
Article · November 17, 2026
ಗುಪ್ತಗಾಮಿನಿಯಾಗಿ ಹರಿಯೆನ್ನೊಳು
By ಸೌಮ್ಯ ಗುರು ಕಾರ್ಲೆ
ಸೌಮ್ಯ ಗುರು ಕಾರ್ಲೆ
ಕವಿತೆಯೆಂಬ ಪ್ರಿಯತಮೆಯ ಒಲವುಣ್ಣುವ ಭಾಗ್ಯ ಕವಿಯೊಬ್ಬನ ಹೃದಯದ ಮಿಡಿತವಾದಾಗ.......
ಮಾತಿಗಿಳಿಯುವ ಮುನ್ನ ಕಣ್ಣಿನಲೆ ನೀ ನಗಲ-
ದಾತು ಕೊಂಡಿತು ಜೀವ ನಿನ್ನ ಹೆಗಲು
ಸೋತು ಹೋದೆನದೆನುವ ನಿನ್ನ ಜೇನ್ನುಡಿ ಕೇಳಿ
ಮಾತ ಮರೆತೆನು ನಾನು ಮನವೆ ಕಡಲು||
ಅರಿವೆನೇತರವಿಣುಕಿ ನಿನ್ನಂತರಗವನು
ಬೆರೆವ ಪರಿಯನದರಿಯೆ ತೆರೆದು ಕದವ
ಸುರಿಯುವಮೃತ ಧಾರೆ ನಿನ್ನ ಸವಿ ಪಲ್ಲವಿಯು
ಹರಿದು ಬರಲೆನ್ನೆದೆಗೆ ಪ್ರೀತಿ ಮಳೆಯು ||
ಅಲೆಯ ಅಂಚಲಿ ಮೂಡಿ ಮಿಂಚುತಿಹ ಭಾವಗಳು
ಸೆಳಯಲೆನ್ನೆದೆಯಾಳ ನನ್ನೆ ಮರೆತೆ
ಬಳಿಸುಳಿದ ಬರಸೆಳೆದೆ ಕಣಕಣದೊಳಾವರಿಸಿ
ನಲಿವುಗಳ ನನ್ನೊಳಗೆ ಕಲಿಸಿ ಕಲೆತೆ ||
ನಂಬಲೇನೆಲೆ ಕವಿತೆ...?
ನಂಬಲೇನೆಲೆ ಕವಿತೆ ತುಂಬು ಹುಣ್ಣಿಮೆ ನಗೆಯ
ನಂಬಿಕೆಯ ಪ್ರತಿಬಿಂಬವಾಗೊ ಬಗೆಯ
ತುಂಬಿ ಹರಿಯೆನ್ನೊಳಗೆ ಗುಪ್ತಗಾಮಿನಿಯಾಗಿ
ತುಂಬು ಭಾವಕೆ ಜೀವದುಸಿರ ತೂಗಿ ||
Creative Writings
