
Article · February 16, 2026
ಹರಿದ್ರಾ
ಕವಿ : ಶ್ರೀಮತಿ ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ
ಹೊನ್ನ ವರ್ಣದಲಿಹಳು,
ಮಣ್ಣಲ್ಲಿ ಅವಿತಿಹಳು
ಮೇಲೆತ್ತಿ ಇವಳನ್ನು ಶುಚಿಗೊಳಿಸಬೇಕು
ಅಷ್ಟು ಮಾಡಿದರಾಯ್ತು
ಮುಂದಕಿಹಳಿವಳೆಮಗೆ
ನಿತ್ಯವೂ ಸಹಕರಿಪ ಸೊಗಸುಗಾತಿ.
ಹೆಣ್ಣ ಕೆನ್ನೆಯನೇರಿ
ಮುತ್ತಿಕ್ಕುವವಳಿವಳೆ,
ಜೀವಿತದ ಸೌಭಾಗ್ಯ ಕುರುಹು ಇವಳು
ದೇವ ಪೂಜೆಗು ಸರಿಯೆ,
ವಾಮ ಪೂಜೆಗು ಸರಿಯೆ,
ಬಳಕೆಯಾಗುವಳಿವಳು ಅಂದಗಾತೀ
ಗಂಧಕೂ ಜೊತೆ ಇವಳು,
ಕುಂಕುಮಕು ಜೊತೆ ಇವಳು,
ಮೇಲು ಕೀಳಿಲ್ಲದೆಯೆ ಬೆರೆಯುವವಳು
ಲಕ್ಷ್ಮೀ ಜೊತೆಗಿರುವವಳು
ವೆಂಕಟೇಶಗು ಪ್ರಿಯಳು,
'ಮಾಂಗಲ್ಯ' ರೂಪದಲು ಒದಗುವವಳು
ಆರೋಗ್ಯವೂ ಇವಳೆ
ಐಶ್ವರ್ಯವೂ ಇವಳೆ,
ಎಲ್ಲರೊಲುಮೆಯ ಬೆಡಗಿ ಮಾಟಗಾತಿ
ಹೊನ್ನ ಕಲಶದಿ ಸೇರಿ
ಹರಿಪೂಜೆಗೊದಗುವಳು,
ಹೊಂಬಣ್ಣದಲಿ ಹೊಳೆದು ಜನಕೆ ಪ್ರೀತೀ
ಮದುವೆಗೂ ಮುಂಜಿಗೂ
ಇವಳು ಇರಲೇಬೇಕು,
ದಾರಿದ್ರ್ಯ ತೊಳೆವವಳು ಪರಿಶುದ್ಧಳು
ಗಂಧದಂದದಿ ಅರೆದು
ಹಚ್ಚಿದರೆ ದೇಹಕ್ಕೆ
ಸರ್ವ ಚರ್ಮವ್ಯಾಧಿ ಕಳೆಯುವವಳು
ಇವಳು ಕಾಲಿಟ್ಟ ಮನೆ ಶ್ರೀ ಸನ್ನಿಧಿ,
ಸರ್ವವ್ಯಾಧಿಗು ಇವಳೆ ದಿವ್ಯೌಷಧಿ
☘️☘️☘️☘️
Creative Writings
