲ ಮೈದಾನದಂತೆ  ಕಂಗೊಳಿಸುತ್ತಿರುತ್ತದೆ. ಆ ಮೈದಾನದ ಕೆಳಗೆ, ಹೊಸ ಕಚೇರಿ ಉದ್ಘಾಟನೆ ದಿನ ಗಣ್ಯರು ಕತ್ತರಿ ಹಾಕುವ ರಿಬ್ಬನ್ ನಷ್ಟೇ ಅಗಲವಾದ ಕೊನೆ.‌ ಈಗೀಗ  ರವಿಕೆ ಕೇವಲ ಸೀರೆಯ ಜೊತೆಗಾತಿಯಾಗಿ ಉಳಿದಿರದೆ ಎಲ್ಲರನ್ನೂ ಮೋಡಿ ಮಾಡುವ ಮಾಯಗಾತಿಯಂತೆ  ತನ್ನ ಛಾಪನ್ನು ಬೀರುತ್ತಿದೆ.
ಹಿಂದಿನಂತೆ ಈಗ ಸೀರೆಗೆ ರವಿಕೆ ಮೇಚಿಂಗ್ ಆಗಬೇಕೆಂದಿಲ್ಲ . ಯಾವುದೋ ಸೀರೆಗೆ ಇನ್ಯಾವುದೋ ರವಿಕೆ ಸಂಬಂಧ ಕಲ್ಪಿಸುತ್ತದೆ. ಕೆಲವೊಮ್ಮೆ ಆಹಾ.. ಒಳ್ಳೆಯ ಕಲಾತ್ಮಕ ಆಯ್ಕೆ ಎಂಬ ಹೊಗಳಿಕೆಯೂ ಸಿಕ್ಕಿ ಬಿಡುತ್ತದೆ.

  ತೀರ ಸಾಧಾರಣವಾದ ರವಿಕೆ ಧರಿಸಿಕೊಳ್ಳುತ್ತಿದ್ದ ನಾನು ಈ ಎಲ್ಲಾ ವಿನ್ಯಾಸಗಳ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.  ಅದೊಮ್ಮೆ ಗೆಳತಿಯೊಬ್ಬಳು ನೀನ್ಯಾಕೆ ಇಷ್ಟು ಸಿಂಪಲ್ ಆಗಿ ಹೊಲಿಸುವುದು? ಸ್ವಲ್ಪವಾದರೂ ಆಧುನಿಕತೆಗೆ ತೆರೆಯಬಾರದೆ ಎಂದೆಲ್ಲಾ ಬೋಧನೆ ಮಾಡಿದಳು.‌ ಏನೋ ಜ್ಞಾನೋದಯವಾದಂತೆ ನನಗೂ ಅದೇ ಸರಿ ಎನಿಸಿತು. ಮೊದಲ ಬಾರಿಗೆ ನನ್ನ ರವಿಕೆಗೂ ಎರಡು ಉದ್ದವಾದ ಬಳ್ಳಿ ಬಂತು. ಮನೆಯವರು ಇದ್ಯಾಕೆ ಎಂದು ಪ್ರಶ್ನಿಸಿದರು?  ಬೆನ್ನ ಹಿಂದಕ್ಕೆ ಒಂದು ಗಂಟು ಹಾಕಬಹುದು, ಬೇಸರವಾದರೆ ಕುತ್ತಿಗೆಗೂ ಹಾಕಬಹುದು ಎಂದು ಚಟಾಕಿ ಹಾರಿಸಿದೆ. ಅರ್ಥವಾಗದೆ ಅವರು ಸ್ಥಳದಿಂದ ಕಾಲ್ಕಿತ್ತರು. ನನಗೂ ಅದೇನೋ ಸರಿ ಕಾಣದೆ ಕತ್ತರಿಯಿಂದ ಆ ಎರಡು ಬಳ್ಳಿಗಳನ್ನೂ ಕತ್ತರಿಸಿ ಹಾಕಿದೆ. ಒಂದಷ್ಟು ಸಮಯ ಯಾವ ಫ್ಯಾಷನ್ ಕಡೆಗೂ ಹೋಗದೆ ಅಂತೆಯೇ ತೆಪ್ಪಗಿದ್ದೆ.

   ಅದೊಮ್ಮೆ ಮನೆ ಮದುವೆಗೆ‌‌ ನಾನೂ ಕೊಂಚ‌ ಮಿಂಚಬೇಕೆಂದು ನಿರ್ಧರಿಸಿ ಅಂತರ್ಜಾಲವನ್ನು ಜಾಲಾಡಿ ಹೊಸ ವಿನ್ಯಾಸದ ಮೊರೆ ಹೋದೆ. ಹೆಚ್ಚೇನೂ ಅದರಲ್ಲಿ ಹೊಸತನವಿಲ್ಲದಿದ್ದರೂ ನನಗೆ ಅದುವೇ ವಿಶಿಷ್ಟವಾಗಿತ್ತು. ಆ ಫ್ಯಾಷನ್ ಅದಾಗಲೇ ಹಳಸಿದ ಆಹಾರದಂತೆ ಹಳತಾಗಿತ್ತು. ಅದೇನಿದ್ದರೂ ನನಗೆ 'ಅಷ್ಟೇ ಸಾಕು' ಎಂದು ತೀರ್ಮಾನಿಸಿ ಧರಿಸಿದ್ದೆ. ಹಲವು ಹೆಂಗಳೆಯರ ಬೆನ್ನಲ್ಲೇ ದೇವರು, ದೇವಸ್ಥಾನ ಚಿತ್ರಗಳು, ಇನ್ನೂ ಅದೇನೋ ಕಲಾಕೃತಿಗಳು ಝಗಮಗಿಸುವ ಹೊತ್ತಲ್ಲಿ ನನ್ನದು ತೀರಾ ಸಪ್ಪೆಯಾಗಿ ಆಗಿತ್ತು. ಆದರೂ ನಾನೂ ಹೊಸತನಕ್ಕೆ ಇಷ್ಟಿಷ್ಟೇ ಇಳಿಯಬೇಕು ಎಂದು  ಮನದ ಮೂಲೆಯಲ್ಲೆಲ್ಲೋ ಆಸೆ ಮೊಟ್ಟೆ ಇಟ್ಟಿತ್ತು.

               ನನ್ನ ಅಜ್ಜಿಯ ಕಾಲದಲ್ಲಿ ರವಿಕೆಗಳಿಗೆ ಹುಕ್ಕಿನ ಬದಲು ಗುಂಡಿ ಇತ್ತು. ಅವರಿಗೆ ಅದೇ ಅಭ್ಯಾಸವಾಗಿ ಹುಕ್ಕೇ ಬೇಕೆಂದು ಹುಕುಂ ಮಾಡುತ್ತಿದ್ದರು. ಆಗೆಲ್ಲಾ ಎಲ್ಲರಿಗೂ  ಹೊಂದಾಣಿಕೆಯೇ ಅಭ್ಯಾಸವಾಗಿದ್ದರಿಂದ ಸಣ್ಣಮಟ್ಟಿನ ಸಡಿಲ, ಬಿಗಿತ ಯಾವುದೂ ಲೆಕ್ಕಕ್ಕೇ ಬರುತ್ತಿರಲಿಲ್ಲ. ಒಮ್ಮೆ ಹೊಲಿಸಿ ತಂದರೆ ಹರಿದು ಹೋಗುವವರೆಗೂ ಅದನ್ನೇ ಧರಿಸುವುದು ಧರ್ಮವಾಗಿತ್ತು. 

          ಅದೆಲ್ಲಾ ಸರಿ,  ಹಿರಿತೆರೆಯಲ್ಲಿ ವಿಭಿನ್ನ ಕಥಾಹಂದರ ಹೊಂದಿರುವ 'ರವಿಕೆ ಪ್ರಸಂಗ'  ಎಂಬ ಸಿನಿಮಾ ಬಗ್ಗೆ ತಿಳಿದಾಗ ಹಲವರಂತೆ ನಾನು ಇದು ಅಶ್ಲೀಲ  ಸಿನಿಮಾ ಎಂದೇ ತಪ್ಪಾಗಿ ಭಾವಿಸಿದ್ದೆ. ಇಡೀ ಸಿನಿಮಾ ರವಿಕೆಯೊಂದರ ಸುತ್ತಲೇ ಸುತ್ತುತ್ತದಂತೆ. ತನ್ನ ಕನಸಿನ ರವಿಕೆಯನ್ನು ಕೆಡಿಸಿದ ಟೈಲರ್ ಹಾಗೂ ಆತನ ವಿರುದ್ಧ ಕಾನೂನು ಸಮರಕ್ಕೆ ಸಜ್ಜಾಗುವ ಯುವತಿ... ಹೀಗೆ ಚಿತ್ರದ ಕತೆಯನ್ನು ಹೆಣೆಯಲಾಗಿದೆಯಂತೆ. ಯುವತಿಯರನ್ನೇ ಕೆಡಿಸಿ ರಾಜಾರೋಷವಾಗಿ ಮೆರೆಯುವ ಯುವಕರಿರುವ ಈ ಸಮಾಜದಲ್ಲಿ ರವಿಕೆಯ ಅಂದ ಕೆಡಿಸಿದ್ದಕ್ಕೂ ಕಾನೂನಿನ ಮೊರೆ ಹೋಗುವತ್ತ ಚಿಂತಿಸಿದ ಯುವತಿಯ  ಕುರಿತು ಅಚ್ಚರಿಯಾಯಿತು. ಹೇಗೆ ರವಿಕೆಯಂತಹ ಸಣ್ಣ ಸಣ್ಣ ವಿಚಾರಗಳೂ ಈಗೀಗ ದೊಡ್ಡ ವಿಷಯಗಳಾಗುತ್ತದೆ ಎಂದೆನಿಸಿತು. ...



Creative Writings