
Article · February 28, 2026
ಇಂದು ರಾಷ್ಟ್ರೀಯ ವಿಜ್ಞಾನ ದಿನ...
- ಪದ್ಮಶ್ರೀ ಮಾದೆರಿ , ಬೆಂಗಳೂರು
ರಾಷ್ಟ್ರೀಯ ವಿಜ್ಞಾನ ದಿನವನ್ನು ಭಾರತದಲ್ಲಿ ಪ್ರತಿ ವರ್ಷ ಫೆಬ್ರವರಿ 28ರಂದು ಆಚರಿಸಲಾಗುತ್ತದೆ. ವಿಶ್ವವಿಖ್ಯಾತ ಭೌತಶಾಸ್ತ್ರಜ್ಞ ಸರ್ ಸಿ ವಿ ರಾಮನ್ ರವರು 28 ಫೆಬ್ರವರಿ 1928ರಲ್ಲಿ "ದಿ ರಾಮನ್ ಎಫೆಕ್ಟ್ "ಅಥವಾ "ರಾಮನ್ ಪರಿಣಾಮ"ವನ್ನು ಸಂಶೋಧಿಸಿ 1930ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು. ಈ ಸಾಧನೆಯನ್ನು ಗೌರವಿಸಲು ಭಾರತ ಸರಕಾರವು 1986ರಲ್ಲಿ ಫೆಬ್ರವರಿ 28 ರಾಷ್ಟ್ರೀಯ ವಿಜ್ಞಾನ ದಿನ ಎಂದು ಘೋಷಿಸಿತು.
ಪ್ರಸ್ತುತ ವರ್ಷದ ರಾಷ್ಟ್ರೀಯ ವಿಜ್ಞಾನ ದಿನದ ವಿಷಯ "ವಿಜ್ಞಾನದಲ್ಲಿ ಮಹಿಳೆಯರು : ವಿಕಸಿತ ಭಾರತಕ್ಕೆ ಪ್ರೇರಣೆ". ಈ ಥೀಮ್ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಮಹಿಳೆಯರು ನೀಡಿರುವ ಅಮೂಲ್ಯ ಕೊಡುಗೆಗಳನ್ನು ಗುರುತಿಸುವುದರ ಜೊತೆಗೆ ಹೆಚ್ಚು ಮಹಿಳೆಯರು ಈ ಕ್ಷೇತ್ರಗಳಲ್ಲಿ ಮುಂದುವರೆಯಲು ಪ್ರೇರೇಪಿಸುತ್ತದೆ.
ಈ ದಿನವನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವವನ್ನು ಜನರಿಗೆ ತಿಳಿಸಲು ಆಚರಿಸಲಾಗುತ್ತದೆ. ವಿಜ್ಞಾನವು ಕೇವಲ ಪ್ರಯೋಗಾಲಯಗಳಲ್ಲಿ ಮಾತ್ರವಲ್ಲದೇ ನಮ್ಮ ದೈನಂದಿನ ಜೀವನದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಈ ದಿನ ದೇಶದಾದ್ಯಂತ ಶಾಲಾ-ಕಾಲೇಜುಗಳಲ್ಲಿ, ಸಂಶೋಧನಾ ಸಂಸ್ಥೆಗಳಲ್ಲಿ ವೈಜ್ಞಾನಿಕ ಪ್ರದರ್ಶನ, ಸ್ಪರ್ಧೆ, ಕಾರ್ಯಾಗಾರ ಮತ್ತು ಉಪನ್ಯಾಸಗಳನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮಗಳ ಮೂಲಕ ಜನರಲ್ಲಿ, ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಕುತೂಹಲ ಹಾಗೂ ತರ್ಕಬದ್ಧ ಚಿಂತನೆಗಳನ್ನು ಬೆಳೆಸಲು ಪ್ರೇರೇಪಿಸಲಾಗುತ್ತದೆ.
ರಾಷ್ಟ್ರೀಯ ವಿಜ್ಞಾನ ದಿನವು ಕೇವಲ "ರಾಮನ್ ಪರಿಣಾಮ"ದ ಸಂಶೋಧನೆಯ ಸ್ಮರಣೆ ಮಾತ್ರವಲ್ಲದೆ ವಿಜ್ಞಾನವು ಪ್ರಗತಿಪರ ಸಮಾಜದ ನಿರ್ಮಾಣದಲ್ಲಿ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ನೆನಪಿಸುವ ದಿನವಾಗಿದೆ.
ವಿಜ್ಞಾನವು ಮಾನವ ಪ್ರಗತಿಯ ಬೆಳಕು. ಅದು ಕುತೂಹಲವನ್ನು ಜ್ಞಾನವಾಗಿಸಿ ಜ್ಞಾನವನ್ನು ಭವಿಷ್ಯವನ್ನಾಗಿಸುತ್ತದೆ.
Creative Writings
